ಶ್ರೀದೇವಿ ಕೆರೆಮನೆ
ಸರ್ಕಾರಿ ಶಾಲೆಗಳಿಗೆ ಯಾವುದೇ ವಿದ್ಯಾರ್ಥಿ ಬಂದರೂ ದಾಖಲಾತಿ ತಿರಸ್ಕರಿಸುವಂತಿಲ್ಲ. ಶಿಕ್ಷಣ ಮಗುವಿನ ಹಕ್ಕು ಎಂದು ಪರಿಗಣಿಸಲ್ಪಟ್ಟಿದೆ. ಖಾಸಗಿ ಶಾಲೆಗಳು ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನಷ್ಟೇ ದಾಖಲು ಮಾಡಿಕೊಳ್ಳುತ್ತವೆ. 9ನೇ ತರಗತಿಯಲ್ಲಿ ಶೇ 85ಕ್ಕಿಂತ ಕಡಿಮೆ ಪಡೆದ ಮಕ್ಕಳನ್ನು ಟಿ.ಸಿ. ಕೊಟ್ಟು ಕಳಿಸಲಾಗುತ್ತದೆ. ಅಲ್ಲಿಂದ ಹೊರಗೆ ಬಿದ್ದ ಮಕ್ಕಳಲ್ಲಿ ಶೇ 70ಕ್ಕೂ ಹೆಚ್ಚಿನ ಅಂಕ ಪಡೆದವರು ಅನುದಾನಿತ ಶಾಲೆಗಳಲ್ಲಿ ದಾಖಲಾದರೆ, ಕಡಿಮೆ ಅಂಕ ಗಳಿಸಿದವರು ಸರ್ಕಾರಿ ಶಾಲೆಗಳಿಗೆ ಸೇರುತ್ತಾರೆ.
ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾದಾಗಿನಿಂದ ಫಲಿತಾಂಶ ವಿಶ್ಲೇಷಣೆ ಅತಿಯಾಗಿ ಸದ್ದು ಮಾಡುತ್ತಿದೆ. ಸರ್ಕಾರಿ ಶಾಲೆಗಳ ಫಲಿತಾಂಶದಲ್ಲಿ ಕುಸಿತವಾಗಿದೆ ಎಂಬುದು ಒಂದು ಅಂಶವಾದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಅನುತ್ತೀರ್ಣ ಪ್ರಮಾಣ ಹೆಚ್ಚಾಗಿರುವುದು ಇನ್ನೊಂದು ಅಂಶ. ಇದರ ಜೊತೆಗೆ ಕನ್ನಡ ಭಾಷೆಯಲ್ಲಿ ವಿದ್ಯಾರ್ಥಿಗಳ ಅಂಕ ಗಳಿಕೆ ಹಾಗೂ ಉತ್ತೀರ್ಣ ಪ್ರಮಾಣ ಕಡಿಮೆಯಾಗಿರುವುದು ಮೂರನೆಯ ಅಂಶ. ಹಾಗೆ ನೋಡಿದರೆ, ಹಿಂದಿಯನ್ನು ಹೊರತುಪಡಿಸಿ ಇಂಗ್ಲಿಷ್ ಭಾಷೆಯಾದಿಯಾಗಿ ಉಳಿದೆಲ್ಲ ವಿಷಯಗಳ ತೇರ್ಗಡೆಯ ಶೇಕಡವಾರು ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬುದು ನಿಜಕ್ಕೂ ಕಳವಳ ಹುಟ್ಟಿಸುವ ಅಂಶವಾಗಿದೆ. ಸರ್ಕಾರಿ ಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕಿಯಾಗಿ ಇದು ವೈಯಕ್ತಿಕವಾಗಿ ನನಗೆ ದಿಗಿಲು ಹುಟ್ಟಿಸಿದೆ.
ಈ ವರ್ಷ ಶೇ 100 ಫಲಿತಾಂಶ ಕಂಡ ಕೆಲವೇ ಕೆಲವು ಸರ್ಕಾರಿ ಶಾಲೆಗಳಲ್ಲಿ ನಮ್ಮದೂ ಒಂದು. ಆದರೆ ಆ ಫಲಿತಾಂಶದ ಹಾದಿ ಅಷ್ಟು ಸುಲಭವಾದುದಲ್ಲ. ಕೆಲವು ಉದಾಹರಣೆಗಳನ್ನು ಹೇಳಿದರೆ ಸರ್ಕಾರಿ ಹಾಗೂ ಕನ್ನಡ ಮಾದ್ಯಮದ ಶಾಲೆಗಳು ಫಲಿತಾಂಶದಲ್ಲಿ ಕುಸಿತ ಕಾಣಲು ಕಾರಣವೇನು ಎಂಬುದು ಮನವರಿಕೆಯಾಗಬಹುದು.
ಮಾರ್ಚ್ ಮಧ್ಯದಲ್ಲಿ ನಾವು ಶಿಕ್ಷಕರು ಮನೆ ಭೇಟಿಗೆ ಹೊರಡುತ್ತೇವೆ. ಒಂದು ರೀತಿಯಲ್ಲಿ ಇದು ಮಕ್ಕಳ ಬೇಟೆಯೂ ಹೌದು. ಸರ್ಕಾರಿ ಶಾಲೆಯ ಶಿಕ್ಷಕರಷ್ಟೇ ಅಲ್ಲ; ನಮ್ಮ ಸುತ್ತಲಿನ ಸುಮಾರು ನಾಲ್ಕೈದು ಕಿ.ಮೀ ವ್ಯಾಪ್ತಿಯಲ್ಲಿ ಬರುವ ಐದು ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರೂ ಈ ಕೆಲಸದಲ್ಲಿ ನಿರತರಾಗುತ್ತಾರೆ. ಮಕ್ಕಳು ಕಡಿಮೆ ಇರುವ ಪ್ರದೇಶವಾದ್ದರಿಂದ ಶಾಲೆಯ ಅಸ್ತಿತ್ವ ಉಳಿಸಿಕೊಳ್ಳಲು ಇದು ಅನಿವಾರ್ಯ. ನಮ್ಮ ಶಾಲೆಗೆ ಬಂದ ಹುಡುಗಿಯ ತಮ್ಮನನ್ನು ನಮ್ಮ ಶಾಲೆಗೆ ಕಳುಹಿಸಿಕೊಡಲು ಹೇಳಿದರೆ, ‘ಗಂಡು ಮಗಾ ಅಲ್ಲಾ? ಗನಾತ್ನಾಗಿ ಓದಿ ನೌಕರಿ ಹಿಡೀಲಿ ಅಂದ್ಕುಂಡು ಇಂಗ್ಲಿಷ್ ಮೀಡಿಯಂಗೆ ಹಾಕ್ದೆ. ಮೀನ್ ಹಿಡಿಯೂ ಕೆಲ್ಸಾ ನಮ್ಗೇ ಸಾಕ್’ ಎಂದರು ತಂದೆ. ನಾವು ಮರುಮಾತನಾಡುವಂತಿರಲಿಲ್ಲ. ಮಗನ ವಿದ್ಯಾಭ್ಯಾಸಕ್ಕೆ ಬೇಕಷ್ಟು ಹಣ ಸುರಿಯುವ ಪಾಲಕರು ಇಂದಿಗೂ ಮಗಳ ವಿದ್ಯಾಭ್ಯಾಸ ಅಷ್ಟೊಂದು ಮುಖ್ಯ ಎಂದು ಭಾವಿಸುವುದಿಲ್ಲ. ಬುದ್ಧಿವಂತ ಹುಡುಗಿಯರಾದರೂ ಪರೀಕ್ಷಾ ಸಮಯದಲ್ಲೂ ಮನೆಗೆಲಸ ತಪ್ಪಿದ್ದಲ್ಲ. ಹೀಗಾಗಿ ಅಂಕಗಳಿಕೆ ಕಷ್ಟ.
‘ದೊಡ್ಡವಳು ಇವಳಿಗಿಂತ ಜಾಣೆ. ಅದಕ್ಕೇ ಅವಳನ್ನು ಸಿಬಿಎಸ್‌ಇಗೆ ಹಾಕಿದ್ವಿ. ಇವಳು ಅವಳಷ್ಟು ಜಾಣೆ ಅಲ್ಲ. ಹೀಗಾಗಿ ಇಲ್ಲಿ ಎಡ್ಮಿಷನ್ ಮಾಡುತ್ತಿದ್ದೇವೆ...’ ತಾಯಿಯೊಬ್ಬಳು ಜೂನ್‌ನಲ್ಲಿ ಮಗಳ ದಾಖಲಾತಿಗಾಗಿ ಬಂದಾಗ ಹೇಳಿದ ಮಾತಿದು. ಜಾಣ ವಿದ್ಯಾರ್ಥಿಯಾಗಿದ್ದರೆ, ಅದು ಹೆಣ್ಣಿರಲಿ ಗಂಡಿರಲಿ ಅವರು ಇಂಗ್ಲಿಷ್ ಮಾಧ್ಯಮಕ್ಕೋ ಸೆಂಟ್ರಲ್/ ಇಂಟರ್‌ನ್ಯಾಷನಲ್ ಸಿಲೆಬಸ್ ಇರುವ ಶಾಲೆಗಳಿಗೋ ಹಾಕಿದರೆ ಓದಲು ಅಷ್ಟೇನೂ ಬುದ್ಧಿವಂತನಲ್ಲದ ಮಗು ಸರ್ಕಾರಿ ಶಾಲೆಗೆ ಎಂಬುದು ಹಿಂದಿನಿಂದಲೂ ನಡೆದು ಬಂದ ರೂಢಿ. ಇನ್ನು, ರಾಜ್ಯದ ಇತರೆಡೆಗೆ ಇಲ್ಲದ ಸಮಸ್ಯೆಯೊಂದು ನಮ್ಮ ಶಾಲೆಯ ಸುತ್ತಮುತ್ತಲಿದೆ. ಗೋವಾದ ಖಾಸಗಿ ಶಾಲೆಯ ವಾಹನವೊಂದು ಪ್ರತಿನಿತ್ಯ ಮಕ್ಕಳನ್ನು ಕರೆದೊಯ್ಯಲು ಬರುತ್ತದೆ. ಪಾಲಕರ ಬಳಿ ವಿಚಾರಿಸಿದಾಗ ‘ಅಲ್ಲಿದು ಶಾಲೆಗೆ ಹಾಕಿದ್ರೆ, ಗೋವಾದಲ್ಲಿ ಐಟಿಐ, ಡಿಪ್ಲೊಮಾ ಕಾಲೇಜಿಗೆ ಬೇಗ ಸೀಟ್ ಸಿಗ್ತದೆ. ಅಲ್ಲೇ ಮಾಡಿದ್ರೆ ಗೋವಾದಲ್ಲಿ ಬೇಗ ನೌಕರಿ ಸಿಗ್ತದೆ’ ಎನ್ನುತ್ತಾರೆ.
ಮೇಲೆ ಹೇಳಿದ ಉದಾಹರಣೆಗಳು ಕೇವಲ ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸ್ಯಾಂಪಲ್ ಅಷ್ಟೆ. ಹಾಗೆ ನೋಡಿದರೆ, ಸರ್ಕಾರಿ ಶಾಲೆಗಳು ಉಳಿದೆಲ್ಲ ಶಾಲೆಗಳಿಗಿಂತ ತಾಂತ್ರಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುತ್ತವೆ. ನಮ್ಮ ಸುತ್ತಲಿನ ಯಾವ ಖಾಸಗಿ ಶಾಲೆಗಳೂ ಅಳವಡಿಸಿಕೊಳ್ಳದ ಸ್ಮಾರ್ಟ್‌ಕ್ಲಾಸ್‌ಗಳು ನಮ್ಮ ಸರ್ಕಾರಿ ಶಾಲೆಗಳಲ್ಲಿವೆ. ಸರ್ಕಾರಿ ಶಾಲೆಗಳ ಶಿಕ್ಷಕರು ಟಿಇಟಿ, ಸಿಇಟಿ ಪರೀಕ್ಷೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಯ್ಕೆಯಾದವರು. ಆದರೂ ಶೈಕ್ಷಣಿಕ ಪ್ರಗತಿ ಹಾಗೂ ಫಲಿತಾಂಶ ಯಾಕೆ ಕುಂಠಿತಗೊಳ್ಳುತ್ತಿದೆಯೆಂದು ಕೂಲಂಕಷವಾಗಿ ಅಧ್ಯಯನ ನಡೆಸಿದಾಗ ಇಂತಹ ಅದೆಷ್ಟೋ ಕಾರಣಗಳು ದೊರೆಯುತ್ತವೆ. ಹಾಗಾದರೆ, ಕನ್ನಡ ಮಾಧ್ಯಮಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಭವಿಷ್ಯವೇ ಇಲ್ಲವೇ? ಕನ್ನಡ ಮಾಧ್ಯಮದ ಶಾಲೆಗಳು ಯಾಕೆ ಶೈಕ್ಷಣಿಕ ಪ್ರಗತಿ ಕಾಣುತ್ತಿಲ್ಲವೆಂದು ಪ್ರಶ್ನೆ ಹಾಕಿಕೊಂಡರೆ ಇದಕ್ಕಿರುವ ಹಲವಾರು ಆಯಾಮಗಳು ಗೋಚರಿಸುತ್ತವೆ.
ಸರ್ಕಾರಿ ಶಾಲೆಗಳಿಗೆ ಯಾವುದೇ ವಿದ್ಯಾರ್ಥಿ ಬಂದರೂ ದಾಖಲಾತಿಯನ್ನು ತಿರಸ್ಕರಿಸುವಂತಿಲ್ಲ. ಶಿಕ್ಷಣ ಮಗುವಿನ ಹಕ್ಕು ಎಂದು ಪರಿಗಣಿಸಲ್ಪಟ್ಟಿದೆ. ಅನುದಾನ ರಹಿತ (ಖಾಸಗಿ) ಶಾಲೆಗಳು ಶೇ 95ಕ್ಕಿಂತ ಮೇಲೆ ಬಂದ ಮಕ್ಕಳನ್ನಷ್ಟೇ ತಮ್ಮ ಶಾಲೆಗಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಒಂಬತ್ತನೇ ತರಗತಿಯಲ್ಲಿ ಶೇ 85ಕ್ಕಿಂತ ಕಡಿಮೆ ಅಂಕ ಪಡೆದ ಮಕ್ಕಳನ್ನು ಯಾವ ಮುಲಾಜಿಗೂ ಒಳಗಾಗದೆ ಟಿ.ಸಿ ಕೊಟ್ಟು ಕಳಿಸಲಾಗುತ್ತದೆ. ಅಲ್ಲಿಂದ ಹೊರಗೆ ಬಿದ್ದ ಮಕ್ಕಳಲ್ಲಿ ಶೇ 70ಕ್ಕೂ ಹೆಚ್ಚಿನ ಅಂಕ ಪಡೆದವರು ಸಮೀಪದ ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಂಡರೆ ಶೇ 50ಕ್ಕೂ ಹೆಚ್ಚಿನ ಅಂಕ ಗಳಿಸಬಹುದಾದ ವಿದ್ಯಾರ್ಥಿಗಳು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಾಗುತ್ತಾರೆ.
ನಂತರ ಉಳಿದ ಅನುತ್ತೀರ್ಣಗೊಳ್ಳಬಹುದಾದ ಅಥವಾ ಕಡಿಮೆ ಅಂಕ ಗಳಿಸುವ ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಾರೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮಗುವಿಗೆ ಸರ್ಕಾರಿ ಶಾಲೆಯ ಕಡ್ಡಾಯ ಹಾಜರಾತಿ ಹಾಗೂ ವೈಯಕ್ತಿಕ ಗಮನ ಕೂಡ ಕಿರಿಕಿರಿ ಎನ್ನಿಸುತ್ತದೆ ಎಂದು ಇತ್ತೀಚೆಗೆ ಪದೇ ಪದೇ ಶಾಲೆ ತಪ್ಪಿಸುವ ಹುಡುಗನೊಬ್ಬ ಹೇಳುತ್ತಿದ್ದ. ಒಮ್ಮೆಲೇ ಇಷ್ಟು ವರ್ಷ ತಾನು ಓದಿದ್ದ ಶಾಲೆಯನ್ನು ಬಿಟ್ಟು ಕೊನೆಯ ವರ್ಷಕ್ಕೆ ಬೇರೆ ಶಾಲೆಗೆ ಬಂದ ಮಗುವಿನ ಮಾನಸಿಕ ಸ್ಥಿತಿ ಕೂಡ ಸೂಕ್ಷ್ಮವಾಗಿರುತ್ತದೆ. ಹೊಸ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲಾಗದಿರುವುದು, ಮಾಧ್ಯಮದಲ್ಲಿ ಆದ ಬದಲಾವಣೆ ಮಗುವಿಗೆ ತೀರಾ ಹಿನ್ನಡೆಯನ್ನು ಉಂಟುಮಾಡುತ್ತವೆ ಎಂಬುದನ್ನು ಗಮನಿಸಬೇಕಾಗಿದೆ. ಪ್ರಾಥಮಿಕ ಹಂತದಲ್ಲಿ ಒಂದು ಶಾಲೆಯಲ್ಲಿದ್ದು ಎಂಟು ಹಾಗೂ ಒಂಬತ್ತನೆ ತರಗತಿಗೆ ವರ್ಗಾವಣೆ ಪತ್ರವನ್ನು ನೀಡಿ ಕೈತೊಳೆದುಕೊಳ್ಳುವ ಖಾಸಗಿ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೆ ಮಕ್ಕಳ ಮಾನಸಿಕ ಚಂಚಲತೆ ಕಡಿಮೆಯಾಗಬಹುದು. ಹೀಗೆ ಶಾಲೆಗೆ ಹೊಂದಿಕೊಳ್ಳಲಾಗದೆ ಪದೇ ಪದೇ ಶಾಲೆ ತಪ್ಪಿಸುವ ಮಗುವಿನಿಂದ ಯಾವ ಫಲಿತಾಂಶ ನಿರೀಕ್ಷಿಸಲು ಸಾಧ್ಯ?
ಹಳ್ಳಿಗಳಲ್ಲಿರುವ ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳಂತೂ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡ ಅಡಿಕೆಯ ಚೂರಂತಾಗಿವೆ. ಎಂಟನೇ ತರಗತಿಗೆ ಕಡ್ಡಾಯವಾಗಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಬೇಕು. ಇಲ್ಲವೆಂದಾದಲ್ಲಿ ಶಿಕ್ಷಕರ ಸಂಬಳವನ್ನು ನಿಲ್ಲಿಸುವುದಾಗಿ ಇಲಾಖೆ ತಿಳಿಸಿದೆ. ಪ್ರತಿವರ್ಷ ಮಾನ್ಯತೆ ನವೀಕರಣ ಮಾಡುವಾಗ ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ಮೇಲಧಿಕಾರಿಗಳಿಗೆ ಸಾವಿರದ ಲೆಕ್ಕದಲ್ಲಲ್ಲ ಲಕ್ಷಗಳ ಲೆಕ್ಕದಲ್ಲಿ ಸಂತೃಪ್ತಿಪಡಿಸಬೇಕಾದ ಅನಿವಾರ್ಯ ಇರುತ್ತದೆ. ಈಗಂತೂ ಒಂದು ಚಿಕ್ಕ ಪಟ್ಟಣ ಎನ್ನಿಸಿಕೊಳ್ಳಬಹುದಾದ ಊರಲ್ಲೂ ಒಂದೆರಡು ಕಿ.ಮೀ ವ್ಯಾಪ್ತಿಯಲ್ಲಿ ನಾಲ್ಕಾರು ಇಂಗ್ಲಿಷ್ ಮಾಧ್ಯಮದ ಶಾಲೆಗಳಿದ್ದು, ಸುತ್ತಲಿನ ಮಕ್ಕಳು ಸಮೀಪದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗುವುದರಿಂದ ಕನ್ನಡ ಮಾಧ್ಯಮ ಶಾಲೆಗಳು ದೂರದ ಊರುಗಳಿಂದ ಮಕ್ಕಳನ್ನು ಕರೆತರುವ ಅಥವಾ ಅಂಗವಿಕಲ ಮಕ್ಕಳನ್ನು ದಾಖಲಿಸಿಕೊಳ್ಳುವ ಇಲ್ಲವೇ ಖಾಸಗಿಯಾಗಿ ಶಿಕ್ಷಕರೇ ಹಣ ನೀಡಿ ಹಾಸ್ಟೆಲ್ ನಡೆಸುವ ಅನಿವಾರ್ಯದಲ್ಲಿ ಸಿಲುಕಿದ್ದಾರೆ.
ದೂರದ ಊರುಗಳಿಂದ ಬರುವ ಮಕ್ಕಳು ಪದೇ ಪದೇ ಗೈರಾಗುವುದರಿಂದ ಫಲಿತಾಂಶ ಇಳಿಮುಖವಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮಂತಹ ಗಡಿಭಾಗದ ಶಾಲೆಗಳಿರುವ ಊರುಗಳಲ್ಲಿ ಕನ್ನಡವು ಸಂವಹನ ಭಾಷೆಯೂ ಆಗಿರುವುದಿಲ್ಲ. ಹೀಗಾಗಿ ಕನ್ನಡದಲ್ಲಿ ವಾಕ್ಯ ರಚನೆ ಹಾಗೂ ವಿಷಯದ ವಿವರಣೆ ಮಕ್ಕಳಿಗೆ ಕಷ್ಟ. ಇಂತಹ ಕೆಲವು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾದಿಯಾಗಿ ಹೆಚ್ಚಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಅಲ್ಲಿಯ ಸ್ಥಳಿಯ ಭಾಷೆಯಲ್ಲಿಯೇ ವ್ಯವಹರಿಸುವುದರಿಂದ ಮಕ್ಕಳಿಗೆ ಕನ್ನಡದ ಕಲಿಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿಬಿಡುತ್ತದೆ. ಹೀಗಾಗಿ ಕನ್ನಡ ಮಾಧ್ಯಮದ ಮಕ್ಕಳಿಗೆ ವಿಷಯದ ಕಲ್ಪನೆ, ನಿಖರತೆ ಇದ್ದೂ ವಿಷಯವನ್ನು ನಿರೂಪಿಸಲಾಗದ ಕಾರಣದಿಂದಾಗಿ ಅಂಕಗಳಿಕೆ ಕಡಿಮೆಯಾಗುತ್ತದೆ.
ಶಿಕ್ಷಕರಿಗೆ ಬೋಧನೆ ಹೊರತಾದ ಕಾರ್ಯಗಳು ಮಾಡಿ ಮುಗಿಸುವಂತಹುದ್ದಲ್ಲ. ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಇಲಾಖೆಯೇತರ ಕೆಲಸಗಳ ಹೊರೆಯೇ ಬಿದ್ದಿರುತ್ತದೆ. ಇದಲ್ಲದೆ ಬಿಸಿಯೂಟ, ಎಂಡಿಎಂ, ಎಸ್‌ಎಟಿಎಸ್‌ನಲ್ಲಿ ಹಾಕಬೇಕಾದ ಹಾಜರಿ, ಯುಡೈಸ್ ವಿವರಣೆಗಳು, ಪಠ್ಯಪುಸ್ತಕಗಳ ಆನ್‌ಲೈನ್ ಎಂಟ್ರಿ ಹೀಗೆ ಶಾಲೆಗೆ ಸಂಬಂಧಿಸಿದ ಹಲವು ಕೆಲಸಗಳೂ ಮುಗಿಬಿದ್ದಿರುತ್ತವೆ. ನಮ್ಮಂತಹ ಹಳ್ಳಿಗಳಲ್ಲಿ ಇರುವ ಶಾಲೆಗಳಿಗೆ ನೆಟ್‌ವರ್ಕ್ ಸಮಸ್ಯೆಯಿರುವುದರಿಂದ ಮಕ್ಕಳಿಗೆ ಬೋಧಿಸುವ ಸಮಯಕ್ಕಿಂತ ಎಲ್ಲಿ ನೆಟ್ ಸಿಗುತ್ತದೆ ಎಂದು ಹುಡುಕುತ್ತಾ ಓಡಾಡಬೇಕಾಗುತ್ತದೆ. ಈ ವರ್ಷ ಮಕ್ಕಳ ಫೋಟೊ ಹಾಜರಾತಿಯನ್ನೂ ಜಾರಿಗೆ ತರುವುದಾಗಿ ಇಲಾಖೆ ಹೇಳುತ್ತಿದೆ.
ಇಂತಹ ಹೊಸಯೋಜನೆಗಳ ಜೊತೆಯಲ್ಲಿ ತಕ್ಷಣ ಕಳಿಸಬೇಕಾದ ಇಲಾಖೆಯ ಹಾಗೂ ಇಲಾಖೆಯೇತರ ತುರ್ತು ಮಾಹಿತಿಗಳು ಶಿಕ್ಷಕರ ಬೋಧನಾ ಅವಧಿಯನ್ನು ಕಸಿಯುತ್ತವೆ. ಇದೆಲ್ಲದರ ಜೊತೆ ಶಿಕ್ಷಕರ ತರಬೇತಿ ಕಾರ್ಯಕ್ರಮಗಳು ಶಾಲೆ ಪ್ರಾರಂಭವಾಗಲೆಂದೇ ಕಾದು ಕುಳಿತಿರುತ್ತವೆ. ಇದು ಮಕ್ಕಳ ಓದು ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಪ್ರಾಥಮಿಕ ಹಂತದಲ್ಲಿ ಕಲಿಕಾ ಬುನಾದಿ ಸರಿಯಾಗದಿದ್ದರೆ ಮುಂದೆ ಏನೇ ಮಾಡಿದರೂ ಮಗು ಕಲಿಕಾಲೋಪವುಳ್ಳ ಮಗುವಾಗಿಯೇ ಉಳಿದುಬಿಡುತ್ತದೆ.
ಶಿಕ್ಷಣ ಇಲಾಖೆಯನ್ನು ರಜಾರಹಿತ ಇಲಾಖೆಯನ್ನಾಗಿ ಪರಿವರ್ತಿಸಿ ಈಗಿನ ರಜಾದಿನಗಳನ್ನು ಶಿಕ್ಷಕರ ತರಬೇತಿಗೆಂದು ಮೀಸಲಿಡುವುದು ಹಾಗೂ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮಾಡುವುದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವುದು, ಜಾತಿಗಣತಿ, ಜನಗಣತಿಗಳ ಕಾರ್ಯ ವಹಿಸುವುದನ್ನು ಮಾಡಿ ನಂತರದ ದಿನಗಳಲ್ಲಿ ಬೋಧನಾ ಅವಧಿ ವ್ಯರ್ಥವಾಗದಂತೆ ನೋಡಿಕೊಳ್ಳಬಹುದು. ಅಂತರ್ಜಾಲದ ಮೂಲಕ ಕಾರ್ಯನಿರ್ವಹಿಸಬೇಕಾದಲ್ಲಿ ಉಚಿತ ವೈಫೈ ಸೇವೆಯನ್ನಾದರೂ ನೀಡಿದಲ್ಲಿ ಅದಕ್ಕಾಗಿ ಬೋಧನಾ ಅವಧಿಯನ್ನು ಬಳಸಿಕೊಳ್ಳುವುದನ್ನು ತಡೆಗಟ್ಟಬಹುದು. ಮಕ್ಕಳ ಕುರಿತಾದ ವೈಯಕ್ತಿಕ ಕಾಳಜಿ ಹಾಗೂ ಇರುವ ಬೋಧನಾ ಅವಧಿಗಳನ್ನು ಶಿಕ್ಷಕರು ಸಮರ್ಪಕವಾಗಿ ಬಳಸಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟರೆ ಫಲಿತಾಂಶವು ಖಂಡಿತವಾಗಿಯೂ ಊರ್ಧ್ವಮುಖಿಯಾಗುವುದರಲ್ಲಿ ಸಂಶಯವಿಲ್ಲ.
ಶ್ರೀದೇವಿ ಕೆರೆಮನೆ
ಲೇಖಕಿ: ಪ್ರೌಢಶಾಲಾ ಶಿಕ್ಷಕಿ, ಕವಯಿತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.