
ಸಂಪಾದಕೀಯ.
ಮತಪಟ್ಟಿಗಳಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಅಭಿಯಾನ ನಡೆಸುತ್ತಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹರಿಯಾಣದಲ್ಲಿ ನಡೆದಿದೆ ಎನ್ನಲಾದ ಚುನಾವಣಾ ಅವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ದಾಖಲೆಗಳು ಚುನಾವಣೆಗಳ ಪಾವಿತ್ರ್ಯ ಮತ್ತು ಭಾರತೀಯ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿವೆ. ರಾಹುಲ್ ಅವರ ಆರೋಪಗಳಿಗೆ ಆಯೋಗ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ತನ್ನ ಎಂದಿನ ಧೋರಣೆಯಲ್ಲಿ ಪ್ರತಿಕ್ರಿಯಿಸಿದೆ. ಗಂಭೀರ ಆರೋಪಗಳಿಗೆ ವಿಶ್ವಾಸಾರ್ಹ ಉತ್ತರಗಳನ್ನು ನೀಡದಿರುವುದು ಆಯೋಗದ ಕಾರ್ಯಪ್ರಕ್ರಿಯೆಯ ಬಗ್ಗೆ ಅನುಮಾನ ಮೂಡಿಸುವಂತಿದೆ. ಈ ಮೊದಲು ರಾಹುಲ್ ಮಾಡಿದ್ದ ಆರೋಪಗಳು ನಿರ್ದಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿದ್ದವು. ಕರ್ನಾಟಕದ ಮಹದೇವಪುರ ಹಾಗೂ ಆಳಂದ ವಿಧಾನಸಭಾ ಕ್ಷೇತ್ರಗಳಲ್ಲಿನ ಮತಪಟ್ಟಿಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಅವರು ಗಮನಸೆಳೆದಿದ್ದರು. ಈಗಿನ ಆರೋಪ ಹರಿಯಾಣದಲ್ಲಿ ನಡೆದ 2024ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ್ದಾಗಿದೆ; ಆಯೋಗದ ನೆರವಿನಿಂದ ಬಿಜೆಪಿ ಫಲಿತಾಂಶವನ್ನು ತನ್ನ ಪರವಾಗಿ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ. ಚುನಾವಣೆಗೆ ಮೊದಲು ಮತ್ತು ನಂತರದ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ವ್ಯಕ್ತಪಡಿಸಿದ್ದ ಒಲವನ್ನು ‘ಆಪರೇಷನ್ ಸರ್ಕಾರ್ ಚೋರಿ’ ಕಾರ್ಯಾಚರಣೆಯ ಮೂಲಕ ಕಸಿದುಕೊಳ್ಳಲಾಯಿತು ಎಂದು ರಾಹುಲ್ ದೂರಿದ್ದಾರೆ.
ರಾಹುಲ್ ಅವರು ತಮ್ಮ ಆರೋಪಗಳಿಗೆ ಸಾಕ್ಷ್ಯದ ರೂಪದಲ್ಲಿ ಹರಿಯಾಣದ ರಾಯ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಹಂಚಿಕೊಂಡಿದ್ದಾರೆ. ಆ ಪಟ್ಟಿಯಲ್ಲಿ ಬ್ರೆಜಿಲ್‌ನ ಮಹಿಳಾ ರೂಪದರ್ಶಿಯೊಬ್ಬರ ಫೋಟೊ, 19 ಮತಗಟ್ಟೆಗಳಲ್ಲಿ 22 ಬಾರಿ ಬೇರೆ ಬೇರೆ ಹೆಸರುಗಳಲ್ಲಿ ಬಳಕೆಯಾಗಿದೆ. ಹರಿಯಾಣದ ಪ್ರತಿ ಎಂಟು ಮತದಾರರಲ್ಲಿ ಒಬ್ಬರು (ಒಟ್ಟು 25 ಲಕ್ಷಕ್ಕೂ ಹೆಚ್ಚು) ನಕಲಿ ಮತದಾರರಾಗಿದ್ದಾರೆ; 1,22,177 ಮತದಾರರ ಹೆಸರಿನೊಂದಿಗೆ ನಕಲಿ ಫೋಟೊಗಳಿವೆ ಎಂದು ಆರೋಪಿಸಿದ್ದಾರೆ. ಆಯೋಗದ ದಾಖಲೆಗಳನ್ನು ಉಲ್ಲೇಖಿಸಿಯೇ ರಾಹುಲ್ ಆರೋಪಗಳನ್ನು ಮಾಡಿದ್ದಾರೆ ಹಾಗೂ ನಡೆದಿವೆ ಎನ್ನಲಾದ ಅಕ್ರಮಗಳು ಅವರು ಈ ಮೊದಲು ಬೇರೆಡೆಗಳಲ್ಲಿ ಬಯಲು ಮಾಡಿದ್ದ ಚುನಾವಣಾ ಅವ್ಯವಹಾರಗಳನ್ನೇ ಹೋಲುತ್ತಿವೆ. ದೇಶದ ಬೇರೆ ಬೇರೆ ಭಾಗಗಳಲ್ಲಿನ ಮತದಾರರ ಪಟ್ಟಿಗಳಲ್ಲಿ ಪತ್ತೆಯಾಗಿರುವ ಅಕ್ರಮಗಳಲ್ಲಿ ಸಾಮ್ಯತೆಯಿದ್ದು, ಬಿಜೆಪಿಗೆ ಅನುಕೂಲ ಆಗುವಂತೆ ಚುನಾವಣಾ ಪ್ರಕ್ರಿಯೆಯನ್ನು ತಿರುಚುವ ಷಡ್ಯಂತ್ರವನ್ನು ರೂಪಿಸಲಾಗಿದೆ ಎನ್ನುವ ಆರೋಪಗಳಿಗೆ ಚುನಾವಣಾ ಆಯೋಗ ನಂಬಲರ್ಹ ದಾಖಲೆಗಳ ಮೂಲಕ ಉತ್ತರಿಸಬೇಕಾಗಿದೆ.
ಚುನಾವಣಾ ಅಕ್ರಮದ ಆರೋಪಗಳ ಬಗ್ಗೆ ಆಯೋಗ ಅಥವಾ ಬಿಜೆಪಿ ಇದುವರೆಗೂ ಸಮರ್ಪಕ ಉತ್ತರ ನೀಡಿಲ್ಲ. ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಆಯೋಗ, ಮತದಾರರ ಪಟ್ಟಿಯಲ್ಲಿ ಲೋಪದೋಷಗಳು ಇದ್ದಲ್ಲಿ ಅದನ್ನು ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟರು ಏಕೆ ಪರಿಶೀಲಿಸಲಿಲ್ಲ ಎಂದು ಪ್ರಶ್ನಿಸಿದೆ. ಪಟ್ಟಿಗಳು ದೊರೆಯುವುದು ತೀರಾ ವಿಳಂಬವಾದುದರಿಂದ ಪರಿಶೀಲನೆಗೆ ಸಮಯವಿರಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಆಯೋಗ, ತನ್ನ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳೆದುರಾದಾಗ, ಮರು ಪ್ರಶ್ನೆಗಳನ್ನು ಕೇಳುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಬಾರದು. ನಿರೀಕ್ಷಿಸಿದಂತೆಯೇ, ರಾಹುಲ್ ಅವರನ್ನು ಲೇವಡಿ ಮಾಡಿರುವ ಬಿಜೆಪಿ, ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಿಲ್ಲ. ಚುನಾವಣಾ ಅಕ್ರಮಗಳನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಮುಖಂಡ ನ್ಯಾಯಾಲಯದ ಮೊರೆ ಹೋಗಬೇಕೆಂದು ಹೇಳುವುದರಲ್ಲಿ ಅರ್ಥವಿಲ್ಲ. ಆಗಿರುವ ಲೋಪಗಳನ್ನು ತುರ್ತಾಗಿ ಸರಿಪಡಿಸುವುದು ಅಗತ್ಯವೇ ಹೊರತು, ಕಾನೂನು ಹೋರಾಟದ ಮೂಲಕ ಸಮಸ್ಯೆಯನ್ನು ದೀರ್ಘಕಾಲ ಮುಂದುವರಿಸುವುದು, ಇನ್ನಷ್ಟು ಸಂಕೀರ್ಣಗೊಳಿಸುವುದು ಸರಿಯಲ್ಲ. ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಅಪೇಕ್ಷಿಸುವುದು ನಾಗರಿಕರ ಹಕ್ಕು. ದುರ್ಬಲ ಸಂಸ್ಥೆಗಳು ದೇಶದ ಪ್ರಜಾಪ್ರಭುತ್ವ ಸೌಧವನ್ನು ಶಿಥಿಲಗೊಳಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.