ADVERTISEMENT

ಸಂಪಾದಕೀಯ: ಗೊಂದಲ–ಸವಾಲುಗಳನ್ನು ಎದುರಿಸಿಯೂ ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶ

ಸಂಪಾದಕೀಯ
Published 8 ಮೇ 2023, 19:35 IST
Last Updated 8 ಮೇ 2023, 19:35 IST
   

ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಪ್ರಕಟಗೊಂಡಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಸಕ್ತ ಸಾಲಿನಲ್ಲಿ ಕೊಂಚ ಕಡಿಮೆಯಾಗಿದ್ದರೂ, ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಅಭಿನಂದನಾರ್ಹ.

ಈ ವರ್ಷ ಶೇಕಡ 83.89ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, 2021–22ರ ಸಾಲಿನಲ್ಲಿ ಶೇ 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಆದರೆ, ಕಳೆದ ವರ್ಷ ಶೇ 20ರಷ್ಟು ಸರಳ ಪ್ರಶ್ನೆಗಳನ್ನು ಕೇಳುವುದರ ಜೊತೆಗೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಕೃಪಾಂಕಗಳನ್ನೂ ನೀಡಲಾಗಿತ್ತು. ಈ ಬಾರಿ ಕೂಡ ಕೃಪಾಂಕಗಳನ್ನು ನೀಡಲಾಗಿದ್ದರೂ, ‍ಪ್ರಶ್ನೆಪತ್ರಿಕೆಯಲ್ಲಿ ಕಠಿಣ ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿತ್ತು. ಕಠಿಣ ಪ್ರಶ್ನೆಪತ್ರಿಕೆಗಳನ್ನು ಎದುರಿಸಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಗಮನಾರ್ಹ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆ ಕುಂಠಿತಗೊಂಡಿದ್ದು, 2020–21ರಲ್ಲಿ ಶೇ 99.99ರ ಫಲಿತಾಂಶದೊಂದಿಗೆ ಎಲ್ಲ ಪರೀಕ್ಷಾರ್ಥಿಗಳನ್ನೂ ಉತ್ತೀರ್ಣಗೊಳಿಸಲಾಗಿತ್ತು. ಕೊರೊನಾ ಕಣ್ಣಾಮುಚ್ಚಾಲೆಯ ನಡುವೆಯೇ ಕಳೆದ ವರ್ಷವೂ ತರಗತಿಗಳು ನಡೆದಿದ್ದವು. ಈ ವರ್ಷ ಕೊರೊನಾದ ಆತಂಕ ತಿಳಿಗೊಂಡಿದ್ದರೂ, ಪಠ್ಯಪುಸ್ತಕ ಪರಿಷ್ಕರಣೆಯು ವಿವಾದದ ರೂಪು ತಾಳಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗೊಂದಲಕ್ಕೆ ದೂಡಿತ್ತು.

ಕಳೆದ ಮೂರು ವರ್ಷಗಳಲ್ಲಿ ಕಲಿಕೆಯಲ್ಲಿ ಉಂಟಾದ ಏರುಪೇರನ್ನು ಸರಿಪಡಿಸಿಕೊಂಡು ಪರೀಕ್ಷೆ ಬರೆಯಬೇಕಾದ ಸವಾಲು ವಿದ್ಯಾರ್ಥಿಗಳ ಮೇಲಿತ್ತು. ಗೊಂದಲ, ಸವಾಲುಗಳನ್ನು ಎದುರಿಸಿಯೂ ಉತ್ತಮ ಸಾಧನೆ ಮಾಡಿರುವ ಮಕ್ಕಳು ಹಾಗೂ ಅವರನ್ನು ಪರೀಕ್ಷೆಗೆ ಸಜ್ಜುಗೊಳಿಸಿರುವ ಶಿಕ್ಷಕರು ಅಭಿನಂದನಾರ್ಹರು. ಚುನಾವಣಾ ದಿನಗಳಲ್ಲೂ ಮೌಲ್ಯಮಾಪನ‌ ಪ್ರಕ್ರಿಯೆಯನ್ನು ಕ್ಷಿಪ್ರವಾಗಿ ಮುಗಿಸಿ, ಪರೀಕ್ಷೆ ಮುಕ್ತಾಯಗೊಂಡ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಫಲಿತಾಂಶ ಪ್ರಕಟಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಗೆ ಕೂಡ ಮೆಚ್ಚುಗೆ ಸಲ್ಲಬೇಕು. ಫಲಿತಾಂಶ ಪ್ರಕಟವಾದಷ್ಟೇ ಸರಾಗವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಕಾಲೇಜು ಪ್ರವೇಶ ಪ್ರಕ್ರಿಯೆಯೂ ತೊಡಕಿಲ್ಲದಂತೆ ನಡೆಯಬೇಕಾಗಿದೆ. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವ ಅಡಚಣೆಗಳೂ ಉಂಟಾಗದಂತೆ ಸರ್ಕಾರ ಎಚ್ಚರ ವಹಿಸಬೇಕಾಗಿದೆ.

ADVERTISEMENT

ಬಾಲಕಿಯರು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಈ ಬಾರಿಯೂ ಮೇಲುಗೈ ಸಾಧಿಸಿರುವುದು ಹಾಗೂ ಕನ್ನಡ ಮಾಧ್ಯಮದ ಮಕ್ಕಳು ಫಲಿತಾಂಶದಲ್ಲಿ ಹಿಂದಿರುವುದು 2022–23ರ ಫಲಿತಾಂಶದ ಮುಖ್ಯಾಂಶಗಳಲ್ಲಿ ಸೇರಿವೆ. ಶೇ 87.87ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಬಾಲಕರ ಯಶಸ್ಸಿನ ಪ್ರಮಾಣ ಶೇ 80.08ರಷ್ಟು ಮಾತ್ರ. ನಗರ ಪ್ರದೇಶಗಳ ಶೇ 79.62ರಷ್ಟು ಮಕ್ಕಳು ಯಶಸ್ಸು ಗಳಿಸಿದ್ದರೆ, ಗ್ರಾಮೀಣ ಪ್ರದೇಶಗಳ ಶೇ 87ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಗ್ರಾಮೀಣ ಪ್ರದೇಶಗಳ ಮಕ್ಕಳು ಸವಲತ್ತುಗಳ ಕೊರತೆಯ ನಡುವೆಯೂ ಉತ್ತಮ ಸಾಧನೆ ಮಾಡಿರುವುದು ಅಭಿನಂದನೆಗೆ ಅರ್ಹ.

ನೂರಕ್ಕೆ ನೂರು ಅಂಕಗಳ ಸಾಧನೆ ಮಾಡಿರುವ ನಾಲ್ವರಲ್ಲಿ ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿದರೆ, ಉಳಿದ ಮೂವರೂ ಬೆಂಗಳೂರಿನ ಹೊರಗಿನವರಾಗಿರುವುದು ಗಮನಾರ್ಹ. ಆದರೆ, ಕನ್ನಡ ಮಾಧ್ಯಮದ ಶೇ 85.59ರಷ್ಟು ಮಕ್ಕಳಷ್ಟೇ ಯಶಸ್ಸು ಕಂಡಿದ್ದರೆ, ಇಂಗ್ಲಿಷ್‌ ಮಾಧ್ಯಮದಲ್ಲಿ ಫಲಿತಾಂಶದ ಪ್ರಮಾಣ ಶೇ 91.66ರಷ್ಟಿದೆ. ‘ಗುಣಾತ್ಮಕ ಫಲಿತಾಂಶ ವಿಶ್ಲೇಷಣಾ ಆಧರಿಸಿದ ಜಿಲ್ಲಾ ಶ್ರೇಣಿ’ಯನ್ನು ಪ್ರಕಟಿಸುವ ಪದ್ಧತಿ ಈಗ ಚಾಲ್ತಿಯಲ್ಲಿದ್ದು, ಆ ಸಂಪ್ರದಾಯ ಈ ವರ್ಷವೂ ಮುಂದುವರಿದಿದೆ.

ಯಾವುದೊಂದು ಜಿಲ್ಲೆಯೂ ‘ಸಿ’ ಶ್ರೇಣಿಯಲ್ಲಿ ಇಲ್ಲದಿರುವುದು ಸಮಾಧಾನದ ಸಂಗತಿಯಾದರೂ, ‘ಬಿ’ ವರ್ಗದಲ್ಲಿರುವ ಯಾದಗಿರಿ, ಬಾಗಲಕೋಟೆ, ರಾಯಚೂರು, ಬೀದರ್‌, ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿನ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸಲು ಅವಕಾಶ ಇದ್ದೇ ಇದೆ. ‘ಎ’ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ ಚಿತ್ರದುರ್ಗ, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಇತ್ತೀಚಿನ ವರ್ಷಗಳಲ್ಲಿ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳ ಬಗ್ಗೆ ತೆಗೆದುಕೊಳ್ಳುತ್ತಿರುವ ವಿಶೇಷ ಕಾಳಜಿಯು ಫಲಿತಾಂಶದಲ್ಲಿ ಹಿಂದುಳಿದಿರುವ ಜಿಲ್ಲೆಗಳಿಗೂ ಮಾದರಿಯಾಗಬೇಕು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.