ADVERTISEMENT

ಸಂಪಾದಕೀಯ: ರೆಪೊ ದರ ಭಾರಿ ಇಳಿಕೆ; ನಗದು ಲಭ್ಯತೆ ಹೆಚ್ಚಿಸುವ ಕ್ರಮ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 23:56 IST
Last Updated 8 ಜೂನ್ 2025, 23:56 IST
<div class="paragraphs"><p>ಆರ್‌ಬಿಐ</p></div>

ಆರ್‌ಬಿಐ

   

ಆರ್ಥಿಕ ಬೆಳವಣಿಗೆಗೆ ಬೆಲೆಯಲ್ಲಿ ಸ್ಥಿರತೆ ಸಾಧಿಸುವುದು ಅಗತ್ಯವಾಗಿದ್ದರೂ ಅದಷ್ಟೇ ಸಾಕಾಗುವುದಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹೇಳಿರುವುದು, ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಿರುವುದಕ್ಕೆ ಸಮರ್ಥನೆಯಾಗಿ ಕಾಣುತ್ತಿದೆ. ಹಾಗೆಯೇ, ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌) ಶೇಕಡ 1ರಷ್ಟು ಕಡಿಮೆ ಮಾಡಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಾಗುವಂತೆ ಮಾಡಿರುವುದಕ್ಕೂ ಈ ಮಾತು ಒಂದು ಸಮರ್ಥನೆಯಂತೆ ಕಾಣುತ್ತಿದೆ. ಎಂಪಿಸಿಯು ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಹಣಕಾಸು ತಜ್ಞರಲ್ಲಿ ಇತ್ತು. ಆದರೆ ಒಂದು ಹೆಜ್ಜೆ ಮುಂದೆ ಇರಿಸಿರುವ ಎಂಪಿಸಿ, ರೆಪೊ ದರವನ್ನು ಶೇ 0.50ರಷ್ಟು ಕಡಿಮೆ ಮಾಡಿದೆ. ಫೆಬ್ರುವರಿಯಲ್ಲಿ ಮತ್ತು ಏಪ್ರಿಲ್‌ನಲ್ಲಿ ರೆಪೊ ದರವನ್ನು ತಲಾ ಶೇ 0.25ರಷ್ಟು ತಗ್ಗಿಸಲಾಗಿತ್ತು. ಹೀಗಾಗಿ, ಶುಕ್ರವಾರದ ತೀರ್ಮಾನವನ್ನೂ ಪರಿಗಣಿಸಿದರೆ ಈ ವರ್ಷದಲ್ಲಿ ರೆಪೊ ದರವನ್ನು ಶೇ 1ರಷ್ಟು ಕಡಿಮೆ ಮಾಡಿದಂತೆ ಆಗಿದೆ. ಅಂದರೆ ಆರ್‌ಬಿಐ ಗಮನವು ಈಗ ಆರ್ಥಿಕ ಬೆಳವಣಿಗೆಯ ಕಡೆ ತಿರುಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಆಂತರಿಕ ಬೇಡಿಕೆ ಮತ್ತು ಹೂಡಿಕೆಯನ್ನು ನೀತಿಗಳ ಮೂಲಕ ಉತ್ತೇಜಿಸುವ ಕ್ರಮ ಈಗ ಬೇಕಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಕಡಿಮೆ ಆಗಿರುವುದು ಆರ್‌ಬಿಐಗೆ ರೆಪೊ ದರ ತಗ್ಗಿಸುವ ವಿಶ್ವಾಸವನ್ನು ನೀಡಿದೆ. ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇ 7.4ರಷ್ಟು ಆಗಿದೆ. ಹಣಕಾಸು ನೀತಿಯ ಬೆಂಬಲ ಇಲ್ಲದಿದ್ದರೆ ಜಿಡಿಪಿ ಬೆಳವಣಿಗೆ ಪ್ರಮಾಣವು ಇದೇ ಮಟ್ಟದಲ್ಲಿ ಉಳಿಯುವುದೇ ಎಂಬ ಅನುಮಾನ ಆರ್‌ಬಿಐಗೆ ಇದೆ ಎಂಬುದನ್ನು ಕೂಡ ಅದು ಈಗ ತೆಗೆದುಕೊಂಡಿರುವ ತೀರ್ಮಾನಗಳು ಸೂಚಿಸುತ್ತಿವೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಶೇ 3.16ಕ್ಕೆ ಇಳಿಕೆ ಆಗಿದೆ, ಅದು ಮುಂದಿನ ದಿನಗಳಲ್ಲಿಯೂ ಕಡಿಮೆಯಾಗಿಯೇ ಇರುವ ನಿರೀಕ್ಷೆ ಇದೆ. 2025–26ರಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 3.7ರಷ್ಟು ಆಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಇದು ಈ ಹಿಂದೆ ಮಾಡಿದ್ದ ಶೇ 4ರ ಅಂದಾಜಿಗಿಂತ ಕಡಿಮೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 6.5ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಬೆಳವಣಿಗೆ ಹೆಚ್ಚಿಸಲು ಇನ್ನಷ್ಟು ಒತ್ತು ನೀಡುವ ಅಗತ್ಯ ಇದೆ. ಈಗಿನ ಸಂದರ್ಭದಲ್ಲಿ ಆರ್ಥಿಕ ನೀತಿಗಳ ಮೂಲಕ ಹೆಚ್ಚಿನ ಕ್ರಮ ಕೈಗೊಳ್ಳಲು ಅವಕಾಶಗಳು ಅಷ್ಟೇನೂ ಇಲ್ಲವಾಗಿರುವ ಕಾರಣಕ್ಕೆ ಹಣಕಾಸು ನೀತಿಯ ಮೂಲಕ ಬೆಳವಣಿಗೆಗೆ ಉತ್ತೇಜನ ನೀಡಲು ಆರ್‌ಬಿಐ ಯತ್ನಿಸುತ್ತಿದೆ. ಈಗಿನ ಹಂತದಲ್ಲಿ ಬಂಡವಾಳ ವೆಚ್ಚವನ್ನು ಗಣನೀಯವಾಗಿ ಹೆಚ್ಚು ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ರೆಪೊ ದರದ ಇಳಿಕೆಯ ಪರಿಣಾಮವಾಗಿ ವ್ಯಕ್ತಿಗಳಿಗೆ ಹಾಗೂ ಕಂಪನಿಗಳಿಗೆ ಸಾಲವು ಅಗ್ಗದ ದರದಲ್ಲಿ ಸಿಗುತ್ತದೆ, ಸಿಆರ್‌ಆರ್‌ ಕಡಿಮೆ ಮಾಡಿರುವ ಪರಿಣಾಮವಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚಿನ ನಗದು ಲಭ್ಯವಾಗಲಿದ್ದು, ಸಾಲ ಕೊಡುವುದಕ್ಕೆ ಅನುಕೂಲ ಆಗಲಿದೆ.

ADVERTISEMENT

ಈಗ ಆರ್‌ಬಿಐ ತೆಗೆದುಕೊಂಡಿರುವ ತೀರ್ಮಾನಗಳ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚಳ ಕಾಣಲಿದೆಯೇ, ಖಾಸಗಿ ವಲಯದಿಂದ ಹೂಡಿಕೆಯು ಹೆಚ್ಚಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹಣಕಾಸು ನೀತಿಯ ಬಲ ಮಾತ್ರವೇ ಅಲ್ಲದೆ, ಮುಂಗಾರು ಮಳೆಯು ಈ ಬಾರಿ ಚೆನ್ನಾಗಿ ಆಗಬಹುದು ಎಂಬ ಲೆಕ್ಕಾಚಾರವು ಆರ್ಥಿಕತೆಗೆ ಶುಭಸೂಚನೆಯಂತೆ ಇದೆ. ಕಾರ್ಪೊರೇಟ್ ಕಂಪನಿಗಳ ಗಳಿಕೆ ಚೆನ್ನಾಗಿರುವುದು, ಬ್ಯಾಂಕ್‌ಗಳ ಸ್ಥಿತಿ ಉತ್ತಮವಾಗಿರುವುದು, ಹಣಕಾಸು ಸ್ಥಿತಿ ಸ್ಥಿರವಾಗಿ ಇರುವುದು, ರಾಜಕೀಯ ಸ್ಥಿರತೆ ಇರುವುದು ಒಳ್ಳೆಯ ಸೂಚನೆಗಳು ಎಂದು ಮಲ್ಹೋತ್ರಾ ಹೇಳಿದ್ದಾರೆ. ಡಿಜಿಟಲೀಕರಣ ಮತ್ತು ಆಂತರಿಕ ಬೇಡಿಕೆಯು ಕೂಡ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಇವೆ ಎಂದು ಅವರು ಹೇಳಿದ್ದಾರೆ. ‘ಹೊಂದಾಣಿಕೆ’ಯ ಹಣಕಾಸು ನೀತಿಯನ್ನು ಆರ್‌ಬಿಐ ಬದಲಾಯಿಸಿದ್ದು, ‘ತಟಸ್ಥ’ ನೀತಿಯನ್ನು ಅನುಸರಿಸುವುದಾಗಿ ಹೇಳಿದೆ. ಅಂದರೆ ಸದ್ಯದಲ್ಲಿ ರೆಪೊ ದರವು ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆ ಇಲ್ಲ. ಜಾಗತಿಕವಾಗಿ ಅನಿಶ್ಚಿತತೆಗಳು ಮುಂದುವರಿದಿರುವ ಕಾರಣಕ್ಕೆ ಈ ರೀತಿಯ ನಿಲುವು ತಾಳಿರಬಹುದು. ಜಾಗತಿಕ ಪರಿಸ್ಥಿತಿಯನ್ನು ಕೂಡ ಉಪೇಕ್ಷಿಸಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.