ADVERTISEMENT

ಸಂಪಾದಕೀಯ | ಅಸಾಧಾರಣ ಆರ್ಥಿಕ ಬೆಳವಣಿಗೆ: ಆತಂಕ–ಹಿಂಜರಿಕೆಗಳ ಸವಾಲು

ಸಂಪಾದಕೀಯ
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
   
ದೇಶದ ಸದ್ಯದ ಆರ್ಥಿಕತೆ ಬೆಳವಣಿಗೆ ಅನೂಹ್ಯವಾಗಿದ್ದರೂ, ಪ್ರಸಕ್ತ ಆರ್ಥಿಕ ವರ್ಷದ ಒಟ್ಟಾರೆ ಸಾಧನೆ ಇಷ್ಟೇ ಉತ್ತಮ ಆಗಿರುತ್ತದೆಂದು ನಿರೀಕ್ಷಿಸಲಾಗದು.

ಪ್ರಸಕ್ತ ಆರ್ಥಿಕ ವರ್ಷದ ಎರಡನೇ (ಜುಲೈ–ಸೆಪ್ಟೆಂಬರ್‌) ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಸಾಧಿಸಿರುವ ಶೇ 8.2ರ ಬೆಳವಣಿಗೆ ಎಲ್ಲ ನಿರೀಕ್ಷೆ ಮತ್ತು ಅಂದಾಜುಗಳನ್ನು ಮೀರಿದ ಮುನ್ನಡೆಯಾಗಿದೆ. ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ದರ ಪರಿಷ್ಕರಣೆಯಿಂದ ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿರುವುದು, ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಉತ್ತಮ ಸ್ಥಿತಿ ತಲಪಲು ಕಾರಣವಾಗಿದೆ. ಕಳೆದ ಆರು ತ್ರೈಮಾಸಿಕಗಳಲ್ಲಿ ಸಾಧಿಸಿರುವ ಗರಿಷ್ಠಮಟ್ಟದ ಬೆಳವಣಿಗೆ ಇದಾಗಿದ್ದು, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಂದಾಜು ಮಾಡಿದ್ದ ಶೇ 7ರ ಬೆಳವಣಿಗೆಗಿಂತಲೂ ಹೆಚ್ಚಿನ ಸಾಧನೆಯಾಗಿದೆ. ಆರ್ಥಿಕ ತಜ್ಞರ ಗುರಿಯೂ ಶೇ 7ರಷ್ಟೇ ಇತ್ತು. ಎರಡನೇ ತ್ರೈಮಾಸಿಕದ ಅವಧಿಯಲ್ಲಿ ಅಮೆರಿಕ ಹೇರಿದ ಕಠಿಣ ಸುಂಕ ನೀತಿಯು ದೇಶದ ರಫ್ತು ವಲಯದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇದರಿಂದ, ಆರ್ಥಿಕತೆ ಬೆಳವಣಿಗೆಯು ನಿರೀಕ್ಷೆಗಿಂತ ಕಡಿಮೆಯಾಗಲಿದೆ ಎಂದು ಆರ್‌ಬಿಐ ಅಂದಾಜು ಮಾಡಿತ್ತು. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ 5.6ರಷ್ಟು ದಾಖಲಾಗಿತ್ತು. ಮೊದಲ ತ್ರೈಮಾಸಿಕದಲ್ಲಿನ ಶೇ 7ರ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದ ಬೆಳವಣಿಗೆಯು ಶೇ 8ಕ್ಕೆ ತಲಪಿದೆ ಮತ್ತು ಈ ಪ್ರಗತಿಯು ಅಸಾಧಾರಣ ಆದುದಾಗಿದೆ.

ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಪ್ರಕಾರ, ಕೈಗಾರಿಕಾ ಉತ್ಪಾದನೆ ವಲಯದ ಬೆಳವಣಿಗೆಯು ಶೇ 8.1ರಷ್ಟು ಹಾಗೂ ಸೇವಾ ವಲಯ ಶೇ 9.2ರಷ್ಟು ಬೆಳವಣಿಗೆ ಸಾಧಿಸಿದೆ. ತಯಾರಿಕಾ ವಲಯವು ಆರು ತ್ರೈಮಾಸಿಕಗಳ ಗರಿಷ್ಠ ಸಾಧನೆಯಾದ ಶೇ 9.1ರಷ್ಟು ಬೆಳವಣಿಗೆ ದಾಖಲಿಸಿದೆ. ಈ ದರ ಕಳೆದ ತ್ರೈಮಾಸಿಕದಲ್ಲಿ ಶೇ 7.7ರಷ್ಟಿತ್ತು. ನಿರ್ಮಾಣ ವಲಯವೂ ಶೇ 7.2ರಷ್ಟು ಬೆಳವಣಿಗೆ ಕಂಡಿದೆ. ಹಣಕಾಸು, ರಿಯಲ್‌ ಎಸ್ಟೇಟ್‌ ಮತ್ತು ವೃತ್ತಿಪರ ಸೇವೆಗಳನ್ನು ಒಳಗೊಂಡಿರುವ ಸೇವಾ ವಲಯವು ಕಳೆದ ಒಂಬತ್ತು ತ್ರೈಮಾಸಿಕಗಳ ಗರಿಷ್ಠ ಮಟ್ಟವಾದ ಶೇ 10.2ರಷ್ಟು ಬೆಳವಣಿಗೆ ದಾಖಲಿಸಿದೆ. ಕುಟುಂಬಗಳಿಂದ ಸರಕುಗಳ ಖರೀದಿ ಮತ್ತು ಬಳಕೆಗೆ ಮಾಡುವ ವೆಚ್ಚವು ಜಿಡಿಪಿ ಪ್ರಗತಿಗೆ ಶೇ 60ರಷ್ಟು ಕೊಡುಗೆ ನೀಡುತ್ತದೆ. ಈ ಬಳಕೆಯ ವೆಚ್ಚ ಶೇ 7.9ರಷ್ಟು ಹೆಚ್ಚಾಗಿದೆ. ಈ ಪ್ರಮಾಣ ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇ 6.4ರಷ್ಟಿತ್ತು. ಆದರೆ, ಕೃಷಿ ವಲಯದ ಬೆಳವಣಿಗೆಯು ಶೇ 3.5ಕ್ಕೆ ಕುಸಿದಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಶೇ 4.1ರಷ್ಟು ಬೆಳವಣಿಗೆ ಕಂಡಿತ್ತು. ಈ ನಡುವೆಯೂ, ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಸುಧಾರಣೆ ಕಂಡಿದೆ. 

ಜಿಡಿಪಿ ದರ ಉತ್ತಮ ಸ್ಥಿತಿಯಲ್ಲಿರುವುದು ಸಮಾಧಾನಕರ ಸಂಗತಿಯಾದರೂ, ಕಳವಳಕ್ಕೆ ಕಾರಣಗಳೂ ಇವೆ. ಅಮೆರಿಕದೊಂದಿಗಿನ ವಾಣಿಜ್ಯ ಒಪ್ಪಂದಕ್ಕೆ ಸಂಬಂಧಿಸಿದ ಡೋಲಾಯಮಾನ ಸ್ಥಿತಿ ಮುಂದುವರಿದಿದೆ. ವಿಶ್ವ ವಾಣಿಜ್ಯ ದೃಷ್ಟಿಕೋನವೂ ದುರ್ಬಲವಾಗಿ ಗೋಚರಿಸುತ್ತಿದೆ. ಹಣದುಬ್ಬರಕ್ಕೆ ಅನುಗುಣವಾಗಿ ನೈಜ ಜಿಡಿಪಿ ದರವು ನಿರೀಕ್ಷೆಗಿಂತ ಹೆಚ್ಚಾಗಿದ್ದರೂ, ಸಾಂಕೇತಿಕ (ನಾಮಿನಲ್‌) ಜಿಡಿಪಿ ದರ ಕಡಿಮೆ ಇರುವುದು ಕಳವಳಕಾರಿ ಸಂಗತಿಯಾಗಿದೆ. ಇತ್ತೀಚಿನ ‘ಐಎಂಎಫ್’ ವರದಿಯು ಭಾರತದ ಜಿಡಿಪಿ ದತ್ತಾಂಶಗಳಿಗೆ ‘ಸಿ’ ಗ್ರೇಡ್‌ ನೀಡಿರುವುದನ್ನು ಇಲ್ಲಿ ಗಮನಿಸಬಹುದು. ಈ ಶ್ರೇಯಾಂಕವು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ದತ್ತಾಂಶಗಳ ವಿಶ್ವಾಸಾರ್ಹತೆಯನ್ನು ಅನುಮಾನದಿಂದ ನೋಡಲು ಕಾರಣವಾಗುತ್ತದೆ. ಆರ್ಥಿಕತೆ ಬೆಳವಣಿಗೆಗೆ ಹಬ್ಬಗಳು ಚೋದಕವಾಗಿ ಪರಿಣಮಿಸಿದ್ದರೂ, ಅದು ನಿರಂತರ ಪ್ರಕ್ರಿಯೆ ಆಗಿರಬೇಕೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಖಾಸಗಿ ವಲಯದಲ್ಲಿ ಬಂಡವಾಳ ಹೂಡಿಕೆ ಕೂಡ ಇನ್ನೂ ಚುರುಕಾಗಿಲ್ಲ. ಈ ಹೂಡಿಕೆ ಸುಧಾರಿಸದೆ ಹೋದಲ್ಲಿ ಸುಸ್ಥಿರ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ. ಈ ಎಲ್ಲ ಗೊಂದಲಗಳ ಕಾರಣದಿಂದಾಗಿ, ಇಡೀ ಆರ್ಥಿಕ ವರ್ಷದ ಬೆಳವಣಿಗೆಯನ್ನು ಶೇ 7ಕ್ಕೆ ಗೊತ್ತುಪಡಿಸಿರುವ ಸರ್ಕಾರದ ನಿರ್ಧಾರ ಅತೀವ ಆಶಾವಾದದಿಂದ ಕೂಡಿರುವಂತೆ ಭಾಸವಾಗುತ್ತಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.