ADVERTISEMENT

ಸಂಪಾದಕೀಯ | ವಕ್ಫ್‌ ಕಾಯ್ದೆ: ವಿವಾದಿತ ಅಂಶಗಳು ಗಂಭೀರ ಪರಿಶೀಲನೆಗೆ ಒಳಪಡಲಿ

ಪ್ರಜಾವಾಣಿ ವಿಶೇಷ
Published 19 ಏಪ್ರಿಲ್ 2025, 0:19 IST
Last Updated 19 ಏಪ್ರಿಲ್ 2025, 0:19 IST
...
...   

ವಕ್ಫ್‌ (ತಿದ್ದುಪಡಿ) ಕಾಯ್ದೆಯಲ್ಲಿ ಇರುವ ಕೆಲವು ಪ್ರಮುಖ ಅಂಶಗಳ ಕುರಿತು ವ್ಯಕ್ತವಾಗಿರುವ ಕಳವಳವನ್ನು ಸುಪ್ರೀಂ ಕೋರ್ಟ್‌ ಗಣನೆಗೆ ತೆಗೆದುಕೊಂಡಿದೆ. ಪ್ರಮುಖ ಅಂಶಗಳನ್ನು ಮುಂದಿನ ವಿಚಾರಣೆವರೆಗೆ ಜಾರಿಗೆ ತರಬಾರದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೇಳಿದೆ. ವಿವಾದಾತ್ಮಕ ತಿದ್ದುಪಡಿಗಳಿಗೆ ಸಂಬಂಧಿಸಿ ಕೆಲವು ಮಹತ್ವದ ಪ್ರಶ್ನೆಗಳನ್ನು ನ್ಯಾಯಪೀಠವು ಕೇಳಿದೆ. ಈ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರವನ್ನು ಸರ್ಕಾರ ನೀಡಿಲ್ಲ. ಕೇಂದ್ರ ವಕ್ಫ್‌ ಪರಿಷತ್‌ ಮತ್ತು ರಾಜ್ಯ ವಕ್ಫ್‌ ಮಂಡಳಿಗಳಿಗೆ ಮುಸ್ಲಿಮೇತರರನ್ನೂ ಸದಸ್ಯರನ್ನಾಗಿ ಸೇರಿಸುವುದು, ವಕ್ಫ್‌ ಎಂದು ಘೋಷಿಸಲಾಗಿರುವ ಆಸ್ತಿಯನ್ನು ಡಿನೋಟಿಫೈ ಮಾಡುವುದು, ವಕ್ಫ್‌ ಆಸ್ತಿಯ ಸಿಂಧುತ್ವವನ್ನು ರದ್ದು ಮಾಡಲು ಜಿಲ್ಲಾಧಿಕಾರಿಗೆ ಪರಮಾಧಿಕಾರ ನೀಡುವುದು ಮುಂತಾದ ವಿಚಾರಗಳಲ್ಲಿ ಪ್ರಶ್ನೆ ಕೇಳಲಾಗಿದೆ. ಮೇ 5ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಈ ಯಾವುದೇ ಅಂಶವನ್ನು ಜಾರಿಗೆ ತರುವುದಿಲ್ಲ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅನಿವಾರ್ಯವಾಗಿ ಭರವಸೆ ಕೊಡಬೇಕಾಯಿತು. 

ತಿದ್ದುಪಡಿ ಕಾಯ್ದೆಗೆ ನ್ಯಾಯಾಲಯವು ತಡೆ ನೀಡಿದೆ ಎಂದು ಹೇಳಲಾಗದು. ಆದರೆ, ಕಾಯ್ದೆಯಲ್ಲಿ ಇರುವ ಕೆಲವು ಅಂಶಗಳ ಜಾರಿಯು ನಿರ್ದಿಷ್ಟ ಅವಧಿಯವರೆಗೆ ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಬೇಕಿದ್ದ ಭರವಸೆಯನ್ನು ನೀಡುವ ಮೂಲಕ ತಡೆಯಿಂದ ತಪ್ಪಿಸಿಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಸರ್ಕಾರಕ್ಕೆ ಇನ್ನಷ್ಟು ಸಮಯ ಬೇಕಿತ್ತು. ಅದಕ್ಕಾಗಿ ಎರಡನೇ ದಿನದ ವಿಚಾರಣೆಯ ಸಂದರ್ಭದಲ್ಲಿ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದೆ. ಲಿಖಿತ ಹೇಳಿಕೆಗಳನ್ನು ಸಲ್ಲಿಸಬೇಕಿರುವುದರಿಂದ ಸಮಯ ಬೇಕು ಎಂಬ ಕಾರಣ ಕೊಟ್ಟಿದೆ. ಸಾಂವಿಧಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ಕಾಯ್ದೆಯ ಪರಿಣಾಮಗಳ ಕುರಿತು ನ್ಯಾಯಪೀಠವು ಆರಂಭದಲ್ಲಿಯೇ ಪ್ರಶ್ನೆಗಳನ್ನು ಎತ್ತಿತು. ಹಾಗಾಗಿ, ನ್ಯಾಯಾಲಯವು ಸರ್ಕಾರದ ನಿಲುವಿಗೆ ಪೂರಕವಾಗಿ ಇಲ್ಲ ಎಂಬುದು ಆರಂಭದಲ್ಲಿಯೇ ಸ್ಪಷ್ಟವಾಗಿತ್ತು. ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ, ನ್ಯಾಯ ಮೂರ್ತಿಗಳಾದ ಸಂಜಯ ಕುಮಾರ್‌ ಮತ್ತು ಕೆ.ವಿ. ವಿಶ್ವನಾಥನ್‌ ಅವರ ಪೀಠವು ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. 

ಮುಸ್ಲಿಂ ಸಮುದಾಯ ಮತ್ತು ಸಮುದಾಯದ ಸಂಘಟನೆಗಳು ಕಾಯ್ದೆಯ ಕೆಲವು ಅಂಶಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ. ಇತರರು ಕೂಡ ಕಾಯ್ದೆಯ ಈ ಅಂಶಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಸಂವಿಧಾನವು ನೀಡಿರುವ ಸಮಾನತೆಯ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಈ ಅಂಶಗಳು ವ್ಯತಿರಿಕ್ತವಾಗಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹಿಂದೂ ಧಾರ್ಮಿಕ ಟ್ರಸ್ಟ್‌ಗಳು ಮತ್ತು ದತ್ತಿಗಳಿಗೆ ಹಿಂದೂಯೇತರರನ್ನು ಸದಸ್ಯರನ್ನಾಗಿ ನೇಮಕ ಮಾಡಲು ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಯನ್ನು ನ್ಯಾಯಪೀಠವು ಕೇಳಿದೆ. ವಕ್ಫ್‌ ಕಾನೂನು ಸುಧಾರಣೆಯು ಸರ್ಕಾರದ ಉದ್ದೇಶ ಅಲ್ಲ; ಬದಲಿಗೆ ವಕ್ಫ್‌ ಮೇಲೆ ನಿಯಂತ್ರಣ ಹೇರಿ, ಅದರ ನಿರ್ವಹಣೆಯನ್ನು ಕೈಗೆ ತೆಗೆದುಕೊಳ್ಳುವುದು ಅದರ ಉದ್ದೇಶ ಎಂಬ ಸಂದೇಹಕ್ಕೆ ಇವೆಲ್ಲವೂ ಕಾರಣವಾಗಿವೆ. ವಕ್ಫ್‌ ಆಸ್ತಿಯ ನಿರ್ವಹಣೆಯ ಹೆಸರಿನಲ್ಲಿ ಎಲ್ಲ ಆಸ್ತಿಯನ್ನು ಸರ್ಕಾರ ವಶಕ್ಕೆ ಪ‍ಡೆಯಬಹುದು ಎಂಬ ಆತಂಕವು ಮುಸ್ಲಿಂ ಸಮುದಾಯದಲ್ಲಿ ಇದೆ. ಮಸೂದೆ ರಚನೆಗೆ ಮುನ್ನ ಸಮುದಾಯದ ಜೊತೆಗೆ ಸಮಾಲೋಚನೆ ನಡೆಸಿಲ್ಲ. ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ವಕ್ಫ್‌ (ತಿದ್ದುಪಡಿ) ಮಸೂದೆಯನ್ನು ಒಪ್ಪಿಸಲಾಗಿತ್ತು. ಆದರೆ, ಇಲ್ಲಿ ಅರ್ಥಪೂರ್ಣವಾದ ಸಮಾಲೋಚನೆ ನಡೆಯಲೇ ಇಲ್ಲ. ವಿರೋಧ ಪಕ್ಷಗಳ ಸದಸ್ಯರು ಮುಂದಿಟ್ಟ ಯಾವುದೇ ಶಿಫಾರಸನ್ನು ಮಸೂದೆಗೆ ಸೇರಿಸಿಕೊಂಡಿಲ್ಲ. ಕಾಯ್ದೆಯಲ್ಲಿ ಕೆಲವು ಉತ್ತಮ ಅಂಶಗಳೂ ಇವೆ ಎಂಬುದನ್ನು ನ್ಯಾಯಾಲಯ ಗುರುತಿಸಿದೆ. ಈ ಅಂಶಗಳನ್ನು ಉಳಿಸಿಕೊಳ್ಳಬೇಕು ಎಂದೂ ಹೇಳಿದೆ. ಆದರೆ, ವಿವಾದಾತ್ಮಕವಾದ ಎಲ್ಲ ಅಂಶಗಳನ್ನು ಗಂಭೀರ ಪರಿಶೀಲನೆಗೆ ಒಳಪಡಿಸಲಾಗುವುದು ಎಂಬುದನ್ನು ಸ್ಪಷ್ಟಪಡಿಸಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.