ADVERTISEMENT

ಚರ್ಚೆ | ಹುಲಿಗೆ ಗಂಟೆ ಕಟ್ಟುವ ಧೀರರು!

ಪು.ಸೂ.ಲಕ್ಷ್ಮೀನಾರಾಯಣ ರಾವ್
Published 13 ಮೇ 2025, 0:30 IST
Last Updated 13 ಮೇ 2025, 0:30 IST
   
ಬಹುತೇಕ ಆಸ್ಪತ್ರೆಗಳು ಅಪಾರದರ್ಶಕವಾಗಿ ಇರುವುದಷ್ಟೇ ಅಲ್ಲ, ಮಧ್ಯಮವರ್ಗ,ಕೆಳವರ್ಗದವರ ಪಾಲಿಗೆ ಆರ್ಥಿಕವಾಗಿ ಭರಿಸಲಾಗದ ಹೊರೆಯೂ ಆಗಿವೆ

‘ಐಸಿಯು: ಎಲ್ಲಿದೆ ಪಾರದರ್ಶಕತೆ?’ ಎಂಬ ಲೇಖನದಲ್ಲಿ (ಸಂಗತ, ಮೇ 9), ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕಂಡುಬರುವ ಅಪಾರದರ್ಶಕತೆಯ ಅವಾಂತರಗಳ ಕುರಿತು ಸದಾಶಿವ್ ಸೊರಟೂರು ಅಳಲು ತೋಡಿಕೊಂಡಿದ್ದಾರೆ. ಹೌದು, ನಮ್ಮ ಪ್ರೀತಿಪಾತ್ರರಾದವರು ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಅದರಲ್ಲೂ ಐಸಿಯುಗೆ ಸೇರಬೇಕಾದ ಪರಿಸ್ಥಿತಿ ಬಂದಾಗ ನಮ್ಮ ದುಗುಡ ಹೇಳತೀರದು.

ಅತಿಯಾದ ಪ್ರೀತಿ ಇರುವ ಕಡೆ ಕೆಟ್ಟದ್ದರ ಭಯವೇ ನಮ್ಮನ್ನು ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರೊಬ್ಬರೇ ತಮ್ಮ ಪಾಲಿನ ದೇವರು ಎಂದು ಜನ ಭಾವಿಸುತ್ತಾರೆ. ‘ನೀವು ಹೇಗೆ ಹೇಳಿದರೆ ಹಾಗೆ ಮಾಡ್ತೀವಿ ಸರ್’ ಅಂತ ವೈದ್ಯರಿಗೆ ಶರಣಾಗತರಾಗು ತ್ತಾರೆ. ಅಂತಹ ಗಳಿಗೆಯಲ್ಲಿ ಮಾನವೀಯವಾದ ರೀತಿಯಲ್ಲಿ ಉಪಚರಿಸುವ, ಸಲಹೆಗಳನ್ನು ನೀಡುವ ವೈದ್ಯರನ್ನು ಜನ ತಮ್ಮ ಜೀವಮಾನದಲ್ಲೇ ಮರೆಯದೆ ಇರುವಂತಹ ಪ್ರಕರಣಗಳು ಬಹುಶಃ ಪ್ರತಿಯೊಬ್ಬರ ಜೀವಮಾನದಲ್ಲೂ ನಡೆದಿರುತ್ತವೆ. ಇಂದಿಗೂ ಅಂತಹ ವೈದ್ಯರು ಇದ್ದಾರೆ.

ಆದರೆ ಜಾಗತೀಕರಣದಿಂದೀಚೆಗೆ ವೈದ್ಯಕೀಯ ಕ್ಷೇತ್ರವು ವ್ಯಾಪಾರೀಕರಣಕ್ಕೆ ಒಳಗಾಗಿ, ಕೆಲವು ವೈದ್ಯರು ಸಹ ರೋಗಿಗಳ ಶೋಷಣೆಯಲ್ಲಿ ಶಾಮೀಲಾಗಿರುತ್ತಾರೆಯೇ ಎಂಬ ಅನುಮಾನ ಕಾಡುತ್ತದೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಇಂತಿಷ್ಟು ವರಮಾನ ಬರುವ ಹಾಗೆ ಮಾಡಬೇಕೆಂದು ವೈದ್ಯರಿಗೆ ‘ಟಾರ್ಗೆಟ್’ ನಿಗದಿ ಗೊಳಿಸಿರುತ್ತವಂತೆ! ಅವರು ಅವನ್ನು ಪೂರೈಸದಿದ್ದರೆ ತಮ್ಮ ಉದ್ಯೋಗವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅವರು ರೋಗಿಯನ್ನು ಇಲ್ಲಸಲ್ಲದ ತನಿಖೆಗೆ ಒಳಪಡಿಸಿ, ಆಸ್ಪತ್ರೆಯ ವರಮಾನ ಹಾಗೂ ತಮ್ಮ ಭದ್ರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ADVERTISEMENT

ಇತ್ತೀಚೆಗೆ ನನ್ನ ನೆಂಟನೊಬ್ಬ ಉಸಿರಾಟದ ತೊಂದರೆಗೆ ಸಿಲುಕಿ ನಗರದ ಸುಪ್ರಸಿದ್ಧ ಆಸ್ಪತ್ರೆಯ ಐಸಿಯುಗೆ ದಾಖಲಾದ. ಕೃತಕ ಉಸಿರಾಟದ ವ್ಯವಸ್ಥೆ ಅನಿವಾರ್ಯವಾಯಿತು. ಆದರೆ ಆ ಆಸ್ಪತ್ರೆಯ ಐಸಿಯು ಶುಲ್ಕ ದಿನಕ್ಕೆ ₹70 ಸಾವಿರ! ಔಷಧಿಗಳು, ವೈದ್ಯರ ಶುಲ್ಕ, ದಾದಿಯರ ಆರೈಕೆಯ ವೆಚ್ಚ ಎಲ್ಲ ಸೇರಿ ದಿನಕ್ಕೆ ಒಂದರಿಂದ ಒಂದೂಕಾಲು ಲಕ್ಷ ಆಗತೊಡಗಿತು. ರೋಗಿಯ ಆರೋಗ್ಯ ಏನೇನೂ ಸುಧಾರಿಸಲಿಲ್ಲ. ಗಾಬರಿಗೊಂಡ ಮನೆಯವರು ಆಸ್ಪತ್ರೆಯನ್ನು ಬದಲಾವಣೆ ಮಾಡುವ ತೀರ್ಮಾನಕ್ಕೆ ಬಂದರು. ಮೊದಲು ಒಪ್ಪಿಕೊಂಡ ಆ ಆಸ್ಪತ್ರೆಯ ಉನ್ನತ ವೈದ್ಯಾಧಿಕಾರಿ, ಬಿಡುಗಡೆ ಮಾಡದೆ ‘ನಿಮಗೆ ಬೇರೆ ವ್ಯವಸ್ಥೆ ಮಾಡುತ್ತೇವೆ’ ಎಂದು ಹೇಳಿ, ಅದೇ ಐಸಿಯುನ ದಿನದ ಶುಲ್ಕವನ್ನು ₹20 ಸಾವಿರಕ್ಕೆ ಇಳಿಸಿದರು. ಉಳಿದ ಖರ್ಚುಗಳು ಅಂದಾಜು ದಿನಕ್ಕೆ ₹20 ಸಾವಿರ ಆಗಬಹುದು ಎಂದರು. ಆಶ್ಚರ್ಯವಾದರೂ ಮನೆಯವರು ಅದಕ್ಕೆ ಸಮ್ಮತಿಸಿದರು.

ಮತ್ತೊಂದು ಆಶ್ಚರ್ಯವೆಂದರೆ, ಪಕ್ಕದ ಹಾಸಿಗೆಯವರ ರಹಸ್ಯ ಹಿತವಚನದಂತೆ, ಅದೇ ಆಸ್ಪತ್ರೆಯ ಔಷಧದ ಅಂಗಡಿಯಲ್ಲಿ ದಿನಕ್ಕೆ ಹದಿನೇಳು ಸಾವಿರಕ್ಕೆ ಕೊಳ್ಳುತ್ತಿದ್ದ ಔಷಧಿಯು ಹೊರಗಿನ ಔಷಧ ಮಾರಾಟ ಪ್ರತಿನಿಧಿಯಿಂದ ಬರೀ ಏಳು ಸಾವಿರಕ್ಕೆ ಲಭ್ಯವಾಗತೊಡಗಿತು! (ಅಲ್ಲಲ್ಲಿ ಕಾಣುವ ಜನೌಷಧಿ ಕೇಂದ್ರಗಳು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ!) ಅದುವರೆಗೆ ಕೇಳಿದ್ದ ಔಷಧಿ ಮಾಫಿಯಾ ಜೊತೆಗೆ ಆಸ್ಪತ್ರೆ ಮಾಫಿಯಾದ ಪರಿಚಯವೂ ಆಯಿತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯನ್ನು ಸುಸಜ್ಜಿತ ಯಂತ್ರೋಪಕರಣಗಳೊಂದಿಗೆ ಆರಂಭಿಸಿದವರು ದಿನನಿತ್ಯ ತಗಲುವ ಖರ್ಚುಗಳನ್ನು, ವೈದ್ಯರು ಮತ್ತಿತರ ಸಿಬ್ಬಂದಿಯ ದುಬಾರಿ ಸಂಬಳವನ್ನು ತಪ್ಪದೇ ನಿರ್ವಹಿಸಬೇಕಾದರೆ ಈ ವಸೂಲಿ ಅನಿವಾರ್ಯ ಎಂಬ ವಾದ ಮಂಡಿಸುತ್ತಾರೆ ಕೆಲವರು‌. ಕೋಟಿಗಟ್ಟಲೆ ದೇಣಿಗೆ ಮತ್ತು ಶುಲ್ಕವನ್ನು ಪಾವತಿಸಿ ಉನ್ನತ ವೈದ್ಯಕೀಯ ಶಿಕ್ಷಣವನ್ನು ಹಾಗೂ ತಜ್ಞತೆಗಾಗಿ ಬೇರೆ ಬೇರೆ ಡಿಪ್ಲೊಮಾಗಳನ್ನು ಪಡೆದುಕೊಂಡು ಬಂದ ವೈದ್ಯರು ಸಾಮಾನ್ಯ ವೇತನಕ್ಕೆ ಸೇವೆ ಸಲ್ಲಿಸಲು ಸಾಧ್ಯವೇ?

ತೆರೆಮರೆಯಲ್ಲಿ ತಯಾರಾಗುವ ಔಷಧಿಗಳ ಬೆಲೆಯನ್ನಂತೂ ಸಾಮಾನ್ಯರಿಂದ ತಡೆದುಕೊಳ್ಳಲಾಗದು. ಈ ಎಲ್ಲ ಸಮಸ್ಯೆಗಳ ಮೂಲ ಯಾವುದು? ಪರಿಹಾರ ಹೇಗೆ? ಬೆಕ್ಕಿಗೆ ಅಲ್ಲ, ಹುಲಿಗೆ ಗಂಟೆ ಕಟ್ಟುವ ಇಂತಹ ಧೀರ ಸರ್ಕಾರ ಬಹುಶಃ ಯಾವ ದೇಶದಲ್ಲೂ ಇರಲಾರದು!

ಲೇಖಕರು ಹೇಳುವ ಹಾಗೆ, ಪಾರದರ್ಶಕತೆ ಇಲ್ಲದಿರುವುದಷ್ಟೇ ಅಲ್ಲದೆ ಮಧ್ಯಮವರ್ಗ ಹಾಗೂ ಕೆಳವರ್ಗದವರ ಪಾಲಿಗೆ ಆರ್ಥಿಕವಾಗಿ ಭರಿಸಲಾಗದ ಹೊರೆಯೂ ಆಗಿವೆ ಈ ಆಸ್ಪತ್ರೆಗಳು. ಕೆಲವರು ಕಂಡ ಕಂಡ ಕಡೆ ಸಾಲ ಮಾಡಿ ಅದನ್ನು ಮರುಪಾವತಿಸಲು ಆಸ್ತಿಪಾಸ್ತಿ ಮಾರಿಕೊಂಡ ಉದಾಹರಣೆಗಳಿವೆ. ಮತ್ತೊಂದು ಕಡೆ, ವೈದ್ಯಕೀಯ ವಿಮಾ ಪ್ರೀಮಿಯಮ್ಮು ಗಳನ್ನು ಸಹ ತುಂಬಾ ದುಬಾರಿ ಮಾಡಿರುವುದು ಮತ್ತು ಅದು ಸಾಲದು ಎಂದು ಕೇಂದ್ರ ಸರ್ಕಾರ ಶೇ 18ರಷ್ಟು ಜಿಎಸ್‌ಟಿಯನ್ನು ಬೇರೆ ಹೇರಿರುವುದು ಹೆದರುವವನ ಮೇಲೆ ಹಾವು ಎಸೆದಂತೆ ಆಗಿದೆ. ಸರ್ಕಾರಿ ಆಸ್ಪತ್ರೆಗಳಂತೂ ತುಂಬಾ ಶೋಚನೀಯ ಸ್ಥಿತಿಯನ್ನು ತಲುಪಿವೆ.

ಇತ್ತೀಚೆಗೆ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳೆರಡೂ ಯಾರ ನಿಯಂತ್ರಣಕ್ಕೂ ಒಳಪಡದೆ, ಕವಿ ದ.ರಾ.ಬೇಂದ್ರೆಯವರು ತಮ್ಮ ಕವನವೊಂದರಲ್ಲಿ ಹೇಳಿರುವಂತೆ, ‘ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು’ ಎಂಬಂತೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.