ADVERTISEMENT

ಸಂಪಾದಕೀಯ| ಅಪಘಾತದಲ್ಲಿ ಮಿಸ್ತ್ರಿ ದುರ್ಮರಣ ಕಲಿಯಬೇಕಾದ ಪಾಠ ಏನು?

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 19:30 IST
Last Updated 8 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಶದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದಾಗಿರುವ ‘ಟಾಟಾ ಸನ್ಸ್‌’ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ದುರ್ಮರಣವು ದೇಶದಲ್ಲಿ ಕಾರು ಪ್ರಯಾಣಿಕರ ಸುರಕ್ಷತೆಯ ವಿಚಾರವಾಗಿ ನಿಯಮಗಳು ಸರಿಯಾಗಿ ಇಲ್ಲದಿರುವುದರತ್ತ ಗಮನವನ್ನು ಮತ್ತೆ ಸೆಳೆದಿದೆ. ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಅವರು ಮೃತಪಟ್ಟಿದ್ದಾರೆ. ಮಿಸ್ತ್ರಿ ಹಾಗೂ ಪಾಂಡೋಲೆ ಅವರು ಐಷಾರಾಮಿ ಕಾರೊಂದರ ಹಿಂಬದಿಯ ಆಸನದಲ್ಲಿ ಕುಳಿತು, ಸೀಟ್‌ ಬೆಲ್ಟ್‌ ಧರಿಸದೆಯೇ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಅನಾಹಿತಾ ಪಾಂಡೋಲೆ ಮತ್ತು ಚಾಲಕಿಯ ಪಕ್ಕದ ಆಸನದಲ್ಲಿದ್ದವರು ಸೀಟ್‌ ಬೆಲ್ಟ್‌ ಧರಿಸಿದ್ದರು. ಬದುಕುಳಿದಿರುವ ಅವರಿಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ಹೇಳಿವೆ. ರಸ್ತೆ ಅಪಘಾತಗಳು ಸಂಭವಿಸಿದಾಗ ಸೀಟ್‌ ಬೆಲ್ಟ್ ಧರಿಸುವ ಅಗತ್ಯದ ಕುರಿತು ಚರ್ಚೆಯಾಗುತ್ತದೆ. ನಂತರ ಅದನ್ನು ಮರೆತುಬಿಡಲಾಗುತ್ತದೆ. ಸೀಟ್ ಬೆಲ್ಟ್‌ ಧರಿಸುವುದನ್ನು ಬಹಳಷ್ಟು ಜನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದುರದೃಷ್ಟದ ಸಂಗತಿಯೆಂದರೆ, ಅಪಘಾತ ಸಂಭವಿಸಿದಾಗ ಸೀಟ್ ಬೆಲ್ಟ್ ಧರಿಸದಿದ್ದವರ ಪೈಕಿ ಹಲವರು ಸಾವಿಗೆ ತುತ್ತಾದ ನಿದರ್ಶನಗಳು ಇವೆ. ಮಿಸ್ತ್ರಿ ಹಾಗೂ ಅವರ ಸ್ನೇಹಿತ ಸೀಟ್‌ ಬೆಲ್ಟ್‌ ಧರಿಸಿದ್ದಿದ್ದರೆ ಜೀವ ಉಳಿಯುತ್ತಿತ್ತು ಎಂಬ ವಾದ ಇದೆ.

ಮೋಟಾರು ವಾಹನಗಳ ಕಾಯ್ದೆಯ ಅಡಿಯಲ್ಲಿ, ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಆದರೆ, ಈ ನಿಯಮವನ್ನು ಉಲ್ಲಂಘಿಸುವುದು ಬಹಳ ಸಹಜ ಎಂಬಂತಾಗಿದೆ. ಪ್ರಯಾಣಿಕ ವಾಹನಗಳ ಹಿಂಬದಿಯ ಆಸನಗಳಲ್ಲಿ ಕುಳಿತುಕೊಳ್ಳುವವರ ಪೈಕಿ ಶೇಕಡ 7ರಷ್ಟು ಮಂದಿ ಮಾತ್ರ ಸೀಟ್ ಬೆಲ್ಟ್ ಧರಿಸುತ್ತಾರೆ, ಶೇ 27ರಷ್ಟು ಜನರಿಗೆ ಮಾತ್ರ ಸೀಟ್ ಬೆಲ್ಟ್ ಕಡ್ಡಾಯ ಎಂಬ ನಿಯಮದ ಅರಿವಿದೆ ಎಂಬುದನ್ನು ಸಮೀಕ್ಷೆಯೊಂದು ತೋರಿಸಿಕೊಟ್ಟಿದೆ. ಮುಂದಿನ ಸಾಲಿನ ಆಸನಗಳಲ್ಲಿ ಕುಳಿತಿರುವವರು ಸೀಟ್‌ ಬೆಲ್ಟ್‌ ಧರಿಸದಿದ್ದರೆ, ಎಚ್ಚರಿಕೆಯ ಸಂದೇಶ ನೀಡುವ ವ್ಯವಸ್ಥೆಯು ಹಲವು ವಾಹನಗಳಲ್ಲಿ ಇದೆ. ಇದರಿಂದಾಗಿ ಆ ಆಸನಗಳಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುವ ಮನಸ್ಸು ಮಾಡಬಹುದು. ಸೀಟ್‌ ಬೆಲ್ಟ್‌ ಹಾಗೂ ಏರ್‌ ಬ್ಯಾಗ್‌ಗಳು ಪ್ರಯಾಣಿಕ ವಾಹನಗಳಲ್ಲಿ ತೀರಾ ಅಗತ್ಯವಾದವು. ಇವೆರಡೂ ಒಟ್ಟಾಗಿ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡುತ್ತವೆ. ವಾಹನವು ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ಪ್ರಯಾಣಿಕರು ಆಸನದಿಂದ ಎಗರಿ ಬೀಳುವುದನ್ನು ಸೀಟ್‌ ಬೆಲ್ಟ್‌ ತಡೆಯುತ್ತದೆ, ಪ್ರಯಾಣಿಕರ ದೇಹವು ಕಾರಿನೊಳಗಿನ ಗಟ್ಟಿ ವಸ್ತುಗಳಿಗೆ ಬಡಿಯುವುದರಿಂದ ಏರ್‌ ಬ್ಯಾಗ್‌ ರಕ್ಷಣೆ ನೀಡುತ್ತದೆ. ಹಿಂದಿನ ಆಸನಗಳಲ್ಲಿ ಸೀಟ್‌ ಬೆಲ್ಟ್ ಧರಿಸದೆ ಕೂರುವವರು, ವಾಹನಗಳು ಎದುರಿನ ವಾಹನಕ್ಕೆ ಅಥವಾ ಇತರ ಯಾವುದೇ ವಸ್ತುವಿಗೆ ಗುದ್ದಿದಾಗ ಮುಂದಿನ ಆಸನಕ್ಕೆ ಡಿಕ್ಕಿ ಹೊಡೆಯುತ್ತಾರೆ. ಮಿಸ್ತ್ರಿ ಅವರ ಪ್ರಕರಣದಲ್ಲಿಯೂ ಈ ರೀತಿ ಆಗಿರಬಹುದು.

ಕಾರುಗಳಲ್ಲಿ ಆರು ಏರ್‌ಬ್ಯಾಗ್‌ ಇರುವುದನ್ನು ಕಡ್ಡಾಯ ಮಾಡಬಾರದು ಎಂದು ಕೆಲವು ವಾಹನ ತಯಾರಿಕಾ ಕಂಪನಿಗಳು ಹೇಳಿದ್ದಿದೆ. ಇದನ್ನು ಕಡ್ಡಾಯ ಮಾಡಿದರೆ ವಾಹನ ತಯಾರಿಕಾ ವೆಚ್ಚ ಹೆಚ್ಚಾಗುತ್ತದೆ, ಆಗ ಮಾರುಕಟ್ಟೆಯಲ್ಲಿ ಕಾರುಗಳಿಗೆ ಬೇಡಿಕೆ ಕಡಿಮೆಯಾಗಬಹುದು ಎಂಬುದು ಅವುಗಳ ಆತಂಕವಾಗಿರಬಹುದು. ಆದರೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನೋಡಿದಾಗ, ಆರು ಏರ್‌ ಬ್ಯಾಗ್‌ಗಳು ಇರುವುದು ಉತ್ತಮ ಎಂಬುದರಲ್ಲಿ ಎರಡನೆಯ ಮಾತು ಇರುವುದಿಲ್ಲ. ಪ್ರಯಾಣಿಕ ವಾಹನಗಳಿಗೆ ಟೈರು, ಆಸನಗಳು ಇರುವುದು ಎಷ್ಟು ಮುಖ್ಯವೋ ಸುರಕ್ಷತೆಗೆ ಅಗತ್ಯವಿರುವ ಸೌಲಭ್ಯಗಳು ಇರುವುದೂ ಅಷ್ಟೇ ಮುಖ್ಯ. ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು ಕಾನೂನಿನ ಮೂಲಕ ಜಾರಿಗೆ ತರಬೇಕು. ದೇಶದಲ್ಲಿ ಈಗಾಗಲೇ ಇರುವ ರಸ್ತೆ ಸುರಕ್ಷತಾ ನಿಯಮಗಳ ಜಾರಿಯೂ ತೃಪ್ತಿಕರ ಪ್ರಮಾಣದಲ್ಲಿ ಇಲ್ಲ. ರಸ್ತೆ ಅಪಘಾತಗಳಲ್ಲಿ ಜನ ಜೀವ ಕಳೆದುಕೊಳ್ಳುವುದಕ್ಕೆ ಇದೂ ಒಂದು ಕಾರಣ. ರಸ್ತೆ ಅಪಘಾತಗಳು ಹಾಗೂ ಸಾವಿನ ಪ್ರಮಾಣವು ಭಾರತದಲ್ಲಿಯೇ ಅತಿಹೆಚ್ಚು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಮಾಹಿತಿ ಪ್ರಕಾರ, 2021ರಲ್ಲಿ ರಸ್ತೆ ಅಪಘಾತಗಳಲ್ಲಿ 1.50 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 2014ರ ನಂತರದಲ್ಲಿ ರಸ್ತೆ ಅಪಘಾತಗಳಲ್ಲಿ ಇಷ್ಟೊಂದು ಜನ ಸಾವನ್ನಪ್ಪಿರುವುದು 2021ರಲ್ಲಿಯೇ. ಸಂಚಾರ ನಿಯಮಗಳ ಪಾಲನೆ ಕಡಿಮೆ ಪ್ರಮಾಣದಲ್ಲಿರುವುದು, ನಿಯಮಗಳ ಅನುಷ್ಠಾನ ತೃಪ್ತಿಕರ ಆಗಿಲ್ಲದಿರುವುದು ಮಾತ್ರವಲ್ಲದೆ ರಸ್ತೆ ಅಪಘಾತಗಳಿಗೆ ಇನ್ನೂ ಹಲವು ಕಾರಣಗಳಿವೆ. ರಸ್ತೆಗಳ ವಿನ್ಯಾಸ ವೈಜ್ಞಾನಿಕವಾಗಿ ಇಲ್ಲದಿರುವುದು, ನಿರ್ವಹಣೆ ಸರಿಯಾಗಿಲ್ಲದಿರು
ವುದು, ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡುವುದು ಮತ್ತು ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ರಸ್ತೆ ವಿಸ್ತರಣೆ ಆಗದಿರುವುದು ಕೂಡ ಅಪಘಾತಗಳಿಗೆ ಕಾರಣ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು. ವಾಹನಗಳಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆ ಹೆಚ್ಚಿನ ಆದ್ಯತೆ ಪಡೆದುಕೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.