ಸಂಪಾದಕೀಯ | ಮಕ್ಕಳ ಸಾವು ಹೃದಯವಿದ್ರಾವಕ: ಜೀವಗಳೊಂದಿಗೆ ಚೆಲ್ಲಾಟ ಬೇಡ
ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್‌ನ ಸೇವನೆಯಿಂದ ಕನಿಷ್ಠ 14 ಮಕ್ಕಳು ಮೃತಪಟ್ಟಿರುವ ಘಟನೆ ಹೃದಯವಿದ್ರಾವಕ. ಜೀವದಾಯಿನಿ ಆಗಬೇಕಿದ್ದ ಔಷಧವೇ ಜೀವ ಕಳೆದುಕೊಳ್ಳಲು ಕಾರಣವಾದ ದುರ್ಘಟನೆ ಇದಾಗಿದೆ. ತಮಿಳುನಾಡಿನಲ್ಲಿ ತಯಾರಿಸಲಾಗಿದ್ದ ‘ಕೋಲ್ಡ್ರಿಫ್’ ಎಂಬ ಸಿರಪ್‌ನಿಂದಾಗಿ ಮಕ್ಕಳು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಹೇಳಲಾಗಿದೆ. ‘ಕೋಲ್ಡ್ರಿಫ್’ನಲ್ಲಿ ‘ಡೈಇಥಿಲೀನ್ ಗ್ಲೈಕೋಲ್ (ಡಿಇಜಿ) ಎಂಬ ದ್ರಾವಣದ ಪ್ರಮಾಣವು ಅನುಮತಿಸಿದ ಮಿತಿಗಿಂತಲೂ ಹಲವು ಪಟ್ಟು ಹೆಚ್ಚಾಗಿದ್ದುದು ತಮಿಳುನಾಡು ಆರೋಗ್ಯ ಇಲಾಖೆಯು ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಡಿಇಜಿಯು ಒಂದು ವಿಷಕಾರಿ ದ್ರಾವಣವಾಗಿದ್ದು, ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ ಎಂಬುದಾಗಿ ವೈದ್ಯಕೀಯ ಅಧ್ಯಯನ ವರದಿಗಳು ಬಹುಹಿಂದೆಯೇ ಮಾಹಿತಿ ನೀಡಿವೆ. ಔಷಧಿಗಳಲ್ಲಿ ಇಂತಹ ದ್ರಾವಣಗಳ ಬಳಕೆ ಕುರಿತಂತೆ ಎಚ್ಚರದಿಂದ ಇರಬೇಕಿದ್ದ ಸರ್ಕಾರಗಳು, ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ಹಾಗೆ’ ಎನ್ನುವ ಗಾದೆಯಂತೆ, ಅನಾಹುತವೆಲ್ಲ ಘಟಿಸಿದ ಮೇಲೆ ಕಲುಷಿತ ಔಷಧಗಳ ಮಾರಾಟದ ಮೇಲೆ ನಿಷೇಧ ಹೇರಿವೆ. ಮಕ್ಕಳಿಗೆ ‘ಕೋಲ್ಡ್ರಿಫ್’ ನೀಡಲು ಕಾರಣರಾದ ವೈದ್ಯರನ್ನು ಅಮಾನತುಗೊಳಿಸಿವೆ. ಅಲ್ಲದೆ, ಕೋಲ್ಡ್ರಿಫ್ ಸಿರಪ್ ತಯಾರಿಕೆ ಕಂಪನಿಯಾದ ತಮಿಳುನಾಡಿನ ಸ್ರೇಸನ್ ಫಾರ್ಮಾ ವಿರುದ್ಧ ಎಫ್‌ಐಆರ್ ಅನ್ನೂ ದಾಖಲಿಸಿವೆ. ಹಣ ಮಾಡುವ ಹಪಹಪಿಯ ಖಾಸಗಿ ಕಂಪನಿಗಳು ಹಾಗೂ ಭ್ರಷ್ಟ ಸರ್ಕಾರಿ ವ್ಯವಸ್ಥೆ ಜೊತೆಯಾಗಿ ಮಾಡಿದ ಕೊಲೆಗಳು ಇವಾಗಿವೆಯೇ ಹೊರತು, ಮಕ್ಕಳದು ಆಕಸ್ಮಿಕ ಸಾವಲ್ಲ ಎನ್ನದೆ ವಿಧಿಯಿಲ್ಲ. ಏಕೆಂದರೆ, ಔಷಧ ಕಂಪನಿಯು ಸಿರಪ್‌ನಲ್ಲಿ ವಿಷಕಾರಿ ದ್ರಾವಣ ಕಲಬೆರಕೆ ಆಗದಂತೆ ನೋಡಿಕೊಂಡಿದ್ದರೆ, ಔಷಧ ನಿಯಂತ್ರಕರು ಸಿರಪ್ ಅನ್ನು ಸಮರ್ಪಕ ವಾಗಿ ಪರೀಕ್ಷೆಗೆ ಒಳಪಡಿಸಿದ್ದರೆ ಮಕ್ಕಳ ಸಾವುಗಳನ್ನು ತಡೆಯಲು ಸಾಧ್ಯವಿತ್ತು.
ಭಾರತವು ಕೆಮ್ಮಿನ ಸಿರಪ್‌ನಿಂದಾದ ಅನಾಹುತಗಳಿಗೆ ಸುದ್ದಿಯಾಗುತ್ತಿ ರುವುದು ಇದೇ ಮೊದಲ ಸಲ ಏನಲ್ಲ. ಭಾರತದಿಂದ ಪೂರೈಸಲಾಗಿದ್ದ ಕೆಮ್ಮಿನ
ಸಿರಪ್‌ನ ಸೇವನೆಯಿಂದಾಗಿ 2022ರಲ್ಲಿ ಗ್ಯಾಂಬಿಯಾ ಹಾಗೂ ಉಜ್ಬೇಕಿಸ್ತಾನದಲ್ಲಿ ಡಜನ್‌ಗಟ್ಟಲೆ ಮಕ್ಕಳು ಅಸುನೀಗಿದ್ದವು. ಹರಿಯಾಣ ಹಾಗೂ ದೆಹಲಿ ಮೂಲದ ಫಾರ್ಮಾ ಕಂಪನಿಗಳು ಈ ಸಿರಪ್ ಅನ್ನು ಪೂರೈಸಿದ್ದವು. ಪರೀಕ್ಷೆಗೆ ಒಳಪಡಿಸಿದಾಗ ಆ ಸಿರಪ್‌ಗಳಲ್ಲಿ ಡಿಇಜಿ ದ್ರಾವಣ ಭಾರೀ ಪ್ರಮಾಣದಲ್ಲಿರುವುದು ಪತ್ತೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಯಾವ ಯಾವ ದೇಶಗಳಲ್ಲಿ ಈ ಸಿರಪ್ ಅನ್ನು ಬಳಕೆ ಮಾಡಲಾಗುತ್ತಿದೆಯೋ ಆ ಎಲ್ಲ ಕಡೆಗಳಲ್ಲಿ ಕೂಡಲೇ ಮಾರುಕಟ್ಟೆಯಿಂದ ಅದನ್ನು ಹಿಂಪಡೆಯಬೇಕು ಎಂದು ಸೂಚಿಸಿತ್ತು. ಈ ಎರಡೂ ಕಂಪನಿಗಳಿಗೆ ನೀಡಿದ್ದ ಲೈಸನ್ಸ್ ಅನ್ನು ಭಾರತ ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ದಿನಗಳು ಕಳೆದಂತೆ ಆ ಕಂಪನಿಗಳ ಕಾರ್ಯಾಚರಣೆಯು ಮೊದಲಿನ ಸ್ಥಿತಿಗೆ ಬಂತು. ಯಾವುದೇ ಶಿಕ್ಷೆಗೂ ಆ ಕಂಪನಿಗಳು ಗುರಿಯಾಗಲಿಲ್ಲ. ದೇಶದಲ್ಲಿ ಔಷಧಗಳ ಗುಣಮಟ್ಟದ ಮೇಲೆ ಹೇಗೆ ನಿಗಾ ವಹಿಸಲಾಗುತ್ತಿದೆ ಎಂಬುದರ ದ್ಯೋತಕ ಇದು. ಸದ್ಯ, ಕೇಂದ್ರ ಆರೋಗ್ಯ ಇಲಾಖೆಯು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಭವಿಸಿದ ಮಕ್ಕಳ ಸಾವಿನ ಕುರಿತು ತನಿಖೆ ಆರಂಭಿಸಿದೆ. ತನಿಖೆಯು ಮುಗಿದು ವರದಿ ಹೊರಬರುವ ಹೊತ್ತಿಗೆ ಪ್ರಕರಣವೇ ತಣ್ಣಗಾಗಿರುತ್ತದೆ.
ಉತ್ತರ ಭಾರತದ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಸಿರಪ್ ಕುರಿತು ನಿಗಾ ವಹಿಸುವಂತೆ ರಾಜ್ಯದಲ್ಲಿ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸರ್ಕಾರವು ಸೂಚಿಸಿರುವ ಕ್ರಮ ಸಕಾಲಿಕವಾಗಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸಿರಪ್ ಬಳಕೆ ಆಗುತ್ತಿಲ್ಲ ಎಂದೂ ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ. ಖಾಸಗಿಯಾಗಿ ಬಳಕೆಯಾಗುತ್ತಿರುವ ಕುರಿತು ತನಿಖೆಗೆ ಸೂಚಿಸಿರುವುದಾಗಿಯೂ ತಿಳಿಸಿದ್ದಾರೆ. ಹಾಗೆ ನೋಡಿದರೆ ಬೇರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಔಷಧಗಳ ಪರೀಕ್ಷೆ ಹೆಚ್ಚಾಗಿ ನಡೆಯುತ್ತಿದೆ. ಕರ್ನಾಟಕದ ಮಾದರಿಯನ್ನು ಅನುಸರಿಸಲು ಕೇಂದ್ರವು ಇತರ ರಾಜ್ಯಗಳಿಗೆ ಸಲಹೆ ನೀಡಿದೆ ಕೂಡ. ಯಾವುದೇ ರಾಜ್ಯದಲ್ಲಿ ಯಾವುದೇ ಔಷಧಿ ಬಳಕೆಯಾಗುವ ಮುನ್ನ ಸೂಕ್ತ ಪರೀಕ್ಷೆಗೆ ಒಳಗಾಗುವ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ರಾಜ್ಯಗಳಲ್ಲಿ ನಡೆಯುವ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗುವ ಔಷಧಗಳ ಕುರಿತು ಆಯಾ ಕ್ಷಣವೇ ಇತರ ರಾಜ್ಯಗಳ ಗಮನಕ್ಕೆ ತರಬೇಕು. ಕಳಪೆ ಔಷಧಿ ತಯಾರಿಸುವ ಕಂಪನಿಗಳ ಮೇಲೆ ನಿಷೇಧ ಹೇರಿ, ಅವುಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಔಷಧ ಕಂಪನಿಗಳು ಹಾಗೂ ಔಷಧ ನಿಯಂತ್ರಕರ ನಡುವಿನ ಅಕ್ರಮವಾದ ನಂಟನ್ನು ತುಂಡರಿಸಬೇಕು. ಇಲ್ಲದಿದ್ದರೆ ಅಮಾಯಕ ಜೀವಗಳೊಂದಿಗೆ ಚೆಲ್ಲಾಟವಾಡುವ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.