ADVERTISEMENT

ಸಂಪಾದಕೀಯ | ಕನ್ನಡ ವಿ.ವಿ.ಯಲ್ಲಿ ‘ಭ್ರಷ್ಟಾಚಾರ’: ನಾಡು–ನುಡಿಗೆ ಎಸಗಿದ ದ್ರೋಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 21:00 IST
Last Updated 17 ನವೆಂಬರ್ 2021, 21:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನಾಡು–ನುಡಿಯ ವಿವೇಕದ ಪ್ರತಿರೂಪವಾಗಿ ಜ್ಞಾನಗಂಗೋತ್ರಿಯಂತೆ ಕಾರ್ಯನಿರ್ವಹಿಸಬೇಕಾಗಿದ್ದ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಭ್ರಷ್ಟಾಚಾರದ ಗಂಗೋತ್ರಿಯ ರೂಪದಲ್ಲಿ ಸುದ್ದಿಯಲ್ಲಿರುವುದು ದುರದೃಷ್ಟಕರ. ಮುಂಬಡ್ತಿ, ಪಿಂಚಣಿ ಬಿಡುಗಡೆ, ಪ್ರೊಬೇಷನರಿ ಅವಧಿ ಪೂರ್ಣಗೊಂಡಿರುವುದರ ಘೋಷಣೆ ಸೇರಿದಂತೆ ವಿವಿಧ ಕೆಲಸಗಳಿಗೆ ಲಂಚ–ಕಮಿಷನ್‌ ಕೇಳಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಆದಾಯ ತೆರಿಗೆ, ಹಿಂದಿನ ಬಾಕಿ ಹೆಸರಿನಲ್ಲಿ ನಿವೃತ್ತ ನೌಕರರ ಒಪ್ಪಿಗೆಯಿಲ್ಲದೆ ಪಿಂಚಣಿ ಮೊತ್ತದಲ್ಲಿ ಕಡಿತ ಮಾಡಲಾಗುತ್ತಿದೆ ಎಂದು ವಿಶ್ರಾಂತ ಕುಲಪತಿ ಹಾಗೂ ಪ್ರಾಧ್ಯಾಪಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಶಿಷ್ಯವೇತನ ಮಂಜೂರಾತಿಗೆ ದಾಖಲೆಗಳ ಮೇಲೆ ಸಹಿ ಮಾಡುವುದಕ್ಕೂ ಹಣ ಕೇಳಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 36 ತಿಂಗಳಿಂದ ಸ್ಥಗಿತಗೊಂಡಿರುವ ಶಿಷ್ಯವೇತನ (ಫೆಲೋಶಿಪ್‌) ಬಿಡುಗಡೆ ಮಾಡಬೇಕೆಂದು ಸಂಶೋಧನಾ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದರು. ‘ಫೆಲೋಶಿಪ್‌ ಕೊಡಿ, ಇಲ್ಲವೇ ವಿಷ ಕೊಡಿ’ ಎಂಬ ವಿದ್ಯಾರ್ಥಿಗಳ ಘೋಷಣೆ ಪರಿಸ್ಥಿತಿ ಗಂಭೀರವಾಗಿರುವುದನ್ನು ಸೂಚಿಸುವಂತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಸಹಾಯಧನವನ್ನು ಸರ್ಕಾರ ಕಾಲಕಾಲಕ್ಕೆ ಬಿಡುಗಡೆ ಮಾಡಿದ್ದರೂ ವಿದ್ಯಾರ್ಥಿಗಳ ಖಾತೆಗೆ ಅದು ಜಮೆ ಆಗಿಲ್ಲ. ಸಹಾಯಧನ ನೀಡದಿರುವ ಮೂಲಕ ಪರಿಶಿಷ್ಟ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿಸಲಾಗುತ್ತಿದೆ ಎನ್ನುವ ಗಂಭೀರ ಆರೋಪವನ್ನೂ ವಿದ್ಯಾರ್ಥಿಗಳು ಮಾಡಿದ್ದಾರೆ. ಯುಜಿಸಿ ನಿಯಮಕ್ಕೆ ವಿರುದ್ಧವಾಗಿ 17 ಬೋಧಕ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ನಡೆದಿದೆ ಎನ್ನುವ ವರದಿಗಳೂ ಇವೆ. ಹಂಪಿ ವಿಶ್ವವಿದ್ಯಾಲಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಈ ಘಟನೆಗಳು ತೋರಿಸುತ್ತವೆ. ಕನ್ನಡಕ್ಕಾಗಿ ಕಟ್ಟಿರುವ ಈ ವಿಶ್ವವಿದ್ಯಾಲಯದಲ್ಲಿ ಅವ್ಯವಹಾರಗಳು ಈ ಪರಿ ನಡೆದಿವೆ ಎಂದಾದರೆ ಅವು ನಾಡು–ನುಡಿಗೆ ಬಗೆದ ದ್ರೋಹವೇ ಸರಿ.

ಕನ್ನಡ ವಿಶ್ವವಿದ್ಯಾಲಯ ರೂಪುಗೊಳ್ಳುವುದರ ಹಿಂದೆ ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯಾಗಿಸುವ ಉದಾತ್ತ ಉದ್ದೇಶವಿತ್ತು; ಕನ್ನಡ ನಾಡು–ನುಡಿ, ಸಂಸ್ಕೃತಿ ಮತ್ತು ಜನಜೀವನದ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತಿನ ಕುರಿತು ಅಧ್ಯಯನ ಮಾಡುವ ಮತ್ತು ಅದರ ಫಲಿತಗಳನ್ನು ವಿಶ್ವದಾದ್ಯಂತ ಪಸರಿಸುವ ಆಶಯವಿತ್ತು. ಕನ್ನಡ ಕಟ್ಟುವ ಉದ್ದೇಶಗಳು ಕಾರ್ಯರೂಪಕ್ಕೆ ಬರುವುದಕ್ಕೆ ಅಗತ್ಯವಾದ ಸಂಶೋಧನಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕಮಿಷನ್‌ ದಂಧೆ ಶುರುವಾಗಿರುವುದು ವಿಶ್ವವಿದ್ಯಾಲಯ ಸ್ಥಾಪನೆಯ ಮೂಲ ಉದ್ದೇಶವನ್ನೇ ವಿರೂಪಗೊಳಿಸುವಂತಿದೆ. ಸಂಶೋಧನಾ ವಿದ್ಯಾರ್ಥಿಗಳು ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ವರದಿ ಸಲ್ಲಿಸುವುದರ ಜೊತೆಗೆ, ಪ್ರಗತಿ ವರದಿ ಶುಲ್ಕವನ್ನೂ ತುಂಬಬೇಕು. ಶಿಷ್ಯವೇತನ ಪಾವತಿ ಆಗದಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನ ಮತ್ತು ಜೀವನ ಎರಡಕ್ಕೂ ತೊಡಕಾಗುತ್ತದೆ. ಹಿಂದುಳಿದ ಪ್ರದೇಶ ಮತ್ತು ಸಮುದಾಯಗಳಿಂದ ಕನಸುಗಳನ್ನು ಹೊತ್ತು ವಿಶ್ವವಿದ್ಯಾಲಯಕ್ಕೆ ಬರುವ ಹಲವು ವಿದ್ಯಾರ್ಥಿಗಳು ಜೀವನ ನಿರ್ವಹಣೆಗೆ ಫೆಲೋಶಿಪ್‌ ಅನ್ನೇ ನೆಚ್ಚಿಕೊಂಡಿರುತ್ತಾರೆ. ಅಂಥ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಅಧಿಕಾರಿಗಳಲ್ಲಿ ಕನ್ನಡದ ಬಗೆಗಿನ ಕಾಳಜಿಯಿರಲಿ, ಕಿಂಚಿತ್‌ ಮಾನವೀಯತೆಯೂ ಇದ್ದಂತಿಲ್ಲ. ಆರೋಪಗಳ ಬಗ್ಗೆ ಸಿಂಡಿ ಕೇಟ್‌ನಿಂದ ತನಿಖೆ ನಡೆಸುವುದಾಗಿ ಕುಲಪತಿ ಹೇಳಿದ್ದಾರೆ. ಆದರೆ, ವಿಶ್ವವಿದ್ಯಾಲಯದ ಭಾಗವಾಗಿರುವ ಸಿಂಡಿಕೇಟ್‌ನಿಂದ ಪಾರ ದರ್ಶಕ ತನಿಖೆ ನಡೆಯುತ್ತದೆಂದು ನಂಬುವುದು ಕಷ್ಟ. ಸಂಬಳ ಬಿಡುಗಡೆ ಮಾಡಲು ಲಂಚ ಪಡೆದಿರುವ ಆರೋಪವನ್ನು ಸ್ವತಃ ಕುಲಪತಿಗಳೇ ಎದುರಿಸುತ್ತಿದ್ದಾರೆ. ಪ್ರೊಬೇಷನರಿ ಅವಧಿ ಪೂರ್ಣಗೊಂಡಿದೆ ಎಂದು ಘೋಷಿಸಲು ಎಂಟು ತಿಂಗಳ ಸಂಬಳವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪವೂ ಇದೆ. ಹಾಗಾಗಿಯೇ, ಲಂಚ ಮತ್ತು ಕಮಿಷನ್‌ ದಂಧೆ ವಿರುದ್ಧ ನ್ಯಾಯಾಂಗ ತನಿಖೆ ನಡೆಸ ಬೇಕೆಂದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯು ಕುಲಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಹಂಪಿ ವಿಶ್ವವಿದ್ಯಾಲಯವು ಕನ್ನಡ ಮತ್ತು ಕನ್ನಡಿಗರ ಸಂವೇದನೆಗಳ ಮೂರ್ತರೂಪ. ಆ ಕಾರಣ ದಿಂದಲೇ ವಿಶ್ವವಿದ್ಯಾಲಯದ ಅನುದಾನವನ್ನು ಸರ್ಕಾರ ಕಡಿತಗೊಳಿಸಿದಾಗ, ಆ ನಿರ್ಧಾರದ ವಿರುದ್ಧ ನಾಡಿನ ಪ್ರಜ್ಞಾವಂತರು ದನಿಯೆತ್ತಿದ್ದರು. ಹೊಸ ಕಾರ್ಯಕ್ರಮ, ಸಂಶೋಧನೆಗಳಿಗೆ ಅಡಚಣೆಯಾಗ ದಂತೆ ಅನುದಾನ ಬಿಡುಗಡೆ ಮಾಡಲು ಸರ್ಕಾರದ ಮೇಲೆ ಸಾರ್ವಜನಿಕ ಒತ್ತಡ ಹೇರಲಾಗಿತ್ತು. ಆಡಳಿತ ಪಕ್ಷದೊಂದಿಗೆ ನಂಟು ಹೊಂದಿರುವ ಉದ್ಯಮಿಯೊಬ್ಬರಿಗೆ ‘ನಾಡೋಜ’ ಗೌರವ ನೀಡಿ ದಾಗ ಸಾಂಸ್ಕೃತಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಸಿಂಡಿಕೇಟ್‌ ಸದಸ್ಯರ ಆಯ್ಕೆಯಲ್ಲಿ ರಾಜಕೀಯ ಒಲವುನಿಲುವುಗಳು ಮುಖ್ಯವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಇವೆಲ್ಲ ಕಾಳಜಿ ಮತ್ತು ಆತಂಕಗಳು ಹಂಪಿ ವಿಶ್ವವಿದ್ಯಾಲಯದೊಂದಿಗೆ ಕನ್ನಡಪ್ರೇಮಿಗಳ ಹೃದಯಸಂವಾದವನ್ನು ಸೂಚಿಸುವಂತಿವೆ. ಕನ್ನಡ ವಿಶ್ವವಿದ್ಯಾಲಯವು ನೈತಿಕತೆಯ ಮಾದರಿಯಂತೆ ಇರಬೇಕೆನ್ನುವುದು ಕನ್ನಡಿಗರ ಅಪೇಕ್ಷೆ. ಪ್ರಸ್ತುತ ಕಳಂಕಕ್ಕೆ ಒಳಗಾಗಿರುವ ವಿಶ್ವವಿದ್ಯಾಲಯವನ್ನು ಭ್ರಷ್ಟಾಚಾರದಿಂದ ಮುಕ್ತ ಗೊಳಿಸುವುದನ್ನು ಸರ್ಕಾರ ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು. ಉನ್ನತ ಮಟ್ಟದ ತನಿಖೆ ಕಾಲಮಿತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ತನಿಖೆಯ ಫಲಿತಾಂಶವು ಕನ್ನಡ ವಿಶ್ವವಿದ್ಯಾಲಯವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಇತರೆ ವಿಶ್ವ ವಿದ್ಯಾಲಯಗಳಿಗೆ ಪಾಠವೂ ಆಗಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.