ADVERTISEMENT

Street Dog Menace | ಪ್ರಜಾವಾಣಿ ಚರ್ಚೆ: ಬೀದಿ ನಾಯಿಗಳೂ ಹುಸಿ ಅನುಕಂಪವೂ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 2:36 IST
Last Updated 16 ಆಗಸ್ಟ್ 2025, 2:36 IST
<div class="paragraphs"><p>ದಾವಣಗೆರೆಯ ಕೆಟಿಜೆ ನಗರದಲ್ಲಿ ಕಂಡು ಬಂದ ಬೀದಿ ನಾಯಿಗಳ ಹಾವಳಿ<br></p></div>

ದಾವಣಗೆರೆಯ ಕೆಟಿಜೆ ನಗರದಲ್ಲಿ ಕಂಡು ಬಂದ ಬೀದಿ ನಾಯಿಗಳ ಹಾವಳಿ

   

-ಪ್ರಜಾವಾಣಿ ಚಿತ್ರ:ಸತೀಶ್ ಬಡಗೇರ

ADVERTISEMENT
ಅಪರರಾತ್ರಿಯಲ್ಲಿ, ನಸುಕಿನಲ್ಲಿ ಓಡಾಡುವ ವಿದ್ಯಾರ್ಥಿಗಳು, ದುಡಿಯುವ ವರ್ಗದವರೇ ಬೀದಿ ನಾಯಿಗಳ ಕಡಿತಕ್ಕೆ ಹೆಚ್ಚು ಒಳಗಾಗುತ್ತಿದ್ದಾರೆ. ಬೈಕ್, ಕಾರು ಇಲ್ಲದೇ ನಡೆದೇ ಸಾಗುವ ಬಡವರು ಈ ಪೈಕಿ ಹೆಚ್ಚಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರ ಮೇಲೆ ನಾಯಿಗಳ ಆಕ್ರಮಣದ ವಿಡಿಯೊಗಳನ್ನು, ರೇಬಿಸ್‌ನಿಂದ ನರಳಿ ಸಾಯುವವರನ್ನು ನೋಡಿದರೆ ಆತಂಕವಾಗುತ್ತದೆ. ಕೂಲಿನಾಲಿ ಮಾಡಿ ಜೀವನ ಕಟ್ಟಿಕೊಳ್ಳುತ್ತಿರುವ ಬಡವರು ಕೆಲಸ ಬಿಟ್ಟು ಆಸ್ಪತ್ರೆಗೆ ತಿರುಗುವಂತಾಗಿದೆ. ನಾಯಿ ಕಡಿತ ನಮ್ಮ ರಾಜ್ಯದ ಎಷ್ಟೋ ಸಾಂಕ್ರಾಮಿಕ ರೋಗಗಳಿಗಿಂತ ಅಧಿಕ ಪ್ರಮಾಣದಲ್ಲಿ ಜನರನ್ನು ಬಾಧಿಸುತ್ತಿರುವುದು ನಮ್ಮ ಕಣ್ಣು ತೆರೆಸಬೇಕಿದೆ

ರೇಬಿಸ್ ತಗುಲಿ ಉತ್ತರ ಪ್ರದೇಶದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಇದೇ ಜುಲೈ ಮೊದಲ ವಾರದಲ್ಲಿ ಸಾವಿಗೀಡಾದರು. ಕೊನೆಗಾಲದಲ್ಲಿ ಅವರು ನರಳುವ ವಿಡಿಯೊ ಎದೆ ನಡುಗಿಸುವಂತಿತ್ತು. ಚರಂಡಿಯಲ್ಲಿ ಬಿದ್ದಿದ್ದ ನಾಯಿಮರಿಯನ್ನು ರಕ್ಷಿಸಲು ಹೋದಾಗ ಅವರಿಗೆ ಅದು ಕಚ್ಚಿತ್ತು. ರಾಜ್ಯ ಮಟ್ಟದ ಆಟಗಾರರಾಗಿ, ಬಂಗಾರದ ಪದಕ ಗೆದ್ದಿದ್ದ ಅವರ ಜೀವನ ನಾಯಿಯಿಂದಾಗಿ ದಾರುಣ ಅಂತ್ಯಕಂಡಿತ್ತು. ರಾಷ್ಟ್ರ ಮಟ್ಟದ ಪ್ಯಾರಾ ಅಥ್ಲೀಟ್, ಒಡಿಶಾದ ಜೋಗೇಂದ್ರ ಛಾತ್ರಿಯಾ ಅವರು ನಾಯಿ ಕಚ್ಚಿದ್ದರಿಂದ ರೇಬಿಸ್‌ಗೆ ಗುರಿಯಾಗಿ ಆಗಸ್ಟ್ 10ರಂದು ಸಾವಿಗೀಡಾಗಿದ್ದಾರೆ. 

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಕೆಲವೇ ದಿನಗಳ ಹಿಂದೆ ನಾಯಿಗಳು ಕಚ್ಚಿ ವೃದ್ಧರೊಬ್ಬರು ಅಸುನೀಗಿದ ಘಟನೆ ನಡೆದಿದೆ. ಇವು ಕೇವಲ ಉದಾಹರಣೆ ಅಷ್ಟೇ; ಶಾಲೆಗಳಿಂದ ಮನೆಗೆ ಹಿಂದಿರುಗುವ ಮಕ್ಕಳು, ರಾತ್ರಿ ಹೊತ್ತು ಕೆಲಸ ಮುಗಿಸಿ ಮನೆಗೆ ನಡೆದು ಹೋಗುವ ಜನರು ಪ್ರತಿ ತಿಂಗಳು ರಾಜ್ಯದಲ್ಲಿ ಬೀದಿನಾಯಿಗಳ ದಾಳಿಗೆ ತುತ್ತಾಗುತ್ತಲೇ ಇದ್ದಾರೆ.

ಅಂಕಿಅಂಶಗಳ ಪ್ರಕಾರ, 2025ರ ಜೂನ್ ತಿಂಗಳವರೆಗೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 13 ಸಾವಿರಕ್ಕಿಂತ ಹೆಚ್ಚು ಜನರು ಮತ್ತು ರಾಜ್ಯದಲ್ಲಿ 2.80 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ನಾಯಿ ಕಡಿತದಿಂದ ಸತ್ತವರು ಹಲವರಾದರೆ, ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ದ್ವಿಚಕ್ರ ವಾಹನಗಳಿಂದ ಬಿದ್ದು ಸಾವಿರಾರು ಜನ ಗಾಯಗೊಂಡಿದ್ದಾರೆ. ಬೀದಿನಾಯಿಗಳ ದಾಳಿಗೆ ಒಳಗಾದ, ದಾಖಲೆಗೆ ಸೇರದ ಇನ್ನೂ ಎಷ್ಟು ಜನರಿದ್ದಾರೊ! ಈ ವರ್ಷದ ಮೊದಲ ಆರು ತಿಂಗಳಲ್ಲಿ ಕಳೆದ ವರ್ಷಗಳಿಗಿಂತ ಶೇ 37ರಷ್ಟು ಅಧಿಕ ನಾಯಿ ಕಡಿತಗಳು ವರದಿಯಾಗಿವೆ. 2024ರಲ್ಲಿ 3.6 ಲಕ್ಷ ಜನರು ಬೀದಿನಾಯಿಗಳ ದಾಳಿಗೆ ತುತ್ತಾಗಿದ್ದರು. 

ಅಪರರಾತ್ರಿಯಲ್ಲಿ, ನಸುಕಿನಲ್ಲಿ ಓಡಾಡುವ ವಿದ್ಯಾರ್ಥಿಗಳು, ದುಡಿಯುವ ವರ್ಗದವರೇ ಬೀದಿ ನಾಯಿಗಳ ಕಡಿತಕ್ಕೆ ಹೆಚ್ಚು ಒಳಗಾಗುತ್ತಿದ್ದಾರೆ. ಬೈಕ್, ಕಾರು ಇಲ್ಲದೇ ನಡೆದೇ ಸಾಗುವ ಬಡವರು ಈ ಪೈಕಿ ಹೆಚ್ಚಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರ ಮೇಲೆ ನಾಯಿಗಳ ಆಕ್ರಮಣದ ವಿಡಿಯೊಗಳನ್ನು, ರೇಬಿಸ್‌ನಿಂದ ನರಳಿ ಸಾಯುವವರನ್ನು ನೋಡಿದರೆ ಆತಂಕವಾಗುತ್ತದೆ. ಕೂಲಿನಾಲಿ ಮಾಡಿ ಜೀವನ ಕಟ್ಟಿಕೊಳ್ಳುತ್ತಿರುವ ಬಡವರು ಕೆಲಸ ಬಿಟ್ಟು ಆಸ್ಪತ್ರೆಗೆ ತಿರುಗುವಂತಾಗಿದೆ. ನಾಯಿ ಕಡಿತ ನಮ್ಮ ರಾಜ್ಯದ ಎಷ್ಟೋ ಸಾಂಕ್ರಾಮಿಕ ರೋಗಗಳಿಗಿಂತ ಅಧಿಕ ಪ್ರಮಾಣದಲ್ಲಿ ಜನರನ್ನು ಬಾಧಿಸುತ್ತಿರುವುದು ನಮ್ಮ ಕಣ್ಣು ತೆರೆಸಬೇಕಿದೆ. 

ಸರ್ಕಾರ ಎಷ್ಟೇ ಹೇಳಿಕೊಂಡರೂ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ನಾಯಿ ಕಡಿತಕ್ಕೆ ನೀಡುವ ಚುಚ್ಚುಮದ್ದು ದೊರೆಯುವುದಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆಯಬೇಕು, ಇಲ್ಲವೇ ರೇಬಿಸ್ ರೋಗಕ್ಕೆ ಬಲಿಯಾಗಬೇಕು ಎನ್ನುವಂತಾಗಿದೆ ಜನರ ಸ್ಥಿತಿ.  

ಕೆಲವು ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುವವರ ಮೇಲೆ ಅಪ್ರಚೋದಿತವಾಗಿ ದಾಳಿ ಮಾಡುತ್ತವೆ. ಅವು ಹುಚ್ಚು ನಾಯಿ ಆಗಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಬೀದಿಗಳಲ್ಲಿ ಓಡಾಡಿಕೊಂಡಿರುವ ನಾಯಿಗಳ ಪೈಕಿ ಯಾವುದು ಹುಚ್ಚು ನಾಯಿ, ಯಾವುದು ಅಪ್ರಚೋದಿತವಾಗಿ ಎರಗುವ ಸ್ವಭಾವದ ನಾಯಿ ಎನ್ನುವುದನ್ನು ಕಂಡುಕೊಳ್ಳುವುದಾದರೂ ಹೇಗೆ? ನಾಯಿಗಳು ಭೂಮಿ ಮೇಲೆ ಇರಲೇಬಾರದು ಎಂದು ಯಾರೂ ಹೇಳುತ್ತಿಲ್ಲ. ಅವು ನಿಗದಿಪಡಿಸಲಾದ ಜಾಗದಲ್ಲಿರಲಿ ಎನ್ನುವುದಷ್ಟೇ ಕಾಳಜಿ.

ಇಷ್ಟಕ್ಕೂ, ನಾಯಿಗಳು ತಮ್ಮ ಬದುಕಿನ ಭಾಗ ಎಂದು ಭಾವಿಸುವವರಿಗೆ ಮನೆಯಲ್ಲಿ ನಾಯಿಗಳನ್ನು ಸಾಕಲು ಯಾರ ಅಡ್ಡಿ, ಅಭ್ಯಂತರವೂ ಇಲ್ಲ. ಆದರೆ, ಹಾಗೆ ನಾಯಿ ಸಾಕಿದವರೂ ಕೂಡ ಅನೇಕ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳ ಕಕ್ಕ ಮಾಡಿಸಿ, ಗಲೀಜು ಮಾಡುವುದು, ಅಕ್ಕಪಕ್ಕದ ಮನೆಗಳವರಿಗೆ ಕಿರಿಕಿರಿ ಮಾಡುವುದು, ಅದರಿಂದ ಜಗಳಗಳು ನಡೆದು ಪೊಲೀಸ್ ಠಾಣೆ ಮೆಟ್ಟಿಲೇರುವುದು ನಡೆದೇ ಇದೆ. ನಾಯಿ ಸಾಕಲಿ, ಏನೇ ಮಾಡಲಿ, ಬೇರೊಬ್ಬರಿಗೆ ತೊಂದರೆ ಕೊಡಬಾರದು ಎನ್ನುವುದು ಮನುಷ್ಯರೆಲ್ಲರೂ ಅರಿತಿರಬೇಕಾದ ಮೂಲಭೂತ ವಿಚಾರ.  

ನಮ್ಮ ಸಮಾಜ ಪ್ರತಿಷ್ಠೆ ಬೆಳೆಸಿಕೊಳ್ಳುತ್ತಿದೆ, ಆದರೆ ಮಾನವೀಯತೆಯನ್ನು ಮರೆತಿದೆ. ಮಗುವಿಗೆ ಪಕ್ಕದ ಮನೆಯ ಸಾಕಿದ ನಾಯಿ ಕಚ್ಚಿ ₹80 ಸಾವಿರ ಮಾಡಿದ ಬಗ್ಗೆ ಪತ್ರಿಕೆ ವರದಿ ಮಾಡಿದೆ. ಸಾಕಿದ ನಾಯಿಗಳ ದಾಳಿಗೆ ಒಳಗಾದ ವ್ಯಕ್ತಿಯ ಮನೆಯವರು ನಾಯಿಯ ಮಾಲೀಕರನ್ನು ಪ್ರಶ್ನೆ ಮಾಡಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿದ ಪ್ರಸಂಗವೂ ನಡೆದಿದೆ. ಇದೇ ವಿಚಾರಕ್ಕೆ ಕೊಲೆಗಳು ನಡೆದಿರುವುದೂ ವರದಿಯಾಗಿವೆ. ಹೀಗೆ ಜನರಿಗೆ ಉಪದ್ರವ ನೀಡುವ ಮೂಲಕ ನಾಗರಿಕ ಪ್ರಜ್ಞೆ ಮರೆತವರೂ ಉಂಟು. 

ಬೀದಿನಾಯಿಗಳ ಸಂತಾನ ಹರಣ, ಲಸಿಕೆ ನೀಡಿಕೆ ಇತ್ಯಾದಿ ಕಾರ್ಯಕ್ರಮಗಳು ಇಲ್ಲಿಯವರೆಗೆ ಖಂಡಿತವಾಗಿಯೂ ಯಶಸ್ಸು ಕಂಡಿಲ್ಲ. ಅದರ ಹೆಸರಿನಲ್ಲಿ ಸ್ವಯಂಸೇವಾ ಸಂಸ್ಥೆಗಳು, ಅಧಿಕಾರಿಗಳು ಹಣ ಕೊಳ್ಳೆ ಹೊಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬೀದಿನಾಯಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಹೇಳಿದರೂ ಬೀದಿನಾಯಿಗಳ ಕಡಿತಕ್ಕೆ ಒಳಗಾದವರ ಸಂಖ್ಯೆ ಪ್ರತಿವರ್ಷ ಗಮನಾರ್ಹವಾಗಿ ಹೆಚ್ಚುತ್ತಲೇ ಇದೆ. 

ಬುದ್ಧನ ಮಾತೊಂದಿದೆ: ಬಾಣ ಮೂಲ ವಾದ, ಬಾಣ ಪರಿಣಾಮ ವಾದ- ಇವುಗಳಲ್ಲಿ ಆದ್ಯತೆ ಯಾವುದಕ್ಕೆ? ಕಚ್ಚಿಸಿಕೊಂಡ ಮನುಷ್ಯನಿಗಿಂತ ಕಚ್ಚಿದ ನಾಯಿ ಬಗ್ಗೆಯೇ ಹೆಚ್ಚು ಗಮನ ಹರಿಸಲಾಗುತ್ತಿದೆ. ಬೀದಿ ನಾಯಿಗಳು ಕಚ್ಚಿದರೆ, ಅದಕ್ಕೆ ಯಾರನ್ನು ಹೊಣೆ ಮಾಡುವುದು? ಇಷ್ಟಾದರೂ, ಜನರಿಗೆ ಕಚ್ಚಿದರೂ ಪರವಾಗಿಲ್ಲ, ಬೀದಿಯಲ್ಲಿ ನಾಯಿಗಳಿರಬೇಕು ಎನ್ನುವವರು ವಿಕೃತರೇ ಸರಿ. ಯಾರೋ ಕೆಲವರು ಅವಿವೇಕಿಗಳು, ಕ್ರೂರಿಗಳು ಬೀದಿನಾಯಿಗಳ ಮೇಲೆ ಕಾರು ಹತ್ತಿಸಿದರು, ಕೊಂದರು ಎಂಬ ವಿಷಯ ಬ್ರೇಕಿಂಗ್ ನ್ಯೂಸ್ ಆಗುತ್ತದೆ. ಆದರೆ, ನಾಯಿ ಕಡಿತದಿಂದ ಗಾಸಿಗೊಂಡವರಿಗೆ ಯಾರೊಬ್ಬರೂ ಯಾವುದೇ ರೀತಿಯ ನೆರವು ನೀಡುವುದಿಲ್ಲ. ಇಲ್ಲಿ ಮನುಷ್ಯರ ಪಾಡು ನಾಯಿಗಳಿಗಿಂತಲೂ ಕಡೆಯಾಗಿದೆ ಎನ್ನುವುದು ವಿಪರ್ಯಾಸ. 

ವರ್ಷ ವರ್ಷ ಬೀದಿನಾಯಿಗಳಿಂದ ದಾಳಿಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ಕಾರ ಎಚ್ಚೆತ್ತುಕೊಂಡು ಅವುಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ದೆಹಲಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸೂಕ್ತವಾಗಿಯೇ ಇದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅಗತ್ಯವಿರುವೆಡೆಯಲ್ಲಿ ಅದೇ ರೀತಿ ಬೀದಿ ನಾಯಿಗಳಿಗೆ ಪ್ರತ್ಯೇಕ ವಾಸಸ್ಥಳಗಳನ್ನು ನಿಗದಿಪಡಿಸಬೇಕು. ಕ್ರಮೇಣ ಅವುಗಳ ಸಂಖ್ಯೆ ಇಳಿಮುಖವಾಗುವಂತಹ ಉಪಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕೆ ವಿರುದ್ಧವಾಗಿ, ಬಿಬಿಎಂಪಿಯು ತನ್ನ ವ್ಯಾಪ್ತಿಯಲ್ಲಿರುವ ನಾಯಿಗಳಿಗೆ ಕೋಳಿ ಮಾಂಸ ಪೂರೈಸಲು ಹಾಕಿಕೊಂಡಿರುವ ಹತ್ತಾರು ಕೋಟಿ ರೂಪಾಯಿಗಳ ಅವಿವೇಕದ ಯೋಜನೆಯನ್ನು ತಕ್ಷಣವೇ ರದ್ದುಪಡಿಸಬೇಕು. ಇಂತಹ ಅನಾಹುತಕಾರಿ ನಡೆಗಳು ಜನರ ಕಷ್ಟವನ್ನು ಹೆಚ್ಚಿಸುತ್ತವೆ ಎಂಬುದನ್ನು ಮರೆಯಬಾರದು.

ಸೆಲಬ್ರಿಟಿಗಳ ನಾಯಿ ಪ್ರೀತಿ
ಒಂದು ಕಡೆ ಕೆಲವು ಸ್ವಯಂ ಸೇವಾ ಸಂಸ್ಥೆಗಳ ಹುಸಿ ಅನುಕಂಪ, ಪ್ರಾಣಿ ದಯಾಸಂಘಗಳ ಬಾಯಿ ಬೊಬ್ಬೆ; ಇನ್ನೊಂದು ಕಡೆ ನಟನಟಿಯರು, ಶ್ರೀಮಂತರು, ‘ಸೆಲಬ್ರಿಟಿಗಳ’ ಬಡಿವಾರದ ಹುಸಿ ನಾಯಿಪ್ರೀತಿ. ಇವರ ತೋರಿಕೆಯ ಪ್ರಾಣಿಪ್ರೀತಿಯಿಂದಾಗಿ, ಮನುಷ್ಯರ ಮೇಲೆ ದಾಳಿ ಮಾಡುವ ಆಕ್ರಮಣಕಾರಿ ನಾಯಿಗಳನ್ನು ನಿಯಂತ್ರಿಸುವುದಕ್ಕೆ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಇಂತಹ ಜನರ ತೋರಿಕೆಯ ಬಾಯುಪಚಾರಕ್ಕಿಂತ ನಮ್ಮ ಸಾಮಾನ್ಯ ಜನರ ಪ್ರಾಣಿಪ್ರೀತಿ ದೊಡ್ಡದು. ಈ ಬೊಬ್ಬೆ ಹೊಡೆಯುವ, ಹುಸಿ ಪ್ರಾಣಿಪ್ರೀತಿಯ ಕೆಲವೇ ಜನರಿಂದ ಸಾವಿರಾರು ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಎಂದೆಂದೂ ಬೀದಿಯಲ್ಲಿ ನಡೆದುಹೋಗದ, ಬಡವರ ಕಷ್ಟ ಗೊತ್ತಿರದ, ಸಾಮಾನ್ಯ ಜನರ ಬದುಕು ಹೇಗಿದೆ ಎಂದು ಇಣುಕಿಯೂ ನೋಡದ ಜನ ಬೀದಿ ನಾಯಿಗಳ ಬಗ್ಗೆ ಪ್ರೀತಿ ತೋರುವುದು ಹಾಸ್ಯಾಸ್ಪದ. ನಾಯಿ ಕಡಿತಕ್ಕೆ ಒಳಗಾದ ಮನುಷ್ಯರ ಬಗ್ಗೆ ಕಾಳಜಿ ಮಾಡದೆ, ಕಚ್ಚುವ ನಾಯಿಗಳ ಬಗ್ಗೆ ದಯೆ ತೋರುವುದನ್ನು ಮಾನವೀಯತೆ ಎನ್ನಲಾಗದು.

ಎಂ.ಜಿ.ಚಂದ್ರಶೇಖರಯ್ಯ

ಲೇಖಕ: ನಿವೃತ್ತ ಪ್ರಾಧ್ಯಾಪಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.