ನೆರೆರಾಷ್ಟ್ರ ಪಾಕಿಸ್ತಾನದಲ್ಲಿ 2025ರ ಫೆಬ್ರುವರಿಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಧೃಢ ತೀರ್ಮಾನ ಕೈಗೊಂಡಿದೆ. ಹೋದ ವರ್ಷದ ಏಷ್ಯಾ ಕಪ್ ಟೂರ್ನಿ ಮಾದರಿಯಲ್ಲೇ ತಟಸ್ಥ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆಯೋಜಿಸುವಂತೆ ಐಸಿಸಿಗೆ ಅಧಿಕೃತ ಕೋರಿಕೆಯನ್ನೂ ಸಲ್ಲಿಸಿದೆ. ಇದರ ಬೆನ್ನಲ್ಲೇ, ಬಿಸಿಸಿಐನ ನಿಲುವಿನ ಬಗ್ಗೆ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿವೆ.
‘ಒಂದೂವರೆ ದಶಕದಿಂದ ವಿವಿಧ ದೇಶಗಳಲ್ಲಿ ಏಷ್ಯಾ ಕಪ್ ಹಾಗೂ ಎರಡೂ ಮಾದರಿಯ ವಿಶ್ವಕಪ್ ಟೂರ್ನಿಗಳಲ್ಲಿ ಯಾವುದೇ ಪ್ರತಿರೋಧ ಒಡ್ಡದೆ ಪಾಕಿಸ್ತಾನದ ಎದುರು ಸೆಣಸಿರುವ ಭಾರತ, ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಮಾತ್ರ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ನಿರಾಕರಿಸುತ್ತಿರುವುದು ಸರಿಯಲ್ಲ. ಇದು ಭಾರತದ ಕ್ರಿಕೆಟ್ ಮಂಡಳಿಯ ಇಬ್ಬಗೆ ನೀತಿಯನ್ನು ತೋರಿಸುತ್ತದೆ’ ಎಂಬ ಟೀಕೆ ಪಾಕಿಸ್ತಾನದಿಂದ ಕೇಳಿ ಬರುತ್ತಿದೆ. ಆದರೆ, ಬಿಸಿಸಿಐ ತನ್ನ ಆಟಗಾರರ ಸುರಕ್ಷತೆಯ ವಿಚಾರವನ್ನು ಪ್ರಸ್ತಾಪಿಸುತ್ತಾ, ‘ಇದು ಕೇಂದ್ರ ಸರ್ಕಾರದ ಕಟ್ಟಪ್ಪಣೆ. ಹಾಗಾಗಿ, ಯಾವುದೇ ಪರಿಸ್ಥಿತಿಯಲ್ಲೂ ತಂಡವನ್ನು ಕಳುಹಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ. ಸಾಂಪ್ರದಾಯಿಕ ಎದುರಾಳಿಗಳ ಈ ಹಗ್ಗ-ಜಗ್ಗಾಟ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟೂರ್ನಿಯನ್ನು ಸುಸೂತ್ರವಾಗಿ ನಡೆಸಲು ತನ್ನ ಮುಂದಿರುವ ಆಯ್ಕೆಗಳನ್ನು ಅದು ಪರಿಶೀಲಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ, ಉಭಯ ದೇಶಗಳ ನಡುವೆ ಉಂಟಾಗಿರುವ ಈ ಬಿಕ್ಕಟ್ಟು ಹೊಸದೇನೂ ಅಲ್ಲ. ಇತಿಹಾಸದ ಪುಟಗಳನ್ನು ತೆಗೆದುನೋಡಿದರೆ ಈ ಹಿಂದೆ ಪಾಕ್ ತಂಡವೇ ಇಂತಹ ಧೋರಣೆ ತೋರಿರುವ ಉದಾಹರಣೆಗಳಿವೆ. ಈಗ, ಕ್ರಿಕೆಟ್ ಲೋಕದ ‘ದೊಡ್ಡಣ್ಣ’ನಾಗಿ ಬೆಳೆದಿರುವ ಭಾರತದ ಸರದಿ ಅಷ್ಟೇ.
ಭಾರತ–ಪಾಕ್ ಕ್ರಿಕೆಟ್ ಪಯಣ: 1950ರ ದಶಕದಲ್ಲಿ ಮೊದಲ್ಗೊಂಡ ಭಾರತ-ಪಾಕ್‌ನ ಕ್ರಿಕೆಟ್ ನಂಟು ಏಳು ದಶಕಗಳಲ್ಲಿ ಅನೇಕ ಏರಿಳಿತಗಳನ್ನು ಕಂಡಿದೆ. ಈ ಅವಧಿಯಲ್ಲಿ ರಾಜಕೀಯ ಕಾರಣಗಳಿಂದ ಎರಡು ದೇಶಗಳ ನಡುವಿನ ಸಂಬಂಧ ಹಲವಾರು ಬಾರಿ ಬಿಗಡಾಯಿಸಿ, ಕ್ರಿಕೆಟ್ ತಂಡಗಳು ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದು ಅತೀ ಕಡಿಮೆ. 1990ರ ದಶಕದಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತಂಡ ಐದು ಬಾರಿ ಭಾರತದ ಪ್ರವಾಸವನ್ನು ರದ್ದುಗೊಳಿಸಿತ್ತು.
1990–91ರಲ್ಲಿ ಭಾರತ ಏಷ್ಯಾ ಕಪ್ ಆತಿಥ್ಯ ವಹಿಸಿತ್ತು. ಪಾಕಿಸ್ತಾನವು ಕಾಶ್ಮೀರದ ಆಗುಹೋಗುಗಳ ಕಾರಣ ನೀಡಿ ಆ ಟೂರ್ನಿಯಿಂದ ಹೊರಗುಳಿದಿತ್ತು. ಕೊನೆಗೆ, ಶ್ರೀಲಂಕಾ, ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮಾತ್ರ ತ್ರಿಕೋನ ಹಣಾಹಣಿಯಲ್ಲಿ ಎದುರಾಗಿದ್ದವು. ಅದೇ ವರ್ಷ, ಐದು ಟೆಸ್ಟ್ ಸರಣಿ ಪ್ರವಾಸವನ್ನು ಕೊನೇ ಘಳಿಗೆಯಲ್ಲಿ ರದ್ದು ಮಾಡಿ ಬಿಸಿಸಿಐಗೆ ಅಪಾರ ನಷ್ಟ ಉಂಟು ಮಾಡಿತ್ತು. 1993–94ರ ಋತುವಿನಲ್ಲಿ ಮೂರು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳ ಸರಣಿಯಿಂದಲೂ ಹಿಂದೆ ಸರಿದಿತ್ತು. 1993ರಲ್ಲಿ ಮುಂಬೈ ಸ್ಫೋಟದ ನೆಪ ಒಡ್ಡಿದ್ದ ಪಾಕಿಸ್ತಾನ, ತಮ್ಮ ಆಟಗಾರರು ಭಾರತದಲ್ಲಿ ಸುರಕ್ಷಿತವಾಗಿ ಇರಲಾರರು ಎಂಬ ಕಾರಣ ನೀಡಿ ತಂಡವನ್ನು ಕಳುಹಿಸಿರಲಿಲ್ಲ. ಆ ಕಾಲಘಟ್ಟದಲ್ಲಿ ಬೇರೆಲ್ಲ ದೇಶದ ತಂಡಗಳು ನಿರಾತಂಕವಾಗಿ ಭಾರತ ಪ್ರವಾಸ ಕೈಗೊಂಡು, ಸರಣಿ, ಪಂದ್ಯಗಳಲ್ಲಿ ಪಾಲ್ಗೊಂಡು ಸುರಕ್ಷಿತವಾಗಿ ಹಿಂದಿರುಗಿದ ಉದಾಹರಣೆಗಳಿದ್ದರೂ ಪಾಕ್ ಮಾತ್ರ ಯಾವುದಕ್ಕೂ ಸೊಪ್ಪು ಹಾಕದೆ ಭಾರತದಿಂದ ದೂರವೇ ಉಳಿದಿತ್ತು.
1994–95ರಲ್ಲೂ, ಭಾರತದಲ್ಲಿನ ಪರಿಸ್ಥಿತಿ ಪಾಕ್ ಆಟಗಾರರಿಗೆ ಅಪಾಯಕಾರಿ ಎಂದು ಘೋಷಿಸಿ ಪಾಕಿಸ್ತಾನವು ಪ್ರವಾಸವನ್ನು ಮುಲಾಜಿಲ್ಲದೆ ರದ್ದುಗೊಳಿಸಿತ್ತು. ಆದರೆ, ಅದೇ ಸಮಯದಲ್ಲಿ ಶಾರ್ಜಾ ಹಾಗೂ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ಯಾವುದೇ ಅಳುಕಿಲ್ಲದೆ ಭಾರತದ ವಿರುದ್ಧ ಆಡಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಈಗ ಕಾಲಚಕ್ರ ತಿರುಗಿದೆ. ಪಾಕಿಸ್ತಾನ ಅಂದು ಪ್ರದರ್ಶಿಸಿದ್ದ ಇಬ್ಬಗೆ ನೀತಿಯನ್ನು ಬಲಾಢ್ಯ ತಂಡವಾಗಿರುವ ಭಾರತ ಈಗ ಅನುಸರಿಸುತ್ತದೆ ಎಂದಷ್ಟೇ ಹೇಳಬಹುದೇ ವಿನಾ, ಭಾರತದ ನಡೆಯನ್ನು ನೈತಿಕತೆಯ ನೆಲಗಟ್ಟಿನಲ್ಲಿ ಪ್ರಶ್ನಿಸಲಾಗದು. ಹಾಗಾಗಿ, ಕೇಂದ್ರ ಸರ್ಕಾರ ಹಾಗೂ ಬಿಸಿಸಿಐಗಳನ್ನು ಟೀಕಿಸುವ ಮುನ್ನ ನಾವು ಎರಡೂ ದೇಶಗಳ ಇತಿಹಾಸವನ್ನು ಅರಿಯುವುದು ಉತ್ತಮ. ಪಾಕಿಸ್ತಾನದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಂತಹ ದೇಶದ ಆಟಗಾರರು ಮತ್ತು ಇಲ್ಲಿಯ ಕ್ರಿಕೆಟಿಗರು ಎದುರಿಸುವ ಸವಾಲುಗಳು ಹಾಗೂ ಅಪಾಯ ಬೇರೆ ಮಟ್ಟದ್ದು ಎಂಬುದು ಭಾರತದ ಅಂಬೋಣ. ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆಯಷ್ಟೇ ನಮ್ಮ ಅಂಧರ ತಂಡ ಪಾಕಿಸ್ತಾನಕ್ಕೆ ತೆರಳವುದನ್ನೂ ಸರ್ಕಾರ ನಿರ್ಬಂಧಿಸಿದೆ.
ಐಸಿಸಿ ಮುಂದಿರುವ ಆಯ್ಕೆಗಳು: ಭಾರತ ಪಾಲ್ಗೊಳ್ಳದ ಚಾಂಪಿಯನ್ಸ್ ಟ್ರೋಫಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸತ್ಯ ಐಸಿಸಿಗೆ ಚೆನ್ನಾಗಿಯೇ ತಿಳಿದಿದೆ. ಐಸಿಸಿ ಗಳಿಕೆಯ ಮುಕ್ಕಾಲು ಪಾಲು ಭಾರತದಿಂದಲೇ ಬರುತ್ತಿರುವುದರಿಂದ ಬಿಸಿಸಿಐನ ಬೇಡಿಕೆಗಳನ್ನು ಅದು ಎಂದಿಗೂ ಕಡೆಗಣಿಸಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ಗೈರುಹಾಜರಿಯಿಂದ ಪಾಕಿಸ್ತಾನಕ್ಕೆ ಆಗುವ ನಷ್ಟವನ್ನು ತುಂಬಿ ಕೊಡುವ ಭರವಸೆ ನೀಡುವ ಮೂಲಕ ಅದರ ಮನವೊಲಿಸಿ, ಭಾರತದ ಸಲುವಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವುದೊಂದೇ ಐಸಿಸಿ ಮುಂದಿರುವ ಸಲೀಸಾದ ಮತ್ತು ಸಹಜವಾದ ಆಯ್ಕೆ. ಆದರೆ, ‘ಪ್ರತಿ ಬಾರಿ ಮಣಿಯಲು ನಾವು ತಯಾರಿಲ್ಲ’ ಎಂದು ಪಾಕ್ ಈಗಾಗಲೇ ಘೋಷಿಸಿರುವುದರಿಂದ ಪೂರ್ತಿ ಟೂರ್ನಿಯನ್ನೇ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವ ಕುರಿತು ಸಾಧಕ-ಬಾಧಕ ಚರ್ಚೆಗಳೂ ಆರಂಭಗೊಂಡಿವೆ. ಹೀಗಾದಲ್ಲಿ, ಪಾಕಿಸ್ತಾನಕ್ಕೆ ಹಣಕಾಸಿನ ನಷ್ಟವನ್ನು ತುಂಬಿಸಿಕೊಟ್ಟರೂ ಜಾಗತಿಕ ಮಟ್ಟದಲ್ಲಿ ಅದಕ್ಕೆ ತೀವ್ರ ಮುಖಭಂಗವಾಗುವುದು ಖಂಡಿತ. ಟೂರ್ನಿಗೆ ಇನ್ನು ಮೂರು ತಿಂಗಳು ಮಾತ್ರ ಇದೆ. ಇನ್ನೊಂದು ವಾರದಲ್ಲಿ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕಿರುವ ಹೊಣೆ ಮತ್ತು ತುರ್ತು ಐಸಿಸಿಯ ಮೇಲಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಅದು ಹೇಗೆ ನಿಭಾಯಿಸಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉಂಟಾಗಿರುವ ಈ ಬಿಕ್ಕಟ್ಟು ಹೊಸದೇನೂ ಅಲ್ಲ. ಇತಿಹಾಸದ ಪುಟಗಳನ್ನು ತೆಗೆದು ನೋಡಿದರೆ ಈ ಹಿಂದೆ ಪಾಕ್ ತಂಡವೇ ಇಂತಹ ಧೋರಣೆ ತೋರಿದ್ದ ಉದಾಹರಣೆಗಳಿವೆ. ಪಾಕಿಸ್ತಾನ ಕ್ರಿಕೆಟ್ ತಂಡವು ಐದು ಬಾರಿ ಭಾರತ ಪ್ರವಾಸವನ್ನು ರದ್ದುಗೊಳಿಸಿತ್ತು. ಈಗ ಕಾಲ ಚಕ್ರ ತಿರುಗಿದೆ. ಕ್ರಿಕೆಟ್ ಲೋಕದ ‘ದೊಡ್ಡಣ್ಣ’ನಾಗಿ ಬೆಳೆದಿರುವ ಭಾರತವು ಈಗ, ಪಾಕಿಸ್ತಾನ ಅಂದು ತೋರಿದ್ದ ಧೋರಣೆಯನ್ನೇ ಅನುಸರಿಸುತ್ತಿದೆ ಎಂದಷ್ಟೇ ಹೇಳಬಹುದೇ ವಿನಾ, ಭಾರತದ ನಡೆಯನ್ನು ನೈತಿಕತೆಯ ನೆಲಗಟ್ಟಿನಲ್ಲಿ ಪ್ರಶ್ನಿಸಲಾಗದು. ನಮ್ಮ ಗಡಿ ಭಾಗಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ದೇಶದೊಂದಿಗೆ ಯಾವುದೇ ಬಗೆಯ ನಂಟು ಬೇಡವೆಂದು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಈ ದೇಶದ ಪ್ರಜೆಗಳಾಗಿ ಅದನ್ನು ಗೌರವಿಸೋಣ
‘ಕ್ರೀಡೆ ಹಾಗೂ ದೇಶದ ರಾಜಕೀಯ ಚಟುವಟಿಕೆಗಳು ಬೇರೆ-ಬೇರೆ; ಅವುಗಳನ್ನು ಬದಿಗಿಟ್ಟು ಆಟವನ್ನು ಸವಿಯಬೇಕು’ ಎಂಬುದು ಬಹುತೇಕರ ನಿಲುವಾದರೂ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅವು ಬೇರೆಯೇ ಕಥೆಯನ್ನು ಹೇಳುತ್ತದೆ. 1974ರಲ್ಲಿ ಭಾರತದ ಟೆನಿಸ್ ತಂಡ ಪ್ರತಿಷ್ಠಿತ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಫೈನಲ್ ತಲುಪಿ, ಪ್ರಶಸ್ತಿಯ ಸನಿಹ ಬಂದಾಗಲೂ, ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದ ದಕ್ಷಿಣ ಆಫ್ರಿಕಾ ಎದುರು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ ಸೆಣಸುವುದು ತರವಲ್ಲ ಎಂದು ಆಗಿನ ಸರ್ಕಾರ ಫೈನಲ್ ಪಂದ್ಯವನ್ನೇ ಬಹಿಷ್ಕರಿಸಿತ್ತು. ಇದೇ ಮಾದರಿಯಲ್ಲಿ 1986ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಹೊರಗಿಡದೆ, ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಬ್ರಿಟನ್ ನಿಲುವನ್ನು ಪ್ರತಿಭಟಿಸಿ, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಒಟ್ಟಾಗಿ ಕಾಮನ್‌ವೆಲ್ತ್ ಗೇಮ್ಸ್ ಅನ್ನೇ ಬಹಿಷ್ಕರಿಸಿದ್ದವು. ಇಂತಹ ಹಲವಾರು ಉದಾಹರಣೆಗಳನ್ನು ಕಂಡಾಗ, ಪಾಕಿಸ್ತಾನದ ಕುರಿತು ಈಗಿನ ಭಾರತ ಸರ್ಕಾರದ ನಿಲುವನ್ನು ಟೀಕಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕಿದೆ. ಇಂದಿಗೂ, ನಮ್ಮ ಗಡಿ ಭಾಗಗಳಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಭಾರತಕ್ಕೆ ಕಂಟಕಪ್ರಾಯವಾಗಿರುವ ದೇಶದೊಂದಿಗೆ ಯಾವುದೇ ಬಗೆಯ ನಂಟು ಬೇಡವೆಂದು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ರಾಜಕೀಯ ವಾತಾವರಣ ಸುಧಾರಿಸಿದ ಬಳಿಕವಷ್ಟೇ ಪಾಕಿಸ್ತಾನದೊಂದಿಗೆ ಮುಂದಿನ ಮಾತು ಎಂಬುದು ಭಾರತದ ಧೃಢ ನಿಲುವು. ಅದನ್ನು ಈ ದೇಶದ ಪ್ರಜೆಗಳಾಗಿ ಗೌರವಿಸೋಣ.
ಲೇಖಕ: ಐಟಿ ಉದ್ಯೋಗಿ, ಕ್ರೀಡಾ ಬರಹಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.