ADVERTISEMENT

ಸಂಪಾದಕೀಯ | ಭಾರತದಲ್ಲಿ ಮಹಿಳಾ ಟೆನಿಸ್‌ಗೆ ಮೆರುಗು ತಂದ ಸಾನಿಯಾ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:00 IST
Last Updated 22 ಫೆಬ್ರುವರಿ 2023, 22:00 IST
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ   

ಭಾರತದಲ್ಲಿ ಮಹಿಳಾ ಟೆನಿಸ್‌ಗೆ ಹೊಸ ಹೊಳಪು ಮೂಡಿಸಿದ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಮಹಿಳೆಯರು ಯಾವುದೇ ಕಠಿಣ ಸವಾಲನ್ನು ಎದುರಿಸಿ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ದಿಟ್ಟ ಆಟಗಾರ್ತಿ ಸಾನಿಯಾ. ದುಬೈ ಡ್ಯೂಟಿ ಫ್ರೀ ಟೆನಿಸ್ ಟೂರ್ನಿಯಲ್ಲಿ ಸೋತ ನಂತರ ಅವರ ವೃತ್ತಿಬದುಕಿಗೆ ತೆರೆಬಿದ್ದಿದೆ. ಈ ಎರಡು ದಶಕಗಳಲ್ಲಿ ಅವರು ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಹಾದಿಯಲ್ಲಿ ತಮಗೆ ಎದುರಾದ ಕಠಿಣ ಸವಾಲುಗಳನ್ನು ಎದುರಿಸಿದ ರೀತಿ ಅಸಾಧಾರಣವಾದುದು. ವೃತ್ತಿ ಜೀವನದಲ್ಲಿ ಎದುರಾದ ವಿಭಿನ್ನ ಸವಾಲುಗಳಿಗೆ ಸೂಕ್ತ ಉತ್ತರ ನೀಡುತ್ತಲೇ ಬೆಳೆದ ಸಾನಿಯಾ ಈಗ ದಂತಕಥೆಯಾಗಿದ್ದಾರೆ.

ಅವರ ವಿದಾಯದಿಂದ ತೆರವಾದ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆಯೂ ಕಾಡುತ್ತಿದೆ. ಆರನೇ ವಯಸ್ಸಿನಲ್ಲಿ ಟೆನಿಸ್‌ನತ್ತ ಆಕರ್ಷಿತರಾದ ಸಾನಿಯಾಗೆ ಮೊದಲ ಕೋಚ್ ತಂದೆ ಇಮ್ರಾನ್ ಮಿರ್ಜಾ ಅವರು. ತಾಯಿ ನಸೀಮಾ ಅವರ ಬೆಂಬಲವೂ ಅಪಾರ. ಮಗಳಲ್ಲಿ ಇದ್ದ ಪ್ರತಿಭೆಯನ್ನು ಅಂದು ಇಮ್ರಾನ್ ಗುರುತಿಸಿದ್ದು ಭಾರತದ ಕ್ರೀಡೆಗೆ ಬಹುದೊಡ್ಡ ಕೊಡುಗೆಯಾಯಿತು. ಹೈದರಾಬಾದ್‌ನಲ್ಲಿ ತರಬೇತಿ ಪಡೆದ ಸಾನಿಯಾ, 2002ರಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಾರಂಭಿಸಿದರು. ಆಫ್ರೊ ಏಷ್ಯನ್ ಗೇಮ್ಸ್‌, ಏಷ್ಯನ್ ಗೇಮ್ಸ್‌, ಸ್ಯಾಫ್‌ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದರು. 2005ರಲ್ಲಿ ಗ್ರ್ಯಾನ್‌ಸ್ಲಾಮ್‌ ಅಂಗಳಕ್ಕೂ ಕಾಲಿಟ್ಟರು. ಸಿಂಗಲ್ಸ್‌ನಲ್ಲಿ ಛಾಪು ಮೂಡಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಮಹಿಳೆಯರ ಡಬಲ್ಸ್‌ನಲ್ಲಿ ರುಷ್ಮಿ
ಚಕ್ರವರ್ತಿಯವರಂತಹ ಪ್ರಮುಖರೊಂದಿಗೆ ಆಡಿದರು. ರ್‍ಯಾಂಕಿಂಗ್‌ನಲ್ಲಿ ಅಗ್ರ ನೂರರೊಳಗೆ ಸ್ಥಾನ ಪಡೆದದ್ದು ಕೂಡ ಸಾನಿಯಾರ ಪ್ರಮುಖ ಸಾಧನೆ.

ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಡಬಲ್ಸ್‌ನಲ್ಲಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ತಲಾ ಮೂರು ಪ್ರಶಸ್ತಿ ಗೆದ್ದ ಹೆಗ್ಗಳಿಕೆಯೂ ಅವರದ್ದಾಗಿದೆ. ಆದರೂ ಅವರಿಗೆ ಕಿರಿಕಿರಿ ಮೂಡಿಸುವಂತಹ ಘಟನೆಗಳು ಹಲವು ಬಾರಿ ನಡೆದವು. ಅವರು ಆಡುವಾಗ ಧರಿಸುತ್ತಿದ್ದ ಪೋಷಾಕಿನ ವಿರುದ್ಧ ಸ್ವಧರ್ಮೀಯರಿಂದಲೇ ಫತ್ವಾ ಜಾರಿಯಾಯಿತು. ಇಸ್ರೇಲ್‌ ಆಟಗಾರ್ತಿ ಶಹರ್ ಪಿಯರ್ ಜೊತೆ ಆಡುವುದನ್ನು ಇಸ್ಲಾಮಿಕ್ ಸಂಘಟನೆಗಳು ವಿರೋಧಿಸಿದವು. ಆದರೆ ಈ ಜೋಡಿಯು 2007ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಡಬ್ಲ್ಯುಟಿಎ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಯಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಕೆಲವು ತಿಂಗಳು ಬಾಕಿಯಿದ್ದಾಗ ಮಣಿಕಟ್ಟಿನ ನೋವು ಕಾಡಿತು. ಅಪ್ಪನ ಪ್ರೇರಣೆಯ ನುಡಿಗಳೇ ಅವರಿಗೆ ಔಷಧಿಯಾದವು. ನೋವು ನುಂಗಿ ಪುಟಿದೆದ್ದರು. ಒಲಿಂಪಿಕ್ಸ್ ಸಿಂಗಲ್ಸ್‌ನಲ್ಲಿ ಆಡಿದರು. ಸುನಿತಾ ರಾವ್ ಅವರೊಂದಿಗೆ ಡಬಲ್ಸ್‌ನಲ್ಲಿ ಕಣಕ್ಕಿಳಿದರು.

ADVERTISEMENT

ನಂತರದ ದಿನಗಳಲ್ಲಿ ಮಣಿಕಟ್ಟಿನ ಶಸ್ತ್ರಚಿಕಿತ್ಸೆಯೂ ಆಯಿತು. ಇದರ ನಂತರ ಅವರಿಗೆ ಸಿಂಗಲ್ಸ್ ಆಡಲು ಸಾಧ್ಯವಾಗಲಿಲ್ಲ. 2010ರಲ್ಲಿ ಅವರು ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲಿಕ್ ಅವರನ್ನು ವಿವಾಹವಾದಾಗ ಮತ್ತೊಂದು ವಿವಾದ ಎದುರಾಯಿತು. ‘ದೇಶ ವಿರೋಧಿ’ ಎಂಬ ಟೀಕೆಯನ್ನೂ ಎದುರಿಸಬೇಕಾಯಿತು. ಆದರೆ ಭಾರತಕ್ಕಾಗಿ ಅವರ ಬದ್ಧತೆ ಎಂದಿಗೂ ಬದಲಾಗಲಿಲ್ಲ. 2012ರ ಲಂಡನ್ ಒಲಿಂಪಿಕ್ಸ್‌ನ ವನಿತೆಯರ ಡಬಲ್ಸ್‌ನಲ್ಲಿ ರುಷ್ಮಿ ಚಕ್ರವರ್ತಿ ಜೊತೆ ಆಡಿ ಗಮನಸೆಳೆದರು. ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆಗೆ ಕ್ವಾರ್ಟರ್‌ ಫೈನಲ್ ತಲುಪಿ ದಾಖಲೆ ಬರೆದರು. 2015ರಲ್ಲಿ ಸ್ವಿಟ್ಜರ್ಲೆಂಡ್‌ನ ದಿಗ್ಗಜ ಆಟಗಾರ್ತಿ ಮಾರ್ಟಿನಾ ಹಿಂಗಿಸ್‌ ಅವರೊಂದಿಗೆ ವಿಂಬಲ್ಡನ್‌ ಡಬಲ್ಸ್‌ ಕಿರೀಟ ಗೆದ್ದಿದ್ದು ಅವರ ಮಹತ್ವದ ಸಾಧನೆ. ಇದೇ ಜೋಡಿ ಅಮೆರಿಕ ಓಪನ್‌ನಲ್ಲಿಯೂ ಮಿಂಚಿತು. 2016ರಲ್ಲಿ ಫ್ರೆಂಚ್ ಓಪನ್‌ ಮಿಶ್ರ ಡಬಲ್ಸ್‌ನಲ್ಲಿ ಇವಾನ್ ದೊಡಿಗ್ ಜೊತೆಗೆ ರನ್ನರ್ಸ್ ಅಪ್ ಕೂಡ ಆದರು. ಅದೇ ವರ್ಷ ರಿಯೊ ಒಲಿಂಪಿಕ್‌ ಕೂಟದಲ್ಲಿಯೂ ಆಡಿದರು.

ಜೀವನದುದ್ದಕ್ಕೂ ಸವಾಲುಗಳಿಗೆ ಸಾಧನೆಯ ಮೂಲಕ ಪ್ರತ್ಯುತ್ತರ ಕೊಡುತ್ತಲೇ ಬೆಳೆದರು. ನಿವೃತ್ತಿಯ ನಂತರವೂ ಅವರನ್ನು ವಿವಾದಗಳು ಬೆನ್ನುಹತ್ತುವ ಸೂಚನೆ ಕಾಣುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅವರನ್ನು ಮೆಂಟರ್ ಆಗಿ ನೇಮಕ ಮಾಡಲಾಗಿದ್ದು, ಟೆನಿಸ್‌ಗೂ ಕ್ರಿಕೆಟ್‌ಗೂ ಏನು ಸಂಬಂಧ ಎಂಬ ವ್ಯಂಗ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಆದರೆ ಸಾನಿಯಾ ಸಾಧನೆ ಬರೀ ಟೆನಿಸ್‌ಗೆ ಸೀಮಿತವಲ್ಲ. ಯಾವುದೇ ಕ್ಷೇತ್ರದಲ್ಲಿ ಬೆಳೆಯುವ ಕನಸು ಕಾಣುವ ಎಲ್ಲ ಯುವತಿಯರಿಗೂ ಸ್ಫೂರ್ತಿದಾಯಕ ಎಂಬುದರಲ್ಲಿ ಅನುಮಾನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.