ಸಾಹಿತ್ಯ ಚಟುವಟಿಕೆಗಳ ಮೂಲಕ ಜನರ ಗಮನ ಸೆಳೆಯಬೇಕಾದ ‘ಕನ್ನಡ ಸಾಹಿತ್ಯ ಪರಿಷತ್ತು’ (ಕಸಾಪ) ಸಾಹಿತ್ಯೇತರ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಸಾಹಿತ್ಯ ಪರಿಷತ್ತಿನಲ್ಲಿಹಣದ ದುರುಪಯೋಗ ಹಾಗೂ ಅಧಿಕಾರದ ದುರ್ಬಳಕೆ ಆಗಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಸಹಕಾರ ಇಲಾಖೆ ಆದೇಶಿಸಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಯ ಸಂವರ್ಧನೆ ಹಾಗೂ ರಕ್ಷಣೆಯ ಮಹದಾಶಯದೊಂದಿಗೆ ಸ್ಥಾಪನೆಯಾದ ಸಂಸ್ಥೆ, ತನ್ನ ಆಶಯಗಳಿಗೆ ವಿರುದ್ಧವಾದ ಕಾರಣಗಳಿಂದಾಗಿ ವಿಚಾರಣೆ ಎದುರಿಸಬೇಕಾಗಿರುವುದು ದುರದೃಷ್ಟಕರ. ಪರಿಷತ್ತಿನ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೆಲವು ಲೇಖಕರು, ಪರಿಷತ್ತಿನಲ್ಲಿ ನಡೆದಿರುವ ಅವ್ಯವಹಾರಗಳವಿರುದ್ಧ ತನಿಖೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಕಸಾಪ ಅಧ್ಯಕ್ಷರನ್ನು ವಜಾಗೊಳಿಸಿ, ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆನ್ನುವ ಒತ್ತಾಯಗಳೂ ವ್ಯಕ್ತವಾಗಿದ್ದವು. ಪರಿಷತ್ತಿನ ಅಧ್ಯಕ್ಷರ ಮೇಲಿನ ಟೀಕೆ ಟಿಪ್ಪಣಿಗಳು ಹೆಚ್ಚಾಗುತ್ತಿದ್ದಂತೆಯೇ, ಕಸಾಪ ಅಧ್ಯಕ್ಷರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಮತ್ತು ಸವಲತ್ತುಗಳನ್ನು ಸರ್ಕಾರ ಹಿಂಪಡೆದಿತ್ತು. ಪ್ರಸ್ತುತ, ಹಣ ದುರುಪಯೋಗದ ದೂರುಗಳ ಹಿನ್ನೆಲೆಯಲ್ಲಿ, ‘ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960’ರ ಕಲಂ 25ರ ಅಡಿ, ಸಾಹಿತ್ಯ ಪರಿಷತ್ತಿನ ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲು ವಿಚಾರಣಾ ಅಧಿಕಾರಿಯನ್ನು ಸಹಕಾರ ಇಲಾಖೆ ನೇಮಿಸಿದೆ.
ಸರ್ಕಾರ ಮತ್ತು ಇತರೆ ಮೂಲಗಳಿಂದ ಪರಿಷತ್ತಿಗೆ ಬಂದಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ, ಹಣದ ದುರುಪಯೋಗ ನಡೆದಿದೆ ಹಾಗೂ ಪರಿಷತ್ತಿನ ಹಣವನ್ನು ಕಸಾಪ ಅಧ್ಯಕ್ಷರ ಕುಟುಂಬದ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮಬಾಹಿರವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಗುರುತರ ಆರೋಪಗಳಿವೆ. ಕಂಪ್ಯೂಟರ್ ಖರೀದಿ, ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ, ಅಗ್ನಿಶಾಮಕ ಉಪಕರಣದ ಅಳವಡಿಕೆ ಹಾಗೂ ಪುಸ್ತಕಗಳ ಮುದ್ರಣಕ್ಕೆ ಸಂಬಂಧಿಸಿದಂತೆಯೂ ಹಣದ ದುರುಪಯೋಗ ಆಗಿದೆ ಎನ್ನಲಾಗಿದೆ.
ಪರಿಷತ್ತಿನ ಆಡಳಿತ ಮಂಡಳಿಯ ನಿರ್ಣಯಗಳನ್ನು ಸಹಕಾರ ಸಂಘದ ನಿಯಮ ನಿಬಂಧನೆಗೆ ವಿರುದ್ಧವಾಗಿ ದಾಖಲಿಸಿರುವುದರ ಬಗ್ಗೆಯೂ ವಿಚಾರಣೆ ನಡೆಯಲಿದೆ. ವಿಚಾರಣಾಧಿಕಾರಿಯು ನಲವತ್ತೈದು ದಿನಗಳೊಳಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸಬೇಕೆಂದು ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ. ಮಹೇಶ ಜೋಶಿ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗಿನಿಂದ ಒಂದಲ್ಲಾ ಒಂದು ವಿವಾದವನ್ನು ನಿರಂತರವಾಗಿ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಆ ವಿವಾದಗಳು, ಪರಿಷತ್ತಿನ ಘನತೆ ಮತ್ತು ವರ್ಚಸ್ಸಿಗೆ ಧಕ್ಕೆ ತಂದಿವೆ ಹಾಗೂ ಪರಿಷತ್ತಿನ ಹಿತಚಿಂತಕರಿಗೆ ಮುಜುಗರ ಉಂಟು ಮಾಡಿವೆ. 2024ರ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ, ಮಂಡ್ಯ ಜಿಲ್ಲೆಯ ಬರಹಗಾರರು ಕಸಾಪ ಅಧ್ಯಕ್ಷರ ನಡವಳಿಕೆಗೆ ಪ್ರಬಲ ವಿರೋಧ ದಾಖಲಿಸಿದ್ದರು.
ಬೆಂಗಳೂರು, ಹಾಸನ ಸೇರಿದಂತೆ ನಾಡಿನ ವಿವಿಧೆಡೆಗಳಲ್ಲಿ ಮಹೇಶ ಜೋಶಿ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಹೊರಗಿನವರಿಂದ ಮಾತ್ರವಲ್ಲದೆ, ಪರಿಷತ್ತಿನ ಒಳಗಿನವರಿಂದಲೂ ಅಧ್ಯಕ್ಷರ ನಡವಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಪರಿಷತ್ತಿನಿಂದ ಹೊರಗೆ ಬಂದಿರುವ ಕಸಾಪದ ಇಬ್ಬರು ಗೌರವ ಕಾರ್ಯದರ್ಶಿಗಳು ತಮ್ಮ ರಾಜೀನಾಮೆಗೆ ಅಧ್ಯಕ್ಷರ ನಡವಳಿಕೆಯನ್ನೇ ಕಾರಣವನ್ನಾಗಿ ನೀಡಿದ್ದಾರೆ. ಬಳ್ಳಾರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ಹಾಗೂ ಸ್ಥಳ ನಿಗದಿಯಾಗುವ ಮುನ್ನವೇ ಅಧ್ಯಕ್ಷರ ಆಯ್ಕೆಯನ್ನು ನಡೆಸಿರುವ ಹೊಸ ಸಂಪ್ರದಾಯದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿವೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಸದಾಶಯದೊಂದಿಗೆ ಆರಂಭಗೊಂಡ ಪರಿಷತ್ತು, ನೂರಾ ಹತ್ತು ವರ್ಷಗಳನ್ನು ದಾಟಿ ಮುನ್ನಡೆದಿದೆ. ಅನೇಕ ಹಿರಿಯರ ಶ್ರಮ ಹಾಗೂ ತ್ಯಾಗ ಪರಿಷತ್ತಿನ ಬೆಳವಣಿಗೆಯ ಹಿಂದಿದೆ. ಈ ಹಿಂದೆಯೂ ಕಸಾಪ ವಿವಾದಗಳಿಗೆ ಗುರಿಯಾಗಿದ್ದರೂ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನುವ ಅದರ ಹಿರಿಮೆಗೆ ಕುಂದುಂಟಾಗಿಲ್ಲ. ಸಾಹಿತ್ಯ ಪರಿಷತ್ತು ತನ್ನ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಎದುರಾಗಿರುವ ಬಿಕ್ಕಟ್ಟಿನಿಂದ ಹೊರಬರುವುದು ಅಗತ್ಯವಾಗಿದೆ. ಸಹಕಾರ ಇಲಾಖೆಯ ವಿಚಾರಣೆ ಸಮರ್ಪಕವಾಗಿ ನಡೆಯುವ ಮೂಲಕ, ಸಾಹಿತ್ಯ ಪರಿಷತ್ತಿನ ವಿಶ್ವಾಸಾರ್ಹತೆ ಕುರಿತು ಉಂಟಾಗಿರುವ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾಗಿದೆ. ಯಾರದೋ ವ್ಯಕ್ತಿ ಪ್ರತಿಷ್ಠೆಗೆ, ಶತಮಾನೋತ್ಸವ ಆಚರಿಸಿಕೊಂಡಿರುವ ಸಂಸ್ಥೆಯ ಘನತೆ ಮುಕ್ಕಾಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.