ADVERTISEMENT

ಸಂಪಾದಕೀಯ: ಪಂಚಾಯಿತಿಗಳಿಗೆ ಸಿಗದ ಅನುದಾನ– ದುರ್ಬಲಗೊಂಡ ಗ್ರಾಮ ಸ್ವರಾಜ್ಯ

ಸಂಪಾದಕೀಯ
Published 5 ಜನವರಿ 2026, 0:18 IST
Last Updated 5 ಜನವರಿ 2026, 0:18 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಗ್ರಾಮ ಸ್ವರಾಜ್ಯದ ವಿಚಾರದಲ್ಲಿ ಮಹಾತ್ಮ ಗಾಂಧಿಯವರ ಆಲೋಚನೆಗಳು ಬಹಳ ಸ್ಪಷ್ಟವಾಗಿದ್ದವು. ಗ್ರಾಮಗಳು ತಮ್ಮ ಆಡಳಿತವನ್ನು ತಾವೇ ನೋಡಿಕೊಳ್ಳಬೇಕು, ರಾಜಕೀಯ ಅಧಿಕಾರವು ಗ್ರಾಮಗಳ ಕೈಯಲ್ಲೇ ಇರಬೇಕು, ಅವು ಆರ್ಥಿಕವಾಗಿ ಸ್ವತಂತ್ರವಾಗಿರಬೇಕು, ಅವು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯದಂತೆ ಕೆಲಸ ನಿರ್ವಹಿಸಬೇಕು ಎಂಬುದು ಅವರ ಆಲೋಚನೆಯಾಗಿತ್ತು.

ಆದರೆ, ಕರ್ನಾಟಕದಾದ್ಯಂತ ಗ್ರಾಮ ಪಂಚಾಯಿತಿಗಳು ಹಣಕಾಸಿನ ಶಕ್ತಿಯಿಲ್ಲದೆ ಸೊರಗಿವೆ, ಇದೇ ಸ್ಥಿತಿಯಲ್ಲಿ ಅವು ಹೊಸವರ್ಷಕ್ಕೆ ಕಾಲಿರಿಸಿವೆ. 1993ರಲ್ಲಿ ಜಾರಿಗೆ ಬಂದ ಸಂವಿಧಾನದ 73ನೇ ತಿದ್ದುಪಡಿಯು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಾಂಸ್ಥಿಕಗೊಳಿಸುವ, ಚುನಾಯಿತ ಗ್ರಾಮ ಪಂಚಾಯಿತಿಗಳಿಗೆ ಜವಾಬ್ದಾರಿ ಹೊರಿಸಿ, ಅವುಗಳಿಗೆ ಸಂಪನ್ಮೂಲ ಹಂಚಿಕೆ ಮಾಡಿ, ಅಧಿಕಾರದ ವಿಕೇಂದ್ರೀಕರಣವನ್ನು ಕಾರ್ಯರೂಪಕ್ಕೆ ತರುವ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಹೊಂದಿತ್ತು.

ADVERTISEMENT

ವಾಸ್ತವದಲ್ಲಿ ಈ ಆಲೋಚನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕವು ಒಂದು ಹೆಜ್ಜೆ ಮುಂದೆ ಇತ್ತು. 1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕವು ಅಧಿಕಾರ ವಿಕೇಂದ್ರೀಕರಣದ ತಾತ್ತ್ವಿಕತೆಯನ್ನು ಒಪ್ಪಿಕೊಂಡಿತು; ಅಧಿಕಾರವು ‘ಹಳ್ಳಿಯಿಂದ ದಿಲ್ಲಿಯ ಕಡೆ’ ಹರಿಯುತ್ತದೆ ಎಂದು ಹೇಳಿತ್ತು. ಆದರೆ ಇಂದು ಅಧಿಕಾರದ ಹರಿವು ಬದಲಾಗಿದೆ. ಅದು ಈಗ ‘ದಿಲ್ಲಿಯಿಂದ ಹಳ್ಳಿಗಳ ಕಡೆ’ ಹರಿಯುತ್ತಿದೆ. ಕೇಂದ್ರ ಸರ್ಕಾರವು ಸಂಪನ್ಮೂಲದ ಹಂಚಿಕೆಯನ್ನು ನಿರ್ಧರಿಸುತ್ತದೆ, ಗ್ರಾಮ ಪಂಚಾಯಿತಿಗಳು ಅಸಹಾಯಕತೆಯಿಂದ ಕಾಯುತ್ತ ಕುಳಿತಿರುತ್ತವೆ.

ಪ್ರಸಕ್ತ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ 15ನೆಯ ಹಣಕಾಸಿನ ಆಯೋಗ ನೀಡಬೇಕಿದ್ದ ಹಣದಲ್ಲಿ ಒಂದು ರೂಪಾಯಿ ಕೂಡ ಕರ್ನಾಟಕದ ಆರು ಸಾವಿರ ಗ್ರಾಮ ಪಂಚಾಯಿತಿಗಳಿಗೆ ಇನ್ನೂ ಬಂದಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯ ಸಲ್ಲಿಕೆ ಸೇರಿದಂತೆ ಎಲ್ಲ ಷರತ್ತುಗಳನ್ನು ರಾಜ್ಯ ಸರ್ಕಾರವು ಪೂರೈಸಿದ್ದರೂ, ಬಾಕಿ ಇರುವ ₹2,100 ಕೋಟಿಯಲ್ಲಿ ಮೊದಲ ಕಂತಿನ ₹1,092 ಕೋಟಿ ಇನ್ನೂ ಬಿಡುಗಡೆ ಆಗಿಲ್ಲ. ಆದರೆ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆ ಆಗಿದೆ. ಇದು ತಾರತಮ್ಯದ ಅನುಮಾನವನ್ನು ಮೂಡಿಸುವಂತಿದೆ.

ಅನುದಾನ ಬಿಡುಗಡೆ ಮಾಡದೆ ಇರುವುದರ ಪರಿಣಾಮಗಳು ತೀವ್ರವಾಗಿವೆ. ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ, ಪಾವತಿಗಳು ಬಾಕಿ ಉಳಿದಿವೆ, ಕೆಲವು ಪಂಚಾಯಿತಿಗಳ ಮಟ್ಟದಲ್ಲಿ ಕುಡಿಯುವ ನೀರು ಪೂರೈಕೆಗೂ ಹಣದ ಕೊರತೆ ಉಂಟಾಗಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿಲೀನದಿಂದ ಉಂಟಾಗಿರುವ ತಾಂತ್ರಿಕ ಅಡಚಣೆಗಳು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿವೆ, 800ಕ್ಕೂ ಹೆಚ್ಚು ಪಂಚಾಯಿತಿಗಳು ತಮ್ಮಲ್ಲಿರುವ ಹಣವನ್ನು ಪಡೆದುಕೊಳ್ಳಲೂ ಆಗುತ್ತಿಲ್ಲ. ಅಧಿಕಾರ ವ್ಯವಸ್ಥೆಯ ವೈಫಲ್ಯಕ್ಕೆ ಗ್ರಾಮವಾಸಿಗಳು ಬೆಲೆ ತೆರುತ್ತಿದ್ದಾರೆ.

ಹಣ ಬರಬೇಕಿರುವುದು ಕೇಂದ್ರದಿಂದ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ತನ್ನ ಹೆಗಲಿನಿಂದ ಜವಾಬ್ದಾರಿ ಇಳಿಸಿಕೊಳ್ಳಲು ಅವಕಾಶವಿಲ್ಲ. ರಾಜ್ಯದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ 2022ರಿಂದ ಚುನಾವಣೆ ನಡೆದಿಲ್ಲ. ಗ್ರಾಮ ಪಂಚಾಯಿತಿಗಳ ಅವಧಿಯು ಕಳೆದ ಡಿಸೆಂಬರ್‌ ತಿಂಗಳಲ್ಲಿ ಕೊನೆಗೊಂಡಿದೆ. ಆಗ ಚುನಾಯಿತ ಸ್ಥಳೀಯ ಆಡಳಿತ ವ್ಯವಸ್ಥೆ ಇಲ್ಲ ಎಂದು ಅನುದಾನವನ್ನು ತಡೆಹಿಡಿಯಲು ಕೇಂದ್ರ ಸರ್ಕಾರಕ್ಕೆ ಕಾರಣವೊಂದು ದೊರೆತಂತಾಗುತ್ತದೆ. ಚುನಾಯಿತ ಪ್ರತಿನಿಧಿಗಳು ಇರುವ ಪಂಚಾಯಿತಿಗಳಿಗೆ ಮಾತ್ರವೇ ಅನುದಾನ ಬಿಡುಗಡೆ ಮಾಡಬೇಕು ಎಂಬ ನಿಯಮವನ್ನು ಹಣಕಾಸು ಆಯೋಗ ರೂಪಿಸಿದೆ. ರಾಜ್ಯದಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದ ಬೇರೆ ಬೇರೆ ಪಕ್ಷಗಳ ನಾಯಕರು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವುದನ್ನು ಉಪೇಕ್ಷೆ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕಿರುವ ಹಣದ ಕುರಿತು ತಾವೇ ನಿರ್ಧಾರ ಮಾಡುವಂತಹ ಸ್ಥಿತಿ ಇರಲಿ ಎಂದು ಶಾಸಕರು ಬಯಸುವುದು ಇದಕ್ಕೆ ಕಾರಣವಿರಬಹುದು. ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡದೆ ಇರುವುದು, ರಾಜ್ಯ ಸರ್ಕಾರವು ಸಕಾಲದಲ್ಲಿ ಚುನಾವಣೆ ನಡೆಸದೆ ಇರುವುದು ಸ್ಥಳೀಯ ಆಡಳಿತ ವ್ಯವಸ್ಥೆಯ ಅಡಿಪಾಯಕ್ಕೆ ಪೆಟ್ಟು ಕೊಟ್ಟಿದೆ.

ಇಂದು ಪಂಚಾಯಿತಿಗಳು ಅಧಿಕಾರ, ಸಂಪನ್ಮೂಲ ಇಲ್ಲದೆ ಕಾಗದದ ಮೇಲಷ್ಟೇ ಉಳಿದಿವೆ. ಗ್ರಾಮಗಳಿಗೆ ಹಣ ಮತ್ತು ಅಧಿಕಾರವನ್ನು ನಿರಾಕರಿಸಿದಾಗ ಪ್ರಜಾತಂತ್ರ ವ್ಯವಸ್ಥೆ ದುರ್ಬಲವಾಗುತ್ತದೆ. ಗ್ರಾಮ ಸ್ವರಾಜ್ಯವು ಘೋಷಣೆಗಳನ್ನು ಆಧರಿಸಿ ಉಳಿಯುವುದಿಲ್ಲ; ಅದು ಉಳಿಯಬೇಕು ಎಂದಾದರೆ ಚುನಾವಣೆಗಳು ಸಕಾಲದಲ್ಲಿ ನಡೆಯಬೇಕು, ಅವುಗಳಿಗೆ ಕೊಡಬೇಕಿರುವ ಹಣವನ್ನು ಕೊಡಬೇಕು. ಇಲ್ಲದಿದ್ದರೆ ಸ್ಥಳೀಯ ಆಡಳಿತ ಎಂಬ ಸಾಂವಿಧಾನಿಕ ಆಶ್ವಾಸನೆಯನ್ನು ಉದ್ದೇಶಪೂರ್ವಕವಾಗಿ ಈಡೇರಿಸದಂತೆ ಆಗುತ್ತದೆ.

––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.