ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗುತ್ತಿಗೆದಾರರು ಮಾಡಿದ್ದ ‘ಶೇ 40 ಲಂಚ’ದ ಆರೋಪವನ್ನೇ ಏಣಿಯನ್ನಾಗಿಸಿಕೊಂಡ ಕಾಂಗ್ರೆಸ್, 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಅಧಿಕಾರಕ್ಕೆ ಬಂದ ನಂತರ, ಆರೋಪಗಳ ಕುರಿತ ತನಿಖೆಗಾಗಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಆಯೋಗವನ್ನು ಸರ್ಕಾರ ರಚಿಸಿತು.
ಶೇ 40ರ ಲಂಚದ ಆರೋಪಗಳಿಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಪುರಾವೆ ದೊರೆತಿಲ್ಲ ವಾದರೂ, ಭ್ರಷ್ಟಾಚಾರಕ್ಕೆ ನೇರವಾಗಿ ಕಾರಣವಾಗಬಹುದಾದ ವಿಳಂಬ, ಕಾನೂನು ಉಲ್ಲಂಘನೆಗಳು ಹಾಗೂ ಸ್ವಜನಪಕ್ಷಪಾತದಂತಹ ಅಂಶಗಳನ್ನು ಆಯೋಗ ಗುರ್ತಿಸಿದೆ. ಯಾವುದೇ ಕಾಮಗಾರಿಯ ಟೆಂಡರ್ ಪಡೆಯಲು ಶೇ 40ರಷ್ಟು ಲಂಚ ನೀಡಬೇಕಾಗಿದೆ ಎಂದು ಪದೇ ಪದೇ ಆರೋಪಿಸಿದ್ದ ‘ಕರ್ನಾಟಕ ಗುತ್ತಿಗೆದಾರರ ಸಂಘ’ (ಕೆಎಸ್‌ಸಿಎ), ತನ್ನ ಆರೋಪಗಳಿಗೆ ಪೂರಕವಾಗಿ 1,593 ಪುಟಗಳ ದಾಖಲೆಯನ್ನು ಆಯೋಗಕ್ಕೆ ನೀಡಿತ್ತು. ಆ ದಾಖಲೆಗಳಲ್ಲಿ ವ್ಯಾಪಕ ಭ್ರಷ್ಟಾಚಾರವನ್ನು ಸಾಬೀತುಪಡಿಸುವ ಸ್ಪಷ್ಟ ಅಂಶಗಳು ಆಯೋಗಕ್ಕೆ ಕಂಡುಬಂದಿಲ್ಲ. ಅದರ ಹೊರತಾಗಿಯೂ, ಬಿಜೆಪಿ ನಾಯಕರಾದ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ರೂಪಾಲಿ ನಾಯ್ಕ ಅವರ ವಿರುದ್ಧದ ಆರೋಪಗಳನ್ನು ಆಯೋಗ ಎತ್ತಿಹಿಡಿದಿದೆ ಹಾಗೂ ಪಿಡಬ್ಲ್ಯುಡಿ ಎಂಜಿನಿಯರ್ ಎಸ್.ಎಫ್. ಪಾಟೀಲ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ‘ಕೆಎಸ್‌ಸಿಎ’ ನೀಡಿದ ಸಾಕ್ಷ್ಯಗಳ ಆಧಾರದಲ್ಲಿಯೇ ದೃಢೀಕರಿಸಿದೆ. ಇದೀಗ, ಶೇ 40ರಷ್ಟು ಲಂಚ ಆರೋಪಗಳ ಬಗ್ಗೆ ನಾಗಮೋಹನ ದಾಸ್ ಆಯೋಗ ನೀಡಿರುವ ವರದಿಯ ಕೂಲಂಕಷ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕೃಷ್ಣ ಅವರ ನೇತೃತ್ವದಲ್ಲಿ ಸರ್ಕಾರ ಮತ್ತೊಂದು ಸಮಿತಿ ರಚಿಸಿದೆ.
ಕಾಂಗ್ರೆಸ್ ಸರ್ಕಾರ ಶೇ 40ರ ಲಂಚದ ಅಂಕಿಅಂಶದ ಹಗ್ಗಜಗ್ಗಾಟವನ್ನುಪ್ರಸ್ತುತ ರೂಪದಲ್ಲಿ ಮುಂದುವರಿಸು ವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಗದದ ದಾಖಲೆ ಲಭ್ಯವಿಲ್ಲದ ಲಂಚದ ಆರೋಪವನ್ನು ಸಾಬೀತುಪಡಿಸುವುದು ಕಷ್ಟ. ಆದರೆ, ಲಭ್ಯ ಇರುವ ಕುರುಹುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಹಾಗೂ ತಾಂತ್ರಿಕ ಪರಿಶೋಧನೆಗೆ ಒಳಪಡಿಸುವ ಸಾಧ್ಯತೆ ಮುಕ್ತವಾಗಿದೆ. ಕಾರ್ಯಸಾಧುವಾದ ಪ್ರಯತ್ನಗಳ ಬದಲಾಗಿ, ಹೊಸ ಸಮಿತಿಗಳನ್ನು ನೇಮಿಸುವ ಪ್ರಕ್ರಿಯೆ ಸತ್ತ ಹಾವಿಗೆ ಮತ್ತೆ ಮತ್ತೆ ಕಲ್ಲು ಎಸೆದಂತಾಗುತ್ತದೆ. ತನಿಖಾ ಸಮಿತಿಗಳನ್ನು ನೇಮಿಸುವ ಸರ್ಕಾರದ ರೂಢಿಗತ ಕ್ರಮ, ವರದಿಗಳನ್ನು ದೂಳು ಹಿಡಿಯಲು ಬಿಡುತ್ತದೆಯೇ ಹೊರತು, ನಿರ್ಣಾಯಕ ಫಲಿತಾಂಶವನ್ನು ನೀಡುವುದು ಸಾಧ್ಯವಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ, ಕೊರೊನಾ ಸೋಂಕು ವ್ಯಾಪಕವಾಗಿದ್ದ ಸಂದರ್ಭದಲ್ಲಿ ನಡೆದ ಖರೀದಿಗಳಲ್ಲಿನ ಅವ್ಯವಹಾರಗಳ ಕುರಿತಂತೆ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಆಯೋಗ ಸಲ್ಲಿಸಿರುವ ವರದಿ. ₹400ಕ್ಕೆ ದೊರೆಯುತ್ತಿದ್ದ ಪಿಪಿಇ ಕಿಟ್‌ಗಳನ್ನು ₹1,312ಕ್ಕೆ ಖರೀದಿಸಿರುವುದು ಸೇರಿದಂತೆ, ಕಪ್ಪುಪಟ್ಟಿಗೆ ಸೇರಿಸಿದ ಕಂಪನಿಗಳಿಗೆ ಏಕಮಾತ್ರ ಬಿಡ್ ನಂತರ ಟೆಂಡರ್ ನೀಡಿರುವುದು, ಅನುಮೋದನೆಗೊಳ್ಳದ ಪ್ರಯೋಗಾಲಯಗಳ ಮೂಲಕ ಹಣಕಾಸಿನ ದುರುಪಯೋಗದ ಭಾರೀ ಅಕ್ರಮಗಳನ್ನು ಆಯೋಗ ಬೆಳಕಿಗೆ ತಂದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ₹500 ಕೋಟಿ ವಸೂಲಿ ಮಾಡುವಂತೆ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ. ಈ ಸಮಿತಿಯ ವರದಿಗೆ ಸಂಬಂಧಿಸಿದಂತೆಯೂ ಸರ್ಕಾರ ಮತ್ತೊಂದು ವಿಶೇಷ ತನಿಖಾ ತಂಡ ರಚಿಸಿದೆ ಹಾಗೂ ಮೌನಕ್ಕೆ ಜಾರಿದೆ.
ತನಿಖಾ ವರದಿಗಳನ್ನು ದೂಳು ಹಿಡಿಯಲು ಬಿಡುವ ಆಯ್ದ ನಿಷ್ಕ್ರಿಯತೆಯ ಧೋರಣೆಯು ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ‘ಒಪ್ಪಂದದ ರಾಜಕೀಯ’ದ ಆರೋಪಗಳನ್ನು ಪುಷ್ಟೀಕರಿಸುವಂತಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಸರ್ಕಾರವೊಂದು ಗಂಭೀರವಾಗಿ ತೆಗೆದುಕೊಳ್ಳುವುದಾದರೆ, ವರದಿಯ ಶಿಫಾರಸುಗಳನ್ನು ಜಾರಿಗೊಳಿಸಿ, ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು ಹಾಗೂ ತಪ್ಪಿತಸ್ಥರಿಂದ ಸಾರ್ವಜನಿಕ ಹಣವನ್ನು ವಸೂಲಿ ಮಾಡಬೇಕು. ಅಂತಿಮವಾಗಿ, ಭ್ರಷ್ಟಾಚಾರದಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿಗೆ ಹಾನಿ ಉಂಟಾಗುವುದು ಮಾತ್ರವಲ್ಲದೆ, ಗಣತಂತ್ರವೂ ದುರ್ಬಲಗೊಳ್ಳುತ್ತದೆ. ಶೇ 40ರ ಲಂಚವನ್ನು ಕೊನೆಗೊಳಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಈಗ ತನ್ನ ಮಾತನ್ನು ಉಳಿಸಿಕೊಳ್ಳುವ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕಾಗಿದೆ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ. ತನಿಖೆಗಳು ಸ್ವತಂತ್ರವಾಗಿ, ಸಾಕ್ಷ್ಯಗಳನ್ನು ಆಧರಿಸಿ, ನಿರ್ದಿಷ್ಟ ಕಾಲಮಿತಿಯೊಳಗೆ ಮುಗಿಯಬೇಕು; ರಾಜಕೀಯ ಸೇಡಿನ ಕ್ರಮಗಳು ಆಗಬಾರದು. ಘೋಷಣೆಗಳು ಹಾಗೂ ದೂಳುಹಿಡಿದ ವರದಿಗಳಿಗಿಂತಲೂ ಹೆಚ್ಚಿನದನ್ನು ನಿರೀಕ್ಷಿಸುವ ಹಕ್ಕು ರಾಜ್ಯದ ಜನತೆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.