ADVERTISEMENT

ಸಂಪಾದಕೀಯ | ಅಂತಿಮಸಂಸ್ಕಾರಕ್ಕೆ ಅಡಚಣೆ ಮಾನವೀಯತೆಗೆ ತಗುಲಿತೇ ವೈರಸ್?

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 1:45 IST
Last Updated 27 ಏಪ್ರಿಲ್ 2020, 1:45 IST
   

ಮಂಗಳೂರು ಮತ್ತು ಚೆನ್ನೈನಲ್ಲಿ ಕೋವಿಡ್‌–19 ಕಾಯಿಲೆಯಿಂದ ಸಾವಿಗೀಡಾದವರ ಅಂತ್ಯಸಂಸ್ಕಾರಕ್ಕೆ ಎದುರಾದ ಅಡೆತಡೆಗಳು ಸಾವಿನ ಸಂದರ್ಭದಲ್ಲಿ ಕೂಡ ಮನುಷ್ಯರು ವದಂತಿಗಳನ್ನು ನಂಬಿ ಅಮಾನವೀಯರಾಗಬಲ್ಲರು ಎನ್ನುವುದಕ್ಕೆ ಉದಾಹರಣೆಗಳಾಗಿವೆ. ಮೃತದೇಹದಿಂದ ಕೊರೊನಾ ಸೋಂಕು ಹರಡುತ್ತದೆ ಎನ್ನುವ ಭೀತಿಯೇ ಈ ಹುಚ್ಚು ನಡವಳಿಕೆಗಳಿಗೆ ಕಾರಣ.

ಚೆನ್ನೈನಲ್ಲಿ ನಡೆದಿರುವ ಘಟನೆಯಂತೂ ಪ್ರಾಂಜಲ ಮನೋಭಾವದಿಂದ ಸೇವೆ ಸಲ್ಲಿಸಿದ ವ್ಯಕ್ತಿಗೆ ಸಮಾಜ ತೋರಿಸಿರುವ ಕೃತಘ್ನತೆಯಂತಿದೆ. ಕೊರೊನಾ ವೈರಾಣುವಿನ ಬಾಧೆಗೆ ಒಳಗಾದ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಡಾ. ಸೈಮನ್‌ ಹರ್ಕ್ಯುಲಸ್‌ ಎನ್ನುವ ವೈದ್ಯರು, ಅದೇ ರೋಗಾಣುವಿನ ಸೋಂಕಿಗೊಳಗಾಗಿ ನಿಧನರಾಗಿದ್ದಾರೆ. ಆ ಹುತಾತ್ಮನ ಅಂತ್ಯಸಂಸ್ಕಾರ ಅತ್ಯಂತ ಗೌರವಪೂರ್ವಕವಾಗಿ ನಡೆಯಬೇಕಾಗಿತ್ತು. ಆದರೆ, ಅವರ ಸಂಸ್ಕಾರಕ್ಕೆ ಸಾರ್ವಜನಿಕರಿಂದ ಅಡ್ಡಿ ಎದುರಾಗಿದೆ.

ಟಿ.ಪಿ. ಛತ್ರಂ‌ ಸ್ಮಶಾನದಲ್ಲಿ ನೂರಕ್ಕೂ ಹೆಚ್ಚು ಜನರ ಗುಂಪು ಅಡ್ಡಿಪಡಿಸಿದೆ. ಅಲ್ಲಿಂದ ವೆಲಂಗಾಡು ಸ್ಮಶಾನಕ್ಕೆ ದೇಹವನ್ನು ತೆಗೆದುಕೊಂಡು ಹೋದಾಗ ಜನರು ದೊಣ್ಣೆಗಳಿಂದ ಹಲ್ಲೆ ನಡೆಸಿ, ಕಲ್ಲುತೂರಾಟ ನಡೆಸಿದ್ದಾರೆ. ಆ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಕೊನೆಗೆ ಪೊಲೀಸ್‌ ಭದ್ರತೆಯನ್ನು ಪಡೆದು ದೇಹವನ್ನು ಆತುರಾತುರವಾಗಿ ಹೂಳಲಾಗಿದೆ. ಅಹಿತಕರ ಘಟನೆಯಿಂದಾಗಿ ಕುಟುಂಬ ವರ್ಗದವರಿಗೆ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಯಬೇಕೆನ್ನುವುದು ಮೃತವೈದ್ಯರ ಬಯಕೆಯಾಗಿತ್ತು. ಅವರ ಆಸೆಯನ್ನು ಈಡೇರಿಸುವುದಕ್ಕಾಗಿ, ದೇಹವನ್ನು ಹೊರತೆಗೆದು ಮರುಸಂಸ್ಕಾರಕ್ಕೆ ಅವಕಾಶ ಕಲ್ಪಿಸಬೇಕೆನ್ನುವ ವೈದ್ಯರ ಪತ್ನಿಯ ಕೋರಿಕೆಗೆ ಸರ್ಕಾರ ಒಪ್ಪಿಕೊಂಡಿಲ್ಲ.

ADVERTISEMENT

ಮಂಗಳೂರಿನಲ್ಲಿ 75 ವರ್ಷದ ವೃದ್ಧೆಯ ಅಂತಿಮ ವಿಧಿವಿಧಾನಗಳ ಸಂದರ್ಭದಲ್ಲಿ ನಡೆದಿರುವ ಘಟನೆಗಳು ಕೂಡ ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತಹವು. ರಾತ್ರಿಯ ವೇಳೆ ಸ್ಮಶಾನದಿಂದ ಸ್ಮಶಾನಕ್ಕೆ ಮೃತದೇಹದೊಂದಿಗೆ ಅಲೆದಿರುವ ಸಂದರ್ಭವನ್ನು ಕಲ್ಪಿಸಿಕೊಳ್ಳುವುದೇ ಅಸಹನೀಯ. ಪಚ್ಚನಾಡಿ ಸ್ಮಶಾನದಲ್ಲಿ ಅಂತಿಮಸಂಸ್ಕಾರ ನಡೆಸಲು ಜಿಲ್ಲಾ ಆಡಳಿತ ಮುಂದಾದಾಗ ಶಾಸಕ ಡಾ. ಭರತ್‌ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಶಾಸಕರು ಸ್ವತಃ ವೈದ್ಯರಾಗಿದ್ದರೂ ಜನರಿಗೆ ತಿಳಿಹೇಳುವ ಬದಲು, ಮೂಢನಂಬಿಕೆಯನ್ನು ಪ್ರೋತ್ಸಾಹಿಸಿರುವುದು ದುರದೃಷ್ಟಕರ. ಪಚ್ಚನಾಡಿಯಿಂದ ಮೂಡುಶೆಡ್ಡೆ ಸ್ಮಶಾನಕ್ಕೆ ದೇಹವನ್ನು ತೆಗೆದುಕೊಂಡು ಹೋದಾಗಲೂ ಶಾಸಕ ಉಮಾನಾಥ್‌ ಕೋಟ್ಯಾನ್‌ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಬೋಳೂರು, ನಂದಿಗುಡ್ಡೆ, ಪದವಿನಂಗಡಿ, ಪಚ್ಚನಾಡಿ ಸ್ಮಶಾನಗಳಲ್ಲೂ ವಿರೋಧ ಎದುರಾಗಿದೆ. ಕೊನೆಗೆ, ಸ್ಥಳೀಯರ ಆಕ್ಷೇಪದ ನಡುವೆಯೇ ಬಿ.ಸಿ. ರೋಡ್‌ ಬಳಿಯ ಕೈಕುಂಜೆಯಲ್ಲಿ ಅಂತಿಮಸಂಸ್ಕಾರ ನಡೆಸಲಾಗಿದೆ.

ಮೃತದೇಹದಿಂದ ಕೊರೊನಾ ಹರಡುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಕೊರೊನಾದಿಂದಾಗಿ ಸಾವಿಗೀಡಾದವರನ್ನು ಆಯಾ ಸಮುದಾಯದ ನಂಬಿಕೆಗೆ ಅನುಸಾರವಾಗಿ ಅಂತಿಮಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಿದ್ದರೂ ಸಾರ್ವಜನಿಕರು ವದಂತಿಗಳನ್ನು ನೆಚ್ಚಿಕೊಂಡು ಸಾವಿನ ಸಂದರ್ಭದಲ್ಲಿ ಕ್ರೂರವಾಗಿ ವರ್ತಿಸುತ್ತಿರುವುದು ಅಕ್ಷಮ್ಯ. ಅವರಲ್ಲಿ ಜಾಗೃತಿ ಮೂಡಿಸಬೇಕಾದ ಜನಪ್ರತಿನಿಧಿಗಳು ತಾವೇ ಪ್ರತಿಭಟನೆಯ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೊಣೆಗೇಡಿತನ ಪ್ರದರ್ಶಿಸುತ್ತಿದ್ದಾರೆ.

ಸೋಂಕನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ. ಆದರೆ, ನಾವು ಹಾಗೂ ನಮ್ಮ ಸುತ್ತಮುತ್ತಲಿನ ವಾಸಸ್ಥಳ ಸುರಕ್ಷಿತವಾಗಿದ್ದರೆ ಸಾಕು ಎನ್ನುವ ಸಂಕುಚಿತ ಮನೋಭಾವ ಒಳ್ಳೆಯದಲ್ಲ. ಇದೇ ಮನೋಭಾವವನ್ನು ವೈದ್ಯರು, ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ಹಾಗೂ ಪೊಲೀಸರು ತಳೆದಲ್ಲಿ ಸಮಾಜದ ಗತಿಯೇನಾಗಬೇಕು? ಭಾರತೀಯ ಸಂಸ್ಕೃತಿಯಲ್ಲಿ ಸಾವಿಗೆ ಘನತೆಯಿದೆ. ಆ ಘನತೆಗೆ ವೈರಸ್‌ ಸೋಂಕು ಬಾಧಿಸಬಾರದು. ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಗಳನ್ನು ಪಾಲಿಸದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ, ಅಂತಿಮಸಂಸ್ಕಾರಕ್ಕೆ ಅಡ್ಡಿಪಡಿಸುವವರ ವಿರುದ್ಧವೂ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.