ADVERTISEMENT

ಸಂಪಾದಕೀಯ- ಅಭಿವೃದ್ಧಿ ಹೆಸರಲ್ಲಿ ಆಕ್ರಮಣ ಸಲ್ಲ:ಘಟ್ಟಗಳ ಸುರಕ್ಷತೆಯಲ್ಲಿ ರಾಜಿ ಬೇಡ

ಸಂಪಾದಕೀಯ
Published 13 ಜನವರಿ 2026, 0:01 IST
Last Updated 13 ಜನವರಿ 2026, 0:01 IST
<div class="paragraphs"><p>ಸಂಪಾದಕೀಯ | ಅಭಿವೃದ್ಧಿ ಹೆಸರಿನಲ್ಲಿ ಆಕ್ರಮಣ ಸಲ್ಲ: ಘಟ್ಟಗಳ ಸುರಕ್ಷತೆಯಲ್ಲಿ ರಾಜಿ ಬೇಡ</p></div>

ಸಂಪಾದಕೀಯ | ಅಭಿವೃದ್ಧಿ ಹೆಸರಿನಲ್ಲಿ ಆಕ್ರಮಣ ಸಲ್ಲ: ಘಟ್ಟಗಳ ಸುರಕ್ಷತೆಯಲ್ಲಿ ರಾಜಿ ಬೇಡ

   

ಅಪಾರ ಜೀವವೈವಿಧ್ಯವನ್ನು ಒಡಲೊಳಗೆ ಇಟ್ಟುಕೊಂಡು, ಭಾರತವೂ ಸೇರಿ ಜಗತ್ತನ್ನೇ ಅಮ್ಮನಂತೆ ಪೊರೆಯುತ್ತಿರುವ ಪಶ್ಚಿಮಘಟ್ಟದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಅವ್ಯಾಹತ ಆಕ್ರಮಣ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌– ಯಾವ ಪಕ್ಷಗಳ ಆಡಳಿತಾವಧಿಯಲ್ಲೂ ಈ ಆಕ್ರಮಣವನ್ನು ತಪ್ಪಿಸುವ ನೈಜ ಕಾಳಜಿ ವ್ಯಕ್ತವಾಗಿಲ್ಲ. ಸರ್ಕಾರದ ನಡೆಯ ವಿರುದ್ಧ ಜನರು, ಪರಿಸರವಾದಿಗಳು, ಮಠಾಧೀಶರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಹೋರಾಟ ತೀವ್ರಗೊಂಡಾಗ ಹಿಂದೆ ಸರಿಯುವ ಸರ್ಕಾರಗಳು, ಮತ್ತೊಂದು ರೂಪದಲ್ಲಿ ಯೋಜನೆಯ ಅನುಷ್ಠಾನಕ್ಕೆ ಹುನ್ನಾರ ನಡೆಸುತ್ತಲೇ ಬಂದಿರುವುದು ಮತ ಹಾಕಿ ಗೆಲ್ಲಿಸಿದವರಿಗೆ ಮಾಡುತ್ತಿರುವ ದ್ರೋಹ. ಬೇಡ್ತಿ–ಅಘನಾಶಿನಿ ಕೊಳ್ಳದಲ್ಲಿ ಜೀವವಿರೋಧಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾದಾಗ ತೀವ್ರ ಹೋರಾಟ ನಡೆದಿತ್ತು. ಆಗ ಹಿಂದೆ ಸರಿದಿದ್ದ ಸರ್ಕಾರ, ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ತಿರುವು ಯೋಜನೆಗಳತ್ತ ಈಗ ಹೆಜ್ಜೆ ಇಟ್ಟಿದೆ. ಇದನ್ನು ವಿರೋಧಿಸಿ ‘ಬೇಡ್ತಿ–ಅಘನಾಶಿನಿ ಸಂರಕ್ಷಣಾ ಸಮಿತಿ’ಯ ನೇತೃತ್ವದಲ್ಲಿ ಶಿರಸಿಯಲ್ಲಿ ನಡೆದ ಬೃಹತ್ ಸಮಾವೇಶವು, ‘ಮಾನವ ಹಕ್ಕು ಕಾಯ್ದೆಯ ಮಾದರಿಯಲ್ಲಿ ನದಿಗಳಿಗೂ ಜೀವಿಸುವ ಹಾಗೂ ಸಹಜ ಹರಿವು ಉಳಿಸಿಕೊಳ್ಳುವ ಹಕ್ಕು ನೀಡಬೇಕು’ ಎಂಬ ಹಕ್ಕೊತ್ತಾಯ ಮಂಡಿಸಿದೆ. 2021ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಬೇಡ್ತಿ–ವರದಾ ನದಿ ಜೋಡಣೆಯ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿದ್ದರು. ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯನ್ನು (ಎನ್‌ಡಬ್ಲ್ಯುಡಿಎ) ಕೋರಿದ್ದರು. ಆಗ ಯೋಜನೆ ಜಾರಿಯಾಗಲಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ, ಅರಣ್ಯಕ್ಕೆ ಧಕ್ಕೆಯಾಗದಂತೆ ಯೋಜನೆಗೆ ಹೊಸ ಸ್ವರೂಪ ನೀಡಲಾಗಿತ್ತು. 2025ರಲ್ಲಿ ಯೋಜನೆ
ಯಲ್ಲಿ ಸಾಕಷ್ಟು ಮಾರ್ಪಾಟು ಮಾಡಿರುವ ಎನ್‌ಡಬ್ಲ್ಯುಡಿಎ ಸಲ್ಲಿಸಿದ್ದ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಜಲಶಕ್ತಿ ಸಚಿವಾಲಯ ಸಿದ್ಧಪಡಿಸುವ ಡಿಪಿಆರ್‌ಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ₹10 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ ₹9 ಸಾವಿರ ಕೋಟಿ ಭರಿಸಲಿದೆ‌.

ಬೇಡ್ತಿ ನದಿಯ ನೀರನ್ನು ವರದಾ ನದಿಗೆ ಹರಿಸಿದರೆ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಯ 16 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಸಿಗುತ್ತದೆ; ಅಣೆಕಟ್ಟೆಯಲ್ಲಿ ಸಂಗ್ರಹಿಸಿಟ್ಟುಕೊಂಡರೆ ಹಾವೇರಿ ಜಿಲ್ಲೆಗೆ ವರ್ಷಪೂರ್ತಿ ನೀರು ಸಿಗುತ್ತದೆ ಎಂಬುದು ಈ ಭಾಗದ ರೈತರ, ಜನಪ್ರತಿನಿಧಿಗಳ ಆಶಯ. ರಾಜ್ಯದ ಎಲ್ಲ ಕಡೆಯ ಜನ, ಜಮೀನಿಗೆ ಸ್ಥಳೀಯವಾಗಿ ಅಥವಾ ಪರ್ಯಾಯ ಮೂಲಗಳನ್ನು ಹುಡುಕಿ, ನೀರೊದಗಿಸುವುದು ಸರ್ಕಾರದ ಕರ್ತವ್ಯವೂ ಹೌದು. ಅದಕ್ಕಾಗಿ, ಪಶ್ಚಿಮಘಟ್ಟದ ಮೇಲೆ ಕಣ್ಣು ಹಾಕುವುದು ಸಮರ್ಥನೀಯವಲ್ಲ. ಪಶ್ಚಿಮಘಟ್ಟವನ್ನು ಕಾಡುತ್ತಿರುವ ನದಿ ಜೋಡಣೆಯ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಕಾಂಗ್ರೆಸ್‌ ಸರ್ಕಾರ ಒಂದೇ ನಿಲುವು ತಾಳಿವೆ. ಹೀಗಾಗಿ, ಮುಂದೆ ಆಗಲಿರುವ ಅನಾಹುತಗಳಿಗೆ ಎರಡೂ ಸರ್ಕಾರಗಳೂ ಉತ್ತರದಾಯಿ ಆಗಲಿವೆ.

ADVERTISEMENT

ಉತ್ತರ ಕನ್ನಡದಲ್ಲಿ ಶರಾವತಿ ಟೇಲರೇಸ್‌, ಕೈಗಾ ಅಣುಸ್ಥಾವರ ಸೇರಿ ಹಲವು ಯೋಜನೆಗಳಿವೆ. ಶರಾವತಿ ಪಂಪ್ಡ್ ಸ್ಟೋರೇಜ್, ಅಂಕೋಲಾದಲ್ಲಿ ಆಳಸಮುದ್ರ ಬಂದರು ಯೋಜನೆಗಳ ಜತೆಗೆ ರಸ್ತೆ, ರೈಲು ವಿಸ್ತರಣೆ ಯೋಜನೆಗಳೂ ಚಾಲನೆಯ ಹಂತದಲ್ಲಿವೆ. ಇದೆಲ್ಲದರ ಪರಿಣಾಮವೆಂಬಂತೆ, ಅಲ್ಲಲ್ಲಿ ಭೂ ಕುಸಿತವೂ ಉಂಟಾಗುತ್ತಿದೆ. ಭಾರತ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಎರಡು ವರ್ಷಗಳ ಹಿಂದೆ ಅಧ್ಯಯನ ನಡೆಸಿ– 439 ಸ್ಥಳಗಳು ಭೂಕುಸಿತದ ಅಪಾಯ ಎದುರಿಸುತ್ತಿದ್ದು, ನದಿ ಜೋಡಣೆ ಸೇರಿ ಅಭಿವೃದ್ಧಿ ಯೋಜನೆಗಳಿಗೆ ಪಶ್ಚಿಮಘಟ್ಟ ನಾಶವಾದರೆ ಇಂತಹ ಅವಘಡಗಳು ಘಟಿಸುತ್ತಲೇ ಸಾಗುತ್ತವೆ ಎಂದು ವರದಿ ನೀಡಿತ್ತು. ಈಗಾಗಲೇ ಧಾರಣಾ ಸಾಮರ್ಥ್ಯ ಕಳೆದುಕೊಂಡಿರುವ ಜಿಲ್ಲೆಯಲ್ಲಿ ಮತ್ತಷ್ಟು ಯೋಜನೆಗಳ ಹೇರಿಕೆಯ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಿ ತಬ್ಬಲಿಗಳನ್ನಾಗಿಸುವ ಯತ್ನ ನಡೆಯುತ್ತಿದೆ. ಮತ್ತೊಂದೆಡೆ ಜನರಿಗೆ ಆಸರೆಯಾಗಿರುವ ಅರಣ್ಯವನ್ನು ಅಭಿವೃದ್ಧಿ ಯೋಜನೆಗಳಿಗಾಗಿ ಬಲಿ ಕೊಡುವ ದುರಾಕ್ರಮಣವನ್ನೂ ಸರ್ಕಾರಗಳು ಮಾಡುತ್ತಿವೆ. ಇದು ತಪ್ಪಬೇಕೆಂಬುದು ಜನರ ನಿರೀಕ್ಷೆ. ಜನರು ತಮ್ಮ ಬಾಳ್ವೆಗೆ ಅವಲಂಬಿಸಿರುವ ಅರಣ್ಯ, ಹವಾಮಾನ ವೈಪರೀತ್ಯ ತಡೆಗೆ ಏಕೈಕ ಪರಿಹಾರವಾದ ಪಶ್ಚಿಮಘಟ್ಟದ ರಕ್ಷಣೆ ಸರ್ಕಾರದ ಕಾಯಕವಾಗಬೇಕು. ಅದನ್ನು ಬಿಟ್ಟು ಯಾರದ್ದೋ ಹಿತಾಸಕ್ತಿಗಾಗಿ ವಿನಾಶಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ಜನವಿರೋಧಿ ನಡೆ. ಸ್ಥಳೀಯ ಮೂಲ ನಿವಾಸಿಗಳು, ಪರಿಸರ ತಜ್ಞರು, ವಿಜ್ಞಾನಿಗಳ ಅಭಿಪ್ರಾಯವನ್ನು ಸರ್ಕಾರಗಳು ಇನ್ನಾದರೂ ಗೌರವಿಸಿ, ನದಿ ಜೋಡಣೆಯನ್ನು ಕೈಬಿಡಬೇಕು. ತನ್ಮೂಲಕ ಪರಿಸರ ರಕ್ಷಣೆಯ ತನ್ನ ಬಾಧ್ಯತೆಯನ್ನು ಹಾಗೂ ಕಳಕಳಿಯನ್ನು ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.