ADVERTISEMENT

ಸಂಪಾದಕೀಯ | ಅಂತರಧರ್ಮೀಯ ವಿವಾಹ ದಂಪತಿ ಮೇಲೆ ಕಣ್ಗಾವಲು ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 21:45 IST
Last Updated 18 ಡಿಸೆಂಬರ್ 2022, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಿನ್ನ ಧರ್ಮಗಳಿಗೆ ಸೇರಿದ ಜನರು ಮದುವೆಯಾದರೆ ಅವರ ಮೇಲೆ ಕಣ್ಗಾವಲು ಇರಿಸುವುದಕ್ಕೆ ಸಮಿತಿಯೊಂದನ್ನು ರಚಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ತಪ್ಪು ಮತ್ತು ಪೌರರ ಹಕ್ಕುಗಳ ಉಲ್ಲಂಘನೆ. ಅಂತರಧರ್ಮೀಯ ಮತ್ತು ಅಂತರ್ಜಾತಿ ಈ ಎರಡೂ ಬಗೆಯ ಮದುವೆಗಳ ಮೇಲೆ ಕಣ್ಗಾವಲು ಇರಿಸಲು ಸರ್ಕಾರವು ಮೊದಲು ನಿರ್ಧರಿಸಿತ್ತು. ಬಳಿಕ, ಅಂತರ್ಜಾತಿ ಮದುವೆಗಳನ್ನು ಕೈಬಿಡಲಾಯಿತು.ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸಬೇಕು ಎನ್ನುವುದು ಸರ್ಕಾರದ ನೀತಿಯೇ ಆಗಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತಂದ ಬಳಿಕ ಈ ನಿರ್ಧಾರಕ್ಕೆ ಬರಲಾಯಿತು. ಆದರೆ, ಸಮಿತಿಯ ಮೂಲ ಯೋಜನೆಯನ್ನು ಗಮನಿಸಿದರೆ ಅಂತರ್ಜಾತಿ ಮತ್ತು ಅಂತರಧರ್ಮೀಯ ಮದುವೆಗಳ ವಿಚಾರದಲ್ಲಿ ಸರ್ಕಾರದ ಯೋಚನೆ ಹೇಗಿದೆ ಎಂಬುದು ತಿಳಿಯುತ್ತದೆ.

ಅಂತರಧರ್ಮೀಯ ಮದುವೆ ಆದ ಜೋಡಿಯ ಮಾಹಿತಿ ಕಲೆ ಹಾಕುವುದು ಮತ್ತು ಮಹಿಳೆಯು ತನ್ನ ತವರು ಮನೆಯನ್ನು ತೊರೆದು ಬಂದಿದ್ದರೆ ಆ ಕುಟುಂಬದ ಬಗ್ಗೆಯೂ ಮಾಹಿತಿ ಸಂಗ್ರಹಿಸುವುದು ಸಮಿತಿಯ ಹೊಣೆಗಾರಿಕೆಯಾಗಿದೆ. ಮಹಿಳೆಯರಿಗಾಗಿ ಜಿಲ್ಲಾ ಮಟ್ಟದಲ್ಲಿ ಇರುವ ಕಾರ್ಯಕ್ರಮಗಳ ಉಸ್ತವಾರಿಯನ್ನೂ 13 ಸದಸ್ಯರ ಈ ಸಮಿತಿಯು ನೋಡಿಕೊಳ್ಳಲಿದೆ. ಸರ್ಕಾರ ಮತ್ತು ಸರ್ಕಾರೇತರ ಕ್ಷೇತ್ರಗಳ ಪ್ರತಿನಿಧಿಗಳು ಸಮಿತಿಯಲ್ಲಿ ಇರಲಿದ್ದಾರೆ. ಇದು, ಆಪ್ತಸಮಾಲೋಚನೆ ಪಡೆದುಕೊಳ್ಳಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮಹಿಳೆಯರು ಮತ್ತು ಅವರ ಕುಟುಂಬಗಳಿಗಾಗಿ ಇರುವ ವೇದಿಕೆಯಾಗಿದೆ.

ಮಹಿಳೆಯರ ಅಭಿವೃದ್ಧಿಯನ್ನು ನೋಡಿ ಕೊಳ್ಳುವುದು ಸಮಿತಿಯ ಉದ್ದೇಶ ಎಂದು ಹೇಳಲಾಗಿದ್ದರೂ ವಾಸ್ತವದಲ್ಲಿ ಅದಕ್ಕೆ ವ್ಯತಿರಿಕ್ತವಾದ ಉದ್ದೇಶವನ್ನು ಹೊಂದಿದೆ. ಮುಂಬೈ ನಿವಾಸಿ ಶ್ರದ್ಧಾ ವಾಲಕರ್‌ ಅವರನ್ನು ಅವರ ಸಹಜೀವನದ ಸಂಗಾತಿ ಆಫ್ತಾಬ್‌ ‍ಪೂನಾವಾಲಾ ದೆಹಲಿಯಲ್ಲಿ ಕೊಲೆ ಮಾಡಿದ ಪ್ರಕರಣವು ಸರ್ಕಾರವು ಸಮಿತಿ ರಚಿಸುವ ನಿರ್ಧಾರ ತೆಗೆದುಕೊಳ್ಳಲು ಕಾರಣ. ಆದರೆ ಅವರ ಸಂಬಂಧದಲ್ಲಿ ಧರ್ಮ ಎಂದೂಪ‍್ರವೇಶಿಸಿರಲಿಲ್ಲ. ಹಾಗಾಗಿಯೇ, ಈ ಕೊಲೆಯನ್ನು ಧರ್ಮದ ದೃಷ್ಟಿಯಿಂದ ನೋಡುವುದು ತಪ್ಪು. ತಮ್ಮದೇ ಜಾತಿ ಅಥವಾ ಧರ್ಮದ ಸಂಗಾತಿಯಿಂದ ಕೊಲೆಯಾದ ಮಹಿಳೆಯರ ಸಂಖ್ಯೆ ಸಾವಿರಾರು.

ADVERTISEMENT

ಎಲ್ಲ ದಂಪತಿ ಮೇಲೆ ಸಮಿತಿಯು ಏಕೆ ಕಣ್ಗಾವಲು ಇರಿಸುವುದಿಲ್ಲ? ಅಂತರಧರ್ಮೀಯ ಮದುವೆಯಾದ ಮಹಿಳೆಯರು ಭಾರಿ ಅಪಾಯದಲ್ಲಿದ್ದಾರೆ ಎಂಬುದನ್ನು ತೋರಿಸುವ ಯಾವುದೇ ದತ್ತಾಂಶ ನಮ್ಮಲ್ಲಿ ಇಲ್ಲ. ಶ್ರದ್ಧಾ ವಾಲಕರ್‌ ಕೊಲೆಗೀಡಾದ ಆರು ತಿಂಗಳ ಬಳಿಕ ಆ ವಿಚಾರ ಅವರ ಹೆತ್ತವರಿಗೆ ತಿಳಿಯಿತು ಎಂದು ಸಚಿವ ಮಂಗಲ್‌ ಲೋಧಾ ಹೇಳಿದ್ದಾರೆ. ದಂಪತಿಯು ಒಂದೇ ಧರ್ಮದವರಾಗಿದ್ದರೆ ಇಂತಹುದು ನಡೆಯುವುದು ಸಾಧ್ಯವಿರಲಿಲ್ಲವೇ?

ದಂಪತಿಯ ಬದುಕಿನ ಮೇಲೆ ನಿಗಾ ಇರಿಸುವುದು ಸರ್ಕಾರದ ಕೆಲಸ ಅಲ್ಲ. ಅಷ್ಟೇ ಅಲ್ಲ, ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪುಗಳ ಮೇಲೆ ನಿಗಾ ಇರಿಸುವುದನ್ನೂ ಸರ್ಕಾರ ಮಾಡಬಾರದು. ಜನರು ಮದುವೆ ಅಥವಾ ಬೇರಾವುದೇ ರೀತಿಯ ಸಂಬಂಧವನ್ನು ಇರಿಸಿಕೊಳ್ಳುವ ನಿರ್ಧಾರವನ್ನು ಸ್ವಇಚ್ಛೆಯ ಮೂಲಕವೇ ತೆಗೆದುಕೊಳ್ಳುತ್ತಾರೆ. ಇದನ್ನು ಕಾನೂನು ಮಾನ್ಯ ಮಾಡಿದೆ. ಸರ್ಕಾರ ನೇಮಿಸಿದ ಸಮಿತಿಯು ಮದುವೆಯಾದ ಜೋಡಿಯ ಮೇಲೆ ಕಣ್ಣಿಟ್ಟರೆ ಅದು ಜನರ ಖಾಸಗಿತನದ ಹಕ್ಕಿನ ಉಲ್ಲಂಘನೆ. ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ಅಂತರಧರ್ಮೀಯ ಮದುವೆ ಅಥವಾ ಸಂಬಂಧವನ್ನು ನಿರುತ್ಸಾಹಗೊಳಿಸುವ ಉದ್ದೇಶ ಹೊಂದಿದೆ. ಜೊತೆಗೆ, ಹೀಗೆ ಮದುವೆ ಆದವರಿಗೆ ಕಿರುಕುಳ ಕೊಡುವ ಗುರಿಯನ್ನೂ ಹೊಂದಿದೆ.

‘ಲವ್‌ ಜಿಹಾದ್‌’ ನಡೆಯುತ್ತಿದೆ ಎಂಬ ಬಡಬಡಿಕೆಯಲ್ಲದೆ ಇದು ಬೇರೇನೂ ಅಲ್ಲ. ಜನರ ಸಂಬಂಧಗಳನ್ನು ಪರಿಶೀಲಿಸುವ ಕೆಲಸಕ್ಕೆ ಮುಂದಾದರೆ ಸರ್ಕಾರವು ಜಾತಿ ಪಂಚಾಯಿತಿಯ ಮಟ್ಟಕ್ಕೆ ಇಳಿದಂತಾಗುತ್ತದೆ. ಅಂತರಧರ್ಮೀಯ ಮದುವೆ ಮತ್ತು ಭಿನ್ನ ಸಮುದಾಯಗಳ ಜನರು ಹೆಚ್ಚು ಹೆಚ್ಚು ಬೆರೆಯುವುದನ್ನು ಸ್ವಾಗತಿಸುವುದು ಮತ್ತು ‍ಪ್ರೋತ್ಸಾಹಿಸುವುದು ಸರ್ಕಾರದ ನಿಜವಾದ ಹೊಣೆಗಾರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.