ADVERTISEMENT

ಚರ್ಚೆ: ಬೇಕಿದೆ ಪರೀಕ್ಷಾ ಸಾಮ್ಯತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 0:28 IST
Last Updated 12 ಜುಲೈ 2025, 0:28 IST
<div class="paragraphs"><p>ವಿದ್ಯಾರ್ಥಿಗಳು</p></div>

ವಿದ್ಯಾರ್ಥಿಗಳು

   

– ಪ್ರಜಾವಾಣಿ ಚಿತ್ರ

ವಿಷಯ: ಸಿಬಿಎಸ್‌ಇ ಪರೀಕ್ಷೆ ಮಾದರಿಯಲ್ಲಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ಅನುಕೂಲಕರವೇ?

ಎಸ್‌ಎಸ್‌ಎಲ್‌ಸಿ ಸೇರಿದಂತೆ ತತ್ಸಮಾನ ಪರೀಕ್ಷೆಗಳ ಮಧ್ಯೆ ಹೆಚ್ಚು ಸಾಮ್ಯತೆ ಇದ್ದಷ್ಟೂ ವಿದ್ಯಾರ್ಥಿಗಳ ನಡುವಿನ ಕೀಳರಿಮೆ ತೊಡೆದು ಹಾಕಲು ಸಹಕಾರಿಯಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸಲು ರಾಷ್ಟ್ರ ಹಾಗೂ ರಾಜ್ಯಗಳಲ್ಲಿನ ವಿವಿಧ ಮಂಡಳಿಗಳು ನಡೆಸುವ ಪರೀಕ್ಷೆಗಳಲ್ಲಿ ಏಕರೂಪತೆ ಸಾಧ್ಯವಾಗದಿದ್ದರೂ ಸಾಮ್ಯತೆಯಂತೂ ಇರಬೇಕು ಎನ್ನುವುದು ಬಹುತೇಕ ಶಿಕ್ಷಣ ತಜ್ಞರ ವಾದ. ಕರ್ನಾಟಕದಲ್ಲೂ ಇಂತಹ ಒಂದು ಅವಕಾಶದ ಬಾಗಿಲು ತೆರೆಯುತ್ತಿದೆ. ಪರೀಕ್ಷಾ ಸುಧಾರಣಾ ಸಮಿತಿ ಸಲಹೆಯಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಮಾದರಿಯಲ್ಲಿ ನಡೆಸಲು ಶಿಫಾರಸು ಮಾಡಿರುವುದು ಅತ್ಯಂತ ಉಪಯುಕ್ತ ನಡೆ.

ADVERTISEMENT

ಪಾಠಗಳಾಗಲಿ, ಕಲಿಕಾ ಪದ್ಧತಿ, ಪರೀಕ್ಷೆಗಳಾಗಲಿ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು ಎಂಬ ತಾತ್ವಿಕ ಆಶಯ ಸದಾ ಜೀವಂತ. ಆದರೆ, ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಒದಗಿಸಬೇಕು. ದೇಶದಲ್ಲಿ 66 ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಸಿಬಿಎಸ್ಇಯು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ನಿಗದಿಪಡಿಸಿದ ಕೇಂದ್ರ ಪಠ್ಯಕ್ರಮದ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸುತ್ತದೆ. ಈ ಪರೀಕ್ಷೆಗಳು ಭಾರತದಾದ್ಯಂತ ಏಕರೂಪವಾಗಿರುತ್ತವೆ. ಆದರೆ ಆಯಾ ರಾಜ್ಯದ ಪರೀಕ್ಷಾ ಮಂಡಳಿಗಳು ಆಯಾ ರಾಜ್ಯ ಶಿಕ್ಷಣ ಸಂಶೋಧನಾ ಸಂಸ್ಥೆಯ ಪಠ್ಯವಸ್ತು ಆಧರಿಸಿ ಪರೀಕ್ಷೆಗಳನ್ನು ನಡೆಸುವುದರಿಂದ ಪ್ರತಿ ರಾಜ್ಯದ ಪರೀಕ್ಷೆಗಳು ಭಿನ್ನವಾಗಿರುತ್ತವೆ. ಉದಾಹರಣೆಗೆ, ಪ್ರಥಮ ಭಾಷೆಗಾಗಿ ಸಿಬಿಎಸ್ಇ ಅಥವಾ ಇತರೆ ರಾಜ್ಯಗಳಲ್ಲಿ 100 ಅಂಕದ ಪ್ರಶ್ನೆ ಪತ್ರಿಕೆಯಿದ್ದರೆ ನಮ್ಮ ರಾಜ್ಯದಲ್ಲಿ 125 ಅಂಕದ ಪರೀಕ್ಷೆ ಇದೆ. ಒಟ್ಟಾರೆ ಅಂಕಗಳಲ್ಲಿಯೂ ವ್ಯತ್ಯಾಸವಿದೆ. ಈ ಭಿನ್ನತೆಗಳನ್ನು ಹೋಗಲಾಡಿಸಬೇಕಿದ್ದು, ಏಕರೂಪದ ಮೌಲ್ಯ ನೀಡುವುದರಿಂದ ಕಲಿಕೆಯಲ್ಲೇನೂ ವ್ಯತ್ಯಾಸವಾಗದು. ಅಲ್ಲದೇ ಶಿಫಾರಸಿನಂತೆ ಎಲ್ಲಾ ವಿಷಯಗಳಲ್ಲಿ ಏಕರೂಪದ ಅಂಕ ಹಂಚಿಕೆ ಸಮಾನತೆ ತರುತ್ತದೆ. ಹಾಗೂ ಅನ್ಯಭಾಷೆಯನ್ನು ಮನೆಭಾಷೆಯನ್ನಾಗಿ ಹೊಂದಿರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯಲು ಇದರಿಂದ ಅನುಕೂಲವಾಗುತ್ತದೆ.

ವಿವಿಧ ರೀತಿಯ ಪರೀಕ್ಷೆಗಳಿದ್ದಾಗ ಪಠ್ಯಕ್ರಮ, ಪರೀಕ್ಷೆಯ ಮಾದರಿ, ಮೌಲ್ಯಮಾಪನದ ಸ್ವರೂಪ, ಪ್ರಶ್ನೆಗಳ ರೀತಿ, ಅಂಕ ಮತ್ತು ಗ್ರೇಡ್ ಮೌಲ್ಯ ಹೀಗೆ ಹಲವು ಅಂಶಗಳಲ್ಲಿ ಭಿನ್ನತೆ ಹೊಂದಿರುವ ಬಗ್ಗೆ ಅಧ್ಯಯನಗಳು ಆಗಿವೆ. ಹೀಗಿದ್ದಾಗ ಪರೀಕ್ಷೆಗಳಿಂದ ಉತ್ತೀರ್ಣರಾಗಿ ಹೊರಬಂದ ವಿದ್ಯಾರ್ಥಿಗಳ ಕ್ಷಮತೆಗಳಲ್ಲೂ ವ್ಯತ್ಯಾಸಗಳಾಗುತ್ತವೆ. ಮೇಲ್ನೋಟಕ್ಕೆ ಕೆಲವು ವಿಷಯದ ಅಗತ್ಯಗಳಲ್ಲಿ ವ್ಯತ್ಯಾಸವಿದ್ದರೆ ಸಮಸ್ಯೆಯಿಲ್ಲ. ಭಾರತದಂತಹ ಬಹುರೂಪಿ ಅನನ್ಯತೆಯ ರಾಷ್ಟ್ರದಲ್ಲಿ ವಿಷಯ ಭಿನ್ನತೆ ಇರುವುದು ಅಗತ್ಯವೇ. ಆದರೆ ಸಮಸ್ಯೆ ಆಗುವುದು ಮೂಲಭೂತ ಕೌಶಲಗಳು, ಬೌದ್ಧಿಕ ಕ್ಷಮತೆ, ಸಾಮರ್ಥ್ಯಗಳ ವ್ಯತ್ಯಾಸವಾದಾಗ. ಇದು ಅನೇಕ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಅವಕಾಶ ವಂಚಿತರಾಗುವಂತೆ ಮಾಡುತ್ತದೆ. ಆದ್ದರಿಂದಲೇ ಏಕರೂಪವಲ್ಲದಿದ್ದರೂ ಮೂಲಭೂತ ಕೌಶಲಗಳ ಪರೀಕ್ಷೆಯ ಸಾಮ್ಯತೆ ನಮ್ಮ ರಾಜ್ಯ ಮತ್ತು ಕೇಂದ್ರ ಪರೀಕ್ಷಾ ಪದ್ಧತಿಗಳಲ್ಲಿ ಇರಲೇಬೇಕಿದೆ. ಸಮಿತಿಯೂ ಇದನ್ನು ಶಿಫಾರಸು ಮಾಡಿರುವುದು ಕೆಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈಗ ಪ್ರಶ್ನೆ ಬರುವುದು ಸ್ಥಳೀಯ ಅಗತ್ಯ, ಅನನ್ಯತೆಯ ಕಲಿಕೆಯ ವಿಷಯದಲ್ಲಿ. ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ರಾಜ್ಯ-ನಿರ್ದಿಷ್ಟ ವಿಷಯಗಳ ಕಲಿಕೆ ಮತ್ತು ಪರೀಕ್ಷೆ ಹೇಗೆ ಎಂಬ ವಿಷಯ ಸಹಜವಾಗಿ ಸವಾಲಿನ ರೂಪದಲ್ಲಿ ಚರ್ಚಿತವಾಗುತ್ತದೆ. ಆಗ ಸಹಾಯಕ್ಕೆ ಬರುವುದು ಕಲಿಕಾ ಫಲಗಳು ಮತ್ತು ಸಾಮರ್ಥ್ಯಗಳು. ಭಾಷೆ ಯಾವುದಾದರೂ ಗ್ರಹಿಕೆ, ಅಭಿವ್ಯಕ್ತಿ, ವಿಶ್ಲೇಷಣೆಯ ಆಧಾರಾಂಶಗಳು ಒಂದೇ. ಅವುಗಳ ಪರೀಕ್ಷೆಯಾಗಬೇಕು. ಸ್ಥಳೀಯ ಜಾತ್ರೆ, ಹಬ್ಬ, ಆಚರಣೆ ಬೇರೆಯಾದರೂ ಸಾಮಾಜಿಕ ಸೇರುವಿಕೆ, ಸಾಮುದಾಯಿಕ ಜೀವನದ ಆಶಯಗಳು ಒಂದೇ. ಆ ಆಶಯಗಳ ಪರೀಕ್ಷೆಗಳಾಗಬೇಕು. ಅಲ್ಲಿಗೆ, ಈ ಪರೀಕ್ಷಾ ಪದ್ಧತಿ ಸಿಬಿಎಸ್ಇ ಮಾದರಿಯದ್ದಲ್ಲ. ಪರೀಕ್ಷಾ ಪದ್ಧತಿಯ ಆಧಾರಾಂಶಗಳು ಪರಸ್ಪರ ಸಹಸಂಬಂಧ ಹೊಂದಿರುತ್ತವೆ ಎಂಬುದನ್ನು ನಾವು ಮನಗಾಣಬೇಕು. ಹೀಗೆ ಮೂಲಾಂಶಗಳ ಕಲಿಕೆಯ ಪರೀಕ್ಷೆಗಳು ಸಾಮ್ಯತೆ ಹೊಂದಿದರೆ ವಿದ್ಯಾರ್ಥಿಗಳಲ್ಲಿ ತಾರತಮ್ಯವನ್ನು ನೀಗಿಸಿದಂತಾಗುತ್ತದೆ. ಇದು ಶಿಕ್ಷಣ ವ್ಯವಸ್ಥೆಯ ಭಾಗೀದಾರರಲ್ಲಿ ಪರೀಕ್ಷಾ ಪದ್ಧತಿಯ ನಡುವಿನ ದ್ವಂದ್ವವನ್ನೂ ಕಡಿಮೆ ಮಾಡಿದಂತಾಗುತ್ತದೆ.

ಪ್ರಸ್ತುತ ಸಿಬಿಎಸ್ಇ ಪರೀಕ್ಷೆಗಳು ಮತ್ತು ರಾಜ್ಯ ಮಂಡಳಿಯ ಪರೀಕ್ಷೆಗಳಲ್ಲಿ ಬೌದ್ಧಿಕ ಸ್ವರೂಪದ ಭಿನ್ನತೆಯಿದ್ದು, ಎರಡೂ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ನೋಡುವ ದೃಷ್ಟಿಕೋನದಲ್ಲೂ ಸಾಮಾಜಿಕ ವ್ಯತ್ಯಾಸವಿರುವುದು ನೋವಿನ ವಿಷಯ. ಇದನ್ನು ತೊಡೆದುಹಾಕುವುದು ಕಾಳಜಿಯ ಕ್ಷೇತ್ರವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನದಲ್ಲಿ ಅನೇಕ ಪ್ರಗತಿದಾಯಕ ಹೆಜ್ಜೆಗಳನ್ನಿಡುತ್ತಿರುವುದು ಕೆಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಸ್ತುತ ರಾಜ್ಯ ಪರೀಕ್ಷೆಯಲ್ಲಿ ಆಂತರಿಕ ಮೌಲ್ಯಾಂಕನವನ್ನು ಉತ್ತೀರ್ಣಕ್ಕೆ ಪರಿಗಣಿಸಲಾಗುತ್ತಿಲ್ಲ. ಕೇಂದ್ರ ಮಾದರಿ ಜಾರಿಯಾದಲ್ಲಿ ಅದು ವಿದ್ಯಾರ್ಥಿಯ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನವನ್ನು ಖಾತರಿ ಪಡಿಸುತ್ತದೆ. ಪ್ರತಿ ವಿದ್ಯಾರ್ಥಿಯ ಕಲಿಕಾ ವೇಗವು ಭಿನ್ನವಿರುವುದರಿಂದ ಈ ಸಮಗ್ರ ಮೌಲ್ಯಮಾಪನವು ವಿದ್ಯಾರ್ಥಿಗಳಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಮತ್ತು ಉತ್ತೀರ್ಣಗೊಳ್ಳಲು ಅನುಕೂಲ ಮಾಡುತ್ತದೆ. ಅಷ್ಟರಮಟ್ಟಿಗೆ ಪರೀಕ್ಷೆ ವಿದ್ಯಾರ್ಥಿ ಕೇಂದ್ರಿತವಾಗುತ್ತದೆ. ನಿಧಾನಗತಿಯ ಕಲಿಕಾ ಮಕ್ಕಳ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಸಹಜವಾಗಿ ಈ ಕ್ರಮವು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಮನಃಸ್ಥೈರ್ಯ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಸರಳವಾಗಿ ತೇರ್ಗಡೆಗೊಳ್ಳಲು, ಶಿಕ್ಷಣವನ್ನು ಮುಂದುವರಿಸಲು ಸಹಾಯಕವಾಗುತ್ತದೆ.

ವಿದ್ಯಾರ್ಥಿಯು ಶಿಕ್ಷಣ ಮುಂದುವರಿಸುವುದು ಅತೀ ಮುಖ್ಯ. 2025ರ ಎಸ್ಎಸ್ಎಲ್‌ಸಿ ಮೊದಲ ಪರೀಕ್ಷೆಯಲ್ಲಿ 7,90,890 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 5,23,075 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯದ ಫಲಿತಾಂಶ ಶೇ 66.14. ಇದ್ದು, ಶೇ 33.86 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಪರೀಕ್ಷಾ ಒತ್ತಡದಿಂದಾಗಿ ಪ್ರೌಢ ಹಂತದಲ್ಲಿ ಮತ್ತು ನಂತರ ಶೇ 40ರಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುತ್ತಾರೆ. ಹತ್ತನೇ ತರಗತಿ ಅನುತ್ತೀರ್ಣರಾಗಿ ಶಾಲೆ ಬಿಡುವ ವಿದ್ಯಾರ್ಥಿಗಳು ಅಪಾಯಕಾರಿ ವಲಯದ ಕಾರ್ಮಿಕರಾಗಿ, ಇನ್ನೂ ಕೆಲವೊಮ್ಮೆ ಸಮಾಜಘಾತುಕ ಕೆಲಸಗಳಲ್ಲಿಯೂ ತೊಡಗಿಕೊಳ್ಳುವ ಅಪಾಯಗಳಿವೆ. ಉತ್ತೀರ್ಣದ ಸಮಾನ ಸೂಚಕ ಮತ್ತು ಸರಳತೆಗಳು ಜಾರಿಯಾದರೆ ಸಹಜವಾಗಿ ಫಲಿತಾಂಶದಲ್ಲಿಯೂ ಸುಧಾರಣೆಯನ್ನು ನಿರೀಕ್ಷಿಸಬಹುದು. ಭಾರತದಂತಹ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತೀರ್ಣವಾಗುವುದು ಸಾಮಾಜಿಕ ಬದಲಾವಣೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಶೈಕ್ಷಣಿಕ ಮಾರ್ಗವನ್ನು ಆಯ್ಕೆ ಮಾಡಲು ಈ ಸಾಮ್ಯತೆಯ ಪರೀಕ್ಷೆಗಳು ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಆಧರಿಸಿ ಸರಿಯಾದ ವೃತ್ತಿಪಥವನ್ನು ಆಯ್ಕೆ ಮಾಡಲು ದಾರಿ ಮಾಡಿಕೊಡುತ್ತದೆ.

ಪರೀಕ್ಷೆಗಿಂತಲೂ ಕಲಿಕೆ ಮುಖ್ಯ. ಆದರೆ, ಪರೀಕ್ಷೆಗಳು ಕಲಿಯುವಂತೆ ಮಾಡುತ್ತವೆ ಎಂಬುದೂ ಸತ್ಯ. ಆದ್ದರಿಂದ ಕೊನೆಯ ಸವಾಲಿನ ವಿಷಯವೆಂದರೆ, ಯಾವುದೇ ಮಂಡಳಿಯಿರಲಿ ಕಲಿಕಾ ಫಲ ಆಧಾರಿತ ಪ್ರಶ್ನೆಗಳನ್ನು ಒಳಗೊಂಡಿರುವಂತೆ ಪ್ರಶ್ನೆಪತ್ರಿಕೆಗಳು ರಚನೆಯಾಗಬೇಕು. ನಮ್ಮ ಶಿಕ್ಷಕರೂ ಹಾಗೆಯೇ ಕಲಿಕಾ ಫಲಗಳನ್ನು ಗಳಿಸುವಂತೆ ಮಾಡಬೇಕು. ಮಾಹಿತಿ ಬೇಡುವ, ವಿಷಯಾಂಶಕ್ಕಿಂತ ಅನ್ವಯಿಕ, ಸೃಜನಶೀಲ ಉತ್ತರ ನೀಡುವ ಪ್ರಶ್ನೆಗಳನ್ನು ಒಳಗೊಂಡಿರಬೇಕು. ಸಾಮರ್ಥ್ಯ-ಆಧಾರಿತ ಕಲಿಕೆ, ಯಾಂತ್ರಿಕ ಕಲಿಕೆಗಿಂತ ಅನ್ವಯಿಕ ಕಲಿಯುವಿಕೆಗೆ ಮಹತ್ವ ನೀಡುವುದು, ವಿಶ್ಲೇಷಣಾತ್ಮಕ ಮತ್ತು ಸಮಸ್ಯೆ-ಪರಿಹರಿಸುವ ಕೌಶಲಗಳ ಮೇಲೆ ಒತ್ತು ನೀಡುವುದು, ಕೇಂದ್ರಾಂಶ, ಮೂಲ ಪರಿಕಲ್ಪನೆಗಳನ್ನು ಪರೀಕ್ಷಿಸುವುದನ್ನು ಮಾಡಿದಲ್ಲಿ ತಂತಾನೆ ಎಲ್ಲಾ ಮಂಡಳಿಗಳ ಪರೀಕ್ಷೆಗಳಲ್ಲಿ ಸಾಮ್ಯತೆ ಬರುತ್ತದೆ. ವಿದ್ಯಾರ್ಥಿಗಳ ಒತ್ತಡವೂ ಕಡಿಮೆಯಾಗಿ ವಿಷಯದ ಆಳ ಪ್ರವೇಶಕ್ಕೆ ಅನುಕೂಲವಾಗುತ್ತದೆ. ಹಾಗೆಯೇ ಆಗಲೆಂದು ಆಶಿಸೋಣ.

ಸ್ಪರ್ಧಾತ್ಮಕ ಪರೀಕ್ಷೆ ಸುಲಭ

ಬಹಳ ಮುಖ್ಯವಾಗಿ ಇಂದಿನ ದಿನಮಾನದಲ್ಲಿ ಯಾವುದೇ ಮಂಡಳಿಯಿಂದ ನಡೆಸುವ ಅಂತಿಮ ಪರೀಕ್ಷೆಗಳಿಗಿಂತ, ಕೋರ್ಸ್ ಪ್ರವೇಶ ಪರೀಕ್ಷೆಗಳಿಗೆ ಹೆಚ್ಚಿನ ಮಹತ್ವವಿದೆ. ಎಂದರೆ, 12ನೇ ತರಗತಿಯ ಅಂತಿಮ ಬೋರ್ಡ್ ಪರೀಕ್ಷೆಗಿಂತಲೂ ಪ್ರವೇಶ ಪರೀಕ್ಷೆಗಳಾದ ನೀಟ್, ಜೆಇಇ, ಸಿಇಟಿ, ಕ್ಲಾಟ್ ಪರೀಕ್ಷೆಗಳೇ ಪ್ರಧಾನವೆನಿಸಿವೆ. ಈ ಪ್ರವೇಶ ಪರೀಕ್ಷೆಗಳು ಕೇಂದ್ರ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿವೆ. ಕೇಂದ್ರ ಮಂಡಳಿಯ ಮಾದರಿಯಲ್ಲಿ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಮತ್ತು ಜೀವನ ಕೌಶಲಗಳಿಗೆ ಒತ್ತು ನೀಡಿ ಕಲಿಸಿ, ಆ ವಿದ್ಯಾರ್ಥಿಗಳನ್ನು ಪ್ರೌಢಹಂತದಲ್ಲಿಯೇ ಸಿದ್ಧಗೊಳಿಸುತ್ತಾರೆ. ಸಾಮ್ಯತೆ/ ಏಕರೂಪದ ಪರೀಕ್ಷೆ ನಡೆಸಿದರೆ ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಎಲ್ಲಾ ಮಕ್ಕಳಿಗೂ ಸುಲಭವಾಗುತ್ತದೆ.

ಲೇಖಕಿ: ಶಿವಮೊಗ್ಗದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.