ADVERTISEMENT

ಚರ್ಚೆ | ಮತ ಪತ್ರ ಬಳಕೆ: ಚುನಾವಣಾ ವೈಫಲ್ಯ ಮುಚ್ಚಿಡುವ ಕಾಂಗ್ರೆಸ್ ಯತ್ನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 23:30 IST
Last Updated 12 ಸೆಪ್ಟೆಂಬರ್ 2025, 23:30 IST
   
ವಿಷಯ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತ ಪತ್ರ ಬಳಸುವ ಕರ್ನಾಟಕ ಸರ್ಕಾರದ ನಿರ್ಧಾರ ಸರಿಯೇ?

ಮತಪತ್ರಗಳಿಗೆ ಹಿಂದಿರುಗುವ ಕರ್ನಾಟಕ ಸರ್ಕಾರದ ನಿರ್ಧಾರದಿಂದ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತಾಗಿದೆ. ಮತಪತ್ರಗಳನ್ನು ಬಳಸುವುದರಿಂದ ಮತಪೆಟ್ಟಿಗೆ ವಶಪಡಿಸಿಕೊಳ್ಳುವುದು, ತಪ್ಪು ಎಣಿಕೆಯಂಥ– ಈ ಹಿಂದೆ ಕಾಂಗ್ರೆಸ್ ಸರ್ಕಾರವೇ ಮಾಡಿರುವಂಥ– ಹಲವು ಅನಾಚಾರಗಳಿಗೆ ಆಸ್ಪದವಿರುತ್ತದೆ. ಕಾಂಗ್ರೆಸ್‌ಗೆ ನಿಜಕ್ಕೂ ಇವಿಎಂಗಳ ಬಗ್ಗೆ ನಂಬಿಕೆ ಇಲ್ಲ ಎಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ 99 ಸಂಸದರು ಮತ್ತು 2024ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ 135 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಮತಪತ್ರಗಳ ಮೂಲಕ ಮರುಚುನಾವಣೆಯಲ್ಲಿ ಆಯ್ಕೆಯಾಗಿ ಬರಲಿ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತಪತ್ರಗಳನ್ನು (ಬ್ಯಾಲೆಟ್‌ ಪೇಪರ್) ಬಳಸುವ ಕಾಂಗ್ರೆಸ್ ಪಕ್ಷದ ನಿರ್ಧಾರವು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮಾಡಲಾಗಿರುವ ನೀತಿ ಬದಲಾವಣೆ ಅಷ್ಟೇ ಅಲ್ಲ; ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಭಾರತದ ಚುನಾವಣಾ ಸಂಸ್ಥೆಗಳ ಬಗ್ಗೆ ಅಪನಂಬಿಕೆ ಬಿತ್ತುವ ಒಂದು ಲೆಕ್ಕಾಚಾರದ ನಡೆಯಾಗಿದೆ.

ಇವಿಎಂ ಕೈಬಿಡುವ ಬಗೆಗಿನ ರಾಜ್ಯ ಚುನಾವಣಾ ಆಯೋಗದ ‘ಫತ್ವಾ’, ಅವರ ಪಕ್ಷದ ಸರ್ವೋಚ್ಚ ನಾಯಕರಾದ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸುವ ಪ್ರಯತ್ನವಾಗಿದೆ. ರಾಹುಲ್ ಗಾಂಧಿ ಅವರ ‘ಮತ ಕಳವು’ ಅಭಿಯಾನವು ಕಾಂಗ್ರೆಸ್ ಪಕ್ಷದ ಚುನಾವಣಾ ವೈಫಲ್ಯಗಳು ಮತ್ತು ಅಭದ್ರತೆಯನ್ನು ಮುಚ್ಚಿಡಲು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಅವರ ಬಹುಕಾಲದ ಪ್ರವೃತ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ.   

ADVERTISEMENT

ಅತ್ಯಂತ ಆಷಾಢಭೂತಿತನದ ವಿಚಾರವೇನೆಂದರೆ, ಇವಿಎಂಗಳನ್ನು ಪ್ರಯೋಗಾತ್ಮಕವಾಗಿ ಮೊದಲು ಬಳಸಿದ್ದೇ ಕರ್ನಾಟಕದ 1989ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇವಿಎಂಗಳನ್ನು 2004ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಪೂರ್ಣಪ್ರಮಾಣದಲ್ಲಿ ಬಳಸಲಾಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಜಯ ಸಾಧಿಸಿತ್ತು. 2004 ಮತ್ತು 2009ರಲ್ಲಿ ಅವರಿಗೆ ಇವಿಎಂಗಳಲ್ಲಿ ಯಾವುದೇ ದೋಷ ಕಾಣಲಿಲ್ಲ. 2014ರ ನಂತರದ ಚುನಾವಣೆಗಳಲ್ಲಿ ಸೋಲಲು ಆರಂಭಿಸಿದ ನಂತರವಷ್ಟೇ ಅವರಿಗೆ ಇವಿಎಂಗಳಲ್ಲಿ ಸಮಸ್ಯೆಗಳು ಕಾಣತೊಡಗಿದವು. 

ಚುನಾವಣೆಗಳಲ್ಲಿ ಸೋಲು ಸಂಭವಿಸಿದಾಗ ಇಲ್ಲವೇ ರಾಜಕೀಯವಾಗಿ ಪ್ರತಿಕೂಲ ಪರಿಸ್ಥಿತಿ ಸೃಷ್ಟಿಯಾದಾಗ, ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿರುವ ನಂಬಿಕೆಯನ್ನು ಹಾಳು ಮಾಡುವ ಇಲ್ಲವೇ ಅವುಗಳನ್ನೇ ನಾಶ ಮಾಡುವ ಕೀಳು ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. 1975ರಲ್ಲಿ ಚುನಾವಣಾ ಅವ್ಯವಹಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದಾಗ ಇಂದಿರಾ ಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು; ಯಾವ ಅಳುಕೂ ಇಲ್ಲದಂತೆ ಸಂಸತ್, ನ್ಯಾಯಾಂಗ ಮತ್ತು ಮಾಧ್ಯಮವನ್ನು ದಮನ ಮಾಡಿದರು.

ಈ ವಿಚಾರದಲ್ಲಿ ರಾಹುಲ್ ಗಾಂಧಿ, ಅವರ ಸರ್ವಾಧಿಕಾರಿ ಅಜ್ಜಿಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ನ್ಯಾಯಾಲಯದ ಪ್ರಕರಣಗಳಲ್ಲಿ ಕಾಂಗ್ರೆಸ್ ಹಿತಾಸಕ್ತಿಯ ಪರವಾಗಿ ತೀರ್ಪು ಬಂದರೆ, ಅವರು ನ್ಯಾಯ ವ್ಯವಸ್ಥೆಯನ್ನು, ಸುಪ್ರೀಂ ಕೋರ್ಟ್ ಅನ್ನು ಶ್ಲಾಘಿಸುತ್ತಾರೆ; ಇಲ್ಲದಿದ್ದರೆ, ಸಿಜೆಐ ಅನ್ನು ಹುದ್ದೆಯಿಂದ ಕೆಳಗಿಳಿಸಲು ಗೊತ್ತುವಳಿ ಮಂಡಿಸುತ್ತಾರೆ. 

ಚುನಾವಣಾ ಬಾಂಡ್‌ಗಳು ಮತ್ತು ಚಂಡೀಗಢ ಚುನಾವಣೆ ವಿಚಾರದಲ್ಲಿ ಅವರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಖರೀದಿಸಿದರು. ಆದರೆ, ಕನಿಷ್ಠ ಎಂದರೂ 40 ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೆಲವು ಹೈಕೋರ್ಟ್‌ಗಳು ಇವಿಎಂ ಬಳಕೆಯನ್ನು ಎತ್ತಿಹಿಡಿದಿವೆ. ಆದರೆ, ಕಾಂಗ್ರೆಸ್ ಅದನ್ನೆಲ್ಲ ಮರೆತಿದೆ. ಸುಪ್ರೀಂ ಕೋರ್ಟ್ ಯಾವ ಹಂತಕ್ಕೆ ಹೋಗಿದೆಯೆಂದರೆ, ‘ಇವಿಎಂಗಳು ಸರಳ, ಸುರಕ್ಷಿತ ಮತ್ತು ಬಳಕೆದಾರಸ್ನೇಹಿಯಾಗಿವೆ. ಯಾವುದೇ ಆಧಾರವಿಲ್ಲದಿದ್ದರೂ ಪಟ್ಟು ಹಿಡಿದು, ನಿರಂತರವಾಗಿ ಅವುಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುವುದು ವ್ಯತಿರಿಕ್ತ ಪರಿಣಾಮ ಬೀರಿ ಅಪನಂಬಿಕೆಗೆ ಕಾರಣವಾಗಬಲ್ಲದು. ಇದು ಆರೋಗ್ಯಕರ ಹಾಗೂ ಸದೃಢ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಚುನಾವಣೆಗಳ ಬಗೆಗಿನ ಜನರ ವಿಶ್ವಾಸ ಮತ್ತು ಪಾಲ್ಗೊಳ್ಳುವಿಕೆಯನ್ನು ಕುಂದಿಸಬಹುದು’ ಎಂದಿದೆ.    

ಆದರೆ, ರಾಹುಲ್ ಅವರ ‘ಸ್ವಜನಪಕ್ಷಪಾತದ ಶಿಶು’ಗಳ (ನೆಪೋ ಕಿಡ್ಸ್) ವ್ಯವಸ್ಥೆಯಲ್ಲಿ ಇದ್ಯಾವುದಕ್ಕೂ ಸ್ಥಾನವಿಲ್ಲ. ಕಾಂಗ್ರೆಸ್ ಚುನಾವಣೆಗಳನ್ನು ಗೆದ್ದಾಗ– ತೆಲಂಗಾಣ, ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್– ಚುನಾವಣಾ ಆಯೋಗ ಮತ್ತು ಇವಿಎಂಗಳಲ್ಲಿ ಯಾವ ದೋಷವೂ ಇರಲಿಲ್ಲ.

ರಾಹುಲ್ ಗಾಂಧಿ ಅವರು ಅನೇಕ ವಿಚಾರಗಳ ಬಗ್ಗೆ ಸುಳ್ಳು ಸಂಕಥನಗಳನ್ನು ಸೃಷ್ಟಿಸುತ್ತಲೇ ಇದ್ದಾರೆ ಮತ್ತು ಟೀಕೆಗಳಿಗೆ ಗುರಿಯಾಗುತ್ತಲೇ ಇದ್ದಾರೆ. 2019ರಲ್ಲಿ ಅವರು ರಫೇಲ್ ಖರೀದಿಯನ್ನು ಒಂದು ಹಗರಣ ಎಂದು ಕರೆದದ್ದಲ್ಲದೇ, ‘ಚೌಕಿದಾರ್ ಚೋರ್ ಹೈ’ ಎನ್ನುವ ಘೋಷಣೆ ಕೂಗಿದರು. ಏನಾಯಿತು, ಅವು ಆಧಾರರಹಿತ ಆರೋಪಗಳು ಎಂದು ಸುಪ್ರೀಂ ಕೋರ್ಟ್ ಹೇಳಿತು. ವೀರ ಸಾವರ್ಕರ್ ಬಗೆಗಿನ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕೆ ಅವರನ್ನು ನ್ಯಾಯಾಲಯಗಳು ತರಾಟೆಗೆ ತೆಗೆದುಕೊಂಡವು ಮತ್ತು ಈ ಮೂಲಕ ಸಾವರ್ಕರ್ ಅವರ ದೇಶಭಕ್ತ ಪರಂಪರೆಯನ್ನು ಎತ್ತಿಹಿಡಿದವು.

ಇದೇ ರೀತಿ ಸೇನಾಪಡೆಗಳ ಬಗ್ಗೆ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳಿಂದ ಸುಪ್ರೀಂ ಕೋರ್ಟ್ ಗರಂ ಆಗಿದ್ದಲ್ಲದೇ, ‘ಯಾವ ಭಾರತೀಯನೂ ಈ ರೀತಿ ಮಾತನಾಡಲು ಸಾಧ್ಯವಿಲ್ಲ’ ಎಂದಿತ್ತು. ಮಹಾರಾಷ್ಟ್ರದಲ್ಲಿನ ಮತ ಕಳ್ಳತನದ ಬಗ್ಗೆ ಅವರು ಮಾಡಿದ ಆರೋಪಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದವು. ಮತ್ತೊಬ್ಬ ಕಾರ್ಯಕರ್ತ, ರಾಹುಲ್ ಗಾಂಧಿ ಅವರ ಇತ್ತೀಚಿನ ಆರೋಪ‍ಗಳ ಗುಚ್ಛವನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮದ್ರಾಸ್ ಹೈಕೋರ್ಟ್‌ಗೆ ಕೊಂಡೊಯ್ದಿದ್ದರು. ಅವೆಲ್ಲವೂ ಆಧಾರರಹಿತ ಎಂದಿದ್ದ ನ್ಯಾಯಾಲಯವು, ಆ ಕಾರ್ಯಕರ್ತನಿಗೆ ಒಂದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಿತ್ತು.

ರಾಹುಲ್ ಅವರ ಇತ್ತೀಚಿನ ಆರೋಪಗಳು ಕೇಂದ್ರೀಕರಿಸಿರುವುದು ಇವಿಎಂಗಳನ್ನಲ್ಲ; ಮತದಾರರ ಪಟ್ಟಿಗಳನ್ನು. ಈ ದೃಷ್ಟಿಯಿಂದ ನೋಡಿದರೆ ಅವರು ಬಿಹಾರದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ಯನ್ನು (ಎಸ್‌ಐಆರ್) ಸಮರ್ಥಿಸುತ್ತಿದ್ದಾರೆ. ಕಾಂಗ್ರೆಸ್‌ನ ಸರ್ವಪ್ರಯತ್ನದ ನಂತರವೂ ಸುಪ್ರೀಂ ಕೋರ್ಟ್ ಎಸ್‌ಐಆರ್‌ಗೆ ತಡೆಯಾಜ್ಞೆ ನೀಡಿಲ್ಲ ಎನ್ನುವುದನ್ನು ಗಮನಿಸಬೇಕು.

ಮತಪತ್ರಗಳ ಕಾಲದಲ್ಲಿ ಚುನಾವಣೆಗಳನ್ನು ತಿರುಚಿದ ಇತಿಹಾಸವು ಕಾಂಗ್ರೆಸ್‌ಗಿದ್ದು, ಅವರು ಈಗ ಮತಪತ್ರಗಳಿಗೆ ವಾಪಸ್ ಹೋಗುತ್ತಿರುವುದು ಒಂದು ವ್ಯಂಗ್ಯದಂತೆ ಕಾಣುತ್ತದೆ. ಇವಿಎಂಗಳು ಕಾಲಿಡುವುದಕ್ಕೂ ಹಿಂದೆ ಕಾಂಗ್ರೆಸ್ ವ್ಯಾಪಕ ಅಕ್ರಮ ಮತದಾನದಲ್ಲಿ ತೊಡಗಿತ್ತು ಎಂದು ಕರ್ನಾಟಕದ ಗೃಹ ಮಂತ್ರಿ ಜಿ.‍ಪರಮೇಶ್ವರ ಅವರು ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ 1987ರ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿತ್ತು. ಮತ ಪೆಟ್ಟಿಗೆಗಳನ್ನು ಕಾಂಗ್ರೆಸ್ ಹೇಗೆ ಲೂಟಿ ಹೊಡೆದಿತ್ತು ಎನ್ನುವ ಬಗ್ಗೆ ಸಂದೀಪ್ ದೀಕ್ಷಿತ್ ಮತ್ತು ಕೀರ್ತಿ ಆಜಾದ್ ಅವರು ರಹಸ್ಯಗಳನ್ನು ಹೊರಗೆಡವಿರುವ ವಿಡಿಯೊಗಳು ಹರಿದಾಡುತ್ತಿವೆ. ಇಂಥ ಅನೈತಿಕತೆಯ ಹಿನ್ನೆಲೆ ಹೊಂದಿರುವುದರ ನಡುವೆಯೂ, ಚುನಾವಣಾ ವ್ಯವಸ್ಥೆ ಬಗ್ಗೆ ಕಾಂಗ್ರೆಸ್‌ ಅಪನಂಬಿಕೆ ಮೂಡಿಸುತ್ತಿರುವುದು ಮತ್ತು ನಿರ್ದಿಷ್ಟ ವಿಚಾರಗಳನ್ನು ಮಾತ್ರ ಗುರಿ ಮಾಡುತ್ತಿರುವುದು ಒಂದು ವ್ಯಂಗ್ಯವಾಗಿದೆ.   

ಕಾಂಗ್ರೆಸ್ ಪರಿಚಯಿಸಿದ ಇವಿಎಂ ವ್ಯವಸ್ಥೆಯು ಚುನಾವಣಾ ವ್ಯವಸ್ಥೆಯ ಸ್ವರೂಪವನ್ನೇ ಬದಲಾಯಿಸಿತು; ಚುನಾವಣೆಗಳನ್ನು ಹೆಚ್ಚು ಸಮರ್ಥವಾಗಿ, ಪಾರದರ್ಶಕವಾಗಿ ನಡೆಸಲು ಸಾಧ್ಯವಾಗುವಂತೆ ಮಾಡಿದ್ದಲ್ಲದೇ, ಅಕ್ರಮಗಳಿಗೆ ಅವಕಾಶವಿಲ್ಲದಂತೆ ಮಾಡಿತು. ಮತಗಟ್ಟೆ ವಶಪಡಿಸಿಕೊಳ್ಳುವ ದಿನಗಳು ಈಗ ಇತಿಹಾಸ. ಪಶ್ಚಿಮ ಬಂಗಾಳದಲ್ಲಿ ರಾಜ್ಯ ಚುನಾವಣಾ ಆಯೋಗವು ಮತಪತ್ರ ಬಳಸಿ ಪಂಚಾಯತ್ ಚುನಾವಣೆಗಳನ್ನು ಮಾಡುತ್ತಿದ್ದು, ಅಲ್ಲಿ ಮತಗಟ್ಟೆ ವಶಪಡಿಸಿಕೊಳ್ಳುವುದನ್ನು ಈಗಲೂ ಕಾಣಬಹುದಾಗಿದೆ. ಭಾರತದ ಚುನಾವಣಾ ಆಯೋಗವು ನಡೆಸುವ ಇತರ ಚುನಾವಣೆಗಳಲ್ಲಿ ವಿವಿ ಪ್ಯಾಟ್‌, ಇವಿಎಂ ಪರಿಶೀಲ‌ನೆ, ಅಣಕು ಮತದಾನ ಮುಂತಾದವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮರ್ಥವಾದ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದು, ಅಕ್ರಮಕ್ಕೆ ಆಸ್ಪದವಿಲ್ಲದಂಥ ವ್ಯವಸ್ಥೆ ರೂಪಿಸಿದೆ.

ಮತಪತ್ರಗಳಿಗೆ ಹಿಂದಿರುಗುವ ಕರ್ನಾಟಕ ಸರ್ಕಾರದ ನಿರ್ಧಾರದಿಂದ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತಾಗಿದೆ. ಮತಪತ್ರಗಳನ್ನು ಬಳಸುವುದರಿಂದ ಮತಪೆಟ್ಟಿಗೆ ವಶಪಡಿಸಿಕೊಳ್ಳುವುದು, ತಪ್ಪು ಎಣಿಕೆಯಂಥ– ಈ ಹಿಂದೆ ಕಾಂಗ್ರೆಸ್ ಸರ್ಕಾರವೇ ಮಾಡಿರುವಂಥ– ಹಲವು ಅನಾಚಾರಗಳಿಗೆ ಆಸ್ಪದವಿರುತ್ತದೆ. ಕಾಂಗ್ರೆಸ್‌ಗೆ ನಿಜಕ್ಕೂ ಇವಿಎಂಗಳ ಬಗ್ಗೆ ನಂಬಿಕೆ ಇಲ್ಲ ಎಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ 99 ಸಂಸದರು ಮತ್ತು 2024ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ 135 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಮತಪತ್ರಗಳ ಮೂಲಕ ಮರುಚುನಾವಣೆಯಲ್ಲಿ ಆಯ್ಕೆಯಾಗಿ ಬರಲಿ.

ಅನುಕ್ರಮವಾಗಿ ಬಂದ ಸರ್ಕಾರಗಳು, ಅಂತರರಾಷ್ಟ್ರೀಯ ವೀಕ್ಷಕರು ಮತ್ತು ನ್ಯಾಯಾಂಗವು ಇವಿಎಂಗಳನ್ನು ಒಪ್ಪಿಕೊಂಡಿದೆ. ಅದರ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸುವ ಕಾಂಗ್ರೆಸ್‌ನ ಪ್ರಯತ್ನವು ಕೇವಲ ತಂತ್ರಜ್ಞಾನದ ಮೇಲಿನ ದಾಳಿಯಷ್ಟೇ ಅಲ್ಲ, ಸಂವಿಧಾನ ಮತ್ತು ಪ್ರಜಾತಾಂತ್ರಿಕ ಪ್ರಕ್ರಿಯೆ ಮೇಲೆ ನಡೆದ ದಾಳಿಯೂ ಆಗಿದೆ. ಆದರೆ, ಸಂವಿಧಾನಕ್ಕಿಂತ ಸ್ವಂತ ಪರಿವಾರವೇ ಮಿಗಿಲು ಎಂದು ಭಾವಿಸಿರುವ ಪಕ್ಷದಿಂದ ಅದಕ್ಕಿಂತ ಬೇರೇನು ನಿರೀಕ್ಷಿಸಲು ಸಾಧ್ಯ. 

ಸೋಲು ಹತ್ತಿರವಾದಾಗ ಬೆದರಿಕೆ

ರಾಹುಲ್ ಗಾಂಧಿ ಅವರು ಒಂದು ವ್ಯವಸ್ಥಿತ ಕಾರ್ಯಶೈಲಿಯನ್ನು ಅನುಸರಿಸುತ್ತಾರೆ. ಚುನಾವಣೆಯಲ್ಲಿ ಗೆಲುವಿನ ಸಾಧ್ಯತೆ ಕ್ಷೀಣಿಸಿದಾಗ ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆಯನ್ನು ಕುಂದಿಸುವಂತಹ ಸುಳ್ಳುಗಳ ಮೊರೆ ಹೋಗುತ್ತಾರೆ; ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ದೋಷಾರೋ‍ಪಣೆ ಮಾಡುತ್ತಾರೆ. ಕೆಲವೊಮ್ಮೆ ಹಿಂಸೆಯನ್ನು ಪ್ರಚೋದಿಸಿ ಬೆದರಿಕೆಗಳನ್ನೂ ಒಡ್ಡುತ್ತಾರೆ. ಅಣುಬಾಂಬ್‌ನಿಂದ ಹಿಡಿದು ಜಲಜನಕದ ಬಾಂಬ್‌ವರೆಗೆ ‘ನಾವು ನಿಮ್ಮನ್ನು ಬಿಡುವುದಿಲ್ಲ’ ಎನ್ನುವಷ್ಟರ ಮಟ್ಟಿಗೆ ಲೋಕಸಭೆಯ ‘ವಿರೋಧ ಪಕ್ಷದ ನಾಯಕ’ನ ಬೆದರಿಕೆಗಳು ಇರುತ್ತವೆ. ಇದೇ ‘ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ’ ವಿಧಾನ ಎನ್ನುವುದಾದರೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಗ್ಗೆ ರಾಹುಲ್ ಅವರು ಮಾಡಿದ ಆರೋಪಗಳ ಕುರಿತಂತೆ ಅವರದ್ದೇ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಯುತವಾದ ಪ್ರಶ್ನೆಗಳನ್ನು ಕೇಳಿದರು ಎಂದು ಪರಿಶಿಷ್ಟ ಪಂಗಡದ ಮುಖಂಡ ಕೆ.ಎನ್.ರಾಜಣ್ಣ ಅವರನ್ನು ಏಕಾಏಕಿ ಸಚಿವ ಸಂಪುಟದಿಂದ ಕೈಬಿಟ್ಟಿದ್ದು ಏಕೆ? ‘ಆಪರೇಷನ್ ಸಿಂಧೂರ’ದ ಬಗ್ಗೆ ಸತ್ಯವನ್ನು ಹೇಳಿದ್ದಕ್ಕೆ ಸಂಸದ ಶಶಿ ತರೂರ್ ಅವರ ಬಾಯಿ ಮುಚ್ಚಿಸಲು ಹೊರಟದ್ದು ಏಕೆ? ಅಂದಹಾಗೆ ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವ ಎಂತಹದ್ದು ಎನ್ನುವುದರ ಪ್ರತ್ಯಕ್ಷ ಅನುಭವ ಈ ಲೇಖಕನಿಗೆ ಇದೆ. ರಾಹುಲ್ ಗಾಂಧಿ ಅವರಿಗೆ ಪಕ್ಷದ ಮುಖ್ಯಸ್ಥರನ್ನಾಗಿ ಪಟ್ಟ ಕಟ್ಟುವುದನ್ನು (2017) ವಿರೋಧಿಸಿದ್ದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಲಾಯಿತು. 

ಲೇಖಕ: ಬಿಜೆಪಿ ರಾಷ್ಟ್ರೀಯ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.