ADVERTISEMENT

ಸಂಪಾದಕೀಯ | ಸ್ಥಳಗಳ ಹೆಸರು ಬದಲಾವಣೆ: ಚೀನಾದ ಪ್ರಚೋದನಕಾರಿ ಕ್ರಮ

ಸಂಪಾದಕೀಯ
Published 23 ಮೇ 2025, 0:30 IST
Last Updated 23 ಮೇ 2025, 0:30 IST
...
...   

ಅರುಣಾಚಲ ಪ್ರದೇಶದಲ್ಲಿನ ಕೆಲವು ಸ್ಥಳಗಳ ಹೆಸರು ಬದಲಾಯಿಸುವ ಮೂಲಕ ಚೀನಾ ದೇಶವು ಮತ್ತೊಂದು ಸುತ್ತಿನ ಪ್ರಚೋದನಕಾರಿ ನಡೆಯನ್ನು ಇರಿಸಿದೆ. ಚೀನಾ ಸತತ ಮೂರನೆಯ ವರ್ಷವೂ ಇಂತಹ ಕೆಲಸ ಮಾಡುತ್ತಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ, ನಂತರದ ‘ಸಿಂಧೂರ ಕಾರ್ಯಾಚರಣೆ’ಯ ಕಾರಣಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಉಂಟಾಗಿದ್ದ ಸಂದರ್ಭದಲ್ಲಿ ಚೀನಾ ಈ ಕೆಲಸ ಮಾಡಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಈ ರಾಜ್ಯದ ಮೇಲೆ ಚೀನಾ ತನ್ನ ಹಕ್ಕು ಪ್ರತಿಪಾದಿಸುವ ಮಾರ್ಗ ಇದು. ಚೀನಾವು ಈ ಪ್ರದೇಶವನ್ನು ಜಂಗ್ನಾನ್ ಎಂದು ಕರೆಯುತ್ತದೆ. ಚೀನಾದ ನಡೆಯು ‘ಪ್ರಯೋಜನಕ್ಕೆ ಬರುವಂಥದ್ದಲ್ಲ, ಇದು ತರ್ಕರಹಿತ ಕ್ರಮ’ ಎಂದು ಭಾರತ ಪ್ರತಿಕ್ರಿಯಿಸಿದೆ. ಈ ಮೂಲಕ ಚೀನಾದ ನಡೆಯು ತಪ್ಪು ಎಂದು ಭಾರತ ಹೇಳಿದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿ ಇರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅರುಣಾಚಲ ಪ್ರದೇಶವು ತನ್ನದು ಎಂದು ಚೀನಾ ಹೇಳಿಕೊಳ್ಳುವುದನ್ನು ಭಾರತವು ಹಿಂದೆಯೂ ಬಹಳ ಸ್ಪಷ್ಟವಾಗಿ ಖಂಡಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕಳೆದ ವರ್ಷ ‘ನಿಮ್ಮ ಮನೆಯ ಹೆಸರನ್ನು ನಾನು ಇಂದು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ’ ಎಂದು ಪ್ರಶ್ನಿಸಿದ್ದರು.

ಸ್ಥಳಗಳ ಹೆಸರುಗಳನ್ನು ಬದಲಾಯಿಸುವುದರಿಂದ ವಾಸ್ತವದಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ. ಈ ಸ್ಥಳಗಳ ಮೇಲೆ ತನಗೆ ಹಕ್ಕು ಇದೆ ಎಂಬ ಭಾವನೆಯಲ್ಲಿರುವ ಚೀನಾ, ಸಾಂಕೇತಿಕವಾದ ಈ ಒಂದು ಕೃತ್ಯದ ಮೂಲಕ ಒಂದಿಷ್ಟು ತೃಪ್ತಿಪಟ್ಟುಕೊಳ್ಳಬಹುದು. ಭಾರತ ದಾಖಲಿಸಿರುವ ಆಕ್ಷೇಪಗಳನ್ನು ಅಲಕ್ಷಿಸಿರುವ ಚೀನಾ, ಸ್ಥಳಗಳಿಗೆ ಹೊಸ ಹೆಸರು ನೀಡುವುದು ಭೌಗೋಳಿಕ ಪ್ರದೇಶಗಳ ಹೆಸರುಗಳನ್ನು ಶಿಷ್ಟಗೊಳಿಸುವ ಪ್ರಕ್ರಿಯೆಯ ಒಂದು ಭಾಗ ಎಂದು ಹೇಳಿದೆ. ಆದರೆ ತನ್ನ ಭೂಪ್ರದೇಶದ ಆಚೆಗಿರುವ ಸ್ಥಳಗಳ ಹೆಸರನ್ನು ‘ಶಿಷ್ಟಗೊಳಿಸುವ’ ಕೆಲಸವನ್ನು ಅದು ಮಾಡಬಾರದು. ಚೀನಾ ದೇಶವು ಇತರ ಮಾರ್ಗಗಳ ಮೂಲಕ ತನ್ನ ಹಕ್ಕು ಸಾಧಿಸುವ ಪ್ರಯತ್ನ ಮಾಡಿದೆ. ಭಾರತದ ಪ್ರಮುಖ ನಾಯಕರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗಲೆಲ್ಲ ಚೀನಾ ಪ್ರತಿಭಟನೆ ದಾಖಲಿಸಿದೆ. ಅಲ್ಲದೆ, ಕ್ರೀಡಾಪಟುಗಳು ಈ ರಾಜ್ಯವನ್ನು ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿನಿಧಿಸಿದಾಗಲೂ ಚೀನಾ ಅದನ್ನು ವಿರೋಧಿಸಿದೆ. ಏಕೆಂದರೆ, ಆ ದೇಶವು ಅರುಣಾಚಲ ಪ್ರದೇಶದ ಜನರನ್ನು ತನ್ನ ಪ್ರಜೆಗಳು ಎಂದು ಭಾವಿಸುತ್ತದೆ. ಆದರೆ ಇಂತಹ ನಡೆಗಳನ್ನು ಭಾರತವು ಯಾವಾಗಲೂ ವಿರೋಧಿಸಿದೆ. ಚೀನಾ ದೇಶದ ನಂಬಿಕಸ್ಥ ಗೆಳೆಯ ಆಗಿರುವ ಪಾಕಿಸ್ತಾನದ ಜೊತೆ ಭಾರತ ಸಂಘರ್ಷದಲ್ಲಿ ಇದ್ದ ಸಂದರ್ಭದಲ್ಲಿಯೇ ಹೆಸರು ಬದಲಾಯಿಸುವ ಕೆಲಸಕ್ಕೆ ಚೀನಾ ಮುಂದಾಗಿದ್ದುದು ಕಾಕತಾಳೀಯವೋ ಆಕಸ್ಮಿಕವೋ ಆಗಿರಲಾರದು. ಭಾರತದ ಜೊತೆಗಿನ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಇತ್ತು, ಸಂಘರ್ಷದ ವೇಳೆ ಅದು ಚೀನಾದಿಂದ ಪೂರೈಕೆಯಾದ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿತ್ತು. ಹೀಗಾಗಿ, ಹೆಸರು ಬದಲಾಯಿಸುವ ಚೀನಾದ ನಡೆಯು ಒಂದು ಸಂದೇಶ ರವಾನಿಸುವ ಉದ್ದೇಶವನ್ನೂ ಹೊಂದಿರಬಹುದು.

ಕ್ಸಿನ್‌ಜಿಯಾಂಗ್‌ ಉಯ್ಗರ್ ಸ್ವಾಯತ್ತ ಪ್ರದೇಶದಲ್ಲಿ ಬರುವ ಹೊಟನ್ ಪರ್ಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳನ್ನು ರಚಿಸುವ ತೀರ್ಮಾನವನ್ನು ಚೀನಾ ಈಚೆಗೆ ಪ್ರಕಟಿಸಿದೆ. ಈ ಕೌಂಟಿಗಳ ಕೆಲವು ಪ್ರದೇಶಗಳ ಗಡಿಯನ್ನು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಒಳಗೂ ಇರುವಂತೆ ಗುರುತಿಸಲಾಗಿದೆ. ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು ಗಡಿ ತಕರಾರು ಮತ್ತು ಇತರ ವಿಷಯಗಳ ಕುರಿತು ನಡೆಸುತ್ತಿರುವ ಮಾತುಕತೆಯು ಪೂರ್ಣಗೊಂಡಿಲ್ಲ. ಕೆಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಈ ಮಾತುಕತೆಗಳು ಈಗ ಮತ್ತೆ ಶುರುವಾಗಿವೆ. ದ್ವಿಪಕ್ಷೀಯ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವಂತಹ ಏಕಪಕ್ಷೀಯ ಕ್ರಮಗಳನ್ನು ಎರಡೂ ದೇಶಗಳು ತೆಗೆದುಕೊಳ್ಳಬಾರದು ಎಂಬುದು ಕೂಡ ಈ ಮಾತುಕತೆಗಳ ಒಂದು ಉದ್ದೇಶ. ಹೀಗಿದ್ದರೂ ಚೀನಾ ದೇಶವು ಇಂತಹ ಆಕ್ರಮಣಕಾರಿ ಧೋರಣೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುತ್ತದೆ. ಪ್ರಚೋದನಕಾರಿ ಕ್ರಿಯೆಗಳ ರೂಪದಲ್ಲಿ ಕಾಣಿಸಿಕೊಳ್ಳುವ ಚೀನಾದ ವಿಸ್ತರಣಾವಾದಿ ನೀತಿಗಳ ಪರಿಣಾಮವನ್ನು ಅದರ ಇತರ ನೆರೆಯ ದೇಶಗಳು ಕೂಡ ಅನುಭವಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.