ADVERTISEMENT

90 ಗಂಟೆ ಕೆಲಸ | ಮಹಿಳೆಯನ್ನು ಕೀಳಾಗಿ ಕಂಡದ್ದರ ಗುರುತು: ಕುಸುಮಾ ಆಯರಹಳ್ಳಿ

ಪ್ರಜಾವಾಣಿ ಚರ್ಚೆ | ವಾರಕ್ಕೆ 90 ಗಂಟೆ ಕೆಲಸ ಮಾಡಿ, ಹೆಂಡತಿ ಮುಖ ಎಷ್ಟು ನೋಡುತ್ತೀರಿ ಎಂಬ ಎಲ್‌ ಆ್ಯಂಡ್‌ ಟಿಯ ಸುಬ್ರಹ್ಮಣ್ಯನ್ ಹೇಳಿಕೆಗೆ ಪ್ರತಿಕ್ರಿಯೆ

ಪಿ.ಕುಸುಮಾ ಆಯರಹಳ್ಳಿ
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
<div class="paragraphs"><p>ಕುಸುಮಾ ಆಯರಹಳ್ಳಿ (ಬಲಬದಿ)</p></div>

ಕುಸುಮಾ ಆಯರಹಳ್ಳಿ (ಬಲಬದಿ)

   
ಹೆಂಡತಿ ಮುಖ ನೋಡುವ ಕೆಲಸಕ್ಕೆ ಬಾರದ ಕೆಲಸವನ್ನು ಮಾಡುತ್ತಾ ಭಾನುವಾರ ಕೂರುವ ಬದಲು ಅದೇ ಸಮಯವನ್ನು ದುಡಿದು ಸದುಪಯೋಗ ಮಾಡಿಕೊಳ್ಳಿ ಎಂಬುದು ಸುಬ್ರಹ್ಮಣ್ಯನ್ ಸಲಹೆ. ಗಂಡ ಹೆಂಡತಿ ಮುಖ ನೋಡೋದರಿಂದ ಕಾಸು ಹುಟ್ಟದೇ ಇರಬಹುದು.‌ ಆದರೆ ಪ್ರೀತಿ ಹುಟ್ತದೆ. ಪ್ರೀತಿ ಇಲ್ಲದ ಮೇಲೆ ಏನಿದ್ದೇನು ಫಲ?

‘ಭಾನುವಾರ ನಿಮ್ಮಿಂದ ಕೆಲಸ ತೆಗೆಯಲು ಆಗದಿರೋ ಬಗ್ಗೆ ನನಗಂತೂ ಬಹಳ ಬೇಸರ ಇದೆ. ನನ್ನನ್ನು ಕೇಳಿದರೆ, ಖುಷಿಯಿಂದ ಭಾನುವಾರವೂ ಕೆಲ್ಸ ಮಾಡ್ತೀನಿ. ನೀವೆಲ್ಲ ಭಾನುವಾರ ಮನೇಲಿದ್ದು ಏನ್ಮಾಡ್ತೀರ? ಹೆಂಡ್ತಿ ಮುಖಾನೇ ಎಷ್ಟೊತ್ತೂ ಅಂತ ನೋಡ್ತಾ ಇರ್ತೀರ?’

- ಇದು ಎಲ್‌ ಆ್ಯಂಡ್‌ ಟಿ ಇನ್ಫೊಟೆಕ್‌ ಅಧ್ಯಕ್ಷ ಸುಬ್ರಹ್ಮಣ್ಯನ್ ಅವರ ಇತ್ತೀಚಿನ ಹೇಳಿಕೆ. ಇದಕ್ಕೆ ವಿರೋಧ ವ್ಯಕ್ತವಾಗತೊಡಗಿದಾಗ, ‘ಅವರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳಿ, ಅವರು ಹೇಳಿದ್ದು ಆ ಅರ್ಥದಲ್ಲಲ್ಲ, ಹೆಚ್ಚು ಹೊತ್ತು ಕೆಲಸ ಮಾಡಿದಷ್ಟೂ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದೆಂಬ ಅರ್ಥದಲ್ಲಿ’ ಎಂಬ ಸಮರ್ಥನೆಗಳು ಕಂಪನಿಯ ಮತ್ತು ಅವರ ಹಿತಚಿಂತಕರಿಂದ ಬಂದವು. ಪದಗಳಿಗೆ ಅರ್ಥಗಳನ್ನು ಹಚ್ಚಬಹುದು. ಅದರ ಹಿಂದಿನ ಧ್ವನಿಗೆ? ಹೆಚ್ಚು ಕೆಲಸ ಮಾಡಿರಿ ಎಂಬುದು ಅವರ ಉದ್ದೇಶದಲ್ಲೂ ಬಳಸಿದ ಪದಗಳಲ್ಲೂ ಇದ್ದ ಅರ್ಥವಾದರೆ, ಹೆಂಡತಿಯ ಮುಖ ನೋಡುವ ಮಾತು ಬಂದದ್ದು ಅವರಿಗೇ ಗೊತ್ತಿಲ್ಲದೆ ಸೇರಿಹೋಗಿರಬಹುದಾದ ಮನಃಸ್ಥಿತಿಯಿಂದ. ಪದದಾಚೆಯ ಧ್ವನಿಯಲ್ಲಿದ್ದದ್ದು ‘ಹೆಂಡತಿಯಾದವಳ ಮುಖ ನೋಡುತ್ತಾ ಕೂರುವುದೊಂದು ನಿಷ್ಪ್ರಯೋಜಕ ಕೆಲಸ’ ಎಂಬ ಅರ್ಥ. ಸುಬ್ರಹ್ಮಣ್ಯನ್ ಅವರು ಕೊನೆಯ ಸಾಲುಗಳನ್ನು ಹೇಳುವಾಗಿನ ಅವರ ದೇಹಭಾಷೆ ಕೂಡ ಎರಡನೇ ಅರ್ಥದ ನಿಜವಾದ ಭಾವವನ್ನೇ ಹೇಳುತ್ತದೆ.

ADVERTISEMENT

ಸುಬ್ರಹ್ಮಣ್ಯನ್ ಅವರ ಕಂಪನಿಯ ಕೆಲಸಗಾರರು ಪ್ರತಿದಿನವೂ ಆಫೀಸಿನಲ್ಲಿ ನೆಮ್ಮದಿಯಾಗಿ ದುಡಿಯ ಬೇಕಾದರೆ, ಅಡುಗೆ, ಬಟ್ಟೆ, ಮನೆಯ ಸ್ವಚ್ಛತೆ, ಮಕ್ಕಳ ಓದು, ಹವ್ಯಾಸ, ಬಂಧುಗಳು- ಇದೆಲ್ಲವನ್ನೂ ನಿಭಾಯಿಸಲು ಮನೆಯಲ್ಲಿ ಹೆಂಡತಿಯೂ ದುಡಿಯುತ್ತಿರುತ್ತಾಳೆ. ಯಾವ ವಾರವೂ ರಜೆಯೇ ಇಲ್ಲದ ನಿರಂತರ ದುಡಿಮೆ ಅದು. ಗೃಹಿಣಿಯರು ಈ ಕೆಲಸ ನಿರಾಕರಿಸಿ, ಮುಷ್ಕರ ಹೂಡಿದರೆ, ಎಲ್‌ ಆ್ಯಂಡ್‌ ಟಿಯೂ ಸೇರಿದಂತೆ ಅನೇಕ ಕಂಪನಿಗಳ ಕೆಲಸದಲ್ಲಿ ಏರುಪೇರಾದೀತು. ಆ ಲೆಕ್ಕದಲ್ಲಿ ಕಂಪನಿಗಾಗಿ ಪರೋಕ್ಷವಾಗಿ ಹೆಂಡತಿಯೂ ದುಡಿಯುತ್ತಿರುತ್ತಾಳೆ; ಸಂಬಳವಿಲ್ಲದೇ... ಹೊರಗೆ ದುಡಿವ ಗಂಡ, ಒಳಗೆ ದುಡಿವ ಹೆಂಡತಿ ಇವೆರಡೂ ಪರಸ್ಪರ ಪೂರಕ. ಯಾವುದೂ ನಿಕೃಷ್ಟವಲ್ಲ. ತಾವೂ ದುಡಿವ ಮಹಿಳೆಯರಾದರಂತೂ ಅವರ ಪಾಡು ಹೇಳತೀರದು. ಮನೆಯನ್ನೂ ತಮ್ಮ ವೃತ್ತಿಯನ್ನೂ ಸಂಭಾಳಿಸುವ (ಮುಟ್ಟಿನ ಚಕ್ರದೊಂದಿಗೆ) ಮಹಿಳೆಯರು ಈ ದೇಶಕ್ಕೆ ನೀಡುತ್ತಿರುವ ಕೊಡುಗೆ ಅಸಾಧಾರಣವಾದುದು. ಆಫೀಸಿನದು ಮಾತ್ರವಲ್ಲ; ಕೃಷಿ, ಕಾರ್ಖಾನೆ, ಕೂಲಿ ಕೆಲಸ ಹೀಗೆ ಮನೆಯಲ್ಲೂ ಹೊರಗೂ ದುಡಿಯುತ್ತಾ ದಣಿಯುವ ಮಹಿಳೆಯರಿದ್ದಾರೆ. ಒಂದು ವರ್ಗದ ಜನ ಈಗ ಎಚ್ಚೆತ್ತುಕೊಂಡಿದ್ದಾರೆ. ಮನೆಕೆಲಸದಲ್ಲೂ ಸಮಭಾಗಿಯಾಗುವ ಆಲೋಚನೆಗೆ ಈಗೀಗ ಒಗ್ಗಿಕೊಳ್ಳುತ್ತಿದ್ದಾರೆ. ಆದರೆ, ಎಲ್ಲ ಕಡೆಯೂ ಅದನ್ನು ನಿರೀಕ್ಷಿಸಲಾಗದು. ಹೀಗಿರುವಾಗ ‘ಎಷ್ಟೂಂತ ಹೆಂಡ್ತಿ ಮುಖ ನೋಡ್ತಾ ಕೂತಿರ್ತೀರ?’ ಅನ್ನೋ ಮಾತು, ಆ ಮುಖದ ಹಿಂದಿನ ಜೀವಗಳನ್ನು ನಿಕೃಷ್ಟವಾಗಿ ಕಂಡದ್ದರ ಗುರುತು.

ಅವರ ಮಾತನ್ನು ಪೂರ್ತಿ ಕೇಳಿದಾಗ ಅಲ್ಲಿ ಹೆಂಡತಿ ಮುಖ ನೋಡೋದರ ಬಗ್ಗೆ ಮಾತ್ರವಲ್ಲ, ಅವರೂ ಎಷ್ಟೂಂತ ನಿಮ್ಮ ಮುಖಾ ನೋಡೋದು ಅಂತಲೂ ಇದೆ. ದಿನಾ ನೋಡೋ ಅದೇ ಮುಖಗಳನ್ನು ಭಾನುವಾರವೂ ನೋಡೋ ಬದಲು ಆಫೀಸಿಗೆ ಬಂದು ಕೆಲಸ ಮಾಡಬಾರದೇ ಅನ್ನೋದು ಅವರ ಅಭಿಪ್ರಾಯ. ಇದು ಕೂಡ ಸರಿಯಲ್ಲ. ಸಮಾಜದ ಯಾವುದೇ ಸ್ತರವಿರಲಿ, ಗಂಡ – ಹೆಂಡತಿ ಇಬ್ಬರೂ ದುಡಿಯಬೇಕಾದ ಅನಿವಾರ್ಯ ಸ್ಥಿತಿ ಅನೇಕರಿಗಿದೆ. ದಿನಾ ಬೆಳಗಾಗೆದ್ದರೆ ಗಂಡ, ಹೆಂಡತಿ, ಮಕ್ಕಳು ಎಲ್ಲರೂ ಯುದ್ಧೋಪಾದಿಯಲ್ಲಿ ಸಿದ್ಧರಾಗಿ ಓಡೂ ಓಡೂ ಓಡೂ ಅಂತ ಮೆಟ್ರೊ ರೈಲಿಗಿಂತ ತುಸು ಹೆಚ್ಚೇ ವೇಗದಲ್ಲಿ, ಧಾವಂತದಲ್ಲಿ ಓಡುತ್ತಿರುತ್ತದೆ ಬದುಕು. ಮನೆಕೆಲಸ, ಹೊರಗಿನ ಕೆಲಸ ಎರಡನ್ನೂ ಸರಿದೂಗಿಸುತ್ತಾ, ಭಾನುವಾರಕ್ಕಾಗಿಯೇ ಎಷ್ಟೋ ಕೆಲಸಗಳು ಕಾದು ಕುಳಿತಿರುತ್ತವೆ. ಕೆಲಸವಿರಲಿ, ಧಾವಂತವೆಷ್ಟೆಂದರೆ ಎಷ್ಟೋ ಮನೆಗಳಲ್ಲಿ ಗಂಡ ಹೆಂಡತಿ ಮಕ್ಕಳು ಸರಿಯಾಗಿ ಮುಖ ನೋಡುವುದಕ್ಕಾಗೋದೇ ಭಾನುವಾರ. ಅವತ್ತೂ ಮನೇ‌ಲಿರೋದ್ಯಾಕೆ? ಬನ್ನಿ ಆಫೀಸಿಗೆ ಅನ್ನುವ ಮಾತಿಗೆ ಅರ್ಥವಿದೆಯೇ?

ನಮ್ಮ ಫೋನು, ಲ್ಯಾಪ್‌ಟಾಪ್‌ಗಳನ್ನು ಆಗಾಗ ಚಾರ್ಜ್‌ ಮಾಡಿಕೊಳ್ಳುತ್ತೇವೆ. ಚಾರ್ಜ್‌ ಮಾಡದೇ ಒಂದೇ ಸಮ ಬಳಸಿದರೆ? ಮನುಷ್ಯರೂ ಹಾಗೆಯೇ. ದೈಹಿಕ ದುಡಿಮೆಯೇ ಆಗಿರಲಿ, ಕಂಪ್ಯೂಟರ್‌ ಕೆಲಸವೇ ಆಗಿರಲಿ, ನಿರಂತರ ಕೆಲಸ ಮಾಡುತ್ತಿದ್ದರೆ, ಒತ್ತಡ ಮತ್ತು ಏಕತಾನತೆಯಿಂದ ದೇಹ ಮನಸ್ಸು ದಣಿದು, ಉತ್ಸಾಹಹೀನವಾಗುತ್ತವೆ. ವಾರದಲ್ಲೊಮ್ಮೆ ಗಡಿಯಾರದ ಹಂಗಿರದೇ, ಓಡುವ ಧಾವಂತವಿರದೇ ಕಾಲು ಚಾಚಿ ಕೂತು, ಮನೆಯಲ್ಲಿ ಕುಟುಂಬದೊಂದಿಗೆ ಕಳೆದರೆ… ಅದುವೇ ಮನಸ್ಸು, ದೇಹಗಳ ಪಾಲಿನ ರೀಚಾರ್ಜ್‌!‌ ಮತ್ತೊಂದು ವಾರದ ಓಡುವಿಕೆಗೆ ಕೂಡಿಕೆಯಾಗುವ ಹೊಸತ್ರಾಣ. ಸುಬ್ರಹ್ಮಣ್ಯನ್ ಹೇಳಿದಂತೆ ಭಾನುವಾರವೂ ರಜೆ ಬೇಡವೆಂದರೆ, 365 ದಿನವೂ ಕೆಲಸ ಮಾಡುತ್ತಿದ್ದರೆ ಸುಸ್ತಾದ ದೇಹ–ಮನಸ್ಸುಗಳು ಆಫೀಸಿನಲ್ಲಿ ತೂಕಡಿಸುತ್ತವೆ ಅಷ್ಟೇ. ದಣಿದ ದೇಹ, ಮನಸ್ಸುಗಳು ಯಾವ ದೇಶವನ್ನೂ ಮುನ್ನಡೆಸಲಾರವು. ಕೆಲಸದ ಅವಧಿಗಿಂತ ಕೆಲಸದ ಗುಣಮಟ್ಟ ಮುಖ್ಯ.

ಸುಬ್ರಹ್ಮಣ್ಯನ್ ಅವರು ತಮ್ಮ ಕಂಪನಿಯ ಕೆಲಸಗಾರರ ಕುರಿತು, ಬಿಡುವಿರದೇ ದುಡಿದು ದೇಶ ಕಟ್ಟೋಣ ಅನ್ನುತ್ತಾರೆ. ಆದರೆ, ದಿನವೊಂದಕ್ಕೆ ಲೆಕ್ಕವಿರದಷ್ಟು ಮಾನವ ಗಂಟೆಗಳು ಸೋರಿಹೋಗುತ್ತಿವೆ ಇಲ್ಲಿ. ಸರ್ಕಲ್‌ ಕೂಲಿಗಳು ಅಂತ ಎಲ್ಲ ನಗರಗಳಲ್ಲೂ ಸಾಮಾನ್ಯವಾಗಿ ಇರುತ್ತಾರೆ. ಗಮನಿಸಿ; ದಿನವೂ ಬೆಳಿಗ್ಗೆ ನಿರ್ದಿಷ್ಟ  ಸಮಯಕ್ಕೆ ನಿರ್ದಿಷ್ಟ ಜಾಗದಲ್ಲಿ ಬಂದು ನಿಂತಿರುತ್ತಾರೆ. ಯಾರೋ ಬಂದು ಅವರನ್ನು ‘ಇಷ್ಟು ಜನ ಬೇಕು’ ಅಂತ ಕರೆದುಕೊಂಡು ಹೋಗುತ್ತಾರೆ. ಕೂಲಿ ಇಷ್ಟು, ಅಷ್ಟು ಅನ್ನುವ ಚೌಕಾಸಿಯೂ ಇರುತ್ತದೆ. ಪ್ರತಿದಿನವೂ ಯಾರೋ ಬರುತ್ತಾರೆ ಅಂತೇನಿಲ್ಲ. ಮತ್ತು ಸೂರ್ಯ ಏರುತ್ತಲೂ ‘ಬೆಲೆ’ ಇಳಿಯುತ್ತಾ ಹೋಗುತ್ತದೆ. ಈ ಆಟದಲ್ಲಿ ಎಲ್ಲ ದಿನವೂ ಕೆಲಸ ಇರುವುದಿಲ್ಲ. ಇದೊಂದು ಉದಾಹರಣೆಯಷ್ಟೇ. ಪದವಿ ಓದಿದ ಎಷ್ಟು ಜನರಿಗೆ ಏನು ಉದ್ಯೋಗಾವಕಾಶಗಳಿವೆ? ಅವರೆಲ್ಲ ಏನು ಮಾಡುತ್ತಿದ್ದಾರೆ? ಹಾಗಿದ್ದರೆ ಪದವಿಗೆ ವ್ಯಯಿಸಿದ ಸಮಯ? ಹೀಗೆ ಕೆದಕುತ್ತಾ ಹೋದರೆ ಸುಬ್ರಹ್ಮಣ್ಯನ್ ಕ್ಯಾಲ್‌ಕ್ಯುಲೇಟರ್‌ ಲೆಕ್ಕತಪ್ಪುವಷ್ಟು ಸಮಯ ಮತ್ತು ಮಾನವಶಕ್ತಿ ವ್ಯರ್ಥವಾಗುತ್ತಿದೆ. ದೊಡ್ಡವರು ಈ ದಿಕ್ಕಿನಲ್ಲಿ ಯೋಚಿಸಬೇಕು.

ಹೆಂಡತಿ ಮುಖ ನೋಡುವ ಕೆಲಸಕ್ಕೆ ಬಾರದ ಕೆಲಸವನ್ನು ಮಾಡುತ್ತಾ ಭಾನುವಾರ ಕೂರುವ ಬದಲು ಅದೇ ಸಮಯವನ್ನು ದುಡಿದು ಸದುಪಯೋಗ ಮಾಡಿಕೊಳ್ಳಿ ಎಂಬುದು ಅವರ ಸಲಹೆ. ಗಂಡ ಹೆಂಡತಿ ಮುಖ ನೋಡೋದರಿಂದ ಕಾಸು ಹುಟ್ಟದಿರಬಹುದು.‌ ಆದರೆ ಪ್ರೀತಿ ಹುಟ್ತದೆ. ಪ್ರೀತಿಯೇ ಇಲ್ಲದ ಮೇಲೆ ಏನಿದ್ದೇನು ಫಲ ಹೇಳಿ?

ಲೇಖಕಿ: ಕಥೆಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.