ವ್ಯವಸ್ಥೆಯಲ್ಲಿನ ನೈತಿಕ ಅಧಃಪತನದ ಸಂಕೇತದಂತೆ ಸೇತುವೆಗಳು ಕುಸಿಯುತ್ತಿವೆ. ಸೇತುವೆಗಳ ನಿರ್ವಹಣೆ ಹಾಗೂ ದುರಸ್ತಿ ಸರ್ಕಾರಗಳಿಗೆ ಆದ್ಯತೆಯ ಕೆಲಸ ಆಗಬೇಕು.
ಗುಜರಾತ್‌ನ ವಡೋದರಾದಲ್ಲಿ ಮಹಿಸಾಗರ ನದಿಗೆ ನಿರ್ಮಿಸಿದ್ದ, 40 ವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದುಬಿದ್ದು ಕನಿಷ್ಠ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದ ಹಲವು ಕಡೆಗಳಿಂದ ವರದಿಯಾಗುತ್ತಿರುವ ಸೇತುವೆ ಕುಸಿತದ ಘಟನೆಗಳಲ್ಲಿ ಇದು ಈಚೆಗಿನದು. ವಡೋದರಾದ ಸೇತುವೆಯ ಒಂದು ಭಾಗವು ಕುಸಿದು ನದಿಗೆ ಬಿದ್ದಾಗ ಅದರ ಮೇಲೆ ವಾಹನಗಳು ಇದ್ದವು. ಕೆಲವರಿಗೆ ಜೀವ ಉಳಿಸಿಕೊಳ್ಳಲು ಯಾವ ಅವಕಾಶವೂ ಸಿಗಲಿಲ್ಲ.
ಈಚೆಗೆ ಕೆಲವು ವಾರಗಳಲ್ಲಿ ವರದಿಯಾಗಿರುವ ಸೇತುವೆ ಕುಸಿತದ ಘಟನೆಗಳಲ್ಲಿ ಇದು ಮೂರನೆಯದು. ಕಳೆದ ತಿಂಗಳು ಪುಣೆಯಲ್ಲಿ ತೂಗುಸೇತುವೆಯೊಂದು ಕುಸಿದು ನಾಲ್ಕು ಮಂದಿ ಮೃತಪಟ್ಟಿದ್ದರು. ಅಸ್ಸಾಂನಲ್ಲಿ ಮೂರು ವಾರಗಳ ಹಿಂದೆ ಆಗತಾನೇ ದುರಸ್ತಿ ಆಗಿದ್ದ ಸೇತುವೆಯೊಂದು ಕುಸಿದು ಬಿದ್ದಿತ್ತು. ಬಿಹಾರದಲ್ಲಿ ಸೇತುವೆ ಕುಸಿತದ 12 ಪ್ರಕರಣಗಳು ಕಳೆದ ವರ್ಷ ವರದಿಯಾಗಿವೆ. ಗುಜರಾತ್‌ನಲ್ಲಿ ಕೂಡ ಈಚಿನ ವರ್ಷಗಳಲ್ಲಿ ಸೇತುವೆ ಹಾಗೂ ಮೇಲ್ಸೇತುವೆ ಕುಸಿತದ ಹಲವು ಪ್ರಕರಣಗಳು ನಡೆದಿವೆ. ಮೊರ್ಬಿ ನದಿಗೆ ನಿರ್ಮಿಸಿದ್ದ ತೂಗುಸೇತುವೆಯೊಂದು 2022ರ ಅಕ್ಟೋಬರ್‌ನಲ್ಲಿ ಕುಸಿದು 140ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡರು. ಮೊರ್ಬಿ ಸೇತುವೆಯನ್ನು ರಿಪೇರಿ ಮಾಡಿ ಆಗಷ್ಟೇ ಬಳಕೆಗೆ ಮುಕ್ತವಾಗಿಸಲಾಗಿತ್ತು.
ವಡೋದರಾ ಸೇತುವೆಯ ಸುರಕ್ಷತೆ ಬಗ್ಗೆ ಕೆಲವು ದೂರುಗಳು ಇವೆ. ಆ ದೂರುಗಳನ್ನು, ಸೇತುವೆಯನ್ನು ಬಳಸುವ ಜನರು ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಕಳೆದ ವರ್ಷ ರಿಪೇರಿ ಮಾಡಲಾಗಿತ್ತು ಎಂದು ಜಿಲ್ಲಾಡಳಿತವು ಹೇಳಿದ್ದ ಸೇತುವೆಯ ಕುಸಿತದ ಬಗ್ಗೆ ಗುಜರಾತ್ ಸರ್ಕಾರವು ತನಿಖೆಗೆ ಆದೇಶಿಸಿದೆ. ಹೊಸದಾಗಿ ನಿರ್ಮಾಣ ಆಗಿರುವ ಹಲವು ಸೇತುವೆಗಳ ಗುಣಮಟ್ಟವು ಕಳವಳಕಾರಿ ಆಗಿದೆ. ನಿರ್ಮಾಣ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಸರಕುಗಳನ್ನು ಬಳಸುವುದು ಹಾಗೂ ಪಾಲಿಸಬೇಕಿರುವ ಅತ್ಯುತ್ತಮ ಮಾನದಂಡಗಳನ್ನು ಪಾಲಿಸದೆ ಇರುವುದು ನಡೆದೇ ಇದೆ. ಗುತ್ತಿಗೆ ಪಡೆದವರು ಅಕ್ರಮವಾಗಿ ಲಾಭ ಮಾಡಿಕೊಳ್ಳುವುದರ ಮೇಲೆ ಕಣ್ಣಿಟ್ಟಿರುತ್ತಾರೆ; ಲಾಭದಲ್ಲಿ ಒಂದಿಷ್ಟು ಪಾಲನ್ನು ಅವರು ಅಧಿಕಾರಿಗಳಿಗೂ ರಾಜಕೀಯ ಮುಖಂಡರಿಗೂ ತಲುಪಿಸುವ ಪದ್ಧತಿ ಚಾಲ್ತಿಯಲ್ಲಿದೆ.
ರಿಪೇರಿ ಕೆಲಸಗಳು ತೃಪ್ತಿಕರ ಮಟ್ಟದಲ್ಲಿ ಇರುವುದಿಲ್ಲ, ಅಲಂಕಾರಕ್ಕೆ ಎಂಬಂತೆ ಮಾತ್ರವೇ ಕೆಲಸಗಳು ನಡೆದಿರುತ್ತವೆ. ಹಿಂದೆ ನಡೆದ ದುರಂತಗಳಿಂದ ನಾವು ಯಾವ ಪಾಠವನ್ನೂ ಕಲಿತಿಲ್ಲ. ಸಾರ್ವಜನಿಕರ ಸುರಕ್ಷತೆ ಹಾಗೂ ಸಾರ್ವಜನಿಕರ ಒಳಿತಿಗಿಂತ ಹೆಚ್ಚಿನ ಮಹತ್ವವು ಕೆಲವೇ ಕೆಲವರು ಹಣಕಾಸಿನ ಲಾಭ ಮಾಡಿಕೊಳ್ಳುವುದಕ್ಕೆ ಸಿಗುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ನಿರ್ಮಾಣ ಆದ ಸರಿಸುಮಾರು 100ಕ್ಕೂ ಹೆಚ್ಚು ಸೇತುವೆಗಳು ಇಂದಿಗೂ ಬಳಕೆಯಲ್ಲಿ ಇವೆ ಎಂದು ಅಂದಾಜು ಮಾಡಲಾಗಿದೆ. ಈ ಸೇತುವೆಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಸ್ವಾತಂತ್ರ್ಯ ಬಂದ ನಂತರದಲ್ಲಿ ನಿರ್ಮಾಣವಾದ ಹಲವು ಸೇತುವೆಗಳ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳಿವೆ. ಸೇತುವೆಗಳ ಸುರಕ್ಷತೆಯ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಲಕ್ಷ್ಯ ವಹಿಸಿಲ್ಲ. ಈಗ ವರದಿಯಾಗಿರುವ ಘಟನೆಗಳು ಅಧಿಕಾರಿಗಳಿಗೆ ಇಂತಹ ನಿರ್ಮಾಣಗಳನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಲು, ಅವುಗಳ ರಚನೆಯು ಜನರ ಬಳಕೆಗೆ ಸುರಕ್ಷಿತವಾಗಿ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಒಂದು ಕಾರಣವಾಗಿ ಒದಗಿಬರಬೇಕು.
ಅವುಗಳ ರಿಪೇರಿ ಹಾಗೂ ನಿರ್ವಹಣೆಯನ್ನು ಆದ್ಯತೆಯ ಕೆಲಸವನ್ನಾಗಿ ಕೈಗೆತ್ತಿಕೊಳ್ಳಬೇಕು. ಆದರೆ, ಸೇತುವೆಗಳು ಕುಸಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಉತ್ತರದಾಯಿತ್ವ ನಿಗದಿ ಮಾಡುವ ಕೆಲಸ ಆಗುವುದಿಲ್ಲ. ಸೇತುವೆಗಳ ಕುಸಿತವು ‘ಅಪಘಾತದ ಘಟನೆ’ಗಳಷ್ಟೇ ಅಲ್ಲ; ಅವು ನಿರ್ವಹಣೆಯ ಕೆಲಸವು ಬಹುಕಾಲದಿಂದ ಆಗದೆ ಇರುವುದರ ಫಲವೂ ಹೌದು. ವಡೋದರಾ ಸೇತುವೆಯು ಸುರಕ್ಷಿತವಾಗಿದೆ, ‘ಪ್ರಮುಖ ಲೋಪಗಳು’ ಅದರಲ್ಲಿ ಇಲ್ಲ ಎಂಬ ಪ್ರಮಾಣಪತ್ರ ನೀಡಿದ ಕೆಲವು ತಿಂಗಳಲ್ಲೇ ಅದು ಕುಸಿದಿದೆ. ಸುರಕ್ಷಿತವಾಗಿದೆ ಎಂಬ ಪ್ರಮಾಣ ಪತ್ರವೇ ಲೋಪಗಳಿಂದ ಕೂಡಿದ್ದರೆ ಜನರ ಜೀವವು ಅಪಾಯಕ್ಕೆ ಸಿಲುಕುತ್ತದೆ ಹಾಗೂ ನೂರಾರು ಕೋಟಿ ರೂಪಾಯಿ ನಷ್ಟ ಸಂಭವಿಸುತ್ತದೆ. ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ. ತಪ್ಪು ತಿದ್ದಿಕೊಳ್ಳುವುದಕ್ಕೆ ಇದು ಸರಿಯಾದ ಸಮಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.