ADVERTISEMENT

ಚರ್ಚೆ | SSLC: ಗುಣಮಟ್ಟದ ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ

SSLC |ಕನ್ನಡ ಮಾಧ್ಯಮ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಹೆಚ್ಚು ಮಕ್ಕಳು ಅನುತ್ತೀರ್ಣ ಕುರಿತು ಎರಡು ಅಭಿಪ್ರಾಯಗಳು

​ಪ್ರಜಾವಾಣಿ ವಾರ್ತೆ
Published 17 ಮೇ 2025, 0:30 IST
Last Updated 17 ಮೇ 2025, 0:30 IST
<div class="paragraphs"><p>ಎಸ್‌.ಜಿ. ಸಿದ್ಧರಾಮಯ್ಯ</p></div>

ಎಸ್‌.ಜಿ. ಸಿದ್ಧರಾಮಯ್ಯ

   
ಸರ್ಕಾರವು  2016ರ ಜೂನ್‌ 13ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ, ಸರ್ಕಾರಿ ಶಾಲೆಗಳ ಸಬಲೀಕರಣ ವರದಿಗಾಗಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಇಡೀ ರಾಜ್ಯದ ಒಳನಾಡಿನ ಗಡಿಭಾಗಗಳ ಸರ್ಕಾರಿ ಶಾಲೆಗಳನ್ನು ತನ್ನ ಅಧ್ಯಯನದ ಕಕ್ಷೆಗೆ ಒಳಗು ಮಾಡಿಕೊಂಡು ವರದಿಯನ್ನು ತಯಾರಿಸಿ 2017ರಲ್ಲಿ ಸರ್ಕಾರಕ್ಕೆ ಅದನ್ನು ಒಪ್ಪಿಸಿದೆ. ಅಲ್ಲಿನ ಶಿಫಾರಸುಗಳು ಇಂದಿಗೂ ಹೆಚ್ಚು ಪ್ರಸ್ತುತವಿದ್ದು, ಅವುಗಳನ್ನು ಸಂವಿಧಾನಾತ್ಮಕವಾಗಿ ಜಾರಿಗೆ ತರುವ ಅಗತ್ಯವಿದೆ

ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದ ಮ‌ಕ್ಕಳು ಕನ್ನಡ ಭಾಷೆಯಲ್ಲಿ ಹೆಚ್ಚು ನಪಾಸಾಗಿರುವುದು ಸುದ್ದಿಯಾಗಿದೆ. ಇದು ನೇರವಾಗಿ ಸರ್ಕಾರದ ಕಡೆಗೆ ಬೆರಳು ಮಾಡಿ ಪ್ರಶ್ನಿಸುವ ಸುದ್ದಿಯಾಗಿದೆ. ಹಾಗೆಯೇ ಸರ್ಕಾರ ಆತ್ಮವಿಮರ್ಶೆ ಮಾಡಿಕೊಂಡಂತೆ ಶೈಕ್ಷಣಿಕ ಸುಧಾರಣೆಗೆ ಆದ್ಯ ಗಮನಕೊಡಬೇಕಾದ ಉರಿಯುವ ಸಂಗತಿಯಾಗಿದೆ.

ಕನ್ನಡ ಬೋಧನೆಯ ಗುಣಮಟ್ಟ ಸರ್ಕಾರಿ ಶಾಲೆಗಳಲ್ಲಿ ಈ ಮಟ್ಟಕ್ಕೆ ಕುಸಿಯಲು ಕಾರಣವೇನು? ಈ ಒಂದು ಪ್ರಶ್ನೆಯ ಹಿಂದೆ ಇಡೀ ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟ ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಧುತ್ತನೆ ಎದುರಾಗುತ್ತವೆ. ಈ ಸಮಸ್ಯೆಗಳು ಪರಿಹಾರವಾಗದೆ ಗುಣಮಟ್ಟ ಏರುಗತಿಯನ್ನು ಕಾಣುವುದು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ  ಗುಣಮಟ್ಟದ ಶಿಕ್ಷಣ ಬೋಧನೆ ಆಗದ ಹೊರತು ಯಾವ ಪೋಷಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಧೈರ್ಯ ಮಾಡುವುದಿಲ್ಲ. ಇದರಿಂದಾಗಿ ಸರ್ಕಾರಿ ಶಾಲೆಗಳ ವಿಲೀನೀಕರಣ ಹಾಗೂ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಯ ವೇಗಗತಿ ನಿಲ್ಲುವುದಿಲ್ಲ.

ADVERTISEMENT

ಇದನ್ನು ತಪ್ಪಿಸುವುದಕ್ಕಾಗಿ ಇಂಗ್ಲಿಷ್‌ ಬೋಧನೆಯನ್ನು ಪ್ರಾಥಮಿಕ ಹಂತದಲ್ಲಿಯೇ ಕಡ್ಡಾಯವಾಗಿಸಿದ್ದು, ಒಂದು ಆಮಿಷದ ಪ್ರಯೋಗವಾಯಿತೇ ಹೊರತು ಶೈಕ್ಷಣಿಕ ಗುಣಮಟ್ಟದ ಕುಸಿತ ಇನ್ನೂ ಹೆಚ್ಚಾಯಿತು. ಪರಿಣಾಮ ಮಕ್ಕಳು ಇತ್ತ ಕನ್ನಡವನ್ನೂ ಕಲಿಯದೆ ಅತ್ತ ಇಂಗ್ಲಿಷ‌ನ್ನೂ ಕಲಿಯದೆ ಅನಕ್ಷರಸ್ಥ ಎಡಬಿಡಂಗಿಗಳಾಗಿ ಶಾಲೆ ಬಿಡುವವರ ಸಂಖ್ಯೆ ಹೆಚ್ಚಾಯಿತು. ಸರ್ಕಾರಿ ಶಾಲೆಗಳ ಮುಚ್ಚುವಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಿದೆ. ಇಷ್ಟಾಗಿಯೂ ಸಂಬಂಧಿಸಿದ ಆಡಳಿತ ವ್ಯವಸ್ಥೆ ಇದರ ಬಗ್ಗೆ ಮಾಮೂಲಿ ನಿರ್ಲಕ್ಷ್ಯವನ್ನು ಮುಂದುವರಿಸುವುದು ‘ಉಚಿತ ಕಡ್ಡಾಯ ಶಿಕ್ಷಣ’ ಯೋಜನೆಯ ದುರಂತವೇ ಸರಿ.

ಅನ್ನ, ಶಿಕ್ಷಣ, ಆರೋಗ್ಯ ಇವುಗಳು ಯಾವುದೇ ಜವಾಬ್ದಾರಿಯುತ ಸರ್ಕಾರದ ಸಾಮಾಜಿಕ ಹೊಣೆಗಾರಿಕೆ ಆಗಬೇಕು. ಅನ್ನದ ವಿಚಾರದಲ್ಲಿ ಈಗಿನ ಸರ್ಕಾರದ ನಡೆ ಶ್ಲಾಘನೀಯವಾದುದಾಗಿದೆ. ಆದರೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಮಾತನ್ನು ಹೇಳಲಾಗುವುದಿಲ್ಲ.

ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಖಾಸಗೀಕರಣದ ವೇಗ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇವರೆಡೂ ವ್ಯಾಪಾರದ ಸರಕಾಗುತ್ತಿವೆ. ಉಳ್ಳವರ ಕೊಳ್ಳುವಿಕೆಯ ಸರಕುಗಳಾಗಿ, ಬಡವರ ‌ಪಾಲಿಗೆ ನನಸಾಗದ ಕನಸುಗಳಾಗುತ್ತಿವೆ. ಶಿಕ್ಷಣದಲ್ಲಿ ಖಾಸಗೀಕರಣ ಹೆಚ್ಚಿದಂತೆ ನೆಲದ ಭಾಷೆಯಾದ ಕನ್ನಡ, ಶಿಕ್ಷಣದಿಂದ ದೂ‌ರವಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ತಬ್ಬಲಿಯಾಗುತ್ತಿದೆ. ಶಾಲಾ ಶಿಕ್ಷಣದಲ್ಲಿ ಕನ್ನಡ ಉಳಿಯ‌ದೆ, ಬೆಳೆಯದೆ ಹೋದರೆ ಆಡಳಿತ ಭಾಷೆಯಾಗಿ ಕನ್ನಡ ಬೆಳೆಯುವುದಿರಲಿ, ಉಳಿಯದೇ ಹೋಗುವ ಸಾಧ್ಯತೆಯೇ ಹೆಚ್ಚುತ್ತಿದೆ. ಈ ಮಧ್ಯೆ, ತ್ರಿಭಾಷಾ ಸೂತ್ರದ ತ್ರಿಶೂಲ ಕಾರಣದಿಂದಾಗಿ ಹಿಂದಿಯ ಆಧಿಪತ್ಯ ಹೆಚ್ಚುತ್ತಾ ಹೋಗಿ, ಕನ್ನಡದ ಮಕ್ಕಳು ಕನ್ನಡ ಓದಲು, ಬರೆಯಲು ಬಾರದವರಾಗಿ ಅನ್ಯಭಾಷೆಯ ಹಂಗಿನಲ್ಲಿ ಎರಡನೆಯ ದರ್ಜೆಯ ಪ್ರ‌ಜೆಗಳಾಗುವ ಅಪಾಯ ಹೆಚ್ಚಾಗುತ್ತಿದೆ. 

ಮೇಲಿನ ಎಲ್ಲಾ ಕಾರಣಗಳ ಆತ್ಮಾವಲೋಕನದಲ್ಲಿ ಕರ್ನಾಟಕ ಸರ್ಕಾರ ಹೊಣೆಯರಿತು ಕನ್ನಡದ ಉಳಿವಿಗಾಗಿ,  ಬೆಳವಣಿಗೆಗಾಗಿ ಹೆಚ್ಚು ಹೆಚ್ಚು ಕರ್ತವ್ಯಮುಖಿಯಾಗುವ ಅಗತ್ಯವಿದೆ. ಈ ಎಲ್ಲಾ ಸಮಸ್ಯೆಗಳೂ ಇಂದು ನಿನ್ನೆಯಲ್ಲಿ ಆದ ಬೆಳವಣಿಗೆಗಳಲ್ಲ; ದಶಕಗಳಿಂದ ಕ್ರೋಡೀಕೃತಗೊಂಡು ಉಲ್ಬಣಗೊಂಡಿರುವ ಸಮಸ್ಯೆಗಳು; ಇಂದು ಎಸ್‌ಎಸ್‌‌ಎಲ್‌ಸಿ ಫಲಿತಾಂಶದಲ್ಲಿ ಪ್ರತಿಫಲಿತವಾಗಿರುವ ಕೇಡುಗಳು. ಇದನ್ನು ಅರಿತೇ ಇದೇ ಸರ್ಕಾರವು  2016ರ ಜೂನ್‌ 13ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ, ಸರ್ಕಾರಿ ಶಾಲೆಗಳ ಸಬಲೀಕರಣ ವರದಿಗಾಗಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಇಡೀ ರಾಜ್ಯದ ಒಳನಾಡಿನ ಗಡಿಭಾಗಗಳ ಸರ್ಕಾರಿ ಶಾಲೆಗಳನ್ನು ತನ್ನ ಅಧ್ಯಯನದ ಕಕ್ಷೆಗೆ ಒಳಗು ಮಾಡಿಕೊಂಡು ವರದಿಯನ್ನು ತಯಾರಿಸಿ 2017ರಲ್ಲಿ ಸರ್ಕಾರಕ್ಕೆ ವರದಿಯನ್ನು ಒಪ್ಪಿಸಿದೆ. ಅಲ್ಲಿನ ಶಿಫಾರಸುಗಳು ಇಂದಿಗೂ ಹೆಚ್ಚು ಪ್ರಸ್ತುತವಿದ್ದು, ಅವುಗಳನ್ನು ಸಂವಿಧಾನಾತ್ಮಕವಾಗಿ ಜಾರಿಗೆ ತರುವ ಅಗತ್ಯವಿದೆ. 

ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡ ಭಾಷೆಯನ್ನು ಸರ್ಕಾರಿ ಶಾಲೆಗಳಲ್ಲಿ ‘ನಲಿ ಕಲಿ’ ಪದ್ಧತಿಯ ಅನುಸಾರ ಕಲಿಸುತ್ತಿದ್ದು, ಇದನ್ನು ಜಾರಿಗೊಳಿಸಿದಂದಿನಿಂದ ಇಂದಿನ ತನಕವೂ ಅದನ್ನು ಪುನರ್‌ ಪರಿಶೀಲನೆಗೆ ಒಳಗು ಮಾಡಿ ಕಲಿಕೆಯಲ್ಲಿ ಮಾರ್ಪಾಡುಗಳನ್ನು ತರಲಾಗಿಲ್ಲ. ತಂದಿದ್ದರೂ ಅದು ಸಫಲ ಮಾರ್ಗವಲ್ಲ ಎಂಬುದನ್ನು ಈ ಸಾರಿಯ ಫಲಿತಾಂಶ ನಿಚ್ಚಳವಾಗಿ ಮುಖಕ್ಕೆ ಹಿಡಿದು ತೋರಿಸುತ್ತದೆ. ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ಬಳಸುತ್ತಿರುವ ಕಾರ್ಡುಗಳ ಬಳಕೆಯ ವಿಧಾನವೂ ವಿಫಲವಾದದ್ದೆಂಬುದು ಇದರಿಂದ ವ್ಯಕ್ತವಾಗಿದೆ. ಪಠ್ಯಪುಸ್ತಕಗಳ ಬಳಕೆಯ ಮಾರ್ಗವೇ ಯಾಕೆ ಹೆಚ್ಚು ಸೂಕ್ತ ಎಂಬುದನ್ನು ತೌಲನಿಕ ಅಧ್ಯಯನದ ಹಿನ್ನೆಲೆಯಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. 

ಇದರ ಜತೆಗೆ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಮಕ್ಕಳ ಕಲಿಕೆಗೆ ಮಾತ್ರ ತೊಡಗಿಸಿಕೊಂಡು, ಪೂರ್ಣ ಪ್ರಮಾಣದ ಶಿಕ್ಷಕರನ್ನಾಗಿ ಮಾಡುವ ಅಗತ್ಯವಿದೆ. ಆಧಾರ್‌ ನೋಂದಣಿಯಿಂದ ಹಿಡಿದು ಜಾತಿ ಜನಗಣತಿವರೆಗಿನ ಹದಿನಾರು ಬಗೆಯ ಅನ್ಯ ಕಾರ್ಯಗಳಿಗೆ ಅವರನ್ನು ಸರ್ಕಾರ ಬಳಸಿಕೊಳ್ಳುತ್ತಿದೆ. ಶಿಕ್ಷಕರನ್ನು ಶಿಕ್ಷಕರಾಗಿ ಕಾರ್ಯ ನಿರ್ವಹಿಸುವುದಕ್ಕೆ ಬಿಡದೆ ಮಕ್ಕಳ ಕಲಿಯುವ ಸಮಯವನ್ನು ದೋಚುವ ಈ ಬಗೆಯ ದುರ್ಬಳಕೆ ಮಕ್ಕಳ ಶಿಕ್ಷಣದ ಮೇಲೆ ನಡೆಸುವ ಪ್ರಹಾರವೇ ಆಗಿದೆ. ಈ ಬಗೆಯ ದ್ರೋಹ ಕೃತ್ಯವನ್ನು ಸರ್ಕಾರ ಕಾನೂನಾತ್ಮಕವಾಗಿ ನಿಷೇಧಿಸುವ ತುರ್ತು ಇದೆ. ಹಾಗೆಯೇ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ತಮ್ಮ ವೃತ್ತಿ ನೈ‍ಪುಣ್ಯವನ್ನು ಉನ್ನತೀಕರಿಸಿಕೊಳ್ಳಲು ಅವಕಾಶ ನೀಡಬೇಕು. ಅದರಂತೆ ಕಾಲೋಚಿತವಾಗಿ ತರಬೇತಿ ಪಡೆದು ಅನುಪಾಲನೆಗೆ ಪೂರಕವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಲಿಕೆಯ ವಿಧಾನವನ್ನು ಬಲವರ್ಧನೆಗೊಳಿಸಬೇಕು. ಈ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. 

ಇದು ತಂತ್ರಜ್ಞಾನದ ಯುಗ. ಆಧುನಿಕ ತಂತ್ರಜ್ಞಾನವನ್ನು ಮರೆತು ಯಾವುದೇ ಶಿಕ್ಷಣವನ್ನು ಬಳಸಲಾಗುವುದಿಲ್ಲ. ಮಾಹಿತಿ ತಂತ್ರಜ್ಞಾನದ ಭಾಗವಾಗಿ ಇ–ಲೈಬ್ರರಿ ,
ಇ–ಬುಕ್‌ ಇತ್ಯಾದಿ ಕಾಲೋಚಿತ ತಂತ್ರಜ್ಞಾನವನ್ನು, ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಶಿಕ್ಷಣ ನೀಡುವುದು ಇಂದಿನ ತುರ್ತಾಗಿದೆ. ಅಲ್ಲದೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸಲು ಪ್ರತಿ ಶಾಲೆಗೂ ತರಗತಿಗೊಬ್ಬ ಶಿಕ್ಷಕ, ವಿಷಯಕ್ಕೊಬ್ಬ ಶಿಕ್ಷಕ ಎಂಬುದನ್ನು ಕಡ್ಡಾಯವಾಗಿ ಪಾಲಿಸಬೇಕಾದ ಅಗತ್ಯವಿದೆ. ಮಕ್ಕಳ– ಶಿಕ್ಷಕರ ಆದರ್ಶ ಅನುಪಾತವನ್ನು ಮುಟ್ಟುವವರೆಗೂ, ಕನಿಷ್ಠ ವಿಷಯವಾರು ಬೋಧನೆಯ ಶಿಕ್ಷಕರನ್ನು ಒದಗಿಸುವ ಅಗತ್ಯವಿದೆ.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ತನ್ನ ಮೂಲಭೂತ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಸರ್ಕಾರಿ ಶಾಲೆಗಳನ್ನು ದತ್ತು ಯೋಜನೆಗೆ, ಸಾರ್ವಜನಿಕ– ಖಾಸಗಿ ಸಹಭಾಗಿತ್ವಕ್ಕೆ ಕೊಟ್ಟು ಶಾಲೆಗಳ ಮೂಲ ಆಶಯಕ್ಕೆ ಧಕ್ಕೆಯುಂಟು ಮಾಡುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಿಕ್ಷಣ, ಅದರಲ್ಲೂ ಸಮಾನ ಶಿಕ್ಷಣವನ್ನು ಮಕ್ಕಳಿಗೆ ನೀಡುವುದು ಸರ್ಕಾರದ ಕರ್ತವ್ಯ. ಇದನ್ನು ನಿಭಾಯಿಸಲಾಗದೆ ಖಾಸಗಿಯವರ ಹೆಗಲಿಗೆ ಸರ್ಕಾರಿ ಶಾಲೆಗಳನ್ನು ಹೊರಿಸುವುದು ಶಿಕ್ಷಣದ ಹಕ್ಕುಬಾಧ್ಯತೆಗೆ ಎರವಾದ ನಡವಳಿಕೆಯೇ ಸರಿ.

ಪ್ರತಿವರ್ಷವೂ ₹30 ಕೋಟಿಯಿಂದ–₹40 ಕೋಟಿಯಷ್ಟು ಸಾರ್ವಜನಿಕ ಹಣವನ್ನು ಕನ್ನಡದ ಹೆಸರಿನಲ್ಲಿ ನಡೆಯುವ ಜಾತ್ರೆ, ಉತ್ಸವ, ಸಮ್ಮೇಳನಗಳಿಗೆ ಅಂದಾದುಂದಿ ಖರ್ಚು ಮಾಡುವುದನ್ನು ಕಡಿಮೆ ಮಾಡಿ, ಕನ್ನಡ ಶಾಲೆಗಳ ಸರ್ವಾಂಗೀಣ ಸಬಲೀಕರಣಕ್ಕೆ ಆ ಹಣವನ್ನು ಉಪಯೋಗಿಸುವುದು ತುಂಬಾ ತುಂಬಾ ಅಗತ್ಯವಿದೆ. ಶಾಲೆಗಳಲ್ಲಿ ಕನ್ನಡ ಉಳಿದರೆ ಬೆಳೆದರೆ ಸಮ್ಮೇಳನದಲ್ಲಿ ಕನ್ನಡ ಬೆಳಗುತ್ತದೆ.

ಕನ್ನಡ–ಕನ್ನಡಿಗ–ಕರ್ನಾಟಕದ ಅಳಿವು ಉಳಿವು ಇರುವುದು, ಶಾಲಾ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದರಿಂದ ಮತ್ತು ಕನ್ನಡವನ್ನು ಸಮರ್ಥವಾಗಿ ಗುಣಾತ್ಮಕವಾಗಿ ಕಲಿಸುವುದರಿಂದ. ಜನಪದ ತಾಯಿ ತನ್ನ ಮಗುವಿನ ಹೊಟ್ಟೆಗೆ ಅನ್ನ ತಿನ್ನಿಸುವಾಗ ಹಾಡುವ ತ್ರಿಪದಿಯೊಂದು ನಮ್ಮ ಕನ್ನಡ ಪ್ರಜ್ಞೆಯ, ಕನ್ನಡ ಸಂಸ್ಕೃತಿಯ, ಪರಂಪರೆಯ ಪ್ರತೀಕದಂತಿದೆ.

ಆಚಾರಕ್ಕರಸಾಗು ನೀತಿಗೆ ಪ್ರಭುವಾಗು

ಮಾತಿನಲಿ ಚೂಡಾಮಣಿಯಾಗು | ಎಲೆಕಂದ

ಜಗಕೆ ನೀ ಜ್ಯೋತಿಯಾಗು

ಇದು ನಮ್ಮ ಕನ್ನಡ ಪ್ರಜ್ಞಾ ಪರಂಪರೆಯ ಜೀವನಮೌಲ್ಯ. ಈ ಜೀವನಮೌಲ್ಯ ನಮ್ಮ ಶಾಲಾ ಶಿಕ್ಷಣದ ಹೂರಣವಾಗಬೇಕು. ಇದರ ಸರ್ವತೋಮುಖ ಸಬಲೀಕರಣವು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. 

ಕೊನೆಯ ಮಾತು: ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಸೀಟು ಪಡೆಯುವುದು ಪ್ರತಿಷ್ಠೆಯಾಗುವುದಾದರೆ, ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರುವುದು ಯಾಕೆ ಪ್ರತಿಷ್ಠೆಯಾಗಬಾರದು? ಇದನ್ನು ಆಗುಮಾಡುವತ್ತ ಸರ್ಕಾರ ಸಂಕಲ್ಪ ಬದ್ಧವಾಗಲಿ. 

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಎಸ್‌.ಜಿ.ಸಿದ್ಧರಾಮಯ್ಯ

ಲೇಖಕ: ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.