ADVERTISEMENT

ಸಂಪಾದಕೀಯ | ಕ್ರಿಕೆಟ್: ಹಸ್ತಲಾಘವ ನಿರಾಕರಣೆ; ಕಳೆದುಹೋದ ಒಂದು ಸಂದೇಶ

ಸಂಪಾದಕೀಯ
Published 17 ಸೆಪ್ಟೆಂಬರ್ 2025, 23:30 IST
Last Updated 17 ಸೆಪ್ಟೆಂಬರ್ 2025, 23:30 IST
ppppp
ppppp   
ಪಾಕಿಸ್ತಾನದ ಕ್ರಿಕೆಟ್‌ ಆಟಗಾರರ ಹಸ್ತಲಾಘವಕ್ಕೆ ಭಾರತೀಯ ಆಟಗಾರರು ನಿರಾಕರಿಸಿದ ಘಟನೆ ಪ್ರಹಸನದಂತಿದೆಯೇ ಹೊರತು, ರಾಜಕೀಯ ಸ್ಪಷ್ಟತೆ ಒಳಗೊಂಡಿಲ್ಲ.

ಸಂಪ್ರದಾಯಗಳು ನಿಯಮಗಳಿಗಿಂತ ಹೆಚ್ಚಾಗಿ ಆಚರಣೆಗಳಾಗಿರುತ್ತವೆ. ಅವುಗಳಿಗೆ ಕಾನೂನಿನ ಚೌಕಟ್ಟು ಇರುವುದಿಲ್ಲ. ನೈತಿಕತೆಯ ದೃಷ್ಟಿಯಿಂದ ನೋಡಿದರೆ, ಜಾರಿಯಲ್ಲಿರುವ ಕಾನೂನುಗಳಿಗಿಂತ ಹೆಚ್ಚಿನ ಮೌಲ್ಯವನ್ನು ಸಂಪ್ರದಾಯಗಳು ಹೊಂದಿರುತ್ತವೆ. ಈ ನೈತಿಕ ಮೌಲ್ಯದ ಹಿನ್ನೆಲೆಯಲ್ಲಿ ನೋಡಿದಾಗ, ಸೆಪ್ಟೆಂಬರ್ 14ರಂದು ನಡೆದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆಟಗಾರರ ಹಸ್ತಲಾಘವಕ್ಕೆ ಭಾರತ ತಂಡದ ಆಟಗಾರರು ನಿರಾಕರಿಸಿದ್ದು ಸರಿಯಾದ ನಡವಳಿಕೆಯಲ್ಲ ಎಂದೇ ಹೇಳಬೇಕಾಗುತ್ತದೆ. ಟಾಸ್‌ ವೇಳೆ ಹಾಗೂ ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಕೈಕುಲುಕುವುದು ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ, ತೆರೆಮರೆಯ ಶಕ್ತಿಗಳು ನಿರ್ದೇಶಿಸಿರುವ ‘ಆಟ’ದಲ್ಲಿ ಆಟಗಾರರು ಬರೀ ಪಾತ್ರಧಾರಿಗಳಷ್ಟೇ. ದುರದೃಷ್ಟವಶಾತ್‌ ಅವರಿಗೇ ಮೊದಲು ಇದರ ಬಿಸಿತಟ್ಟಿದೆ. ಪಹಲ್ಗಾಮ್‌ ಹತ್ಯಾಕಾಂಡ ಮತ್ತು ನಂತರ ಉಭಯ ದೇಶಗಳ ನಡುವೆ ಗಡಿಯಲ್ಲಿನ ಸಶಸ್ತ್ರ ಸಂಘರ್ಷದ ಹಿನ್ನೆಲೆಯಲ್ಲಿ, ಪಾಕಿಸ್ತಾನ ವಿರುದ್ಧ ಪಂದ್ಯವಾಡಲು ತಯಾರಿ ನಡೆಸುವಾಗಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. 2012ರಿಂದಲೇ ಭಾರತ– ಪಾಕಿಸ್ತಾನ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಹಣದ ಹೊಳೆ ಹರಿಸುವ ‘ಐಪಿಎಲ್‌’ನಲ್ಲಿ ಪಾಕಿಸ್ತಾನದ ಆಟಗಾರರು ಪಾಲ್ಗೊಳ್ಳುವುದನ್ನು ನಿರ್ಬಂಧಿಸಲಾಗಿದೆ. ‘ಐಸಿಸಿ’ ಮತ್ತು ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ ನಡೆಸುವ ಟೂರ್ನಿಗಳಲ್ಲಿ ಪಾಕಿಸ್ತಾನದಲ್ಲಿ ಆಡುವುದಕ್ಕೆ ಅನುಮತಿ ನಿರಾಕರಿಸಿದೆ. ಆದರೆ, ತಟಸ್ಥ ತಾಣದಲ್ಲಿ ಆಡಲು ಅವಕಾಶ ಕೊಟ್ಟಿದ್ದು, ಅದು ಉಭಯ ದೇಶಗಳ ನಡುವಣ ಬಿಕ್ಕಟ್ಟಿನ ಸಂದರ್ಭ ದಲ್ಲಿ ವಿವೇಚನೆಯ ನಿರ್ಧಾರವಾಗಿದೆ.

ಕ್ರೀಡೆ ಲಕ್ಷಾಂತರ ಜನರನ್ನು ಸೆಳೆಯುವ ಮನರಂಜನೆಯ ಮಾಧ್ಯಮ; ಆಟದ ಮೂಲಕ ದುಮ್ಮಾನ ಗಳನ್ನು ಹೊರಹಾಕಲು ಹಾಗೂ ಅನ್ಯಾಯಗಳನ್ನು ಪ್ರತಿಭಟಿಸಲು ಒದಗಿಬರುವ ಸಮರ್ಥ ವೇದಿಕೆ ಕೂಡ. ಜನಾಂಗೀಯ ಭೇದ,  ಲಿಂಗತಾರತಮ್ಯ,  ಯುದ್ಧ ಹೇರಿಕೆಯ ವಿರುದ್ಧ ಪ್ರತಿಭಟನೆ, ಮೊದಲಾದ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸಲು ಕ್ರೀಡಾಕೂಟಗಳು ಬಳಕೆಯಾಗಿವೆ. ಆದರೆ, ಕ್ರಿಕೆಟ್‌ ಪಂದ್ಯದ ಸಂದರ್ಭದಲ್ಲಿ ಹಸ್ತಲಾಘವಕ್ಕೆ ನಿರಾಕರಿಸಿರುವ ಭಾರತ ಕ್ರಿಕೆಟ್‌ ತಂಡದ ನಿರ್ಧಾರ ಇಂಥ ಯಾವುದೇ ಉದ್ದೇಶಗಳನ್ನು ಈಡೇರಿಸಿದೆಯೇ ಎನ್ನುವುದು ಅನುಮಾನ. ಪಾಕಿಸ್ತಾನ ವಿರುದ್ಧದ ಪಂದ್ಯವನ್ನೇ ಬಹಿಷ್ಕರಿಸುವ ಮೂಲಕ ಇದಕ್ಕೂ ದೊಡ್ಡ ರೀತಿಯಲ್ಲಿ ಸಂದೇಶ ರವಾನಿಸುವ ಅವಕಾಶ ಭಾರತದ ಕ್ರಿಕೆಟ್‌ ತಂಡಕ್ಕಿತ್ತು. ಮೂರು ಗಂಟೆಗಳ ಕಾಲ ತಂಡವೊಂದರ ಜೊತೆ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಕಳೆದ ನಂತರ ಕೈಕುಲುಕಲು ನಿರಾಕರಿಸಿದ ಘಟನೆ, ತವರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಪ್ರಚೋದನಾತ್ಮಕ ಶಕ್ತಿಗಳನ್ನು ತೃಪ್ತಿಗೊಳಿಸಲು ನಡೆಸಿದ ಪ್ರಹಸನದಂತಿತ್ತು. ಈ ಪ್ರಹಸನದಲ್ಲಿ, ಭಾರತ ತಂಡ ಗಳಿಸಿದ ಏಳು ವಿಕೆಟ್‌ಗಳ ಅಧಿಕಾರಯುತ ಗೆಲುವು ಹೆಚ್ಚು ಚರ್ಚೆಯಾಗಲಿಲ್ಲ. ಪಂದ್ಯಾನಂತರದ ಬೆಳವಣಿಗೆಗಳೇ ಸುದ್ದಿಯ ಕೇಂದ್ರವಾದವು. ಅನಗತ್ಯ ಘಟನೆಗಳಿಗೆ ಆಸ್ಪದ ಕಲ್ಪಿಸದೆಯೇ ಪರಿಸ್ಥಿತಿಯನ್ನು ನಿಭಾಯಿಸುವ ಅವಕಾಶವನ್ನು ಭಾರತ ತಂಡ ಬಿಟ್ಟುಕೊಟ್ಟಿದ್ದ ರಿಂದಾಗಿ, ಮುಂದಿನ ದಿನಗಳಲ್ಲಿ ನಡೆಯಬಹುದಾದ ಉಭಯ ದೇಶಗಳ ಪಂದ್ಯಗಳನ್ನು ಕ್ರಿಕೆಟೇತರ ಕಾರಣಗಳಿಗಾಗಿಯೂ ಗಮನವಿಟ್ಟು ನೋಡುವ ಪರಿಸ್ಥಿತಿ ಎದುರಾಗಬಹುದು.

ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್‌ ಅವರನ್ನು ವಜಾಗೊಳಿಸಬೇಕು ಎನ್ನುವ ಪಾಕಿಸ್ತಾನ ತಂಡದ ಆಗ್ರಹ ಮತ್ತು ಏಷ್ಯಾ ಕಪ್‌ ಟೂರ್ನಿಯಿಂದಲೇ ಹಿಂದೆ ಸರಿಯುವುದಾಗಿ ಹಾಕಿರುವ ಬೆದರಿಕೆಯು ಒಣಪ್ರತಿಷ್ಠೆಯಲ್ಲದೇ ಬೇರೇನೂ ಅಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಮೊಹ್ಸಿನ್‌ ನಕ್ವಿ ಅವರು ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ಗೂ ಮುಖ್ಯಸ್ಥರು. ಅವರು ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಉಪಖಂಡದ ಮಹತ್ವದ ಟೂರ್ನಿಯ ಮಹತ್ವವನ್ನು ಕುಗ್ಗಿಸು ತ್ತಾರೆಂದು ನಿರೀಕ್ಷಿಸಲಾಗದು. ಅದಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ, ಭಾರತದ ಆಟಗಾರರು ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಆಗ ನಕ್ವಿ ಅವರಿಂದಲೇ ಟ್ರೋಫಿ ಸ್ವೀಕರಿಸಬೇಕಾಗುತ್ತದೆ. ಅಂಥ ಸಂದರ್ಭ ಎದುರಾದಲ್ಲಿ ನಕ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸುತ್ತದೆಯೆ? ಅಥವಾ ನಕ್ವಿ ಅವರೇ ಫೈನಲ್ ಪಂದ್ಯದ ನಂತರ ನಡೆಯುವ ಸಮಾರಂಭದಿಂದ ದೂರ ಉಳಿಯುತ್ತಾರೆಯೇ? ಅಂತಿಮವಾಗಿ ಅರ್ಥ ಮಾಡಿಕೊಳ್ಳಬೇಕಾದುದು, ಹಸ್ತಲಾಘವದ ಪ್ರಕ್ರಿಯೆ ಕ್ರೀಡಾಸ್ಫೂರ್ತಿಯ ಸಂಕೇತವಾದ ಒಂದು ಸಂಪ್ರದಾಯವಷ್ಟೇ ಆಗಿತ್ತು ಎನ್ನುವುದನ್ನು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.