ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿರುವ ತಹವ್ವುರ್ ರಾಣಾನನ್ನು ಭಾರತಕ್ಕೆ ಅಮೆರಿಕ ಹಸ್ತಾಂತರಿಸಿರುವುದು ಭಯೋತ್ಪಾದನೆ ವಿರುದ್ಧದ ಭಾರತದ ಕಾರ್ಯಾಚರಣೆಯಲ್ಲಿ ಮಹತ್ವದ ಘಟನೆಯಾಗಿದೆ. ರಾಣಾನನ್ನು ದೆಹಲಿಗೆ ಗುರುವಾರ ಕರೆತರಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ಐಎಸ್‌ಐ) ಒತ್ತಾಸೆಯಲ್ಲಿ 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿ ಮತ್ತು ಇತರ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆತನ ಪಾತ್ರ ಏನು ಎಂಬುದರ ಕುರಿತು ಕಾನೂನು ಪ್ರಕ್ರಿಯೆಯನ್ನು ರಾಣಾ ಇಲ್ಲಿ ಎದುರಿಸಬೇಕಾಗುತ್ತದೆ. ಆತನನ್ನು ದೆಹಲಿಯಲ್ಲಿ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನ ವಿಚಾರಣೆಯು ಈ ನ್ಯಾಯಾಲಯದಲ್ಲಿಯೇ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನದಲ್ಲಿ ಎರಡು ತಿಂಗಳ ಹಿಂದೆ ನಡೆಸಿದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ರಾಣಾನನ್ನು ಹಸ್ತಾಂತರಿಸುವ ವಿಚಾರವನ್ನು ಘೋಷಿಸಲಾಗಿತ್ತು. ‘ಕೆಡುಕ ರಾಣಾ’ನನ್ನು ಭಾರತದಲ್ಲಿ ವಿಚಾರಣೆ ಎದುರಿಸುವುದಕ್ಕಾಗಿ ಹಸ್ತಾಂತರ ಮಾಡಲಾಗುವುದು ಎಂದು ಟ್ರಂಪ್ ಘೋಷಿಸಿದ್ದರು. 2009ರಲ್ಲಿಯೇ ಆರಂಭವಾದ ರಾಜತಾಂತ್ರಿಕ, ಕಾನೂನಾತ್ಮಕ ಮತ್ತು ಗುಪ್ತಚರ ಸಂಸ್ಥೆಗಳ ಸುದೀರ್ಘ ಪ್ರಯತ್ನದ ನಂತರ ಹಸ್ತಾಂತರ ಸಾಧ್ಯವಾಗಿದೆ. ವಿವಿಧ ಕಾರಣಗಳಿಗಾಗಿ ರಾಣಾನ ಹಸ್ತಾಂತರ ವಿಳಂಬವಾಯಿತು. ರಾಣಾ ಸಲ್ಲಿಸಿದ್ದ ಎಲ್ಲ ಆಕ್ಷೇಪಗಳು ಮತ್ತು ಮನವಿಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಳ್ಳಿಹಾಕಿದ ಬಳಿಕ ಹಸ್ತಾಂತರಿಸಲಾಗಿದೆ.
ತಹವ್ವುರ್ ರಾಣಾ ಪಾಕಿಸ್ತಾನ ಮೂಲದ ಕೆನಡಾ–ಅಮೆರಿಕ ಪ್ರಜೆ. ಈತ ಪಾಕಿಸ್ತಾನ ಸೇನೆಯಲ್ಲಿ ವೈದ್ಯನಾಗಿ ಕೆಲಸ ಮಾಡಿದ್ದ, ಷಿಕಾಗೊದಲ್ಲಿ ಟ್ರಾವೆಲ್ ಏಜೆನ್ಸಿ ಹೊಂದಿದ್ದ. ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿರುವ ಡೇವಿಡ್ ಹೆಡ್ಲಿ ಈ ಟ್ರಾವೆಲ್ ಏಜೆನ್ಸಿಯನ್ನು ಬಳಸಿಕೊಂಡು ದಾಳಿಗೆ ಮುನ್ನ ಭಾರತಕ್ಕೆ ಬಂದಿದ್ದ ಎನ್ನಲಾಗಿದೆ. ಹೆಡ್ಲಿ ಮಾಫಿಸಾಕ್ಷಿಯಾಗಿದ್ದಾನೆ. 166 ಜನರ ಸಾವಿಗೆ ಕಾರಣವಾದ 2008ರ ನವೆಂಬರ್ 26–29ರ ಮುಂಬೈ ದಾಳಿಯಲ್ಲಿ ರಾಣಾನ ಪಾತ್ರದ ಕುರಿತು ಮಾಹಿತಿ ನೀಡಿದ್ದಾನೆ. ಭಾರತದ ತನಿಖಾ ಸಂಸ್ಥೆಗಳು ಆತನನ್ನು ತನಿಖೆಗೆ ಒಳಪಡಿಸಬೇಕಿದೆ ಮತ್ತು ದಾಳಿಯಲ್ಲಿ ಆತನ ಪಾತ್ರ, ಪಾಕಿಸ್ತಾನದ ಸರ್ಕಾರ ಹಾಗೂ ಅಲ್ಲಿನ ಭಯೋತ್ಪಾದನಾ ಗುಂಪುಗಳ ಪಾತ್ರ ಏನು ಎಂಬ ವಿವರಗಳನ್ನು ಪಡೆದುಕೊಳ್ಳಬೇಕಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತವಾಗಿರುವ ಲಷ್ಕರ್ ಎ ತಯಬಾ ಉಗ್ರಗಾಮಿ ಸಂಘಟನೆಯೊಂದಿಗೆ ರಾಣಾ ಹೊಂದಿರುವ ನಂಟು ಈಗಾಗಲೇ ಸಾಬೀತಾಗಿದೆ. ಇದಕ್ಕಾಗಿ ಆತ ಅಮೆರಿಕದಲ್ಲಿ ಶಿಕ್ಷೆಗೂ ಒಳಗಾಗಿದ್ದಾನೆ. ಲಷ್ಕರ್ ಜೊತೆಗೆ ಗುರುತಿಸಿಕೊಂಡಿದ್ದ 10 ಭಯೋತ್ಪಾದಕರು ಮುಂಬೈ ದಾಳಿಯನ್ನು ನಡೆಸಿದ್ದರು. ಅಜ್ಮಲ್ ಕಸಬ್ ಒಬ್ಬನನ್ನು ಬಿಟ್ಟು ಉಳಿದ ಎಲ್ಲರೂ ಕಾರ್ಯಾಚರಣೆಯಲ್ಲಿ ಸಾವಿಗೀಡಾದರು. ಕಸಬ್‌ನನ್ನು ವಿಚಾರಣೆಗೆ ಒಳಪಡಿಸಿ 2012ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇಡೀ ಸಂಚು ಮತ್ತು ಅದನ್ನು ಹೇಗೆ ಕಾರ್ಯರೂಪಕ್ಕೆ ತರಲಾಯಿತು ಎಂಬ ಮಾಹಿತಿಯನ್ನು ಕಸಬ್ ಬಹಿರಂಗಪಡಿಸಿದ್ದ. ರಾಣಾನ ವಿಚಾರಣೆಯಿಂದ ಈವರೆಗೆ ತಿಳಿಯದೇ ಇರುವ ಅಂಶಗಳು ಕೂಡ ತಿಳಿದುಬರಬಹುದು.
ತಹವ್ವುರ್ ರಾಣಾ ಜೊತೆಗೆ ಯಾವುದೇ ನಂಟು ಇಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಆತ ಕೆನಡಾ–ಅಮೆರಿಕ ಪ್ರಜೆ ಎಂದು ಕೂಡ ಪಾಕಿಸ್ತಾನ ಹೇಳಿದೆ. ಇದೊಂದು ಸಹಜ ಪ್ರತಿಕ್ರಿಯೆ.ಇಂತಹ ನಿರಾಕರಣೆಯನ್ನು ಒಪ್ಪುವುದು ಸಾಧ್ಯವಿಲ್ಲ. ಏಕೆಂದರೆ, ಸಂಚುಗಳು ಮತ್ತು ರಹಸ್ಯ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ರೀತಿಯ ನಿರಾಕರಣೆ ಇದ್ದಿದ್ದೇ. ಮುಂಬೈ ದಾಳಿ ಮತ್ತು ಭಾರತದಲ್ಲಿ ನಡೆದ ಇತರ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂಬುದು
ಹಲವು ರೀತಿಯಲ್ಲಿ ಸಾಬೀತಾಗಿದೆ. ಅದನ್ನು ದೃಢಪಡಿಸಲು ತಹವ್ವುರ್ ರಾಣಾ ಮಾಹಿತಿ ನೀಡುವ ಅಗತ್ಯವೇನೂ ಇಲ್ಲ. ಆತನನ್ನು ನ್ಯಾಯಾಂಗದ ಮುಂದೆ ನಿಲ್ಲಿಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸುವುದು ಮತ್ತು ಪ್ರಕರಣವನ್ನು ಮುಕ್ತಾಯಗೊಳಿಸುವುದು ಇಲ್ಲಿ ಮುಖ್ಯವಾಗಿದೆ. ಭಯೋತ್ಪಾದನೆಯಂತಹ ಗಂಭೀರ ಪ್ರಕರಣಗಳಲ್ಲಿ ಕೂಡ ಬೇರೊಂದು ದೇಶದಿಂದ ಆರೋಪಿಯನ್ನು ವಶಕ್ಕೆ ಪಡೆಯಲು ಎಷ್ಟೊಂದು ಪ್ರಯಾಸಪಡಬೇಕು ಎಂಬುದನ್ನೂ ರಾಣಾ ಪ್ರಕರಣವು ತೋರಿಸಿಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.