ADVERTISEMENT

ಸಂಪಾದಕೀಯ | ಕುನಾಲ್ ಕಾಮ್ರಾ ಪ್ರಕರಣ; ಹಾಸ್ಯಕ್ಕೆ ದಾಂದಲೆ ಉತ್ತರವೇ?

ಸಂಪಾದಕೀಯ
Published 27 ಮಾರ್ಚ್ 2025, 0:30 IST
Last Updated 27 ಮಾರ್ಚ್ 2025, 0:30 IST
   
ಅಧಿಕಾರಸ್ಥರ ಮುಖಕ್ಕೆ ಹಿಡಿಯುವಂತೆ ಸತ್ಯವನ್ನು ಹಾಸ್ಯದ ಮೂಲಕ ಹೇಳುವ ವ್ಯಕ್ತಿಗಳು ಸಮಾಜಕ್ಕೆ ಬೇಕು

ಹಾಸ್ಯವನ್ನು ಹಾಸ್ಯವಾಗಿ ಸ್ವೀಕರಿಸಲು ತನ್ನಿಂದ ಆಗುತ್ತಿಲ್ಲ ಎಂಬುದನ್ನು ನಮ್ಮ ಸಮಾಜವು ಮತ್ತೆ ಮತ್ತೆ ತೋರಿಸಿಕೊಡುತ್ತಿದೆ. ಹಾಸ್ಯದ ವಿರುದ್ಧ ನಡೆದಿರುವ ಅಭಿಯಾನದಲ್ಲಿ ರಾಜಕಾರಣಿಗಳು ಮುಂಚೂಣಿಯಲ್ಲಿ ಇರುವಂತೆ ಕಾಣುತ್ತಿದೆ. ಹಾಸ್ಯ ಮಾಡಿದಾಗ ಬಹಳ ಸುಲಭವಾಗಿ ಕೋಪಕ್ಕೆ ಗುರಿಯಾಗುವ ಗುಂಪಿನವರು ತಮ್ಮ ಸಿಟ್ಟು ತೋರಿಸಿಕೊಳ್ಳಲು ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರನ್ನು ಮತ್ತೆ ಮತ್ತೆ ಗುರಿಮಾಡಿಕೊಳ್ಳುತ್ತಿದ್ದಾರೆ.

ಈ ಬಾರಿ ಕುನಾಲ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿ ಮುಂಬೈನಲ್ಲಿ ಆಡಿದ ಮಾತೊಂದು ವಿವಾದ ಸೃಷ್ಟಿಸಿದೆ. ಶಿಂದೆ ಅವರನ್ನು ಗುರಿಯಾಗಿಸಿಕೊಂಡು ಕುನಾಲ್‌ ಅವರು ಕಾರ್ಯಕ್ರಮವೊಂದರಲ್ಲಿ ಮಾತಿನಿಂದ ತಿವಿದಿರುವುದು ಶಿವಸೇನಾ ಕಾರ್ಯಕರ್ತರನ್ನು ಕೆರಳಿಸಿದೆ. ಅವರು ಕಾರ್ಯಕ್ರಮ ನಡೆದ ‘ಹ್ಯಾಬಿಟ್ಯಾಟ್ ಸ್ಟುಡಿಯೊ’ದಲ್ಲಿ ದಾಂದಲೆ ಸೃಷ್ಟಿಸಿದ್ದಾರೆ, ಆ ಸ್ಟುಡಿಯೊ ಇರುವ ಹೋಟೆಲ್‌ನ ಮೇಲೆಯೂ ತಮ್ಮ ಕೋಪವನ್ನು ಹರಿಬಿಟ್ಟಿದ್ದಾರೆ.

ಸ್ಟುಡಿಯೊದ ಒಂದು ಭಾಗದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಲಾಗಿತ್ತು ಎಂದು ಹೇಳಿ ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಅವುಗಳನ್ನು ತೆರವು ಮಾಡಿದೆ. ಶಿಂದೆ ಅವರ ವಿರುದ್ಧ ಅವಹೇಳನಕಾರಿ ಮಾತು ಆಡಿದ ಆರೋಪ ಹೊರಿಸಿ ಕುನಾಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕುನಾಲ್ ಅವರು ಕ್ಷಮೆ ಯಾಚಿಸಬೇಕು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಒತ್ತಾಯಿಸಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಶಿವಸೇನಾ ನಾಯಕರೊಬ್ಬರು ಕುನಾಲ್‌ ಅವರನ್ನು ಪಕ್ಷದ ಕಾರ್ಯಕರ್ತರು ದೇಶದ ಎಲ್ಲೆಡೆ ಅಟ್ಟಿಸಿಕೊಂಡು ಹೋಗುತ್ತಾರೆ, ಅವರು ದೇಶ ಬಿಟ್ಟು ಓಡಿ ಹೋಗುವಂತೆ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ರಾಜಕಾರಣಿಗಳಲ್ಲಿ ಇರುವ ತಪ್ಪು ಗ್ರಹಿಕೆಯನ್ನು ಫಡಣವೀಸ್ ಅವರ ಮಾತು ತೋರಿಸುತ್ತಿದೆ. ‘ಸ್ವಾತಂತ್ರ್ಯ ಎಂಬುದು ನಿಯಂತ್ರಣವಿಲ್ಲದ ವರ್ತನೆಯಾಗಬಾರದು... ರಾಜ್ಯದ ಜನರು ಗೌರವಿಸುವ ಉಪಮುಖ್ಯಮಂತ್ರಿಯನ್ನು, ರಾಜ್ಯದ ಹಿರಿಯ ನಾಯಕರನ್ನು ಅಗೌರವದಿಂದ ಕಾಣಲು, ಇಂತಹ ಕೀಳು ಮಟ್ಟದ ಹಾಸ್ಯ ಮಾಡಲು ಯಾರಿಗೂ ಹಕ್ಕಿಲ್ಲ’ ಎಂದು ಫಡಣವೀಸ್ ಹೇಳಿದ್ದಾರೆ. ಜನರು ತಮ್ಮನ್ನು ಗೌರವಿಸಬೇಕು, ತಮ್ಮನ್ನು ಹೊಗಳಬೇಕು ಎಂದು ಬಯಸುವ ಮೂಲಕ ರಾಜಕಾರಣಿಗಳು ಅಗೌರವ ಸಂಪಾದಿಸಬಲ್ಲರು, ಅಷ್ಟೇ. ಹಾಸ್ಯವೊಂದು ಕೆಳಮಟ್ಟದ್ದೋ ಮೇಲ್ಮಟ್ಟದ್ದೋ ಎಂಬುದನ್ನು ತೀರ್ಮಾನಿಸಬೇಕಿರುವುದು ಮುಖ್ಯಮಂತ್ರಿಯ ಕೆಲಸ ಅಲ್ಲ. ‘ಕೆಳಮಟ್ಟದ ಹಾಸ್ಯ’ಕ್ಕೂ ಅದರದೇ ಆದ ಸ್ಥಾನ ಇದೆ, ಅಂತಹ ಹಾಸ್ಯವನ್ನು ಅದರದೇ ಆದ ವೇದಿಕೆಯಲ್ಲಿ ಮಾಡಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕಿರುವ ಮುಖ್ಯಮಂತ್ರಿಯು ಅಭಿವ್ಯಕ್ತಿಯ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಪ್ರಜೆಯೊಬ್ಬರು ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿರುವುದು ಆಶ್ಚರ್ಯ ಮೂಡಿಸುವಂಥದ್ದು. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಆದರೆ ಅದಕ್ಕೆ ಮಿತಿ ಇದೆ ಎಂದು ಶಿಂದೆ ಹೇಳಿದ್ದಾರೆ. ಆದರೆ ಟೀಕೆಗೆ, ಹಾಸ್ಯಕ್ಕೆ ಗುರಿಯಾಗಿರುವ ವ್ಯಕ್ತಿಯೇ ‘ಮಿತಿ’ಯನ್ನು ನಿರ್ಧರಿಸಲು ಆಗದು.

ಹಾಸ್ಯದ ಮಾತುಗಳನ್ನು ಆಡಿದ ವ್ಯಕ್ತಿಯ ಬೆನ್ನಟ್ಟಿ ಹೋಗುವುದು, ಆತನನ್ನು ಕಿರುಕುಳಕ್ಕೆ ಗುರಿಪಡಿಸುವುದು ಗಂಭೀರವಾದ ವಿಚಾರ. ಟೀಕೆ ಮತ್ತು ಹಾಸ್ಯವನ್ನು ಶಿವಸೇನಾ ಪಕ್ಷವು ಸಹಿಸಿದ ನಿದರ್ಶನಗಳು ಹಿಂದೆಯೂ ಬಹಳ ಕಡಿಮೆಯೇ. ಹಾಸ್ಯವನ್ನು ಹಿಂಸೆಯ ಮೂಲಕ ಎದುರಿಸಿದ ಇತಿಹಾಸ ಕೂಡ ಈ ಪಕ್ಷಕ್ಕೆ ಇದೆ. ಶಿವಸೇನಾ ಪಕ್ಷವನ್ನು ಸ್ಥಾಪಿಸಿದ ವ್ಯಕ್ತಿ ವೃತ್ತಿಪರ ವ್ಯಂಗ್ಯಚಿತ್ರಕಾರ ಆಗಿದ್ದವರು. ಹೀಗಿದ್ದರೂ ವ್ಯಂಗ್ಯ ಮತ್ತು ವಿಡಂಬನೆಯನ್ನು ಎದುರಿಸಲು ಈ ಪಕ್ಷವು ದೈಹಿಕ ದಾಳಿ, ಬೆದರಿಕೆ, ದಾಂದಲೆಯಂತಹ ಅಸ್ತ್ರಗಳನ್ನು ಬಳಕೆ ಮಾಡುತ್ತಿದೆ. ಅಸಹನೆಯ ವಾತಾವರಣವೊಂದು ದೇಶದಲ್ಲಿ ಬಲ ಹೆಚ್ಚಿಸಿಕೊಳ್ಳುತ್ತಿದೆ. ರಾಜಕಾರಣಿಗಳು ತಮ್ಮನ್ನು ತಾವು ನೈತಿಕವಾಗಿ ಬಹಳ ಉನ್ನತ ವ್ಯಕ್ತಿಗಳೆಂದು ಭಾವಿಸುತ್ತಿದ್ದಾರೆ. ಹಾಸ್ಯವೆಂಬುದು ಸಮಾಜವು ತನಗೆ ತಾನೇ ಹಿಡಿದುಕೊಳ್ಳುವ ಕನ್ನಡಿ. ಅದನ್ನು ಸಹಿಸಲು ಆಗದೇ ಇರುವುದು ಸರ್ವಾಧಿಕಾರದ, ಅನಾರೋಗ್ಯಕರವಾದ ಸಮಾಜದ ಲಕ್ಷಣ. ಆಡಿದ ಮಾತುಗಳಿಗೆ ಕ್ಷಮೆ ಕೇಳುವುದಿಲ್ಲ ಎನ್ನುವ ಮೂಲಕ ಕುನಾಲ್ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅಧಿಕಾರಸ್ಥರ ಮುಖಕ್ಕೆ ಹಿಡಿಯುವಂತೆ ಸತ್ಯವನ್ನು ಹಾಸ್ಯದ ಮೂಲಕ ಹೇಳುವ ವ್ಯಕ್ತಿಗಳು ಸಮಾಜಕ್ಕೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.