ADVERTISEMENT

ರಾಜ್ಯ ಬಜೆಟ್‌ನ ನಿರೀಕ್ಷೆ: ‘ಮರುಕೌಶಲ’ ಆದ್ಯತೆ ಆಗಲಿ; ಅಲ್ಲಿವರೆಗೆ ‘ಖಾತರಿ’ ಇರಲಿ

ತಜ್ಞರ ಅಭಿಪ್ರಾಯ

ರಾಜಾರಾಂ ತಲ್ಲೂರು
Published 28 ಫೆಬ್ರುವರಿ 2025, 19:30 IST
Last Updated 28 ಫೆಬ್ರುವರಿ 2025, 19:30 IST
<div class="paragraphs"><p> ರಾಜಾರಾಂ ತಲ್ಲೂರು (ಒಳಚಿತ್ರದಲ್ಲಿ)</p></div>

ರಾಜಾರಾಂ ತಲ್ಲೂರು (ಒಳಚಿತ್ರದಲ್ಲಿ)

   
ಸಣ್ಣಗಾತ್ರದ ಕೃಷಿಕರು, ವ್ಯಾಪಾರಿಗಳು, ಮೀನುಗಾರರು, ಭೂಹಿಡುವಳಿದಾರರು, ಮಹಿಳೆಯರು, ಅಶಕ್ತರು, ಕೂಲಿ ಕಾರ್ಮಿಕರು... ಹೀಗೆ- ಪರ್ಯಾಯ ಜೀವನೋಪಾಯ ಕಂಡುಕೊಳ್ಳ ಬೇಕಾದವರೆಲ್ಲರೂ, ಸಮರ್ಪಕವಾಗಿ ‘ಮರುಕಶಲ’ಗೊಳ್ಳುವ ತನಕ, ಅವರ ಜೀವನೋಪಾಯ ಸರ್ಕಾರಗಳ ಹೊಣೆ ಆಗಬೇಕು. ಅಲ್ಲಿಯ ತನಕ ಅವಶ್ಯಕತೆ ಇರುವ ಅರ್ಹರಿಗೆಲ್ಲರಿಗೂ ಸರ್ಕಾರವು ಕನಿಷ್ಠ ಆದಾಯ ಖಾತರಿ (ಯುಬಿಐ) ಒದಗಿಸಿದರೆ, ಅದನ್ನು ‘ಪಾಪ್ಯುಲಿಸ್ಟ್’ ಎಂದು ಹಣೆಪಟ್ಟಿ ಹಚ್ಚುವುದು ತಪ್ಪಾಗುತ್ತದೆ.

ದೇಶದಾದ್ಯಂತ ಇಂದು ಒಂದೇ ಚರ್ಚೆ - ‘ಎಕನಾಮಿಕ್ಸ್ ಆಫ್ ಸ್ಕೇಲ್’ ಕುರಿತು. ಸಣ್ಣಗಾತ್ರದ ವ್ಯವಹಾರ, ಉತ್ಪಾದನೆ, ಸೇವೆ‌, ಚಟುವಟಿಕೆಗಳು ಲಾಭದಾಯಕ ಅಲ್ಲ. ಭರಪೂರ ಲಾಭ ಗಳಿಸಬೇಕೆಂದರೆ, ಅವುಗಳ ಗಾತ್ರ ಹಿಗ್ಗಿಸಬೇಕು ಎಂಬ ಚಿಂತನೆ.

ಹೀಗೆ ಉತ್ಪಾದನೆಗಳನ್ನು, ಆರ್ಥಿಕ ಚಟುವಟಿಕೆಗಳನ್ನು ಹಿಗ್ಗಿಸಬೇಕಾದರೆ, ಆ ಚಟುವಟಿಕೆಗಳನ್ನು ಬಲಾಢ್ಯರು (ಅರ್ಥಾತ್‌ ಕಾರ್ಪೊರೇಟ್‌ಗಳು) ಮಾಡಬೇಕು. ಹಾಲಿ ಇರುವ ಕಿರಿಗಾತ್ರದ ಚಟುವಟಿಕೆಗಳನ್ನು ನಿರುತ್ಸಾಹಗೊಳಿಸಿ, ಅಲ್ಲಿ ತೊಡಗಿಕೊಂಡಿರುವವರನ್ನು ಕ್ರಮೇಣ ಅಲ್ಲಿಂದ ಕಳಚಿ ಕೊಳ್ಳುವಂತೆ ಮಾಡಬೇಕು. ಅವರಿಗೆ ಬೇರೆ ಕೌಶಲಗಳನ್ನು ಕಲಿಸಿ ಕೊಟ್ಟು, ಪರ್ಯಾಯ ಜೀವನೋಪಾಯಗಳನ್ನು ಒದಗಿಸಬೇಕು ಎಂಬುದು ಈ ಚಿಂತನೆಯ ಸಾರಾಂಶ. ಉದಾರೀಕರಣ ಪ್ರಕ್ರಿಯೆ ವೇಗ ಗಳಿಸಿಕೊಂಡಂತೆಲ್ಲ ಬಲಗೊಳ್ಳುತ್ತಾ ಬಂದಿರುವ ಈ ಚಿಂತನೆ, ಕಳೆದ 10 ವರ್ಷಗಳಲ್ಲಿ ಹರಳುಗಟ್ಟಿ, ವೇಗವಾಗಿ ಅನುಷ್ಠಾನಗೊಳ್ಳತೊಡಗಿದೆ.

ADVERTISEMENT

ಸಣ್ಣ ಕೃಷಿಕರು, ಕೃಷಿ ಕೂಲಿಕಾರ್ಮಿಕರನ್ನು ಕೃಷಿರಂಗದಿಂದ ಹೊರಗೆ ಕಳುಹಿಸಿ, ಕಾರ್ಪೊರೇಟ್ ಕೃಷಿ ಅನುಷ್ಠಾನ; ಸಣ್ಣ ಮೀನುಗಾರರನ್ನು ಸಮುದ್ರದಿಂದ ಹೊರಗೆ ಕಳುಹಿಸಿ ಯಾಂತ್ರೀಕೃತ ಮೀನುಗಾರಿಕೆಗೆ ಪ್ರೋತ್ಸಾಹ; ಸಾಂಪ್ರದಾಯಿಕ ಕಲಿಕೆಗಳನ್ನು ನಿರುತ್ಸಾಹಗೊಳಿಸಿ, ಕೌಶಲ ಆಧಾರಿತ ಕಲಿಕೆಗಳಿಗೆ ಪ್ರೋತ್ಸಾಹ; ಪುಟ್ಟ ರಸ್ತೆಗಳು-ಸಂವಹನ-ಲಾಜಿಸ್ಟಿಕ್ಸ್‌ ಅನ್ನು ನಿರುತ್ತೇಜಿಸಿ, ಕ್ಯಾಪೆಕ್ಸ್ ಕ್ರಾಂತಿ; ಸಣ್ಣಪುಟ್ಟ ಜನವಸತಿಗಳನ್ನು ಒಕ್ಕಲೆಬ್ಬಿಸಿ ಬೃಹತ್ ಕೈಗಾರಿಕೆಗಳಿಗೆ ನೆಲ-ಜಲ; ದೇಶದೊಳಗೆ ಉಂಡು ವ್ಯರ್ಥಗೊಳಿಸುವ ಬದಲು, ವಿದೇಶಗಳಿಗೆ ರಫ್ತು ಹೆಚ್ಚಳ... ಹೀಗೆ ‘ಒಂದು ದೇಶ; ಒಂದು ಮಹಾಸ್ಕೇಲ್’ ಅಭಿಯಾನವನ್ನು ಎಲ್ಲ ರಂಗಗಳಲ್ಲಿ ಆರಂಭಿಸಲಾಗಿದೆ.

ಸಂವಿಧಾನದ 7ನೇ ಶೆಡ್ಯೂಲಿನಲ್ಲಿ ಬರುವ ಜಂಟಿ ಪಟ್ಟಿ‌ಮತ್ತು ರಾಜ್ಯ ಪಟ್ಟಿಯಲ್ಲಿ ಇರುವ ಸಂಗತಿಗಳನ್ನು ಈ ‘ಸ್ಕೇಲ್’ ಸಾಧಿಸುವ ಕಾರಣ ನೀಡಿ, ರಾಷ್ಟ್ರಮಟ್ಟದಲ್ಲಿಯೇ ನಿರ್ಧರಿಸುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಇಂದು ದೂರಗಾಮಿ ಯೋಜನೆಗಳಲ್ಲಿ ರಾಜ್ಯಗಳಿಗೆ ನಿರ್ಧರಿಸುವ ಸ್ವಾಯತ್ತೆ ಇಲ್ಲವೇ ಇಲ್ಲ ಎಂಬಷ್ಟು ಗೌಣವಾಗಿಬಿಟ್ಟಿದೆ. ರಾಜ್ಯಗಳೂ ಈ ಮಾರುಕಟ್ಟೆ ತುತ್ತೂರಿಯ ಅಬ್ಬರಕ್ಕೆ ಮಾರುಹೋಗಿ ‘ಹೂಡಿಕೆ ಸಮಾವೇಶ’ಗಳಲ್ಲಿ ಮೈಮರೆಯುತ್ತಿವೆ.

ಇಂತಹ ಸಂಕ್ರಮಣ‌ ಸನ್ನಿವೇಶದಲ್ಲಿ ಸರ್ಕಾರಗಳು ಸಂತುಲಿತವಾಗಿ ವ್ಯವಹರಿಸದಿದ್ದಾಗ ಏನು ಆಗಬೇಕೋ, ಅದು ಈಗ ಎಲ್ಲೆಡೆ ಕಾಣಸಿಗುತ್ತಿದೆ. ಅಂದರೆ, ‘ಎಕನಾಮಿಕ್ಸ್ ಆಫ್ ಸ್ಕೇಲ್’ನ ತರಾತುರಿಯಲ್ಲಿ, ಎಲ್ಲವನ್ನೂ ಮೊಗೆಮೊಗೆದು ಕಾರ್ಪೊರೇಟ್‌ಗಳ ತೆಕ್ಕೆಗೆ ನೀಡಲಾಗುತ್ತಿದೆ. ಆದರೆ,ಅಲ್ಲಿಂದ ಹೊರದೂಡಿಸಿಕೊಳ್ಳುತ್ತಿರುವ ಜನಸಾಮಾನ್ಯರನ್ನು ಮರು ಕುಶಲಗೊಳಿಸುವ, ಅವರಿಗೆ ತಕ್ಕ ಪುನರ್ವಸತಿ ಕಲ್ಪಿಸುವ ಕೆಲಸ ಅಷ್ಟೇ ವೇಗದಿಂದ, ಅಗತ್ಯ ಇಚ್ಛಾಶಕ್ತಿಯೊಂದಿಗೆ ನಡೆಯುತ್ತಿಲ್ಲ. ವಿಶಾಲವಾದ ಈ ದೇಶದಲ್ಲಿ, ಈ ರೀತಿಯ ಪ್ರಾದೇಶಿಕ, ವಿಕೇಂದ್ರೀಕೃತ ಸಣ್ಣ ಜೀವನೋಪಾಯ ಚಟುವಟಿಕೆಗಳ ವೈವಿಧ್ಯ ಮತ್ತು ಮಹತ್ತಿಕೆಯ ಕಲ್ಪನೆ ಆಳುವವರ ಗಮನಕ್ಕೆ ಬರುತ್ತಿಲ್ಲ. ಕೇವಲ ಬ್ಯಾಲೆನ್ಸ್‌ಶೀಟ್ ಕೊಬ್ಬಿಸುವ ‘ಡೆವಲಪ್‌ಮೆಂಟ್’ ಹಿಂದೆ ಓಡಿದ್ದರ ಫಲವಾಗಿ, ಕೋವಿಡೋತ್ತರ ಆರ್ಥಿಕತೆ ಕುಸಿದಿದ್ದು, ಎಷ್ಟೇ ಪ್ರೋತ್ಸಾಹ ನೀಡಿದರೂ ಚಿಗುರುತ್ತಿಲ್ಲ; ಎಲ್ಲ ಪ್ರಯತ್ನಗಳೂ ಮೇಲುಪದರದ ತೇಪೆ ಅನ್ನಿಸುತ್ತಿವೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ‘ಗ್ಯಾರಂಟಿಗಳ’ ಆಶ್ವಾಸನೆ ಬೆನ್ನೇರಿ 2023ರಲ್ಲಿ ಅಧಿಕಾರಕ್ಕೆ ಬರುವಲ್ಲಿ, ಈ ‘ಎಕನಾಮಿಕ್ಸ್ ಆಫ್ ಸ್ಕೇಲ್’ ಕಲ್ಪನೆ ಹುಟ್ಟು ಹಾಕಿದ ಅಸಮತೋಲನದ ಪಾತ್ರ ಬಲು ದೊಡ್ಡದಿದೆ. ಕರ್ನಾಟಕವೇನೂ ಸಾಧಾರಣ ಸಾಮರ್ಥ್ಯದ ರಾಜ್ಯವಲ್ಲ. 2023ರ ಆರ್ಥಿಕ ವರ್ಷದಲ್ಲಿ, ದೇಶದ ಒಟ್ಟು ಜಿಡಿಪಿಯಲ್ಲಿ 8.2% ಕೊಡುಗೆ ಕರ್ನಾಟಕದ್ದಿತ್ತು. ರಾಜ್ಯದ ತಲಾ ಒಟ್ಟು ರಾಜ್ಯ ಆಂತರಿಕ ಉತ್ಪನ್ನ ದೇಶದಲ್ಲೇ ಹೆಚ್ಚು. ಹೀಗಿರುವ ಕರ್ನಾಟಕದಲ್ಲೂ, ಈ ಗ್ಯಾರಂಟಿಗಳನ್ನು ಜನರ ಬಾಯಿಯನ್ನು ತಕ್ಷಣಕ್ಕೆ ಮುಚ್ಚಿಸುವ ‘ಪಾಪ್ಯುಲಿಸ್ಟ್’ ಯೋಜನೆಗಳೆಂದು ಬ್ರ್ಯಾಂಡ್ ಮಾಡಲಾಗುತ್ತಿದೆ. ಹೀಗೆ ಬ್ರ್ಯಾಂಡ್ ಮಾಡುವವರು, ಬೃಹತ್ ಕೈಗಾರಿಕೆಗಳು- ಕಾರ್ಪೊರೇಟ್‌ಗಳು– ಐ.ಟಿ–ಬಿ.ಟಿಯಂತಹ ಕ್ಷೇತ್ರಗಳಿಗೆ ಸರ್ಕಾರ ಕೊಡುತ್ತಿರುವ ಸಬ್ಸಿಡಿಗಳು, ಉಚಿತವಾಗಿ ಅಥವಾ ಚಿಕ್ಕಾಸಿಗೆ ಮಂಜೂರು ಮಾಡುತ್ತಿರುವ ನೆಲ- ಜಲ- ಪರಿಸರಗಳನ್ನೆಲ್ಲ ‘ಪಾಪ್ಯುಲಿಸ್ಟ್’ ಎಂದು ತಪ್ಪಿಯೂ ಗುರುತಿಸುವುದಿಲ್ಲ!

2023ರ ಲೆಕ್ಕಾಚಾರದಂತೆ, ಕರ್ನಾಟಕದಲ್ಲಿ 86.81ಲಕ್ಷ ಕೃಷಿ ಕುಟುಂಬಗಳು (ಅಂದಾಜು 4.5 ಕೋಟಿ ಜನ) 118.05 ಲಕ್ಷ ಹೆಕ್ಟೇರ್ ಭೂಮಿಯನ್ನು ಅವಲಂಬಿಸಿ, ಕೃಷಿ ನಿರತರಾಗಿದ್ದಾರೆ. ಇದು ರಾಜ್ಯದ ಜನಸಂಖ್ಯೆಯ 60% ಭಾಗ. ಇವರನ್ನೆಲ್ಲ ಹೊರಕಳುಹಿಸಿ, ಕೃಷಿಯನ್ನು ಲಾಭದಾಯಕಗೊಳಿಸುವ ಕಲ್ಪನೆಯೇ ಅಸಹಜವಾದದ್ದು. ಇಷ್ಟೊಂದು ಮಂದಿಯನ್ನು ಕೃಷಿ ಪ್ರಧಾನ ವ್ಯವಸ್ಥೆಯಿಂದ ಹೊರಕಳುಹಿಸಿ, ಅವರಿಗೆ ಪರ್ಯಾಯ ಜೀವನೋಪಾಯಗಳನ್ನು ಕಲ್ಪಿಸಲು ಸರ್ಕಾರಗಳು ಕೈಗೊಂಡಿರುವ ಕ್ರಮಗಳೆಲ್ಲ ಪರ್ಯಾಪ್ತವಾಗಿವೆಯೇ ಎಂಬ ಒಂದು ಪ್ರಶ್ನೆ ಕೇಳಿಕೊಂಡರೆ, ಜನಸಾಮಾನ್ಯರ ಸಶಕ್ತೀಕರಣಕ್ಕೆ ದೂರಗಾಮಿ ಚಿಂತನೆಗಳಿರುವ ಒಂದು ಬಜೆಟ್ ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರಗಳು ಸರಳವಾಗಿ ಸಿಗತೊಡಗುತ್ತವೆ.

ಏನು ಮಾಡಬಹುದು?: ಸಣ್ಣಗಾತ್ರದ ಕೃಷಿಕರು, ವ್ಯಾಪಾರಿಗಳು, ಮೀನುಗಾರರು, ಭೂಹಿಡುವಳಿದಾರರು, ಮಹಿಳೆಯರು, ಅಶಕ್ತರು, ಕೂಲಿ ಕಾರ್ಮಿಕರು... ಹೀಗೆ- ಪರ್ಯಾಯ ಜೀವನೋಪಾಯ ಕಂಡುಕೊಳ್ಳಬೇಕಾದವರೆಲ್ಲರೂ, ಸಮರ್ಪಕವಾಗಿ ‘ಮರುಕುಶಲ’ಗೊಳ್ಳುವ ತನಕ, ಅವರ ಜೀವನೋಪಾಯ ಸರ್ಕಾರಗಳ ಹೊಣೆ ಆಗಬೇಕು. ಅಲ್ಲಿಯ ತನಕ ಆವಶ್ಯಕತೆ ಇರುವ ಅರ್ಹರಿಗೆಲ್ಲರಿಗೂ ಸರ್ಕಾರವು ಕನಿಷ್ಠ ಆದಾಯ ಖಾತರಿ ಒದಗಿಸಿದರೆ, ಅದನ್ನು ‘ಪಾಪ್ಯುಲಿಸ್ಟ್’ ಎಂದು ಹಣೆಪಟ್ಟಿ ಹಚ್ಚುವುದು ತಪ್ಪಾಗುತ್ತದೆ. 

ಮರುಕೌಶಲ (Reskilling) ಪ್ರಕ್ರಿಯೆ ಒಂದು ಸಮಯಬದ್ಧ, ಫಲಿತಾಂಶ ಆಧಾರಿತ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕೇ ಹೊರತು, ಯಾರೋ ಒಂದಿಷ್ಟು ಖಾಸಗಿಯವರು ಮತ್ತೆ ಇದರಲ್ಲೂ ದುಡ್ಡು ಹೊಡೆಯುವ ‘ಸರ್ಕಾರಿ ಯೋಜನೆ’ ಆಗಬಾರದು. ‘ಒಂದು ಜಿಲ್ಲೆ, ಒಂದು ಉತ್ಪನ್ನ’ದಂತಹ ಕೇಂದ್ರೀಕೃತ ಚಿಂತನೆಗಳು ಸಣ್ಣಗಾತ್ರದ ದೇಶಗಳಲ್ಲಿ ಕಾರ್ಯಸಾಧ್ಯವೇ ಹೊರತು ಭಾರತದಂತಹ ವೈವಿಧ್ಯಮಯ, ವಿಶಾಲ ಒಕ್ಕೂಟ ವ್ಯವಸ್ಥೆಯಲ್ಲಿ ಅಲ್ಲ. ಹಾಗಾಗಿ, ಇಲ್ಲಿನ ಜೀವನೋಪಾಯಗಳ ಬಗ್ಗೆ ನಿರ್ಧರಿಸುವಾಗ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಅವಶ್ಯಕತೆಗಳನ್ನು ಮತ್ತು ಪರಿಸರದ ಸ್ಥಿತಿಯನ್ನು ಪರಿಗಣಿಸಿ, ಮಾಹಿತಿಯುತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಎಳೆಯ ನಿರುದ್ಯೋಗಿಗಳನ್ನು ಉದ್ಯೋಗಕ್ಕೆಂದು ಅರೆಕೌಶಲದ ಅಥವಾ ಕೌಶಲ ಬೇಕಿಲ್ಲದ ‘ಸ್ಕ್ರೂಡ್ರೈವರ್ ತಂತ್ರಜ್ಞಾನ’ ಗಳಲ್ಲಿ, ಗಿಗ್ ಚಾಕರಿಗಳಲ್ಲಿ ತೊಡಗಿಸಲಾಗುತ್ತಿದೆ. ಹೀಗೆ, ಅಮೂಲ್ಯವಾದ ಮಾನವ ಶ್ರಮವನ್ನು ವ್ಯರ್ಥಗೊಳಿಸುವ ಬದಲು, ದೀರ್ಘಕಾಲಿಕವಾಗಿ ಉಪಯೋಗಕ್ಕೆ ಬರಬಲ್ಲ ಮತ್ತು ದಿನಕಳೆದಂತೆ ಪರಿಣತಗೊಂಡು – ಹೆಚ್ಚು ಉತ್ಪಾದಕ ಆಗಬಲ್ಲ ಕೌಶಲದ ಉದ್ಯೋಗಗಳಲ್ಲಿ ಅವರನ್ನು ತೊಡಗಿಸಬೇಕು.

ನೆಲ- ಜಲ- ಪರಿಸರ- ಜನಪದಗಳ ನಡುವೆ ಸಂತುಲನ ಇರುವ ಸಹ್ಯ ಅಭಿವೃದ್ಧಿ ಜನ ನೆಮ್ಮದಿಯಿಂದ ಬದುಕಲು ಪೂರಕವಾಗಿರಬೇಕೇ ಹೊರತು, ಕಾರ್ಪೊರೇಟ್‌ ಬ್ಯಾಲೆನ್ಸ್‌ಶೀಟ್ ಕೊಬ್ಬಿಸುವಲ್ಲಿ ಮತ್ತು ದೇಶದ ಆಮದು-ರಫ್ತು ಸಂತುಲನದತ್ತ ಮಾತ್ರ ಕಣ್ಣಿಟ್ಟು ಮುಂದುವರಿಯಬಾರದು. ‘ಒಂದು ದೇಶ; ಒಂದು x’ (ಇಲ್ಲಿ x ವೇರಿಯೆಬಲ್) ಎಂಬ ಮಂತ್ರ ತಾರಕಕ್ಕೇರುತ್ತಿರುವಾಗ, ನಾಡಿನ ಅಭ್ಯುದಯದಲ್ಲಿ ರಾಜ್ಯ ಸರ್ಕಾರಗಳ ಮತ್ತು ಸ್ಥಳೀಯಾಡಳಿತಗಳ ಹೊಣೆಗಾರಿಕೆ, ಸ್ವಾಯತ್ತ ನಿರ್ಧಾರಗಳು ಮಹತ್ವದ ಪಾತ್ರ ವಹಿಸುತ್ತವೆ.

ಲೇಖಕರು: ಸಾಮಾಜಿಕ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.