ADVERTISEMENT

ಸಂಪಾದಕೀಯ: ಎನ್‌ಡಿಎಗೆ ಅಭೂತಪೂರ್ವ ಗೆಲುವು; ಮಹಾಘಟಬಂಧನಕ್ಕೆ ಪಾಠ ಹಲವು

ಸಂಪಾದಕೀಯ
Published 14 ನವೆಂಬರ್ 2025, 19:30 IST
Last Updated 14 ನವೆಂಬರ್ 2025, 19:30 IST
...
...   
ಬಿಹಾರದಲ್ಲಿನ ಗೆಲುವು ಎನ್‌ಡಿಎ ಕಾರ್ಯತಂತ್ರ ಮತ್ತು ಸಂಘಟಿತ ಪ್ರಯತ್ನಕ್ಕೆ ಸಂದ ಗೆಲುವು. ಮಹಿಳಾ ಮತದಾರರು ನಿತೀಶ್‌ ನಾಯಕತ್ವಕ್ಕೆ ಬಲ ತುಂಬಿದ್ದಾರೆ.

ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು (ಎನ್‌ಡಿಎ) ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಪ್ರತೀ ಐದರಲ್ಲಿ ನಾಲ್ಕರಷ್ಟು ಸ್ಥಾನಗಳನ್ನು ಈ ಮೈತ್ರಿಕೂಟವು ಗೆದ್ದಿರುವುದರಿಂದ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಮತ್ತೊಂದು ಅವಧಿಗೆ ಮುಂದುವರಿಯುವುದೂ ಖಚಿತವಾಗಿದೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಟಬಂಧನವು ಅತ್ಯಂತ ಹೀನಾಯ ಸೋಲನ್ನು ಕಂಡಿದೆ. ಮಹಾಘಟಬಂಧನದ ಪ್ರಮುಖ ಪಕ್ಷಗಳಾದ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದು, ಕಳೆದ ಬಾರಿ ಜಯಿಸಿದ್ದ ಸ್ಥಾನಗಳಲ್ಲಿ ಬಹುಪಾಲನ್ನು ಕಳೆದುಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್‌ಡಿಎಯ ಪ್ರಮುಖ ನಾಯಕರು ಪ್ರತಿಪಾದಿಸಿದ್ದಕ್ಕಿಂತಲೂ ದೊಡ್ಡ ಗೆಲುವು ಅವರ ಮೈತ್ರಿಕೂಟಕ್ಕೆ ದಕ್ಕಿದೆ. ಬಿಹಾರ ವಿಧಾನಸಭೆಯಲ್ಲಿ ಈ ಬಾರಿ, ಬಿಜೆಪಿಯು ಬಹುದೊಡ್ಡ ಪಕ್ಷವಾಗಿದೆ. ಮಿತ್ರಪಕ್ಷ ಬಿಜೆಪಿಯು ಹೆಚ್ಚಿನ ಸ್ಥಾನ ಪಡೆದಿದ್ದರೂ ಜನತಾ ದಳ (ಸಂಯುಕ್ತ –ಜೆಡಿಯು) ನಾಯಕ ನಿತೀಶ್‌ ಕುಮಾರ್‌ ಎನ್‌ಡಿಎಯ ವಿವಾದಾತೀತ ನಾಯಕರಾಗಿ ಹೊರಹೊಮ್ಮಿದ್ದಾರೆ. ಮುಖ್ಯಮಂತ್ರಿಯಾಗಿ ನಿತೀಶ್‌ ಅವರೇ ಮುಂದುವರಿದರೂ, ಎನ್‌ಡಿಎಯಲ್ಲಿ ‘ಶಕ್ತಿಕೇಂದ್ರ’ದ ಸ್ಥಾನಪಲ್ಲಟವಾಗುವ ಲಕ್ಷಣಗಳು ಕೂಡ ಗೋಚರಿಸಿವೆ. ಜೆಡಿಯು ನಾಯಕನ ಆರೋಗ್ಯ ಕ್ಷೀಣಿಸಿರುವುದು ಮತ್ತು ಬಿಜೆಪಿಯ ಪ್ರಾಬಲ್ಯ ಹೆಚ್ಚಿರುವುದು ಇದಕ್ಕೆ ಕಾರಣ. ರಾಷ್ಟ್ರಮಟ್ಟದಲ್ಲೂ ಈ ಫಲಿತಾಂಶವು ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜೆಡಿಯು ಕೂಡ ಭಾಗಿಯಾಗಿದೆ ಮತ್ತು ಆ ಮೈತ್ರಿ ಮುಂದುವರಿಯಲು ಈ ಗೆಲುವು ದೊಡ್ಡ ಬೆಸುಗೆಯಾಗಲಿದೆ. ಮುಂಬರುವ ತಿಂಗಳುಗಳಲ್ಲಿ ಕೆಲವು ರಾಜ್ಯಗಳು ಚುನಾವಣೆ ಎದುರಿಸಲಿದ್ದು, ಗಾಳಿ ಎತ್ತ ಬೀಸುತ್ತಿದೆ ಎನ್ನುವುದಕ್ಕೂ ಈ ಫಲಿತಾಂಶ ಒಂದು ದಿಕ್ಸೂಚಿಯಾಗಿದೆ.

ಬಿಹಾರದಲ್ಲಿ ಯಾವ ಆಡಳಿತ ವಿರೋಧಿ ಅಲೆಯೂ ಇರಲಿಲ್ಲ, ಬದಲಾಗಿ ಆಡಳಿತ ಪರವಾದ ಅಲೆಯೇ ಬೀಸುತ್ತಿತ್ತು ಎಂಬುದನ್ನೂ ಫಲಿತಾಂಶ ತೋರಿಸಿಕೊಟ್ಟಿದೆ. ‘ಸುಶಾಸನ ಬಾಬು’ ಎಂದೇ ಹೆಸರಾದ ನಿತೀಶ್‌ ಕುಮಾರ್‌ ಅವರು ಬಿಹಾರದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ ಎನ್ನುವುದು ಮತ್ತೊಮ್ಮೆ ನಿರೂಪಿತವಾಗಿದೆ. ಎನ್‌ಡಿಎಯ ಪ್ರಚಾರದ ಸಾರಥ್ಯವನ್ನು ವಹಿಸಿಕೊಂಡು ಗೆಲುವಿನ ದಡ ಸೇರಿಸಿದ ನಾಯಕ ಕೂಡ ಅವರಾಗಿದ್ದಾರೆ. ಮತದಾರರಲ್ಲಿ, ಅದರಲ್ಲೂ ಮಹಿಳಾ ಮತದಾರರ ವಲಯದಲ್ಲಿ, ಅವರು ಅತ್ಯಂತ ನೆಚ್ಚಿನ ನಾಯಕರಾಗಿದ್ದಾರೆ ಎನ್ನುವುದು ಸುಸ್ಪಷ್ಟವಾಗಿದೆ. ಮತದಾನದ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದ್ದುದು, ಅದರಲ್ಲೂ ಮಹಿಳಾ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡಿದ್ದುದು, ಎನ್‌ಡಿಎ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಮಹಿಳಾ ಕೇಂದ್ರಿತ ಯೋಜನೆಗಳನ್ನು ಹಾಕಿಕೊಂಡ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು 1.5 ಕೋಟಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಿದ್ದುದು (ಈ ಕ್ರಮ ವಿವಾದಕ್ಕೂ ಕಾರಣವಾಯಿತು) ಮತದಾನದ ಪ್ರವೃತ್ತಿಯ ಮೇಲೆ ಪ್ರಭಾವ ಬೀರಿದಂತಿದೆ. ಇತರ ರಾಜ್ಯಗಳಲ್ಲೂ ಈ ಮಾದರಿಯು ಫಲ ಕೊಟ್ಟಿರುವ ಉದಾಹರಣೆಗಳೂ ದೇಶದ ಮುಂದಿವೆ. ಕಲ್ಯಾಣ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನರ ಭದ್ರತೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಎನ್‌ಡಿಎ ನೀಡಿದ ಆಶ್ವಾಸನೆಗಳು ಮತದಾರರನ್ನು ಪ್ರಭಾವಿಸಿದಂತಿವೆ. ಚುನಾವಣೆಯಲ್ಲಿ ಜಾತಿ ಕೂಡ ಪ್ರಮುಖ ಅಂಶವಾಗಿದ್ದು, ಪ್ರಬಲ ಜಾತಿಗಳು, ಹಿಂದುಳಿದ ವರ್ಗಗಳು, ಅತೀ ಹಿಂದುಳಿದ ವರ್ಗಗಳು ಮತ್ತು ದಲಿತ ಅಭ್ಯರ್ಥಿಗಳ ಹದವಾದ ಮಿಶ್ರಣ ಕೂಡ ಆಡಳಿತಾರೂಢ ಮೈತ್ರಿಕೂಟದ ನೆರವಿಗೆ ಬಂದಿರುವುದು ಎದ್ದು ಕಾಣುತ್ತಿರುವ ಅಂಶ. ಎನ್‌ಡಿಎಯ ಎಲ್ಲ ಅಂಗಪಕ್ಷಗಳು ಪ್ರತೀ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದರೆ, ಮಹಾಘಟಬಂಧನದ ಪಕ್ಷಗಳಲ್ಲಿ ಆ ಒಗ್ಗಟ್ಟು ಕಾಣದಿರುವುದು ಫಲಿತಾಂಶದಲ್ಲಿ ಪ್ರತಿಫಲನವಾಗಿದೆ.

ಮಹಾಘಟಬಂಧನವು ಅತ್ಯಂತ ಶೋಚನೀಯ ಪ್ರದರ್ಶನ ನೀಡಿರುವುದು, ಅದರ ಪ್ರಚಾರದ ಸ್ವರೂಪ, ವಿಷಯಗಳ ಆಯ್ಕೆ, ಚುನಾವಣೆ ತಂತ್ರ ಮತ್ತು ಒಗ್ಗಟ್ಟಿನ ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಹನ್ನೆರಡು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಪಕ್ಷಗಳ ನಡುವೆಯೇ ‘ಸ್ನೇಹದ ಸವಾಲು’ ಒಡ್ಡಲಾಗಿತ್ತು. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವವರೆಗೆ ತೇಜಸ್ವಿ ಯಾದವ್‌ ಅವರ ನಾಯಕತ್ವದ ಕುರಿತು ಮೈತ್ರಿಕೂಟದಲ್ಲಿ ಸ್ಪಷ್ಟ ಒಡಂಬಡಿಕೆ ಇರಲಿಲ್ಲ. ಈ ಮೈತ್ರಿಕೂಟ ನೀಡಿದ ಆಶ್ವಾಸನೆಗಳ ಕುರಿತು ಮತದಾರರಲ್ಲೂ ವಿಶ್ವಾಸ ಮೂಡಲಿಲ್ಲ ಎನ್ನುವುದು ವೇದ್ಯ. ಮಹಾಘಟಬಂಧನದ ದೌರ್ಬಲ್ಯಗಳನ್ನೇ ಎನ್‌ಡಿಎಯು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದೆ. ಅಂದಹಾಗೆ, ಮಹಾಘಟಬಂಧನವು ತನ್ನ ತೀವ್ರ ಹಿನ್ನಡೆ ನಡುವೆಯೂ ಮತಗಳಿಕೆ ಪ್ರಮಾಣವನ್ನು ಕಳೆದ ಸಲದಷ್ಟು ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಆದರೆ, ಎನ್‌ಡಿಎಯು ಕಳೆದ ಸಲಕ್ಕಿಂತಲೂ ಈ ಬಾರಿ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿರುವುದು ಗಮನಾರ್ಹ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.