
ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ‘ಎಸ್‌ಐಆರ್’ ಬಗೆಗಿನ ದೂರುಗಳನ್ನು ಚುನಾವಣಾ ಆಯೋಗ ನಿರ್ಲಕ್ಷಿಸುತ್ತಿದೆ. ಈ ಧೋರಣೆ ಅದರ ವರ್ಚಸ್ಸಿಗೆ ಧಕ್ಕೆ ತರುವಂತಹದ್ದು.
ಒಂಬತ್ತು ರಾಜ್ಯ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ, ಬೂತ್ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ (ಬಿಎಲ್ಒ) ಮೇಲೆ ತೀವ್ರ ಒತ್ತಡ ಹಾಗೂ ಆತಂಕ ಸೃಷ್ಟಿಸುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ಕಡಿಮೆ ಗಡುವಿನಲ್ಲಿ ದೊಡ್ಡ ಗುರಿಯನ್ನು ಮುಟ್ಟಬೇಕಾದ ಒತ್ತಡ ಕೆಲವು ಬಿಎಲ್‌ಒಗಳ ಆತ್ಮಹತ್ಯೆಗೆ ಕಾರಣವಾಗಿದೆ ಹಾಗೂ ಹಲವರನ್ನು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ದೂಡಿದೆ ಎಂದು ಹೇಳಲಾಗುತ್ತಿದೆ. ಇಂಥ ದುರ್ಘಟನೆಗಳು ಎಸ್‌ಐಆರ್ ಪ್ರಕ್ರಿಯೆ ಜಾರಿಯಲ್ಲಿರುವ ಹಲವೆಡೆಗಳಲ್ಲಿ ವರದಿಯಾಗುತ್ತಿವೆ. ಬಿಎಲ್‌ಒಗಳ ಮೇಲೆ ಅವರ ಮೇಲಧಿಕಾರಿಗಳು ವಿಪರೀತ ಒತ್ತಡ ಹೇರುತ್ತಿದ್ದಾರೆ ಹಾಗೂ ಅವರ ಕೆಲಸವನ್ನು ರಾಜಕೀಯ ಪಕ್ಷಗಳು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ. ಈ ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ ಬಂದ ನಂತರ, ಭಾರತೀಯ ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆ ಕೊನೆಗೊಳ್ಳಬೇಕಾದ ಗಡುವನ್ನು ಒಂದು ವಾರ ವಿಸ್ತರಿಸಿದೆ. ಆದರೆ, ಅಧಿಕಾರಿಗಳು ಶಿಸ್ತುಕ್ರಮದ ಆತಂಕವಿಲ್ಲದೆ, ಇಡೀ ಪ್ರಕ್ರಿಯೆಯನ್ನು ಸುರಳೀತವಾಗಿ ಮುಗಿಸಲು ಹಾಗೂ ಮತದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಇಷ್ಟು ಕಡಿಮೆ ಅವಧಿ ಸಾಲದು. ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ಕೇರಳದಲ್ಲಿ ಎಸ್‌ಐಆರ್ ಕೂಡ ಸೇರಿಕೊಂಡು ಅಧಿಕಾರಿಗಳು ದುಪ್ಪಟ್ಟು ಒತ್ತಡ ಎದುರಿಸುತ್ತಿದ್ದಾರೆ. ಹಾಗಾಗಿ, ಕೇರಳದಲ್ಲಿನ ಎಸ್ಐಆರ್ ಪ್ರಕ್ರಿಯೆಯ ಗಡುವನ್ನು ಮತ್ತಷ್ಟು ವಿಸ್ತರಿಸುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಗಡುವು ವಿಸ್ತರಿಸಬೇಕೆಂದು ಕೇರಳ ಸರ್ಕಾರವೂ ಕೋರಿಕೊಂಡಿದ್ದು, ಆ ಮನವಿ ನ್ಯಾಯಸಮ್ಮತವೂ ಆಗಿದೆ.
ಎಸ್ಐಆರ್ ಪ್ರಕ್ರಿಯೆಯ ಮೊದಲ ಪ್ರಯೋಗಶಾಲೆ ಬಿಹಾರ. ವಿಧಾನಸಭಾ ಚುನಾವಣೆಗೂ ಮೊದಲು ನಡೆದ ಆ ಪ್ರಕ್ರಿಯೆ ಅತಿ ಅವಸರದಿಂದಲೂ, ಗೊಂದಲಗಳಿಂದಲೂ ಕೂಡಿತ್ತು. ಇದೀಗ, ಒಂದು ತಿಂಗಳ ಹಿಂದಷ್ಟೇ ದೇಶದ ವಿವಿಧ ಭಾಗಗಳಲ್ಲಿ ಎಸ್ಐಆರ್ ನಡೆಯುತ್ತಿದೆ. ಹಳೆಯ ತಪ್ಪುಗಳು, ಹಳೆಯದರ ಜೊತೆಗೆ ಸೇರಿಕೊಂಡಿರುವ ಹೊಸ ಸಮಸ್ಯೆಗಳು ಹಾಗೂ ಬಿಎಲ್‌ಒಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಧೋರಣೆ ಮುಂದುವರಿದಿದೆ. ಐವತ್ತು ಕೋಟಿ ಜನಸಂಖ್ಯೆಯನ್ನು ಒಳಗೊಂಡಿರುವ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗೊತ್ತುಪಡಿಸಿರುವ ಮೂರು ತಿಂಗಳ ಅವಧಿ ತೀರಾ ಕಡಿಮೆ. ಅರ್ಜಿ ನಮೂನೆಗಳ ವಿತರಣೆ, ಸ್ವೀಕೃತಿ, ಪರಿಶೀಲನೆ, ಮತದಾರರ ಕರಡುಪಟ್ಟಿಗಳ ಪ್ರಕಟಣೆ ಹಾಗೂ ಅಂತಿಮಪಟ್ಟಿಯನ್ನು ಹೊರತರುವ ಚಟುವಟಿಕೆಗಳೆಲ್ಲ ಈ ಕ್ಲುಪ್ತ ಅವಧಿಯಲ್ಲಿಯೇ ಮುಗಿಯಬೇಕಾಗಿದೆ. ಕೊನೆಯದಾಗಿ, 2003–2004ರಲ್ಲಿ ನಡೆದ ಇದೇ ರೀತಿಯ ಪರಿಷ್ಕಾರ ಪೂರ್ಣಗೊಳ್ಳಲು ಎರಡು ವರ್ಷಗಳ ಅವಧಿ ತೆಗೆದುಕೊಂಡಿತ್ತು. ಕಾಲಮಿತಿ, ಪರಿಷ್ಕರಣೆಯ ರೀತಿನೀತಿ ಹಾಗೂ ಆಯೋಗದ ಉದ್ದೇಶಗಳ ಬಗ್ಗೆ ಆಗ ಯಾವ ಗಂಭೀರ ದೂರುಗಳೂ ವ್ಯಕ್ತವಾಗಿರಲಿಲ್ಲ.
ಸಾವು–ನೋವಿನ ವರದಿಗಳ ನಡುವೆಯೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಹಾಗೂ ಯಾರಿಗೂ ತೊಂದರೆಯಾಗುತ್ತಿಲ್ಲ ಎಂದು ಆಯೋಗ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ. ಪ್ರಕ್ರಿಯೆಯ ಬಗೆಗಿನ ದೂರುಗಳನ್ನು ರಾಜಕೀಯಪ್ರೇರಿತ ಎಂದು ತಳ್ಳಿಹಾಕಿದೆ. ಆದರೆ, ಎಸ್‌ಐಆರ್‌ನಲ್ಲಿನ ತೊಡಕುಗಳ ಬಗ್ಗೆ ದೂರುತ್ತಿರುವ ರಾಜಕೀಯ ಪಕ್ಷಗಳು, ‘ಇಡೀ ಪ್ರಕ್ರಿಯೆಯೇ ರಾಜಕೀಯಪ್ರೇರಿತ’ ಎಂದು ಹೇಳಿವೆ. ಎಲ್ಲವೂ ಸರಿಯಾಗಿದೆ ಎನ್ನುವ ತನ್ನ ಮಾತಿಗೆ ಬಿಹಾರದಲ್ಲಿ ನಡೆದ ಪ್ರಕ್ರಿಯೆಯನ್ನು ಆಯೋಗ ನಿದರ್ಶನವಾಗಿ ಮುಂದಿಡುತ್ತಿದೆ. ಆದರೆ, ಬಿಹಾರದಲ್ಲಿ ಎಲ್ಲವೂ ಸರಿಯಾಗಿರಲಿಲ್ಲ ಹಾಗೂ ಇಡೀ ಕಸರತ್ತಿನಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಮಧ್ಯಪ್ರವೇಶಿಸಿ ನಿರ್ದೇಶನಗಳನ್ನು ನೀಡಿದ್ದನ್ನು ನೆನಪಿಸಿಕೊಳ್ಳಬಹುದು. ಬಿಹಾರದಲ್ಲಿ ಅನೇಕ ನೈಜ ಮತದಾರರು ಮತದಾರರ ಪಟ್ಟಿಗಳಿಂದ ಹೊರಗುಳಿದಿರುವ ಬಗ್ಗೆ ದೂರುಗಳಿವೆ. ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳಿಗಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಅಗತ್ಯವಿದೆ. ಆದರೆ, ಆ ಪ್ರಕ್ರಿಯೆ ಅನುಮಾನಕ್ಕೆ ಆಸ್ಪದವಾಗುವಂತೆ ನಡೆಯಬಾರದು. ಆಯೋಗ ಈಗಾಗಲೇ ತನ್ನ ವಿಶ್ವಾಸಾರ್ಹತೆಗೆ ಸಾಕಷ್ಟು ಧಕ್ಕೆ ತಂದುಕೊಂಡಿದೆ; ನಿರ್ಲಕ್ಷ್ಯ ಮತ್ತು ಸಂವೇದನಾರಾಹಿತ್ಯ ನಡವಳಿಕೆ ಮುಂದುವರಿದರೆ ಮತ್ತಷ್ಟು ಹಾನಿ ಮಾಡಿಕೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.