ADVERTISEMENT

ಸಂಪಾದಕೀಯ | ಹಿರಿಯ ನಾಗರಿಕರ ಕಡೆಗಣನೆ ಸಲ್ಲ: ಸಮಾಜದ ಆತ್ಮಾವಲೋಕನ ಅಗತ್ಯ

ಸಂಪಾದಕೀಯ
Published 17 ಮಾರ್ಚ್ 2025, 23:30 IST
Last Updated 17 ಮಾರ್ಚ್ 2025, 23:30 IST
.
.   

ಹಿರಿಯ ನಾಗರಿಕರನ್ನು ಆರೈಕೆ ಮಾಡದೆ ನಿರ್ಲಕ್ಷಿಸುವ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ರದ್ದುಗೊಳಿಸಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಅಗತ್ಯವಾಗಿದ್ದ ಕ್ರಮ. ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ನಂತರ ಕೆಲವು ಮಕ್ಕಳು ತಮ್ಮ ವೃದ್ಧ ಪೋಷಕರನ್ನು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಬೆಳಗಾವಿಯಿಂದ ವರದಿಯಾಗಿವೆ.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ಬಿಟ್ಟುಹೋಗಿದ್ದು, ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ಇಂತಹ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗೆ ಆಸ್ಪತ್ರೆ ಸೇರಿದ ಕೆಲವು ಹಿರಿಯ ನಾಗರಿಕರಿಗೆ ಬೆಳಗಾವಿ ಮತ್ತು ಸುತ್ತಮುತ್ತಲಿನ ವೃದ್ಧಾಶ್ರಮಗಳಲ್ಲಿ ಆಸರೆ ಕಲ್ಪಿಸಲಾಗಿದೆ. ಆದರೆ, ಇನ್ನೂ ಅನೇಕರು ಆಸ್ಪತ್ರೆಗಳಲ್ಲಿಯೇ ಉಳಿದಿದ್ದು, ಅವರ ನಿರ್ವಹಣೆಯು ಆಸ್ಪತ್ರೆಗಳಿಗೆ ಹೆಚ್ಚುವರಿ ಹೊರೆಯಾಗಿದೆ. ಪೋಷಕರನ್ನು ಆಸ್ಪತ್ರೆಪಾಲು ಮಾಡಿ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸದಸ್ಯರ ಜೊತೆ ಉನ್ನತ ವೈದ್ಯಕೀಯ ಶಿಕ್ಷಣ ಸಚಿವರು ಸಭೆ ನಡೆಸಿದ್ದಾರೆ.

ತಾಯಿ– ತಂದೆಯನ್ನು ಅನಾಥರನ್ನಾಗಿ ಮಾಡುತ್ತಿರುವವರ ಅಮಾನವೀಯ ಕೃತ್ಯಗಳಿಗೆ ತಡೆ ಹಾಕಬೇಕು ಎಂದು ಸೂಚಿಸಿರುವ ಅವರು, ಆರೈಕೆ ಮಾಡದ ಮಕ್ಕಳಿಗೆ ಮಾಡಿರುವ ಆಸ್ತಿ ವರ್ಗಾವಣೆ ಅಥವಾ ಉಯಿಲನ್ನು ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ–2007’ರ ಸೆಕ್ಷನ್ 9ರ ಅಡಿಯಲ್ಲಿ, ತಮ್ಮ ಯೋಗಕ್ಷೇಮ ನಿರ್ಲಕ್ಷಿಸುವ ಮಕ್ಕಳ ವಿರುದ್ಧ ಪೋಷಕರು ದೂರು ನೀಡಬಹುದಾಗಿದೆ. ಸೆಕ್ಷನ್ 23ರ ಪ್ರಕಾರ, ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ಉಯಿಲು ಅಥವಾ ದಾನಪತ್ರವನ್ನು ರದ್ದುಗೊಳಿಸಿ, ಆಸ್ತಿಯ ಹಕ್ಕನ್ನು ಪೋಷಕರ ಹೆಸರಿಗೆ ಮರುಸ್ಥಾಪಿಸಬಹುದಾಗಿದೆ; ಈ ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಆದರೆ, ಈ ಕಾನೂನಿನ ಬಗ್ಗೆ ಬಹುತೇಕರಿಗೆ ಅರಿವಿಲ್ಲದಿರುವುದು ಪೋಷಕರನ್ನು ಮಕ್ಕಳು ನಿರ್ಲಕ್ಷಿಸಲು ಪ್ರಮುಖ ಕಾರಣಗಳಲ್ಲೊಂದಾಗಿದೆ. ಹಿರಿಯ ನಾಗರಿಕರನ್ನು ಮಕ್ಕಳು ನಿರ್ಲಕ್ಷಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ವಿಷಯ ವಿಧಾನ ಪರಿಷತ್‌ನಲ್ಲೂ ಚರ್ಚೆಯಾಗಿದೆ.

ADVERTISEMENT

ವೃದ್ಧ ಪೋಷಕರನ್ನು ಮಕ್ಕಳು ಅಸಡ್ಡೆಯಿಂದ ನೋಡುವ ಮನೋಭಾವ ಹೆಚ್ಚುತ್ತಿರುವುದು ನಮ್ಮ ಸಾಮಾಜಿಕ ಸಂರಚನೆಯಲ್ಲಿ ಆಗಿರುವ ಗಂಭೀರ ಪಲ್ಲಟದ ಸಂಕೇತವಾಗಿದೆ. ಮಕ್ಕಳು ಮತ್ತು ಪೋಷಕರ ನಡುವೆ ಗಾಢ ಅನುಬಂಧದ ಭಾರತೀಯ ಕುಟುಂಬ ಪದ್ಧತಿ ವಿಶ್ವದಲ್ಲೇ ಪ್ರಸಿದ್ಧವಾದುದು. ಮಕ್ಕಳನ್ನು ಪೋಷಕರು ಕಾಳಜಿ ಮಾಡುವುದು ಹಾಗೂ ವೃದ್ಧಾಪ್ಯದಲ್ಲಿ ಪೋಷಕರ ಆರೈಕೆಯನ್ನು ಮಕ್ಕಳು ಮಾಡುವುದು ಭಾರತೀಯ ಕುಟುಂಬ ಪದ್ಧತಿಯಲ್ಲಿ ಕರ್ತವ್ಯ ನಿರ್ವಹಣೆ ಅಥವಾ ಹೊಣೆಗಾರಿಕೆಯಷ್ಟೇ ಆಗಿರದೆ, ಅದು ನಮ್ಮ ಜೀವನಮೌಲ್ಯಗಳ ಪರಂಪರೆಯ ಮುಖ್ಯವಾದ ಲಕ್ಷಣವೂ ಆಗಿದೆ. ಆ ಮೌಲ್ಯ ಮಾದರಿಯಲ್ಲಿ ಸವಕಳಿ ಉಂಟಾಗಿರುವುದರ ರೂಪದಲ್ಲಿ ಪೋಷಕರ ನಿರ್ಲಕ್ಷ್ಯದ ಪ್ರಕರಣಗಳನ್ನು ನೋಡಬಹುದಾಗಿದೆ.

ವೈಯಕ್ತಿಕ ಹಿತಾಸಕ್ತಿಯಷ್ಟೇ ಮುಖ್ಯ ಎನ್ನುವ ಭಾವನೆ ಪ್ರಬಲವಾದಾಗ ಯುವ ತಲೆಮಾರಿಗೆ ತಮ್ಮ ಪೋಷಕರು ಹೊರೆಯೆಂದು ಕಾಣಿಸಿದಲ್ಲಿ ಆಶ್ಚರ್ಯವೇನಿಲ್ಲ. ಹಾಗೆಂದು, ಪೋಷಕರನ್ನು ಆಸ್ಪತ್ರೆಗಳಲ್ಲಿ ಬಿಟ್ಟುಹೋದ ಎಲ್ಲ ಮಕ್ಕಳನ್ನೂ ನಿರ್ದಯಿಗಳೆಂದು ಹೇಳುವುದು ಸಾಧ್ಯವಿಲ್ಲ. ಆರ್ಥಿಕ ತೊಂದರೆಯಿಂದ ಬಳಲುವವರು ತಮ್ಮ ಪೋಷಕರನ್ನು ಸಾಕಲಾಗದೆ, ಉಚಿತ ಊಟ, ಚಿಕಿತ್ಸೆ ಮತ್ತು ವಸತಿ ದೊರೆಯುತ್ತದೆನ್ನುವ ಕಾರಣಕ್ಕಾಗಿ ತಂದೆ– ತಾಯಿಯನ್ನು ಆಸ್ಪತ್ರೆಯಲ್ಲಿ ಬಿಟ್ಟುಹೋಗುವುದಿದೆ. ಆದರೆ, ತಂದೆ– ತಾಯಿಯ ಎಲ್ಲ ಆಸ್ತಿಯನ್ನೂ ಕಬಳಿಸಿ, ಬರಿಗೈ ಆದ ಅವರನ್ನು ಕಡೆಗಣಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳ ಹುಟ್ಟಿಸುವ ಸಂಗತಿ.

ಪೋಷಕರನ್ನು ನೋಡಿಕೊಳ್ಳಬೇಕಾದುದು ಮಕ್ಕಳ ಕರ್ತವ್ಯ ಮಾತ್ರವಲ್ಲ, ಅದು ಭಾರತೀಯ ಕೌಟುಂಬಿಕ ಪದ್ಧತಿಯ ಮೌಲ್ಯ ಮಾದರಿಯೂ ಹೌದು. ಆ ನೈತಿಕ ನೆಲಗಟ್ಟು ಇತ್ತೀಚಿನ ವರ್ಷಗಳಲ್ಲಿ ಶಿಥಿಲವಾಗುತ್ತಿರುವುದು ಕಳವಳಕಾರಿ. ಹಿರಿಯ ನಾಗರಿಕರನ್ನು ಅಸಹಾಯಕತೆಗೆ ದೂಡುವ ಅಮಾನವೀಯ ಕೃತ್ಯಗಳನ್ನು ಗುರುತಿಸಿ, ಕಾನೂನು ಕ್ರಮದ ಮೂಲಕ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಸಮಾಜದಲ್ಲಿನ ನೈತಿಕ ಅಧಃಪತನವನ್ನು ತಡೆಗಟ್ಟುವುದು ಕಾನೂನಿನಿಂದ ಸಾಧ್ಯವಿಲ್ಲ. ಕುಟುಂಬ ಹಾಗೂ ಸಮಾಜದ ಜೀವಕೋಶವಾದ ನೈತಿಕತೆಗೆ ತಗುಲಿರುವ ರೋಗ ನಿವಾರಣೆಗೆ ದೊಡ್ಡದೊಂದು ನೈತಿಕ ಆಂದೋಲನವೇ ನಡೆಯಬೇಕಾಗಿದೆ. ಘನತೆಯಿಂದ ಕೂಡಿರಬೇಕಾದ ವೃದ್ಧಾಪ್ಯವು ಅಸುರಕ್ಷತೆ ಹಾಗೂ ನೋವಿನಿಂದ ಕೂಡಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.