
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವ ಸಮಯದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ರಂಗಪ್ರವೇಶಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ತನಿಖಾದಳದ ನಡುವೆ ಸಂಘರ್ಷ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಆ ತಿಕ್ಕಾಟ ತೀವ್ರ ಸ್ವರೂಪ ಪಡೆಯಲಿದೆ. ಕಳೆದ ವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ, ಕೋಲ್ಕತ್ತದಲ್ಲಿನ ‘ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ’ (ಐ–ಪ್ಯಾಕ್) ಕಚೇರಿಯ ಮೇಲೆ ‘ಇ.ಡಿ.’ ದಾಳಿ ನಡೆಸಿತು. ಮುಂಬರುವ ಚುನಾವಣೆಯಲ್ಲಿ ಟಿಎಂಸಿ ಅನುಸರಿಸಬೇಕಾದ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ ಐ–ಪ್ಯಾಕ್ ಸಲಹೆಗಳನ್ನು ನೀಡುತ್ತಿದೆ. ದಾಳಿಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿರುವ ಮಮತಾ ಬ್ಯಾನರ್ಜಿ, ‘ಸೂಕ್ಷ್ಮ’ ಎಂದು ಹೇಳಲಾಗಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೆಲವು ಕಡತಗಳನ್ನೂ ಕೊಂಡೊಯ್ದಿದ್ದಾರೆ. ಪಕ್ಷದ ಕಾರ್ಯತಂತ್ರಕ್ಕೆ ಸಂಬಂಧಿಸಿದ ವಿವರಗಳು ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಳಿಸಿಹಾಕುತ್ತಿರುವ ಮತದಾರರ ವಿವರಗಳನ್ನು ಒಳಗೊಂಡ ಮಾಹಿತಿಯು ಆ ಕಡತಗಳಲ್ಲಿದೆ ಎಂದು ಮಮತಾ ಹೇಳಿದ್ದಾರೆ. ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಇ.ಡಿ. ಕಾರ್ಯಾಚರಣೆಯನ್ನು ವಿಶ್ಲೇಷಿಸಿರುವ ಅವರು, ಕೇಂದ್ರ ಸರ್ಕಾರ ಮತ್ತು ಇ.ಡಿ. ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದವರೆಗೂ ಟಿಎಂಸಿ ಬೆಂಬಲಿಗರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಪ್ರಸ್ತುತ, ನೆರವಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಇ.ಡಿ., ತನ್ನ ಕಾರ್ಯಾಚರಣೆಗೆ ಟಿಎಂಸಿ
ಅಡ್ಡಿ ಉಂಟುಮಾಡುತ್ತಿದೆ ಎಂದು ಆಪಾದಿಸಿದೆ. ವಿಚಾರಣೆ ಸಂದರ್ಭದಲ್ಲಿ ತನ್ನ ನಿಲುವನ್ನೂ ಆಲಿಸುವಂತೆ ಟಿಎಂಸಿ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ದಾಳಿಗೆ ಸಂಬಂಧಿಸಿದಂತೆ ಇ.ಡಿ.ಯ ಅಪರಿಚಿತ ಅಧಿಕಾರಿಗಳು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯ ವಿರುದ್ಧ ಮಮತಾ ಅವರು ದಾಖಲಿಸಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಯೂ ನಡೆಯುತ್ತಿದೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ದಾಳಿ ನಡೆದಿದೆ ಎಂದು ಇ.ಡಿ. ಹೇಳುತ್ತಿದ್ದರೂ, ಕಾರ್ಯಾಚರಣೆ ನಡೆದಿರುವ ಸಮಯ ಅನುಮಾನಕ್ಕೆ ಕಾರಣವಾಗುವಂತಿದೆ. ಕಠಿಣ ನಿಬಂಧನೆಗಳನ್ನು ಹೊಂದಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶೋಧ ನಡೆಸಲಾಗಿದೆ. ಆದರೆ, ಇ.ಡಿ.ಯನ್ನು ಬಳಸಿಕೊಂಡು ತನ್ನ ಚುನಾವಣಾ ಪ್ರಚಾರಕ್ಕೆ ಅಡ್ಡಿ ಉಂಟುಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮಮತಾ ಆಪಾದಿಸಿದ್ದಾರೆ. ಟಿಎಂಸಿ ಮತ್ತು ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಹಾಗೂ ಚುನಾವಣೆಗೆ ಸಂಬಂಧಿಸಿದ ಪಕ್ಷದ ಕಾರ್ಯತಂತ್ರವನ್ನು ತಿಳಿದುಕೊಳ್ಳುವ ಉದ್ದೇಶದಿಂದ ವರ್ಷಗಳ ಹಿಂದಿನ ಪ್ರಕರಣಕ್ಕೆ ಚುನಾವಣೆಗಳು ಸನ್ನಿಹಿತವಾಗಿರುವ ಸಂದರ್ಭದಲ್ಲಿ ಜೀವ ನೀಡಲಾಗಿದೆ ಎಂದೂ ದೂರಿದ್ದಾರೆ.
ತನಿಖಾ ಸಂಸ್ಥೆಯ ದುರುಪಯೋಗ ನಡೆದಿದೆ ಎನ್ನುವ ಟಿಎಂಸಿ ಆರೋಪ ನಿರಾಧಾರವಾದುದೇನೂ ಅಲ್ಲ. ಚುನಾವಣೆ ಅಥವಾ ರಾಜಕೀಯ ಉದ್ದೇಶಗಳಿಗಾಗಿ ತನಿಖಾ ಸಂಸ್ಥೆಗಳು ಬಳಕೆ ಆಗಿರುವ ಸುದೀರ್ಘ ಇತಿಹಾಸವೇ ಇದೆ. ಹಿಂದಿನ ಸರ್ಕಾರಗಳಿಂದಲೂ ಈ ದುರುಪಯೋಗ ನಡೆದಿದೆ. ಆದರೆ, ಈಗಿನ ಸರ್ಕಾರ ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕಲು, ಮುಖ್ಯವಾಗಿ ಆ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿನ ನಾಯಕರ ವಿರುದ್ಧ ತನ್ನ ನಿಯಂತ್ರಣದಲ್ಲಿರುವ ತನಿಖಾ ಸಂಸ್ಥೆಗಳನ್ನು ಇನ್ನಿಲ್ಲದಂತೆ ಬಳಸುತ್ತಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಲ್ಲೂ, ವಿಧಾನಸಭಾ ಚುನಾವಣೆಗೆ ಮೊದಲು ಆ ಪಕ್ಷಗಳ ನಾಯಕರಿಗೆ ಕಿರುಕುಳ ನೀಡಲಾಗಿದೆ. ತನಿಖೆಗೆ ಒಳಗಾದವರಿಗೆ ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸುವ ಅವಕಾಶ ಇದ್ದೇಇದೆ ಎಂದು ವಾದಿಸಬಹುದಾದರೂ, ಈ ಪ್ರಕರಣಗಳು ವರ್ಷಗಟ್ಟಲೆ ಮುಂದುವರಿಯುವುದನ್ನು ಗಮನಿಸಬೇಕು. ಇಂಥ ಪ್ರಕರಣಗಳಲ್ಲಿ ಶಿಕ್ಷೆ ಆಗಿರುವ ಪ್ರಮಾಣವೂ ಕಡಿಮೆ. ಈ ಹಿನ್ನೆಲೆಯಲ್ಲಿಯೇ ಐ–ಪ್ಯಾಕ್ ಮೇಲಿನ ಇ.ಡಿ. ದಾಳಿಯನ್ನು ಗಮನಿಸಬೇಕಾಗಿದೆ. ಪ್ರಸಕ್ತ ದಾಳಿಗೆ ಸಂಬಂಧಿಸಿದಂತೆ, ಮಮತಾ ಬ್ಯಾನರ್ಜಿ ಅವರ ಪ್ರತಿಕ್ರಿಯೆ ಅಸಾಮಾನ್ಯ ಹಾಗೂ ಹಿಂದೆಂದೂ ನಡೆದಿರದಂತಹದ್ದು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಯೊಂದು ನಡೆಸುವ ದಾಳಿಗೆ ಮುಖ್ಯಮಂತ್ರಿಯೊಬ್ಬರು ಅಡ್ಡಿಪಡಿಸಿರುವ ವಿದ್ಯಮಾನ, ರಾಜಕೀಯ ಮತ್ತು ಕಾನೂನಿಗೆ ಸಂಬಂಧಿಸಿದ ವಿಷಯಗಳು ಮಾತ್ರವಲ್ಲದೆ ಸಾಂವಿಧಾನಿಕ ಸಂಗತಿಗಳನ್ನೂ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.