ಸಂಪಾದಕೀಯ: ಎಲ್ಲರಿಗೂ ಡಿಜಿಟಲ್ ಸೇವೆ ಲಭ್ಯತೆ– ಹಕ್ಕಿನ ವ್ಯಾಪ್ತಿ ವಿಸ್ತರಿಸಿದ ಕೋರ್ಟ್
ಮೂಲಭೂತ ಹಕ್ಕುಗಳ ಪರಿಧಿಯನ್ನು ವಿಸ್ತರಿಸಿರುವ ಸುಪ್ರೀಂ ಕೋರ್ಟ್, ಇ–ಆಡಳಿತ ಸೌಲಭ್ಯಗಳು ಹಾಗೂ ಅಭಿವೃದ್ಧಿ ವ್ಯವಸ್ಥೆಗಳ ಲಭ್ಯತೆಯು ಸಂವಿಧಾನದ 21ನೇ ವಿಧಿಯಲ್ಲಿ ಹೇಳಿರುವ ಜೀವಿಸುವ ಸ್ವಾತಂತ್ರ್ಯದ ಭಾಗ ಎಂದು ಸಾರಿದೆ. ಇ–ಆಡಳಿತ ಸೌಲಭ್ಯಗಳು ಹಾಗೂ ಅಭಿವೃದ್ಧಿ ವ್ಯವಸ್ಥೆಗಳ ಲಭ್ಯತೆಯು ಅರ್ಥಪೂರ್ಣವಾಗಿರಬೇಕು, ಎಲ್ಲರನ್ನೂ ಒಳಗೊಳ್ಳುವಂತೆ ಇರಬೇಕು ಎಂದು ಅದು ಹೇಳಿದೆ. ಸಮಾಜದಲ್ಲಿ ಅವಕಾಶ ವಂಚಿತರಿಗೆ, ದುರ್ಬಲ ವರ್ಗಗಳಿಗೆ, ಅಂಗವಿಕಲರಿಗೆ ಡಿಜಿಟಲ್ ವ್ಯವಸ್ಥೆ ಲಭ್ಯವಾಗುವಂತೆ ಮಾಡುವ ಹೊಣೆಯು ಸರ್ಕಾರಗಳ ಮೇಲಿದೆ ಎಂದು ಅದು ಸ್ಪಷ್ಟಪಡಿಸಿದೆ. ಈ ಮಾತಿಗೆ ಅನುಗುಣವಾಗಿ ಅದು, ಕೆವೈಸಿ ಪ್ರಕ್ರಿಯೆಯಲ್ಲಿ (ವಿವಿಧ ಯೋಜನೆಗಳಿಗೆ ಗ್ರಾಹಕರ, ಬಳಕೆದಾರರ ವಿವರಗಳನ್ನು ಪಡೆಯುವ ಪ್ರಕ್ರಿಯೆ) ಸುಧಾರಣೆ ತರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನಗಳ ಪರಿಣಾಮವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಸರ್ಕಾರದ ಇಲಾಖೆಗಳು ತಮ್ಮ ಡಿಜಿಟಲ್ ಕೆವೈಸಿ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗುತ್ತದೆ. ಮುಖ ಊನಗೊಂಡವರು, ದೃಷ್ಟಿದೋಷ ಇರುವವರು, ಕಿವಿಯ ಸಮಸ್ಯೆ ಇರುವವರು, ಡಿಜಿಟಲ್ ಸಾಕ್ಷರತೆಯನ್ನು ಪೂರ್ಣ ಪ್ರಮಾಣದಲ್ಲಿ ಹೊಂದಿಲ್ಲದಿರುವವರ ಅಗತ್ಯಗಳಿಗೆ ಅನುಗುಣವಾಗಿ ಬದಲಾವಣೆಗಳನ್ನು ತರಬೇಕಿದೆ. ಡಿಜಿಟಲ್ ಕೆವೈಸಿ ಪ್ರಕ್ರಿಯೆಯು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಬ್ರೈಲ್ ಮತ್ತು ಧ್ವನಿ ಆಧಾರಿತ ಸೇವೆಗಳನ್ನು ರೂಪಿಸಬೇಕಿದೆ.
ಆ್ಯಸಿಡ್ ದಾಳಿಗೆ ಗುರಿಯಾದ ವ್ಯಕ್ತಿಯೊಬ್ಬರು ಸೇರಿದಂತೆ ಇತರ ಕೆಲವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಮಾತುಗಳನ್ನು ಹೇಳಿದೆ. ಆ್ಯಸಿಡ್ ದಾಳಿಗೆ ತುತ್ತಾದ ವ್ಯಕ್ತಿಯ ಕಣ್ಣುಗಳು ಊನಗೊಂಡಿದ್ದರ ಪರಿಣಾಮವಾಗಿ ಅವರಿಗೆ 2023ರಲ್ಲಿ ಬ್ಯಾಂಕ್ ಖಾತೆ ತೆರೆಯಲು ಆಗಿರಲಿಲ್ಲ. ಈಗಿರುವ ಕೆವೈಸಿ ನಿಯಮಗಳನ್ನು ಅಂಗವೈಕಲ್ಯದ ಕಾರಣಕ್ಕೆ ಪಾಲಿಸಲು ಸಾಧ್ಯವಾಗದೇ ಇರುವವರಿಗೆ ಹಲವು ಸೌಲಭ್ಯಗಳ ನಿರಾಕರಣೆ ಆಗುತ್ತಿದೆ. ಇಂಥವರು ಹಲವರಿದ್ದಾರೆ. ಡಿಜಿಟಲ್ ಕಂದಕದ ಪರಿಣಾಮವಾಗಿ ತೊಂದರೆಗೆ ಒಳಗಾಗಿರುವವರು ಗ್ರಾಮಾಂತರ ಪ್ರದೇಶಗಳಲ್ಲಿ, ಹಿರಿಯ ನಾಗರಿಕರಲ್ಲಿ, ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಲ್ಲಿ ಹಲವರಿದ್ದಾರೆ ಎಂದು ಕೋರ್ಟ್ ಹೇಳಿದೆ. ಎಲ್ಲ ವರ್ಗಗಳ ಜನರಿಗೆ ‘ಘನತೆಯ ಬದುಕನ್ನು ಖಾತರಿಪಡಿಸಲು’ ಡಿಜಿಟಲ್ ಕಂದಕವನ್ನು ಮುಚ್ಚುವ ಕೆಲಸ ಆಗಬೇಕು, ಏಕೆಂದರೆ ಎಲ್ಲರಿಗೂ ಡಿಜಿಟಲ್ ಹಕ್ಕುಗಳು ಇವೆ. ಸರ್ಕಾರದ ಎಲ್ಲ ಪೋರ್ಟಲ್‌ಗಳು, ಕಲಿಕಾ ವೇದಿಕೆಗಳು, ಹಣಕಾಸು ಸೇವೆಗಳನ್ನು ಒದಗಿಸುವ ಸಂಸ್ಥೆಗಳು ದುರ್ಬಲರಿಗೆ, ಸಮಾಜದಲ್ಲಿ ಉಪೇಕ್ಷೆಗೆ ಒಳಗಾದವರಿಗೆ ಸೇರಿ ‘ಎಲ್ಲರಿಗೂ ಲಭ್ಯವಾಗುವಂತೆ’ ಆದಾಗ ಮಾತ್ರ ನಿಜವಾದ ಸಮಾನತೆಯ ಸಾಕಾರ ಆಗುತ್ತದೆ. ಮಾನಸಿಕ ಅಥವಾ ಅಂಗ ವೈಕಲ್ಯಕ್ಕೆ ತುತ್ತಾದವರಿಗೆ ಸೇವೆಗಳನ್ನು ನಿರಾಕರಿಸಿರುವುದು ತಾರತಮ್ಯದ ನಡೆಯಾಗುತ್ತದೆ.
ಆದರೆ, ಇಂಥದ್ದೊಂದು ಅನ್ಯಾಯ ಮತ್ತು ತಾರತಮ್ಯವು ಇಷ್ಟು ದಿನ ವ್ಯವಸ್ಥೆಯ ಗಮನ ಸೆಳೆಯದೇ ಮುಂದುವರಿದಿತ್ತು ಎಂಬುದೇ ಬಹಳ ಗಂಭೀರವಾದ ಸಂಗತಿ. ಡಿಜಿಟಲ್ ಕಂದಕವನ್ನು ಮುಚ್ಚಬೇಕಿರುವುದು ನೀತಿ ನಿರೂಪಣೆಗೆ ಮಾತ್ರ ಸಂಬಂಧಿಸಿದ್ದಲ್ಲ, ಅದು ಸಾಂವಿಧಾನಿಕ ಅನಿವಾರ್ಯ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ನ್ಯಾಯಾಲಯವು ಒಳ್ಳೆಯ ಕೆಲಸ ಮಾಡಿದೆ. ತಂತ್ರಜ್ಞಾನದಲ್ಲಿನ ಮುನ್ನಡೆಯು ಎಲ್ಲ ಪ್ರಜೆಗಳ ಜೀವನದಲ್ಲಿ ಬದಲಾವಣೆ ತಂದಿರುವುದನ್ನು ಗುರುತಿಸಿರುವ ಸುಪ್ರೀಂ ಕೋರ್ಟ್, ಜೀವಿಸುವ ಸ್ವಾತಂತ್ರ್ಯವನ್ನು ಮರುವ್ಯಾಖ್ಯಾನಿಸಿ ಡಿಜಿಟಲ್ ಸೇವೆಗಳ ಲಭ್ಯತೆಯ ಹಕ್ಕನ್ನು ಅದರಲ್ಲಿ ಸೇರಿಸಿದೆ. ಡಿಜಿಟಲ್ ಸೇವೆಗಳ ಲಭ್ಯತೆಯನ್ನು ಮೂಲಭೂತ ಹಕ್ಕು ಎಂದು ಕೋರ್ಟ್ ಗುರುತಿಸಿರುವುದರಿಂದಾಗಿ, ಆ ಹಕ್ಕನ್ನು ನ್ಯಾಯಾಲಯಗಳ ಮೂಲಕ ಪಡೆದುಕೊಳ್ಳಲು ಅವಕಾಶ ಇರುವ ಕಾರಣದಿಂದಾಗಿ, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸುವುದು ಮುಂದಿನ ದಿನಗಳಲ್ಲಿ ಸರ್ಕಾರಗಳಿಗೆ ಕಷ್ಟವಾಗಬಹುದು. ಸುಪ್ರೀಂ ಕೋರ್ಟ್‌ನ ತೀರ್ಪು ಜನರಿಗೆ ಹೊಸ ಶಕ್ತಿ ನೀಡಿದೆ. ಏಕೆಂದರೆ, ಡಿಜಿಟಲ್ ಸಂಪರ್ಕವನ್ನು ಒದಗಿಸುವಲ್ಲಿನ ವೈಫಲ್ಯವನ್ನು ಇನ್ನು ಮುಂದೆ ನ್ಯಾಯಾಲಯಗಳ ಮೂಲಕ ಪ್ರಶ್ನಿಸಲು ಅವಕಾಶ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.