ADVERTISEMENT

ಗುರುತಿನ ಚೀಟಿಗಳು ಈಗಾಗಲೇ ಇವೆಸೌಲಭ್ಯದ ಹೆಸರಿನಲ್ಲಿ ಸಂಕಷ್ಟವೇಕೆ?

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 19:30 IST
Last Updated 18 ಸೆಪ್ಟೆಂಬರ್ 2018, 19:30 IST
Family ID
Family ID   

ಗುರುತಿನ ಚೀಟಿಗಳು ಹಾಗೂ ಸಂಖ್ಯೆಗಳು ಸದ್ಯದ ಸನ್ನಿವೇಶದಲ್ಲಿ ಜನಸಾಮಾನ್ಯರ ಬದುಕಿನ ಅವಿಭಾಜ್ಯ ಅಂಗಗಳೇ ಆಗಿಬಿಟ್ಟಿವೆ. ಅಂತೆಯೇ ಅವುಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಸಮಸ್ಯೆಗಳು ಕೂಡ ದ್ವಿಗುಣಗೊಳ್ಳುತ್ತಲೇ ಸಾಗುತ್ತಿವೆ. ಗೊಂದಲ ನಿವಾರಣೆಯ ಹೆಸರಿನಲ್ಲಿ ಕೈಗೊಳ್ಳುವ ಯಾವುದೇ ಕ್ರಮ, ಅದನ್ನು ಮತ್ತಷ್ಟು ಗೋಜಲುಗೊಳಿಸುವಂತೆ ಇರಬಾರದು. ದುರದೃಷ್ಟವಶಾತ್‌ ಸರ್ಕಾರಗಳ ಹಲವು ನೀತಿ–ನಿಲುವುಗಳು ಈ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿವೆ.

ಕುಟುಂಬದ ಗುರುತಿನ ಚೀಟಿ ಕೊಡುವ ನೆಪದಲ್ಲಿ ರಾಜ್ಯ ಸರ್ಕಾರವು ಮತ್ತೊಂದು ಸಂಕೀರ್ಣತೆಯನ್ನು ಸೃಷ್ಟಿಸಲು ಹೊರಟಿರುವ ಕ್ರಮವೇ ಈ ಮಾತಿಗೊಂದು ತಾಜಾ ನಿದರ್ಶನ. ಸಾರ್ವಜನಿಕ ಪೂರೈಕೆ ವ್ಯವಸ್ಥೆಯಲ್ಲಿರುವ ವಿವಿಧ ದತ್ತಾಂಶಗಳನ್ನು ಬಳಕೆ ಮಾಡಿಕೊಳ್ಳುವ ಜತೆಗೆ ಆಧಾರ್‌ ಸಂಖ್ಯೆಯನ್ನೂ ಜೋಡಣೆ ಮಾಡಲಾಗುವ ಈ ಗುರುತಿನ ಚೀಟಿಯಲ್ಲಿ ಕುಟುಂಬದ ಎಲ್ಲ ಸದಸ್ಯರ ಪೂರ್ಣ ವಿವರಗಳು ಇರಲಿವೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ. ಕುಟುಂಬಕ್ಕೆ ಸಂಬಂಧಿಸಿದಂತೆ ರೂಪಿಸಲಾದ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಈ ಚೀಟಿ ಹೊಂದುವುದನ್ನು ಕಡ್ಡಾಯಗೊಳಿಸುವ ಉದ್ದೇಶವೂ ಸರ್ಕಾರಕ್ಕಿದೆ. ಕುಟುಂಬವೊಂದು ಯಾವ, ಯಾವ ಪ್ರಯೋಜನ ಪಡೆಯುತ್ತಿದೆ ಎನ್ನುವುದು ಈ ಗುರುತಿನ ಚೀಟಿಯಿಂದ ಗೊತ್ತಾಗಲಿದೆ. ಅಲ್ಲದೆ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಮುಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುವುದು ಅದರ ವಾದ.

ಸರ್ಕಾರದಿಂದ ಪ್ರತೀ ಕುಟುಂಬ ಏನೇನು ಸೌಲಭ್ಯಗಳನ್ನು ಪಡೆಯುತ್ತಿದೆ ಮತ್ತು ಯೋಜನೆಗಳ ಪ್ರಯೋಜನ ಅರ್ಹರಿಗೆ ಮುಟ್ಟಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾರ ಆಕ್ಷೇಪವೂ ಇಲ್ಲ. ಪ್ರಶ್ನೆ ಇರುವುದು, ಯಾಕಾಗಿ ಮತ್ತೊಂದು ಗುರುತಿನ ಚೀಟಿ ಎಂಬ ವಿಷಯದಲ್ಲಿ ಮಾತ್ರ. ಎಲ್ಲ ಗುರುತಿನ ಚೀಟಿಗಳ ಮೂಲದಂತಿರುವ ಪಡಿತರ ಚೀಟಿ (ರೇಷನ್‌ ಕಾರ್ಡ್‌) ಈಗಾಗಲೇ ಅಸ್ತಿತ್ವದಲ್ಲಿದೆ. ಕುಟುಂಬದ ಎಲ್ಲ ಸದಸ್ಯರ ಮಾಹಿತಿಯನ್ನೂ ಅದು ಒಳಗೊಂಡಿದ್ದು, ಗುರುತಿನ ದಾಖಲೆಯಾಗಿ ಎಲ್ಲೆಡೆ ಮಾನ್ಯವಾಗಿದೆ.

ADVERTISEMENT

ಜತೆಗೆ ಪ್ರತಿಯೊಬ್ಬರಿಗೂ ಆಧಾರ್‌ ಸಂಖ್ಯೆಯೂ ಬಂದಿದೆ. ನೇರ ನಗದು ವರ್ಗಾವಣೆ ಸೇರಿದಂತೆ ಸರ್ಕಾರದ ಎಲ್ಲ ಸೌಲಭ್ಯಗಳಿಗೆ ಈ ಸಂಖ್ಯೆಯನ್ನು ಜೋಡಣೆ ಮಾಡಿರುವುದು ಅರ್ಹರಿಗಲ್ಲದೆ ಅನ್ಯರಿಗೆ ಅದರ ಲಾಭ ಸಿಗಬಾರದು ಎಂದೇ ಅಲ್ಲವೇ? ಹೀಗಿದ್ದಾಗ ಹೊಸದೊಂದು ಕುಟುಂಬ ಚೀಟಿಯನ್ನು ವಿತರಿಸಲು ಹೊರಟಿರುವ ಹಿಂದಿನ ಉದ್ದೇಶವಾದರೂ ಏನು? ಈ ಚೀಟಿಯ ಸ್ವರೂಪ ಹೇಗಿರುತ್ತದೆ? ಕುಟುಂಬಗಳು ಒಡೆದಾಗ ಅದರ ಎಲ್ಲ ಘಟಕಗಳು ಹೊಸ ಚೀಟಿಗಳನ್ನು ಪಡೆಯಬೇಕಾಗುತ್ತದೆಯೇ? ನೀತಿ ನಿರೂಪಕರು ಉತ್ತರಿಸಲೇಬೇಕಾದ ಪ್ರಶ್ನೆಗಳಿವು.

ಸರ್ಕಾರಿ ವ್ಯವಸ್ಥೆಯಲ್ಲಿ ಸಣ್ಣ ದಾಖಲೆಯನ್ನು ಪಡೆಯುವುದು ಕೂಡ ಎಷ್ಟೊಂದು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಡಳಿತ ವ್ಯವಸ್ಥೆ ತೆಗೆದುಕೊಳ್ಳುವ ಪ್ರತೀ ನಿರ್ಣಯ ಜನಸಾಮಾನ್ಯರ ಬದುಕಿನ ಮೇಲೆ ಗಾಢವಾದ ಪರಿಣಾಮವನ್ನೇ ಬೀರುತ್ತದೆ. ಇಷ್ಟೆಲ್ಲದರ ಅರಿವಿದ್ದೂ ಜನರನ್ನು ಸೌಲಭ್ಯದ ಹೆಸರಿನಲ್ಲಿ ಸಂಕಷ್ಟಕ್ಕೆ ದೂಡುವುದು ಅಕ್ಷಮ್ಯ. ಜನಸಾಮಾನ್ಯರ ಬದುಕಿನಲ್ಲಿ ಖುಷಿ ಮೂಡಿಸಲು ಬೇಕಿರುವುದು ಇದ್ದ ವ್ಯವಸ್ಥೆಯಲ್ಲಿಯೇ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ, ಯಾವೊಂದು ಕಿರಿಕಿರಿಯಿಲ್ಲದೆ ಸೌಲಭ್ಯಗಳನ್ನು ತಲುಪಿಸುವ ಬದ್ಧತೆಯೇ ಹೊರತು ಥಳಕಿನ ಹೊಸ ಚೀಟಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.