ADVERTISEMENT

ಸಂಪಾದಕೀಯ | ವಿಶ್ವಮಟ್ಟದಲ್ಲಿ ಭಾರತ ಏಕಾಂಗಿ: ವಿದೇಶಾಂಗ ನೀತಿಗೆ ಅಗ್ನಿಪರೀಕ್ಷೆ

ಸಂಪಾದಕೀಯ
Published 2 ಅಕ್ಟೋಬರ್ 2025, 22:30 IST
Last Updated 2 ಅಕ್ಟೋಬರ್ 2025, 22:30 IST
.
.   

ದೇಶವೊಂದರ ವಿದೇಶಾಂಗ ನೀತಿ ಏಕಕಾಲಕ್ಕೆ ಆ ದೇಶ ಹಾಗೂ ಅದು ವಿಶ್ವದ ವಿವಿಧ ದೇಶಗಳೊಂದಿಗೆ ಹೊಂದಿರುವ ಸಂಬಂಧವನ್ನು ವ್ಯಾಖ್ಯಾನಿಸುತ್ತದೆ. ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಂಬಂಧಗಳ ಕುರಿತಾದ ನೀಲನಕ್ಷೆಯೂ ಆಗಿರುವ ವಿದೇಶಾಂಗ ನೀತಿ, ದೇಶದ ಹಿತಾಸಕ್ತಿಗಳ ಸಂರಕ್ಷಣೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಬದಲಾಗುತ್ತಿರುವ ಹಾಗೂ ವೈವಿಧ್ಯ ಹೊಂದಿರುವ ವಿಶ್ವದಲ್ಲಿ ವಿದೇಶಾಂಗ ನೀತಿಗೆ ಅಪಾರ ಮಹತ್ವವಿದೆ. ಸ್ವಾತಂತ್ರ್ಯಾನಂತರ ಭಾರತ ಅಲಿಪ್ತ ನೀತಿಯ ತಳಹದಿಯ ಮೇಲೆ ತನ್ನ ಅಂತರರಾಷ್ಟ್ರೀಯ ಸಂಬಂಧಗಳನ್ನು ರೂಪಿಸಿಕೊಂಡಿತ್ತು; ಎರಡು ವಿಶ್ವಯುದ್ಧಗಳ ನಂತರ ಇಬ್ಬಣಗಳಾಗಿ ಜಗತ್ತು ವಿಭಜನೆ ಹೊಂದಿದ್ದ ಸಂದರ್ಭದಲ್ಲಿ ಅಲಿಪ್ತ ನೀತಿ ಸರಿಯಾದ ದಾರಿಯೇ ಆಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿತ್ರರನ್ನೂ ಗೌರವವನ್ನೂ ದೊರಕಿಸಿಕೊಟ್ಟಿದ್ದ ಅಲಿಪ್ತ ನೀತಿ, ಬಹು ಮುಖ್ಯವಾಗಿ ಭಾರತೀಯರು ವಿಶ್ವಮಟ್ಟದಲ್ಲಿ ತಮ್ಮ ದೇಶಕ್ಕೆ ಇರುವ ಗೌರವದ ಬಗ್ಗೆ ಅಭಿಮಾನ ಪಡುವಂತೆ ಇತ್ತು. ಆದರೆ, ಭಾರತದ ಸದ್ಯದ ವಿದೇಶಾಂಗ ನೀತಿ ಅತಿ ಕಠಿಣ ಸವಾಲನ್ನು ಎದುರಿಸುತ್ತಿದೆ. ದೇಶದ ಹಿತಾಸಕ್ತಿಗಳ ರಕ್ಷಣೆಗೆ ಅಷ್ಟೇನೂ ಅನುಕೂಲಕರ ಆಗಿಲ್ಲದ ಈಗಿನ ನೀತಿಗೆ, ಭಾರತಕ್ಕೆ ಅಗತ್ಯವಾದ ಸ್ನೇಹಿತರನ್ನು ದೊರಕಿಸಿಕೊಡುವುದೂ ಸಾಧ್ಯವಾಗಿಲ್ಲ.

ಪಹಲ್ಗಾಮ್‌ನಲ್ಲಿನ ದಾಳಿ ಮತ್ತು ಹತ್ಯಾಕಾಂಡಕ್ಕೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯ ನಂತರದ ಬೆಳವಣಿಗೆಗಳು ಅದರ ಹಿತಾಸಕ್ತಿಗೆ ಪೂರಕವಾಗಿ ಇಲ್ಲದಿರುವುದು ದುರದೃಷ್ಟಕರ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷವನ್ನು ತಡೆಗಟ್ಟಿರುವ ಕೀರ್ತಿಗೆ ತಮ್ಮನ್ನು ಹಕ್ಕುದಾರರನ್ನಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ಘೋಷಿಸಿಕೊಳ್ಳುತ್ತಿರುವುದು ಭಾರತದ ಘನತೆಯನ್ನು ಹೆಚ್ಚಿಸುವ ವಿದ್ಯಮಾನವೇನೂ ಅಲ್ಲ. ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಹಾಗೂ ಆನಂತರ ಭಾರತಕ್ಕೆ ಅಂತರರಾಷ್ಟ್ರೀಯ ಬೆಂಬಲ ನಿರೀಕ್ಷಿಸಿದಷ್ಟು ದೊರೆಯಲಿಲ್ಲ. ಜಾಗತಿಕ ಸಂದರ್ಭದಲ್ಲಿ ಭಾರತ ಎದುರಿಸಿರುವ ಮತ್ತೊಂದು ಮುಖ್ಯವಾದ ಹಿನ್ನಡೆ, ಅಮೆರಿಕದ ಅಧ್ಯಕ್ಷರು ಸಾರಿರುವ ಸುಂಕ ಸಮರ. ಭಾರತದ ವಿದೇಶಾಂಗ ನೀತಿಯನ್ನು ಮುನ್ನಡೆಸುವ ಮಾರ್ಗದರ್ಶಕ ಸೂತ್ರಗಳಾಗಿದ್ದ, ನ್ಯಾಯದ ಬಗೆಗಿನ ಬದ್ಧತೆ ಹಾಗೂ ದಮನಿತ ಸಮುದಾಯಗಳ ಬಗೆಗಿನ ಅನುಭೂತಿ ಈಗ ನೇಪಥ್ಯಕ್ಕೆ ಸರಿದಿವೆ. ಮೂಲತತ್ತ್ವಗಳಿಂದ ಹಿಂದೆ ಸರಿದಿರುವ ಕಾರಣದಿಂದಲೇ, ಪ್ಯಾಲೆಸ್ಟೀನ್‌ ಬಗ್ಗೆ ಖಚಿತ ನಿಲುವು ತೆಗೆದುಕೊಳ್ಳುವುದು ಭಾರತಕ್ಕೆ ಸಾಧ್ಯವಾಗಲಿಲ್ಲ ಮಾತ್ರವಲ್ಲ, ಗಾಜಾದಲ್ಲಿ ಇಸ್ರೇಲ್‌ ನಡೆಸಿರುವ ಹತ್ಯಾಕಾಂಡವನ್ನು ಸ್ಪಷ್ಟವಾಗಿ ಖಂಡಿಸುವುದಕ್ಕೂ ಹಿಂದೆಮುಂದೆ ನೋಡುವಂತಾಗಿದೆ. ಈ ಹಿಂಜರಿಕೆಯಿಂದಾಗಿ, ಪ್ರಸ್ತುತ ವಿಶ್ವದಲ್ಲಿ ನಡೆದಿರುವ, ಮಾನವೀಯತೆಯ ಮೇಲಿನ ಬಹು ಘೋರವಾದ ಅಪರಾಧದಲ್ಲಿ ಭಾಗಿಯಾದಂತಾಗುತ್ತದೆ. ಬಹುತೇಕ ನೆರೆಯ ದೇಶಗಳೊಂದಿಗಿನ ಭಾರತದ ಸಂಬಂಧ ದುರ್ಬಲವಾಗಿದೆ, ಕಳವಳ ಹುಟ್ಟಿಸುವಂತಿದೆ. ಅನಿರೀಕ್ಷಿತ ವಿದ್ಯಮಾನಗಳು ಭಾರತ ಹಾಗೂ ಚೀನಾ ಕೈಕುಲುಕುವ ಸಂದರ್ಭವನ್ನು ಸೃಷ್ಟಿಸಿದ್ದರೂ, ಈ ಸಂಬಂಧ ಎಷ್ಟು ಪ್ರಾಮಾಣಿಕವಾದುದು ಎನ್ನುವ ಬಗ್ಗೆ ಸಂದೇಹವಿದ್ದೇ ಇದೆ.

ವಿದೇಶಾಂಗ ನೀತಿಯ ಚರಿತ್ರೆಯನ್ನು ಗಮನಿಸಿದರೆ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಶ್ವದ ಬಹುತೇಕ ದೇಶಗಳೊಂದಿಗೆ ಸೌಹಾರ್ದ ಸಂಬಂಧ ಹಾಗೂ ಸ್ನೇಹವನ್ನು ಈ ಮೊದಲು ಭಾರತ ಹೊಂದಿತ್ತು. ಅಭಿವೃದ್ಧಿಶೀಲ ಪಥದ ಆರಂಭಿಕ ಹಂತದಲ್ಲೂ ಭಾರತ ವಿಶ್ವದ ಮನ್ನಣೆಗೆ ಪಾತ್ರವಾಗಿತ್ತು. ಪ್ರಸ್ತುತ ವಿಶ್ವದ ದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದೆಂದು ಗುರ್ತಿಸಲಾಗಿರುವ ಭಾರತ, ಗಣನೀಯ ಸೇನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಈ ಸಾಮರ್ಥ್ಯ ಹಾಗೂ ಸಾಧನೆ, ಜಾಗತಿಕ ಮಟ್ಟದಲ್ಲಿ ಗೌರವದ ಸ್ಥಾನವಾಗಿ ರೂಪಾಂತರಗೊಳ್ಳುವುದು ಸಾಧ್ಯವಾಗಿಲ್ಲ. ಜವಾಹರಲಾಲ್‌ ನೆಹರೂ ಅವರಿಂದ ಅಟಲ್‌ ಬಿಹಾರಿ ವಾಜಪೇಯಿ, ಮನಮೋಹನ್‌ ಸಿಂಗ್‌ ಅವರವರೆಗೆ ಪ್ರತಿ ಪ್ರಧಾನಿಯೂ ಭಾರತದ ವಿಶ್ವದರ್ಜೆಗೆ ಕೊಡುಗೆ ನೀಡುತ್ತಲೇ ಬಂದಿದ್ದಾರೆ; ಆ ಕೊಂಡಿ ಈಗ ಸಡಿಲ ಆಗಿರುವಂತಿದೆ. ಪ್ರತಿಕೂಲ ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯಲು ಸಾಧ್ಯವಾಗದೇ ಇರುವುದು ಹಾಗೂ ಆರ್ಥಿಕ ಮತ್ತು ಸೇನಾ ಸಾಮರ್ಥ್ಯದಿಂದಲೂ ದೇಶದ ಹಿತಾಸಕ್ತಿ ಕಾಪಾಡಿಕೊಳ್ಳಲು ಆಗದೇ ಇರುವುದು ದೇಶವೊಂದರ ವಿದೇಶಾಂಗ ನೀತಿ ದುರ್ಬಲ ಆಗಿರುವುದರ ಸಂಕೇತ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.