ADVERTISEMENT

ಸಂಪಾದಕೀಯ | ಬಿಬಿಎಂಪಿ: ಜಮೀನು ಪುಕ್ಕಟೆ ಪಡೆಯುವ ಪರಿಪಾಟ ನಿಲ್ಲಿಸಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 20:18 IST
Last Updated 13 ಫೆಬ್ರುವರಿ 2022, 20:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು ಮಹಾನಗರದಲ್ಲಿ ‘ಪರಿಷ್ಕೃತ ನಗರ ಮಹಾ ಯೋಜನೆ– 2015’ರ ಪ್ರಕಾರ ಕೆಲವು ರಸ್ತೆ ಗಳನ್ನು ವಿಸ್ತರಿಸಲು ಗುರುತಿಸಲಾಗಿದೆ.ನಗರ ಮಹಾ ಯೋಜನೆಯಡಿ ವಿಸ್ತರಣೆಗೆ ಗೊತ್ತುಪಡಿಸಿರುವ ರಸ್ತೆಗಳ ಅಕ್ಕಪಕ್ಕ ಜಮೀನು ಹೊಂದಿರುವವರು ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದಾಗ, ರಸ್ತೆ ವಿಸ್ತರಣೆಗೆ ಅಗತ್ಯವಿರುವಷ್ಟು ಜಾಗವನ್ನು ಆಯಾ ರಸ್ತೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಕಟ್ಟಡ ನಕ್ಷೆಯಲ್ಲಿ ಉಲ್ಲೇಖಿಸಲಾಗುತ್ತಿದೆ.

ಇಂತಹ ರಸ್ತೆ ವಿಸ್ತರಣೆಗೆ ಅಗತ್ಯವಿರುವಷ್ಟು ಜಮೀನನ್ನು ಅರ್ಜಿದಾರರು ಪುಕ್ಕಟೆಯಾಗಿ ಪಾಲಿಕೆಗೆ ಹಸ್ತಾಂತರಿಸುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತರು 2016ರ ಫೆಬ್ರುವರಿ 29ರಂದು ಆದೇಶ ಹೊರಡಿಸಿದ್ದರು. ಕಟ್ಟಡ ನಕ್ಷೆ ಮಂಜೂರಾತಿ ಪಡೆಯಬೇಕಾದರೆ ಅರ್ಜಿದಾರರು ರಸ್ತೆಯ ವಿಸ್ತರಣೆಗಾಗಿ ತಮ್ಮ ಜಾಗದ ಹಕ್ಕು ಬಿಟ್ಟುಕೊಡುವ ಪತ್ರ ನೀಡಬೇಕಾಗಿದೆ. ಅವರು ಬಿಟ್ಟುಕೊಡುವ ಜಮೀನಿಗೆ ಭೂಪರಿಹಾರವಾಗಲೀ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ಪ್ರಮಾಣಪತ್ರವಾಗಲೀ ಸಿಗುವುದಿಲ್ಲ. ಕಟ್ಟಡ ನಕ್ಷೆಗೆ ಮಂಜೂ ರಾತಿ ಸಿಗಬೇಕಿದ್ದರೆ, ತಮಗೆ ಇಚ್ಛೆ ಇಲ್ಲದಿದ್ದರೂ ಜಮೀನಿನ ಸ್ವಲ್ಪ ಭಾಗ ಬಿಟ್ಟುಕೊಡಲು ಒಪ್ಪಿಗೆ ನೀಡ ಬೇಕಾದ ಅನಿವಾರ್ಯ ಇದೆ. ಬಿಬಿಎಂಪಿಯ ಈ ಅಸಮಂಜಸ ನಡೆಗೆ ಹೈಕೋರ್ಟ್‌ ಪೂರ್ಣವಿರಾಮ ಹಾಕಿದೆ.

ಕಟ್ಟಡ ಯೋಜನೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವ ಭೂಮಾಲೀಕರು ತಮ್ಮ ಜಮೀನನ್ನು ರಸ್ತೆ ವಿಸ್ತರಣೆಗೆ ಪುಕ್ಕಟೆಯಾಗಿ ಬಿಟ್ಟುಕೊಡುವಂತೆ ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆಯು ಸಂವಿ ಧಾನದ 300ಎ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲ; ಬಿಬಿಎಂಪಿ ಹೊರಡಿಸಿರುವ ಸುತ್ತೋಲೆಯು ತಾರತಮ್ಯದಿಂದ ಕೂಡಿದೆ ಎಂದೂ ಹೈಕೋರ್ಟ್‌ ಹೇಳಿದೆ.

2015ರ ನಗರ ಮಹಾ ಯೋಜನೆಯಲ್ಲಿ ರಸ್ತೆಗೆ ಗೊತ್ತುಪಡಿಸಲಾದ ಪ್ರದೇಶಗಳ ವ್ಯಾಪ್ತಿಯಲ್ಲಿನ ಭೂಮಾಲೀಕರಲ್ಲಿಕಟ್ಟಡ ನಕ್ಷೆ ಮಂಜೂ ರಾತಿಗೆ ಅರ್ಜಿ ಸಲ್ಲಿಸಿದವರ ಸ್ಥಿರಾಸ್ತಿಯನ್ನು ರಸ್ತೆಗಾಗಿ ಸ್ವಾಧೀನಪಡಿಸಿಕೊಂಡರೆ, ಅವರು ಕಟ್ಟಡ ಯೋಜನೆಗೆ ಮಂಜೂರಾತಿಯನ್ನು ಮಾತ್ರ ಪಡೆಯುತ್ತಾರೆ.ಯಾರು ಕಟ್ಟಡ ಯೋಜನೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿ ರುವುದಿಲ್ಲವೋ ಅಂತಹವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯ ಕಲಂ 71ರ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಪರಿಷ್ಕೃತ ನಗರ ಯೋಜನೆಯಲ್ಲಿ ರಸ್ತೆ ಎಂದು ಗುರುತಿಸಲಾಗಿರುವ ತಮ್ಮ ಆಸ್ತಿಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಅವರು ಆಸ್ತಿಯ ಮಾಲೀಕತ್ವದಿಂದ ವಂಚಿತರಾಗುವುದಿಲ್ಲ ಎಂಬುದನ್ನೂ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಹೈಕೋರ್ಟ್‌ನ ಈ ಆದೇಶವು ಆಸ್ತಿ ಮಾಲೀಕರ ನ್ಯಾಯಬದ್ಧ ಹಕ್ಕನ್ನು ಎತ್ತಿ ಹಿಡಿದಿದೆ. ತಮ್ಮ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ಹೊರಟು ಇಕ್ಕಟ್ಟಿಗೆ ಸಿಲುಕಿದ್ದ ಸಾವಿರಾರು ಸಂತ್ರಸ್ತರು ಹೈಕೋರ್ಟ್‌ನ ಈ ಆದೇಶದಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.

ಸಂವಿಧಾನದ 44ನೇ ತಿದ್ದುಪಡಿಯ ಪ್ರಕಾರ, ಆಸ್ತಿ ಹೊಂದುವುದು ಮೂಲಭೂತ ಹಕ್ಕು ಅಲ್ಲ. ಆದರೆ, ಸಂವಿಧಾನದ 300ಎ ವಿಧಿಯ ಪ್ರಕಾರ ಇದು ಸಾಂವಿಧಾನಿಕ ಹಕ್ಕು. ಕಾರ್ಯಕಾರಿ ಆದೇಶ ವೊಂದನ್ನೇ ಇರಿಸಿಕೊಂಡು, ನಿರ್ದಿಷ್ಟ ಕಾನೂನಿನ ಅಧಿಕಾರ ಅಥವಾ ಸೂಕ್ತ ಶಾಸನ ಇಲ್ಲದೆ ವ್ಯಕ್ತಿಯ ಸ್ಥಿರಾಸ್ತಿಯ ಮಾಲೀಕತ್ವದ ಅನುಭೋಗವ‌ನ್ನು ತಪ್ಪಿಸಲಾಗದು ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಈ ಮಾತನ್ನು ಹೈಕೋರ್ಟ್‌ ಉಲ್ಲೇಖಿಸಿದೆ. ಬಿಬಿಎಂಪಿಯೇ ಇರಲಿ ಅಥವಾ ಸರ್ಕಾರದ ಇನ್ಯಾವುದೇ ಇಲಾಖೆಯೇ ಇರಲಿ, ಯಾವುದೇ ವ್ಯಕ್ತಿಯ ಜಮೀನನ್ನು ಪುಕ್ಕಟೆಯಾಗಿ ಕಿತ್ತುಕೊಳ್ಳಲು ಅವಕಾಶ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಸಾರ್ವಜನಿಕ ಉದ್ದೇಶಕ್ಕಾಗಿ ನಡೆಸುವ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಕಟ್ಟಡ ಯೋಜನೆಗೆ ಮಂಜೂರಾತಿ ನೀಡುವುದು ಎರಡು ಪ್ರತ್ಯೇಕ ವಿಚಾರಗಳು. ಇವೆರಡನ್ನೂ ಬೆಸೆಯುವ ಮೂಲಕ ಬಿಬಿಎಂಪಿ ಅನಗತ್ಯ ಗೊಂದಲ ಸೃಷ್ಟಿಸಿತ್ತು. ಬಿಬಿಎಂಪಿಯ ಈ ನಿರ್ಧಾರದಿಂದ ನಗರದ ಅಭಿವೃದ್ಧಿ ಪ್ರಕ್ರಿಯೆಗೂ ಹಿನ್ನಡೆ ಉಂಟಾಗಿದೆ ಎಂದರೆ ತಪ್ಪಾಗಲಾರದು. ನಗರ ಮಹಾ ಯೋಜನೆಯಲ್ಲಿ ಗುರುತಿಸಲಾದ ರಸ್ತೆಗೆ, ಉಚಿತವಾಗಿ ಎಲ್ಲಿ ಜಾಗ ಬಿಟ್ಟುಕೊಡಬೇಕಾಗುತ್ತದೋ ಎಂಬ ಆತಂಕದಿಂದ ಅನೇಕರು ತಮ್ಮ ಜಮೀನಿನಲ್ಲಿ ಕಟ್ಟಡ ನಿರ್ಮಿ ಸುವ ಯೋಜನೆಯನ್ನೇ ಮುಂದಕ್ಕೆ ಹಾಕಿದ್ದರು. ಇದರಿಂದ ಬಿಬಿಎಂಪಿಗೆ ಪರೋಕ್ಷವಾಗಿ ನಷ್ಟವೇ ಉಂಟಾಗಿದೆ. ಪಾಲಿಕೆಯ ಈ ನಡೆಯಿಂದ ಅನೇಕರು ಅನಗತ್ಯ ಕಿರಿಕಿರಿ ಎದುರಿಸಿದ್ದರು. ಹೈಕೋರ್ಟ್‌ ಆದೇಶಕ್ಕೆ ಬಿಬಿಎಂಪಿ ತಲೆಬಾಗಬೇಕು.

ಕಟ್ಟಡ ಯೋಜನೆಗಾಗಿ ಅರ್ಜಿ ಸಲ್ಲಿಸುವ ಸ್ವತ್ತಿನ ಮಾಲೀಕರಿಂದ ಹಕ್ಕು ಬಿಟ್ಟುಕೊಡುವಪತ್ರ ಪಡೆಯುವ ನಿರ್ಧಾರವನ್ನು ಕೈಬಿಡಬೇಕು. 2016ರಿಂದ ಇಲ್ಲಿಯವರೆಗೆ ಬಿಬಿಎಂಪಿಯು ರಸ್ತೆ ವಿಸ್ತರಣೆ ಸಲುವಾಗಿ ಸಾವಿರಾರು ಮಂದಿಯಿಂದ ಇಂತಹ ಪತ್ರಗಳನ್ನು ಪಡೆದುಕೊಂಡಿದೆ. ಹೈಕೋರ್ಟ್‌ ನೀಡಿರುವ ತೀರ್ಪಿನ ಆಶಯವನ್ನು ಅರ್ಥೈಸಿಕೊಂಡು ಅಂತಹ ಸ್ವತ್ತುಗಳ ಮಾಲೀಕರ ಪಟ್ಟಿ ತಯಾರಿಸಿ, ಅವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಭೂಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT