ADVERTISEMENT

ಪ್ರಜಾವಾಣಿ ಚರ್ಚೆ: ವಕ್ಫ್ ತಿದ್ದುಪಡಿ ಮಸೂದೆ ಬಡ ಮುಸ್ಲಿಮರ ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 0:12 IST
Last Updated 5 ಏಪ್ರಿಲ್ 2025, 0:12 IST
   
ವಕ್ಫ್‌ನಿಂದ ಬರುವ ಆದಾಯದ ಮೂಲಕ ಮುಸ್ಲಿಂ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ರಕ್ಷಣೆ ಮತ್ತು ತಾಯಂದಿರ ಕಲ್ಯಾಣ, ಮಹಿಳಾ ಉದ್ಯಮಿಗಳಿಗೆ ಕೌಶಲ ಅಭಿವೃದ್ಧಿ ಮತ್ತು ಕಿರುಬಂಡವಾಳ ಬೆಂಬಲ, ಫ್ಯಾಷನ್‌ ವಿನ್ಯಾಸ, ಆರೋಗ್ಯ ರಕ್ಷಣೆ ಮತ್ತು ಉದ್ಯಮ ಶೀಲತೆಯಂತಹ ಕ್ಷೇತ್ರಗಳಲ್ಲಿ ವೃತ್ತಿಪರ ತರಬೇತಿ, ವಿಧವೆಯರಿಗೆ ಪಿಂಚಣಿ, ಪಿತ್ರಾರ್ಜಿತ ವಿವಾದಗಳು ಮತ್ತು ಹಿಂಸಾಚಾರ ಪ್ರಕರಣಗಳಲ್ಲಿ ಕಾನೂನು ನೆರವು ನೀಡುವ ಉದ್ದೇಶವನ್ನು ಹೊಸ ಮಸೂದೆ ಹೊಂದಿದೆ

ಸ್ವಾತಂತ್ರ್ಯ ಪೂರ್ವದಿಂದಲೇ ತನ್ನ ಕರಾಳ ಅಸ್ತಿತ್ವವನ್ನು ಬಿಗಿಯಾಗಿ ಉಳಿಸಿಕೊಂಡು ಬಂದಿದ್ದ ವಕ್ಫ್‌ ಎಂಬ ‘ದು–ಶಾಸನ’ವೊಂದು ಕೊನೆಗೂ ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿ ತಿದ್ದುಪಡಿಗೊಂಡಿದೆ. ಕಠಿಣ ಪದಗಳಲ್ಲಿ ಹೇಳಬೇಕೆಂದರೆ, ಕರಾಳ ಕಾಯ್ದೆಯೊಂದು ಮಡಿದು ಬೀಳುವ ಹಂತ ತಲುಪಿದೆ. ಸ್ವಾತಂತ್ರ್ಯ ಬಂದ ಬಳಿಕವೂ ಕಾಂಗ್ರೆಸ್ ಸರ್ಕಾರದ‌ ಮಡಿಲ ಕೂಸಾಗಿ ಉಳಿದುಕೊಂಡಿದ್ದ ವಕ್ಫ್ ಕಾಯಿದೆಗೆ ಏ.2ರಂದು ಲೋಕಸಭೆಯಲ್ಲಿ ಸೂಕ್ತ ತಿದ್ದುಪಡಿ ಮಾಡುವ ಮೂಲಕ ದೇಶದ ಸಾರ್ವಭೌಮತ್ವ ಹಾಗೂ ನೆಲದ ಕಾನೂನಿಗೆ ವ್ಯತಿರಿಕ್ತವಾದ ವಿಚಾರಗಳ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದಂತಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಲವು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಅಂಗೀಕೃತಗೊಂಡ ಈ ಮಸೂದೆ ಇನ್ನು ಮುಂದೆ ‘ಉಮೀದ್’ ಎಂದು ಕರೆಸಿಕೊಳ್ಳಲಿದೆ.

ನಿರೀಕ್ಷೆಯಂತೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ತಿದ್ದುಪಡಿಯನ್ನು ವಿರೋಧಿಸಿವೆ. ಅದು ನಿರೀಕ್ಷಿತವಷ್ಟೇ ಅಲ್ಲ, ಸಹಜವೂ ಹೌದು. ಏಕೆಂದರೆ, ಇಷ್ಟು ವರ್ಷ ತಾನು‌ ಪೋಷಿಸಿ ಪೊರೆದುಕೊಂಡು ಬಂದ ‘ಮತಬ್ಯಾಂಕ್’ನ ಪಟ್ಟಭದ್ರ ಹಿತಾಸಕ್ತಿಗಳನ್ನು ಕಳೆದುಕೊಳ್ಳುವುದಕ್ಕೆ ಕಾಂಗ್ರೆಸ್ ಹೇಗೆ ಮನಸ್ಸು ಮಾಡಲು ಸಾಧ್ಯ? ಆದರೆ, ಈ ತಿದ್ದುಪಡಿ ಮಸೂದೆ ಅಸಾಂವಿಧಾನಿಕ ಎಂದು ಹೇಳುವ ಕಾಂಗ್ರೆಸ್‌ನ ಆರೋಪವನ್ನು ಮಾತ್ರ ಪ್ರತಿರೋಧಿಸಬೇಕಾಗುತ್ತದೆ. ಏಕೆಂದರೆ, ವಕ್ಫ್‌ ಕಾಯ್ದೆಯಲ್ಲಿ ಇದ್ದ ಅನೇಕ ಅಂಶಗಳು ಅಸಾಂವಿಧಾನಿಕವಾಗಿದ್ದವು. ಮಾತ್ರವಲ್ಲ, ಅದು ಮುಸ್ಲಿಂ ಸಮುದಾಯದ ಬಡವರು, ಮಹಿಳೆಯರು ಹಾಗೂ ಅಶಕ್ತರ ಆಶಯಕ್ಕೆ ವಿರುದ್ಧವೂ, ಆ ಸಮುದಾಯದ ಪಟ್ಟಭದ್ರ ಹಿತಾಸಕ್ತಿಗಳಿಗೆ ಪೂರಕವೂ ಆಗಿತ್ತು. ಹೀಗಾಗಿ ಯಾವ ಮುಲಾಜಿಗೂ ಒಳಪಡದೆ ಕೇಂದ್ರ ಸರ್ಕಾರ ಈ ಕಾಯ್ದೆಯ ಸ್ವರೂಪ ಬದಲಾಯಿಸಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಒಂದು ದಿಟ್ಟ ಕ್ರಮ. ಜಮ್ಮು- ಕಾಶ್ಮೀರಕ್ಕೆ ಇದೇ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದ ವಿಶೇಷಾಧಿಕಾರ ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಕ್ ರದ್ದತಿಯಂತಹ ಕ್ರಾಂತಿಕಾರಕ ನಿರ್ಣಯದ ಬಳಿಕ ಈ ದೇಶ ಕಂಡ ಅತ್ಯಂತ ಬಲಿಷ್ಠ ಹಾಗೂ ಮಹತ್ವದ ಮಸೂದೆ ಇದಾಗಿದೆ.

ವಿಸ್ತೃತ ಚರ್ಚೆ: ವಕ್ಫ್ ಕಾಯ್ದೆ ತಿದ್ದುಪಡಿಗೆ ಸಂಬಂಧಪಟ್ಟಂತೆ ಇಷ್ಟು ವಿಸ್ತೃತವಾದ ಚರ್ಚೆ ಹಾಗೂ ಅನುಸಂಧಾನ ಇತ್ತೀಚಿನ ವರ್ಷಗಳಲ್ಲಿ ನಡೆದ ನಿದರ್ಶನ‌ ಇಲ್ಲ.‌ ಈ ಸಂಬಂಧ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ರಚಿಸಿದ್ದ ಸಂಸತ್ತಿನ ಜಂಟಿ ಸಮಿತಿ ಇಡೀ ದೇಶವನ್ನು ಪರ್ಯಟನೆ ಮಾಡಿ ವಸ್ತುಸ್ಥಿತಿಯ ಅಧ್ಯಯನ ನಡೆಸಿತ್ತು. 97.27 ಲಕ್ಷ ಅರ್ಜಿಗಳು ಹಾಗೂ‌ ಮನವಿಗಳನ್ನು ಸೂಕ್ಷ್ಮವಾಗಿ ಅವಲೋಕನ ನಡೆಸಿತ್ತು. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ 284 ನಿಯೋಗಗಳ ಜತೆಗೆ ಸಂವಾದ ನಡೆಸಿ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿತ್ತು. ಇದರ ಮೇಲೆ ಕೇಂದ್ರ ಸಂಪುಟ ಸಭೆಯಲ್ಲೂ ಸುದೀರ್ಘ ಚರ್ಚೆ ನಡೆದ ಬಳಿಕವೇ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡನೆ ಮಾಡಲಾಗಿತ್ತು. ಹೀಗಿರುವಾಗ ಕಾಂಗ್ರೆಸ್ ಆರೋಪಿಸುವಂತೆ ‘ಉಮೀದ್‌’ ಸಂವಿಧಾನ ವಿರೋಧಿಯಾಗಲು ಹೇಗೆ ಸಾಧ್ಯ?

ADVERTISEMENT

ಭಾರತೀಯ ರೈಲ್ವೆ, ರಕ್ಷಣಾ ಇಲಾಖೆಯ ಬಳಿಕ ಅತಿ ಹೆಚ್ಚು ಆಸ್ತಿ ಇರುವುದು ವಕ್ಫ್ ಬೋರ್ಡ್ ಬಳಿ. ಸರ್ಕಾರಕ್ಕಿಂತಲೂ ಹೆಚ್ಚು ಆಸ್ತಿಯನ್ನು ಖಾಸಗಿಯವರು ಹೊಂದುವುದು ಹಾಗೂ ಅದರ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಬಳಕೆ ಮಾಡುವುದು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ರಾತ್ರೋರಾತ್ರಿ ಒಂದು ಜಾಗವನ್ನು ವಕ್ಫ್ ಎಂದು ಘೋಷಿಸಿ ಸ್ವಾಹಾ ಮಾಡುವ ಪ್ರಕರಣಗಳಿಗೆ ಇನ್ನು ಮುಂದೆ ತೆರೆ ಬೀಳಲಿದೆ.

ಕರಾಳ ಹಾದಿ: ‘ವಕ್ಫ್‌’ನ ಮೂಲ ಭಾರತವಲ್ಲ. ಕ್ರಿ.ಪೂ 634ರಲ್ಲಿ ಪ್ರವಾದಿ ಮುಹಮ್ಮದ್‌ ಅವರ ಮಾರ್ಗದರ್ಶನದಲ್ಲಿ ಭೂಮಿಯ ಸದ್ಬಳಕೆಗಾಗಿ ಎರಡನೇ‌ ಖಲೀಫಾ ಅವರು ಈ ನಿಯಮ ರೂಪಿಸಿದ್ದರು. ಇದು ಅರಬ್ ಜಗತ್ತಿನಲ್ಲಿ ಭೂದಾನದ ಪ್ರವೃತ್ತಿಗೆ ಚಾಲನೆ ನೀಡಿತು. ಭಾರತದಲ್ಲಿ ಇದು ಪ್ರವೇಶಿಸಿದ್ದು ಮಹಮ್ಮದ್ ಘೋರಿಯೊಂದಿಗೆ. ಪೃಥ್ವಿರಾಜ್ ಚೌಹಾಣನನ್ನು ಸೋಲಿಸಿದ ಬಳಿಕ ಅವನ ಸಾಮ್ರಾಜ್ಯದ ಸುತ್ತ ಮಸೀದಿಗಳನ್ನು ನಿರ್ಮಿಸಿ ಅದನ್ನು ವಕ್ಫ್ ಸ್ವತ್ತು (ಅಲ್ಲಾನ ಜಾಗ) ಎಂದು ಇಸ್ಲಾಮಿಕ್ ಧರ್ಮಗುರುಗಳು ಘೋಷಿಸಿದರು. ಮುಂದೆ ಎಲ್ಲ ಇಸ್ಲಾಮಿಕ್ ದೊರೆಗಳು ಇದನ್ನೇ ಮುಂದುವರಿಸಿದರು.

ಬ್ರಿಟಿಷರು ಆರಂಭದಲ್ಲಿ ಭಾರತದ ಧಾರ್ಮಿಕ ವಿದ್ಯಮಾನಗಳಲ್ಲಿ ತಟಸ್ಥವಾಗಿಯೇ ಇದ್ದರು. ಆದರೆ, ವಕ್ಫ್ ಮಂಡಳಿಯಲ್ಲಿನ ಆಂತರಿಕ‌ ಕಲಹ, ಭ್ರಷ್ಟಾಚಾರ ಬ್ರಿಟಿಷರನ್ನು ತಲುಪಿದ್ದರಿಂದ 1828–29ರಲ್ಲಿ ಭೂ ಮರುಸ್ವಾಧೀನ ಕಾಯ್ದೆ (Land Resumption act) ಜಾರಿಗೆ ತಂದು ವಕ್ಫ್ ಸ್ವತ್ತುಗಳ ಮೇಲೆ ತೆರಿಗೆ ವಿಧಿಸಿದರು. 1923ರಲ್ಲಿ ಮುಸ್ಲಿಂ ಲೀಗ್‌ ಒತ್ತಡದ ಫಲವಾಗಿ ಬ್ರಿಟಿಷ್‌ ಸರ್ಕಾರ ವಕ್ಫ್‌ ಕಾಯ್ದೆಗೆ ನೀತಿಗಳನ್ನು ರೂಪಿಸಿತು. ಇದರ ಪರಿಣಾಮ ಬ್ರಿಟಿಷ್ ಆಡಳಿತದ ಎಲ್ಲ ರಾಜ್ಯಗಳಲ್ಲಿ ವಕ್ಫ್‌ ಮಂಡಳಿಗಳು ರಚನೆಗೊಂಡವು. 1954ರಲ್ಲಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ರಾಜ್ಯ ಮಟ್ಟದಲ್ಲಿ ವಕ್ಫ್‌ ಮಂಡಳಿ ರಚಿಸಲು ಅವಕಾಶ ಕಲ್ಪಿಸಿದರು. 1995ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದ ಸರ್ಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ ಅನೇಕ ಅನಾಹುತಕಾರಿ ಅಂಶಗಳಿಂದ ಕೂಡಿತ್ತು. ಇದು ವಕ್ಫ್ ಶಕ್ತಿ ಹಾಗೂ ಭೂದಾಹ ಹೆಚ್ಚಳಕ್ಕೆ ಇನ್ನಿಲ್ಲದ ಆವಕಾಶ ಮಾಡಿಕೊಟ್ಟಿತು. ಮಂಡಳಿಯೊಳಗಿನ ಪಟ್ಟಭದ್ರರು ನಡೆಸುವ ಅವ್ಯವಹಾರ ಹಾಗೂ ಆಸ್ತಿಯ ಮಾರುಕಟ್ಟೆ ಮೌಲ್ಯಗಳೆರಡೂ ಈಗ ಹಲವು ಪಟ್ಟು ಹೆಚ್ಚಿದ್ದು, ಈ ವ್ಯವಸ್ಥೆಯನ್ನು ಸುಧಾರಿಸಿ ಮುಸ್ಲಿಂ ಸಮುದಾಯದ ಬಡವರು, ಮಹಿಳೆಯರು, ಶೋಷಿತರಿಗೆ ನ್ಯಾಯ ಕೊಡಿಸುವ ಕೆಲಸ ತೀರಾ ಅನಿವಾರ್ಯವಾಗಿತ್ತು. ಈ ಕಾರಣಕ್ಕಾಗಿಯೇ ಮೋದಿ ಸರ್ಕಾರ ಹಲವು ಸವಾಲುಗಳನ್ನು ಮೆಟ್ಟಿ ನಿಲ್ಲುವ ‘ಉಮೀದ್’ ಪ್ರದರ್ಶಿಸಿದೆ.

ಮುಸ್ಲಿಂ ಸಮುದಾಯದ ಬಡವರು, ಮಹಿಳೆಯರು ಮತ್ತು ನಿರ್ಲಕ್ಷಿತರಿಗೆ ‘ಉಮೀದ್‌’ ಆಶಾಕಿರಣವಾಗಿದೆ. ವಕ್ಫ್‌ನಿಂದ ಬರುವ ಆದಾಯದ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ರಕ್ಷಣೆ ಮತ್ತು ತಾಯಂದಿರ ಕಲ್ಯಾಣ, ಮಹಿಳಾ ಉದ್ಯಮಿಗಳಿಗೆ ಕೌಶಲ ಅಭಿವೃದ್ಧಿ ಮತ್ತು ಕಿರುಬಂಡವಾಳ ಬೆಂಬಲ, ಫ್ಯಾಷನ್‌ ವಿನ್ಯಾಸ, ಆರೋಗ್ಯ ರಕ್ಷಣೆ ಮತ್ತು ಉದ್ಯಮಶೀಲತೆಯಂತಹ ಕ್ಷೇತ್ರಗಳಲ್ಲಿ ವೃತ್ತಿಪರ ತರಬೇತಿ, ವಿಧವೆಯರಿಗೆ ಪಿಂಚಣಿ, ಪಿತ್ರಾರ್ಜಿತ ವಿವಾದಗಳು ಮತ್ತು ಹಿಂಸಾಚಾರ ಪ್ರಕರಣಗಳಲ್ಲಿ ಕಾನೂನು ನೆರವು ನೀಡುವ ಉದ್ದೇಶವನ್ನು ಹೊಸ ಮಸೂದೆ ಹೊಂದಿದೆ. ವಕ್ಫ್‌ ಭೂಮಿ ದುರುಪಯೋಗ ಮತ್ತು ಅತಿಕ್ರಮಣವನ್ನು ತಡೆಗಟ್ಟುವುದರಿಂದ ವಕ್ಫ್‌ ಮಂಡಳಿಗಳಿಗೆ ಆದಾಯ ಹೆಚ್ಚಾಗುತ್ತದೆ. ಇದನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬಹುದು. ಆರೋಗ್ಯ ರಕ್ಷಣೆ, ಶಿಕ್ಷಣ, ವಸತಿ ಮತ್ತು ಜೀವನೋಪಾಯಕ್ಕಾಗಿ ಧನಸಹಾಯ ಸಿಗಲಿದೆ. ವಿಶೇಷವಾಗಿ ಮುಸ್ಲಿಂ ಸಮುದಾಯದಲ್ಲಿರುವ ಹಿಂದುಳಿದ, ನಿರ್ಲಕ್ಷಿತ ಪಂಗಡಗಳ ಸಬಲೀಕರಣ ಸಾಧ್ಯ. ವಕ್ಫ್‌ ಮಂಡಳಿಯಲ್ಲಿ ಈ ವರ್ಗಕ್ಕೂ ಪ್ರಾತಿನಿಧ್ಯ ಸಿಗಲಿದೆ. ಬೊಹ್ರಾ ಮತ್ತು ಅಘಖಾನಿ ಸಮುದಾಯದವರಿಗೂ ಪ್ರಾತಿನಿಧ್ಯ ಸಿಗಲಿದೆ. ಈವರೆಗೆ ಇವರನ್ನು ದೂರ ಇಡಲಾಗಿತ್ತು.

ಅಂದಹಾಗೆ, ಕರ್ನಾಟಕದಲ್ಲೂ ವಕ್ಫ್ ಭೂ ದಾಹದ ಕಬಂಧ ಬಾಹು ಚಾಚಿದೆ. ಕೇವಲ ಹಿಂದೂಗಳದಷ್ಟೇ ಅಲ್ಲ, ಬಡ ಮುಸ್ಲಿಮರದೂ ಸೇರಿ ಸಾವಿರಾರು ಎಕರೆಯಷ್ಟು ಕೃಷಿ ಹಾಗೂ ಖಾಸಗಿ ಭೂಮಿಯನ್ನು ವಕ್ಫ್ ಮಂಡಳಿ ಅತಿಕ್ರಮಿಸಿಕೊಂಡಿದೆ ಎಂಬ ಆರೋಪವಿದೆ. ಕೃಷಿಕರ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದ ಪ್ರಕರಣ ಇನ್ನೂ‌ ಹಸಿರಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯ ಘಟಕ ಹೋರಾಟ ನಡೆಸಿ ಸರ್ಕಾರದ ಕಣ್ಣು ತೆರೆಸಿದೆ. ಜತೆಗೆ ಪಕ್ಷದ ನಿಯೋಗ ಸಂಸತ್ತಿನ ಜಂಟಿ ಸಮಿತಿ ಅಧ್ಯಕ್ಷರನ್ನೂ ಭೇಟಿ ಮಾಡಿ ವಸ್ತುಸ್ಥಿತಿಯ ವಿವರಣೆ ನೀಡಿತ್ತು. ಕೇವಲ ಹತ್ತೇ ದಿನಗಳ ಪ್ರವಾಸದಲ್ಲಿ 4,500 ದೂರುಗಳು ಬಂದಿದ್ದವು ಎಂದರೆ ವಕ್ಫ್ ಮಂಡಳಿ ರಾಜ್ಯದಲ್ಲಿ ಸೃಷ್ಟಿಸಿದ ಅವಾಂತರದ ಪರಿಣಾಮ ಎಷ್ಟೆಂದು ಊಹಿಸಬಹುದು. ಅದೆಲ್ಲದಕ್ಕಿಂತ ಮುಖ್ಯವಾಗಿ, 2012ರಲ್ಲಿ ಸಲ್ಲಿಕೆಯಾದ ಅನ್ವರ್‌ ಮಾಣಿಪ್ಪಾಡಿ ವರದಿಯು ವಕ್ಫ್‌ನ ಕರಾಳತೆಯನ್ನು ಮೊದಲ ಬಾರಿಗೆ ಬಯಲು ಮಾಡಿತ್ತು. 27 ಸಾವಿರ ಎಕರೆ ವಕ್ಫ್ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನ ಪ್ರಭಾವಿ ನಾಯಕರೂ ಭಾಗಿ ಆಗಿದ್ದಾರೆ ಎಂದು ವರದಿ ಹೇಳಿತ್ತು. ಹೀಗಾಗಿ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಮಾತ್ರ ಇಂಥ‌ ಪ್ರಗತಿಪರ ಮಸೂದೆಯನ್ನು ವಿರೋಧಿಸುತ್ತಾರೆ; ಹಗರಣಗಳನ್ನು ಬೆಂಬಲಿಸುತ್ತಾರೆ.

ಲೇಖಕ: ವಿಧಾನಸಭೆಯಲ್ಲಿ ಬಿಜೆಪಿ ಉಪನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.