ADVERTISEMENT

ಚರ್ಚೆ: ಅಭಿವೃದ್ಧಿ ವಿಚಾರದಲ್ಲಿ ಸಂಕುಚಿತ ಭಾವ ಬೇಡ

ಕಪ್ಪತಗುಡ್ಡ ಪರಿಸರ ಸೂಕ್ಷ್ಮ ಪ್ರದೇಶ 

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:31 IST
Last Updated 2 ಸೆಪ್ಟೆಂಬರ್ 2022, 19:31 IST
ಕಪ್ಪತಗುಡ್ಡ
ಕಪ್ಪತಗುಡ್ಡ   

ಅಭಿವೃದ್ಧಿ ವಿಚಾರದಲ್ಲಿ ನಾವು ಸಂಕುಚಿತ ಮನೋಭಾವ ಬಿಡಬೇಕು. ಆ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಮುಂದಡಿ ಇಡಬೇಕು. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯೊಳಗೆ ಇದ್ದರೆ ಒಂದು ವಿದ್ಯುತ್‌ ಕಂಬ ಹಾಕಲೂ ಸಾಧ್ಯವಿಲ್ಲ. ಹತ್ತಾರು ಸಲ ಅಲೆದಾಡಿದರೂ ಅನುಮತಿ ಸಿಗುವುದಿಲ್ಲ. ನಗರದೊಳಗೆ ಇರುವ ನಮಗೆ ಎಲ್ಲ ಸವಲತ್ತುಗಳು ಬೇಕು. ಕಾಡಿನಲ್ಲಿರುವ ಜನರು ಎಲ್ಲ ಸವಲತ್ತುಗಳನ್ನೂ ತ್ಯಾಗ ಮಾಡಿ ಕಗ್ಗತ್ತಲಿನಲ್ಲೇ ಇರಬೇಕು ಎಂಬ ವಾದ ಸರಿಯಲ್ಲ.

ಗದಗ ಜಿಲ್ಲೆಯ ಕಪ್ಪತಗುಡ್ಡ ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿದೆ. ಕಪ್ಪತಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು 10 ಕಿ.ಮೀ.ನಿಂದ 1 ಕಿ.ಮೀ.ಗೆ ಇಳಿಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ತೀರ್ಮಾನ ಶ್ಲಾಘನೀಯ. ಈ ಭಾಗದ ಜನರ ಬಹುಕಾಲದ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಿದೆ.

ಕಪ್ಪತಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ಕುಗ್ಗಿಸಿ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಕೇಂದ್ರ ಪರಿಸರ ಸಚಿವರು ಹಾಗೂ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಿಗೆ ಪತ್ರ ಬರೆದಿದ್ದೆ. ನನ್ನ ಬೇಡಿಕೆಗೂ ಸರ್ಕಾರ ಸ್ಪಂದಿಸಿದೆ.

ADVERTISEMENT

ಕಪ್ಪತಗುಡ್ಡವನ್ಯಜೀವಿಧಾಮದ ಸುತ್ತಲೂ ಇರುವ 574.01 ಚ.ಕಿ.ಮೀ. ಕ್ಷೇತ್ರವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವಂತೆ ಅರಣ್ಯ ಇಲಾಖೆಯು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂಬ ವಿಷಯ ತಿಳಿದಿದ್ದರಿಂದ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಪತ್ರ ಬರೆದಿದ್ದೆ.

ಹಿಂದುಳಿದ ತಾಲ್ಲೂಕುಗಳು ಎಂಬ ಹಣೆಪಟ್ಟಿ ಹೊಂದಿರುವ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಈ ಪ್ರದೇಶ ಬರುತ್ತದೆ. ಅಲ್ಲದೇ, ಈಗ ಗುರುತಿಸಿರುವ 4ನೇ ಬ್ಲಾಕ್‌ ಕಪ್ಪತಗುಡ್ಡದಿಂದ ತುಂಬ ದೂರ ಇದೆ. ಈ ಕಾರಣಕ್ಕಾಗಿ ಅಲ್ಲಿ ಕ್ರಷರ್‌ಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಕೋರಿದ್ದೆ. ವನ್ಯಜೀವಿಧಾಮ ಹಾಗೂ ಪರಿಸರ ಸೂಕ್ಷ್ಮ ವಲಯದ ಬ್ಲಾಕ್‌ಗಳನ್ನು ಗುರುತಿಸುವಾಗ ಕಾಡನ್ನು ಭಾಗಗಳಾಗಿ ವಿಂಗಡಿಸುವ ಬದಲು ಕಪ್ಪತಗುಡ್ಡಕ್ಕೆ ಹೊಂದಿಕೊಂಡಿರುವ ಎಲ್ಲ ಪ್ರದೇಶಗಳನ್ನೂ ಇಡಿಯಾಗಿ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು ಎಂಬುದು ನನ್ನ ಭಾವನೆ. ಪ್ರತಿ ಬ್ಲಾಕ್‌ಗಳ ನಡುವೆ ತುಂಬ ಅಂತರವಿರುವುದರಿಂದ ಅಭಿವೃದ್ಧಿಗೆ ತೊಡಕಾಗುತ್ತದೆ.

ಈಗ ಗುರುತಿಸಿರುವ 4ನೇ ಬ್ಲಾಕ್‌ನಲ್ಲಿ ಮೊದಲಿನಿಂದಲೂ ಕ್ರಷರ್‌ಗಳು ಕಾರ್ಯಾಚರಿಸುತ್ತಿದ್ದವು. ಹಾಗಾಗಿ, 4ನೇ ಬ್ಲಾಕ್‌ ಅನ್ನು ವನ್ಯಜೀವಿಧಾಮ ವ್ಯಾಪ್ತಿಯಿಂದ ಕೈಬಿಡಬೇಕು ಎಂಬುದು ನನ್ನ ಬೇಡಿಕೆಯಾಗಿತ್ತು. ಅಲ್ಲಿ ಕ್ರಷರ್‌ಗಳು ನಡೆಯುತ್ತಿದ್ದುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಕ್ಕಿತ್ತು. ಅರಣ್ಯ ನಾಶ ಮಾಡಬೇಕು ಎಂಬ ಉದ್ದೇಶ ನಮ್ಮದಲ್ಲ. ಕೋವಿಡ್‌–19ನಿಂದಾಗಿ ಎಲ್ಲ ಕಡೆ ಉದ್ಯೋಗ ನಷ್ಟವಾಗಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುತ್ತದೆ ಎಂಬ ಕಾಳಜಿ ಇದರ ಹಿಂದಿದೆ.

ಅಭಿವೃದ್ಧಿ ವಿಚಾರದಲ್ಲಿ ನಾವು ಸಂಕುಚಿತ ಮನೋಭಾವ ಬಿಡಬೇಕು. ಆ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಮುಂದಡಿ ಇಡಬೇಕು. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯೊಳಗೆ ಇದ್ದರೆ ಒಂದು ವಿದ್ಯುತ್‌ ಕಂಬ ಹಾಕಲೂ ಸಾಧ್ಯವಿಲ್ಲ. ಹತ್ತಾರು ಸಲ ಅಲೆದಾಡಿದರೂ ಅನುಮತಿ ಸಿಗುವುದಿಲ್ಲ. ನಗರದೊಳಗೆ ಇರುವ ನಮಗೆ ಎಲ್ಲ ಸವಲತ್ತುಗಳು ಬೇಕು. ಕಾಡಿನಲ್ಲಿರುವ ಜನರು ಎಲ್ಲ ಸವಲತ್ತುಗಳನ್ನೂ ತ್ಯಾಗ ಮಾಡಿ ಕಗ್ಗತ್ತಲಿನಲ್ಲೇ ಇರಬೇಕು ಎಂಬ ವಾದ ಸರಿಯಲ್ಲ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಿದೆ. ಆ ದಿಸೆಯಲ್ಲಿ ನಾವು ಆಲೋಚನೆ ಮಾಡಬೇಕು. ದನ ಕಾಯುವವರು ಹಾಗೂ ಕುರಿ ಕಾಯುವವರು ಕಪ್ಪತಗುಡ್ಡವನ್ನುದಶಕಗಳಿಂದ ನೆಚ್ಚಿಕೊಂಡಿದ್ದಾರೆ. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಅವರ ಓಡಾಟಕ್ಕೆ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ. ಇದು ನಿಲ್ಲಬೇಕು.

ಈ ವನ್ಯಜೀವಿ ಧಾಮದಲ್ಲಿ ಅಪರೂಪದ ಗಿಡಮೂಲಿಕೆಗಳು ಔಷಧೀಯ ಸಸ್ಯಗಳು ಇವೆ. ಇತ್ತೀಚಿನ ದಿನಗಳಲ್ಲಿ ಆಯುಷ್‌, ಆಯುರ್ವೇದ ಔಷಧಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಪರಿಸರಕ್ಕೆ ಹಾನಿ ಮಾಡದೆಯೇ ಇಲ್ಲಿರುವ ಗಿಡಮೂಲಿಕೆಗಳನ್ನು ಬಳಸಿಕೊಳ್ಳಲು ಆಯುಷ್‌ ಹಾಗೂ ಆಯುರ್ವೇದ ಸಂಶೋಧನಾ ಸಂಸ್ಥೆಯನ್ನು ತೆರೆಯಬೇಕು.

ಅಭಿವೃದ್ಧಿ ವಿಚಾರದಲ್ಲಿ ನಮ್ಮ ದೃಷ್ಟಿಕೋನ ಬದಲಾಗಬೇಕು. ನಮ್ಮ ಮನೆಯಲ್ಲಿ ನಿಂತು ನೋಡಿದರೆ ಸುತ್ತಲಿನ ನಾಲ್ಕು ಮನೆಗಳು ಕಾಣುತ್ತವೆ. ಅಲ್ಲಿನ ಜನರ ಸಮಸ್ಯೆಗಳಷ್ಟೇ ಗೊತ್ತಾಗುತ್ತವೆ. ಹದ್ದಿನ ಕಣ್ಣಿನಿಂದ ನೋಡಿದರೆ ಮಾತ್ರ ಎಲ್ಲ ಜನರ ಸಮಸ್ಯೆ, ಸಂಕಟ ಅರಿವಾಗುತ್ತದೆ. ಸಂರಕ್ಷಣೆಯ ನೆಪದಲ್ಲಿ ಇಲ್ಲಿರುವ ನೆಲವಾಸಿಗಳನ್ನು ಅನುಮಾನದಿಂದ ನೋಡುವ ಬದಲು ಅವರ ನೋವಿಗೆ ಸ್ಪಂದಿಸುವ ಕೆಲಸ ಆಗಬೇಕು. ಅವರ ಪ್ರಜ್ಞಾವಂತಿಕೆಯ ಮಾತುಗಳಿಗೆ ನಾವು ಕಿವಿಯಾಗಬೇಕು.ಅವರ ಅಸ್ತಿತ್ವವನ್ನು ಮರೆತು ಮುಂದಡಿ ಇಟ್ಟರೆ ಅಭಿವೃದ್ಧಿ ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸಬೇಕು.

ಕಪ್ಪತಗುಡ್ಡದಪರಿಸರಕ್ಕೆ ಧಕ್ಕೆ ತರುವಂತಹ ಯಾವುದೇ ಕೈಗಾರಿಕೆಗೆ ಅವಕಾಶ ಕಲ್ಪಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ವನ್ಯಜೀವಿಧಾಮದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ಗಣಿಗಾರಿಕೆಯ ಪ್ರಸ್ತಾವಗಳನ್ನು ರಾಜ್ಯ ವನ್ಯಜೀವಿ ಮಂಡಳಿ ಪರಿಶೀಲಿಸುತ್ತದೆ. ಈ ಪ್ರಸ್ತಾವಗಳಿಗೆ ಅನುಮತಿ ನೀಡುವುದು ಬಿಡುವುದು ಮಂಡಳಿಯ ವಿವೇಚನೆಗೆ ಬಿಟ್ಟಿದ್ದು. ಅಕ್ರಮ ಗಣಿಗಾರಿಕೆ ಮಾಡಿದರೆ ಶಿಕ್ಷಿಸಲು ಕಾನೂನು ಇದೆ, ನಿಯಮಗಳಿವೆ. ದಂಡ ವಿಧಿಸಲು ಅವಕಾಶ ಇದೆ. ನಿಯಮಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಲೇಬಾರದು.

ಪರಿಸರ ಸಂರಕ್ಷಣೆಯ ನೆಪದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ನಾವು ಆಲೋಚನೆ ಮಾಡಬೇಕು. ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಆಗಬೇಕು ಎಂಬುದು ಈ ಭಾಗದ ಜನತೆಯ ಹಲವು ದಶಕಗಳ ಹಂಬಲ.ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆ ಸಾಕಾರಕ್ಕೆ ಸೂಕ್ತ ಮಾರ್ಗ ಹುಡುಕಬೇಕು.ಈರೈಲುಮಾರ್ಗ ಸಾಕಾರಗೊಂಡರೆ ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ, ಈ ಭಾಗದ ವಾಣಿಜ್ಯ ವಹಿವಾಟು ಕೂಡ ಸುಗಮವಾಗಲಿದೆ. ಮರಗಳನ್ನು ಕಡಿಯಲಾಗುತ್ತದೆ ಎಂಬ ನೆಪ ಒಡ್ಡಿ ಈ ಯೋಜನೆಗೆ ದಶಕಗಳಿಂದ ಅಡ್ಡಿ ಪಡಿಸಲಾಗುತ್ತಿದೆ.

ಈ ಹಿಂದೆ ಕೊಂಕಣ ರೈಲುಮಾರ್ಗ ಪಶ್ಚಿಮ ಘಟ್ಟದೊಳಗೆ ಹಾದು ಹೋಯಿತು. ಆಗ ಯಾರೂ ಆಕ್ಷೇಪ ಎತ್ತಲಿಲ್ಲ. ಈ ರೈಲುಮಾರ್ಗ ನಿರ್ಮಾಣದಿಂದ ಕರಾವಳಿಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರಕಿತು. ಒಂದು ವೇಳೆ ಈಗ ಕೊಂಕಣ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿದ್ದರೆ ಎಷ್ಟೊಂದು ಅಡ್ಡಿ ಆತಂಕಗಳು ಎದುರಾಗುತ್ತಿದ್ದವು. ಮಾಧವ ಗಾಡ್ಗೀಳ್‌, ಕಸ್ತೂರಿರಂಗನ್‌ ವರದಿ ಎಲ್ಲವೂ ಮುನ್ನೆಲೆಗೆ ಬರುತ್ತಿದ್ದವು. ಪರಿಸರ ಸಂರಕ್ಷಣೆಗೆ ಆದ್ಯತೆ ಸಿಗಬೇಕು ಎಂಬುದು ನಿಜ. ಅದರ ಜತೆಗೆ ಅಭಿವೃದ್ಧಿಯೂ ಆಗಬೇಕು. ಕಪ್ಪತಗುಡ್ಡ ಸಂರಕ್ಷಣೆ, ಹುಬ್ಬಳ್ಳಿ– ಅಂಕೋಲಾ ಯೋಜನೆ ಬೇಡ ಎಂದು ಹೇಳುತ್ತಾ ಎಲ್ಲ ವಿಚಾರಕ್ಕೂ ಅಡ್ಡಿಪಡಿಸುತ್ತಾ ಬಂದರೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುವುದು ಯಾವಾಗ. ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಕೇ?

ಪ್ರಜಾಪ್ರಭುತ್ವದಲ್ಲಿ ‘ಬ್ಯಾಲೆನ್ಸ್‌ ಆಫ್‌ ಪವರ್‌’ ಅಂತ ನಾವು ಮಾಡುತ್ತೇವೆ. ಅದೇ ರೀತಿ, ಪ್ರಕೃತಿ ಸಮತೋಲನವೂ ಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು. ಅಭಿವೃದ್ಧಿ– ಪರಿಸರ ಜತೆ ಜತೆಯಲ್ಲಿ ಸಾಗಬೇಕು. ಹಾಗೆಂದ ಮಾತ್ರಕ್ಕೆ ಲಕ್ಷ್ಮಣ ರೇಖೆಯನ್ನು ದಾಟುವುದೂ ಸರಿಯಲ್ಲ.

Caption

ಲೇಖಕ: ಸಂಸದ, ಹಾವೇರಿ ಕ್ಷೇತ್ರ

ನಿರೂಪಣೆ: ಮಂಜುನಾಥ ಹೆಬ್ಬಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.