ADVERTISEMENT

ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆ ತನ್ನದೆಂದು ಆಯೋಗ ಅರಿಯಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:02 IST
Last Updated 16 ಏಪ್ರಿಲ್ 2019, 20:02 IST
.
.   

ಭಾರತದ ಚುನಾವಣೆಗಳಷ್ಟು ಸಂಕೀರ್ಣ ಮತ್ತು ಬೃಹತ್ತಾದ ಪ್ರಕ್ರಿಯೆ ಪ್ರಪಂಚದಲ್ಲಿ ಮತ್ತೊಂದಿಲ್ಲ. ಇದನ್ನು ಬಹಳ ಯಶಸ್ವಿಯಾಗಿ ಮತ್ತು ವಿಶ್ವಾಸಾರ್ಹತೆಗೆ ಕುಂದುಂಟಾಗದಂತೆ ನಡೆಸಿದ ಕೀರ್ತಿ ಭಾರತದ ಚುನಾವಣಾ ಆಯೋಗಕ್ಕೆ ಇದೆ. ಅದೇ ಕಾರಣದಿಂದ, ಈ ಸಂಸ್ಥೆ ಸಂಪಾದಿಸಿರುವ ಗೌರವದ ವ್ಯಾಪ್ತಿ ದೇಶದ ಗಡಿಯನ್ನೂ ಮೀರಿದೆ. ಆದರೆ ಈಗ ಈ ಸಂಸ್ಥೆಯ ವಿಶ್ವಾಸಾರ್ಹತೆಯೇ ಮತ್ತೆ ಮತ್ತೆ ಪ್ರಶ್ನೆಗೆ ಗುರಿಯಾಗುತ್ತಿದೆ.

ಟಿ.ಎನ್.ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡ ನಂತರ ಕೆಲವು ವರ್ಷಗಳ ಹಿಂದಿನತನಕ ಯಾವತ್ತೂ ಆಯೋಗದ ವಿಶ್ವಾಸಾರ್ಹತೆಯ ಕುರಿತ ಪ್ರಶ್ನೆಗಳೆದ್ದಿರಲಿಲ್ಲ. 2017ರಲ್ಲಿ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಘೋಷಿಸುವ ಹೊತ್ತಿನಲ್ಲಿ, ಚುನಾವಣಾ ಆಯೋಗದ ನಡವಳಿಕೆಯ ಬಗ್ಗೆ ಮೊದಲ ಬಾರಿ ಸಂಶಯ ಹುಟ್ಟಿತು. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳು ಒಟ್ಟಿಗೇ ನಡೆಯಬೇಕಾಗಿತ್ತು. ಆದರೆ, ಚುನಾವಣಾ ಆಯೋಗವು ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕ ಪ್ರಕಟಿಸಿ, ಗುಜರಾತ್‌ ಚುನಾವಣೆ ಯಾವಾಗ ನಡೆಯುತ್ತದೆ ಎಂದು ಆಗ ಹೇಳಲೇ ಇಲ್ಲ. ಕೆಲವು ದಿನಗಳ ಬಳಿಕ ದಿನಾಂಕ ಪ್ರಕಟಿಸಿತು.

ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಹೀಗೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದಾದ ನಂತರ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೂಪಿಸಿದ ‘ಚುನಾವಣಾ ಬಾಂಡ್’ ಪರಿಕಲ್ಪನೆಯನ್ನು ನಿಕಷಕ್ಕೆ ಒಡ್ಡುವ ಕೆಲಸವನ್ನು ಆಯೋಗ ಮಾಡಲಿಲ್ಲ. ನಿರ್ದಿಷ್ಟ ರಾಜಕೀಯ ಪಕ್ಷವೊಂದಕ್ಕೆ ಯಾರು ಎಷ್ಟು ಹಣ ನೀಡಿದರು ಎಂಬುದನ್ನು ಸಂಪೂರ್ಣವಾಗಿ ರಹಸ್ಯವಾಗಿಡುವ ವ್ಯವಸ್ಥೆ ಇದು. 2019ರ ಲೋಕಸಭಾ ಚುನಾವಣೆ ದಿನಾಂಕ ಪ್ರಕಟಣೆಯೂ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದಕ್ಕೆ ಹೇತುವಾಯಿತು. ಅತ್ಯಂತ ಶಾಂತಿಯುತ ಮತದಾನ ನಡೆಯುವ ರಾಜ್ಯಗಳಲ್ಲಿಯೂ ಹಲವು ಹಂತದ ಮತದಾನಗಳನ್ನು ಘೋಷಿಸಿರುವುದರ ಹಿಂದೆ ಕೇಂದ್ರದ ಆಡಳಿತಾರೂಢರಿಗೆ ಅನುಕೂಲ ಕಲ್ಪಿಸುವ ಉದ್ದೇಶವಿರುವಂತಿದೆ ಎಂಬ ಸಂಶಯವನ್ನು ಹಲವು ವಿಶ್ಲೇಷಕರು ವ್ಯಕ್ತಪಡಿಸಿದ್ದರು. ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಪ್ರಧಾನಿ ಮೋದಿ ಅವರು ಕೃತಕ ಉಪಗ್ರಹ ನಾಶ ತಂತ್ರಜ್ಞಾನ ಪರೀಕ್ಷೆಯ ಯಶಸ್ಸನ್ನು ತಮ್ಮ ಸರ್ಕಾರದ ಸಾಧನೆಯೆಂಬಂತೆ ದೇಶಕ್ಕೆ ಘೋಷಿಸಿದರು. ಸೇನೆಯ ಸಾಧನೆಯನ್ನು ಚುನಾವಣಾ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂಬ ನಿಯಮ ಇದೆ. ಹಾಗಿದ್ದರೂ ಸೇನೆಯ ಸಾಧನೆಯನ್ನು ಮುಂದಿಟ್ಟು ವೋಟು ಕೇಳುವ ಕೆಲಸದಲ್ಲಿ ಪ್ರಧಾನಿಯಾದಿಯಾಗಿ ಆಡಳಿತಾರೂಢ ಬಿಜೆಪಿಯ ಅತಿ ಕಿರಿಯ ಕಾರ್ಯಕರ್ತರೂ ಸಕ್ರಿಯರಾಗಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ಆಯೋಗ ಮೌನ ವಹಿಸಿತು ಇಲ್ಲವೇ ‘ತಾಂತ್ರಿಕತೆಯ ಸಬೂಬು’ಗಳನ್ನು ನೀಡಿತು. ಇದು, ಆಯೋಗದ ವಿಶ್ವಾಸಾರ್ಹತೆಯ ಸವಾಲನ್ನು ಇನ್ನಷ್ಟು ತೀವ್ರಗೊಳಿಸಿತು.

ADVERTISEMENT

ಲೋಕಸಭಾ ಚುನಾವಣಾ ಪ್ರಚಾರ ಆರಂಭವಾದ ಮೇಲೆ ದ್ವೇಷಪೂರಿತ ಭಾಷಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಿವೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಮಾಜವಾದಿ ಪಕ್ಷದ ಆಜಂ ಖಾನ್ ಮುಂತಾದವರು ದ್ವೇಷ ಹರಡುವುದನ್ನೇ ತಮ್ಮ ಭಾಷಣಗಳ ಆಕರ್ಷಣೆಯಾಗಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಕೂಡಾ ನೀತಿ ಸಂಹಿತೆಯನ್ನು ಉಲ್ಲಂಘಿಸುವಂಥ ಮಾತುಗಳನ್ನು ಆಡಿದ್ದಾರೆ. ಆದರೆ ಈ ಎಲ್ಲವುಗಳ ಬಗ್ಗೆಯೂ ಚುನಾವಣಾ ಆಯೋಗವು ಒಂದು ಬಗೆಯ ನಿರ್ಲಿಪ್ತ ಧೋರಣೆಯನ್ನು ತಳೆದಿತ್ತು. ಏಪ್ರಿಲ್ 15ರಂದು ಸುಪ್ರೀಂ ಕೋರ್ಟ್‌ನ ಎದುರು ಚುನಾವಣಾ ಆಯೋಗದ ಪರ ವಕೀಲರು ‘ಆಯೋಗಕ್ಕೆ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ’ ಎಂಬ ಅರ್ಥದ ಮಾತುಗಳನ್ನಾಡಿದರು. ಆಯೋಗದ ಅಧಿಕಾರ ವ್ಯಾಪ್ತಿಯನ್ನು ಪರಿಶೀಲಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಪ್ರತಿಕ್ರಿಯಿಸಿದ್ದರ ಹಿಂದೆಯೇ ಯೋಗಿ ಆದಿತ್ಯನಾಥ, ಮಾಯಾವತಿ, ಮೇನಕಾ ಗಾಂಧಿ ಮತ್ತು ಆಜಂ ಖಾನ್ ಅವರ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದೇ 16ರಂದು ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್ ‘ಆಯೋಗಕ್ಕೆ ಶಕ್ತಿ ಬಂದಂತಿದೆ’ ಎಂದಿದೆ. ಆಯೋಗ ತಡವಾಗಿಯಾದರೂ ಪ್ರತಿಕ್ರಿಯಿಸಿರುವುದು ಸ್ವಾಗತಾರ್ಹ. ಆದರೆ ಇದಕ್ಕೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಕೇಂದ್ರದ ಆಡಳಿತಾರೂಢರು ಸಾಂವಿಧಾನಿಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದ್ದಾರೆ ಎಂಬ ಆರೋಪ ಹಳೆಯದು. ಚುನಾವಣಾ ಆಯೋಗದ ವಿಷಯದಲ್ಲಿಯೂ ಇದು ಸಂಭವಿಸಿದ್ದರೆ ಭಾರತದ ಪ್ರಜಾಪ್ರಭುತ್ವಕ್ಕೇ ದೊಡ್ಡ ಅಪಾಯವಿದೆ ಎಂದರ್ಥ.

ಭಾರತದ ಚುನಾವಣೆಗಳಿಗೆ ಇರುವ ವಿಶ್ವಾಸಾರ್ಹತೆಯ ಹಿಂದೆ ಚುನಾವಣಾ ಆಯೋಗವಿದೆ. ಚುನಾವಣೆಗಳ ಫಲಿತಾಂಶವನ್ನು ಎಲ್ಲಾ ಪಕ್ಷಗಳೂ ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತವೆ. ಒಂದು ವೇಳೆ, ಆಯೋಗ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ ಚುನಾವಣಾ ಫಲಿತಾಂಶದ ವಿಶ್ವಾಸಾರ್ಹತೆಯೂ ಇಲ್ಲವಾಗುತ್ತದೆ. ಏಳು ದಶಕಗಳ ಅವಧಿಯಲ್ಲಿ ಭಾರತ ಒಂದು ಪ್ರಜಾಪ್ರಭುತ್ವವಾಗಿ ಸಂಪಾದಿಸಿದ್ದ ವಿಶ್ವಾಸಾರ್ಹತೆಯೂ ಇಲ್ಲವಾಗುತ್ತದೆ ಎಂಬುದು ನಮಗೆಲ್ಲಾ ನೆನಪಿರಬೇಕು. ಆಯೋಗ ತನ್ನ ಜವಾಬ್ದಾರಿಯನ್ನು ಅರಿತು ನಡೆಯುವುದು ಈ ಹೊತ್ತಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.