ADVERTISEMENT

ಸಂಪಾದಕೀಯ: ದ್ವೇಷಭಾಷಣ ತಡೆಗೆ ಕಾನೂನು ದಿಟ್ಟ ನಡೆ, ಎಚ್ಚರವೂ ಅಗತ್ಯ

ಸಂಪಾದಕೀಯ
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
   
ದ್ವೇಷ ಭಾಷಣಗಳನ್ನು ತಡೆಯುವ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ, ವಿರೋಧಿಗಳ ಧ್ವನಿ ಹತ್ತಿಕ್ಕಲು ಇದು ಬಳಕೆಯಾಗುವ ಆತಂಕ ಇದ್ದೇ ಇದೆ.

ಸಾರ್ವಜನಿಕ ವೇದಿಕೆಗಳ ಮೂಲಕ ಆಡುವ ಹಲವು ಮಾತುಗಳಲ್ಲಿ ದ್ವೇಷಭಾವನೆ, ಪೂರ್ವಗ್ರಹಗಳು ತುಂಬಿರುವ ಕಾಲಘಟ್ಟದಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ– 2025’ನ್ನು ಜಾರಿಗೆ ತರುವ ರಾಜ್ಯ ಸರ್ಕಾರದ ನಿರ್ಧಾರ ಬಹು ದಿಟ್ಟವಾದ ನಡೆ. ಹಾಗೆಯೇ ವಿವಾದಾತ್ಮಕ ಆದುದೂ ಹೌದು. ಆಧುನಿಕ ಕಾಲಘಟ್ಟದ ದ್ವೇಷ ಭಾಷಣಗಳನ್ನು, ಅದರಲ್ಲೂ ಮುಖ್ಯವಾಗಿ ಆನ್‌ಲೈನ್‌ ವೇದಿಕೆಗಳ ಮೂಲಕ ಆಡುವ ನಂಜಿನ ಮಾತುಗಳನ್ನು ತಡೆಯಲು ಈಗಿರುವ ಕಾನೂನು ಅಸ್ತ್ರಗಳು ಸಾಕಾಗುತ್ತಿಲ್ಲ ಎಂದು ರಾಜ್ಯ ಸರ್ಕಾರಗಳು ಹೇಳುತ್ತಿವೆ. ಈಗ ಕರ್ನಾಟಕ ಸರ್ಕಾರ ರೂಪಿಸಿರುವ ಮಸೂದೆಯು ಇಂತಹ ಕ್ರಿಮಿನಲ್ ಅಪರಾಧಗಳನ್ನು ತಡೆಯಲು ಸಮಗ್ರವಾದ ಚೌಕಟ್ಟೊಂದನ್ನು ಹಾಕಿಕೊಟ್ಟಿದೆ. ಆದರೆ, ಕೆಲವು ಸಾಂವಿಧಾನಿಕ ಮಿತಿಗಳನ್ನು ಈ ಮಸೂದೆಯಲ್ಲಿ ಅಡಕವಾಗಿಸದೆ ಇದ್ದಲ್ಲಿ, ಮಸೂದೆಯು ತಪ್ಪಾಗಿ ಬಳಕೆಯಾಗುವ ಅಪಾಯಗಳೂ ಇವೆ.

ಈ ಮಸೂದೆಯು ಸ್ಪಷ್ಟವಾದ ಹಾಗೂ ವಿಸ್ತೃತವಾದ ವ್ಯಾಖ್ಯಾನಗಳನ್ನು ಒಳಗೊಂಡಿದೆ. ‘ದ್ವೇಷ ಭಾಷಣ’ ಎನ್ನುವುದರ ಅರ್ಥವು, ಮಾತಿನ ಮೂಲಕ, ಬರಹದ ಮೂಲಕ, ಚಿತ್ರಗಳ ಮೂಲಕ, ವಿದ್ಯುನ್ಮಾನ ವೇದಿಕೆ ಬಳಕೆಯ ಮೂಲಕ ಗಾಸಿಗೊಳಿಸುವ, ಸೌಹಾರ್ದ ಕದಡುವ, ವ್ಯಕ್ತಿಯ ಅಥವಾ ಗುಂಪೊಂದರ ವಿರುದ್ಧ ದ್ವೇಷ ಮೂಡಿಸುವಂತಹ ಸಂದೇಶ ರವಾನಿಸುವುದು ಎಂಬುದಾಗುತ್ತದೆ. ಹೀಗೆ ದ್ವೇಷ ಮೂಡಿಸುವ ಯತ್ನವು ಧರ್ಮ, ಜಾತಿ, ಜನಾಂಗ, ಭಾಷೆ, ಲಿಂಗ, ಲೈಂಗಿಕ ಅಭಿವ್ಯಕ್ತಿ, ಅಂಗವೈಕಲ್ಯ, ಹುಟ್ಟಿದ ಸ್ಥಳ, ಪಂಗಡವನ್ನು ಆಧರಿಸಿ ನಡೆದಾಗ ಅದು ಅಪರಾಧ ಎಂದು ಮಸೂದೆಯು ಹೇಳುತ್ತದೆ. ಇಂತಹ ಭಾಷಣಗಳ ಪ್ರಸರಣ ಹಾಗೂ ಉತ್ತೇಜನ ನೀಡುವುದು ‘ದ್ವೇಷಾಪರಾಧ’ ಆಗುತ್ತದೆ ಎಂದು ಮಸೂದೆಯು ಹೇಳುತ್ತದೆ. ಈ ಅಪರಾಧಗಳಿಗೆ ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಮತ್ತೆ ಮತ್ತೆ ಇದೇ ಅಪರಾಧ ಎಸಗುವವರನ್ನು ಗರಿಷ್ಠ 10 ವರ್ಷಗಳವರೆಗೆ ಜೈಲುವಾಸಕ್ಕೆ ಗುರಿಪಡಿಸಬಹುದಾಗಿದೆ. ಇವು ಗಂಭೀರ ಸ್ವರೂಪದ ಅಪರಾಧ ಕೃತ್ಯಗಳು ಎಂದು ಪರಿಗಣಿತವಾಗುತ್ತವೆ, ಇವು ಜಾಮೀನು ರಹಿತವಾಗಿರಲಿವೆ. ಇಂತಹ ಅಪರಾಧ ಕೃತ್ಯಗಳಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡಲು ನ್ಯಾಯಾಲಯಗಳಿಗೆ ಅವಕಾಶ ಇರಲಿದೆ. ಈ ಮಸೂದೆಯು ಈಗಾಗಲೇ ಜಾರಿಯಲ್ಲಿರುವ ಕೇಂದ್ರದ ಕೆಲವು ಕಾನೂನುಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿರಲಿದೆ. ದ್ವೇಷ ಹರಡುವ ಅಪರಾಧವನ್ನು ಈ ಹಿಂದಿನ ಭಾರತೀಯ ದಂಡ ಸಂಹಿತೆಯು ಗುರುತಿಸಿದ್ದ ಬಗೆಯಲ್ಲೇ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಕೆಲವು ಸೆಕ್ಷನ್‌ಗಳೂ ಗುರುತಿಸಿವೆ. ಆದರೆ, ಅದನ್ನೊಂದು ಪ್ರತ್ಯೇಕ ಅಪರಾಧವನ್ನಾಗಿ ವ್ಯಾಖ್ಯಾನಿಸುವ ಕೆಲಸವನ್ನು ಬಿಎನ್‌ಎಸ್‌ ಮಾಡಿಲ್ಲ. ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಮಸೂದೆಯು ಆ ಕೆಲಸ ಮಾಡಿದೆ, ದಂಡದ ಮೊತ್ತವನ್ನು ಹೆಚ್ಚಿಸಿದೆ; ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿದೆ. ಮುಖ್ಯವಾಗಿ, ಈ ಮಸೂದೆಯು ಡಿಜಿಟಲ್ ಮಧ್ಯವರ್ತಿಗಳನ್ನು ನಿಯಂತ್ರಣಕ್ಕೆ ಒಳಪಡಿಸುತ್ತದೆ, ನಿಯೋಜಿತ ಅಧಿಕಾರಿಗೆ ಆನ್‌ಲೈನ್‌ ವಿಷಯ–ವಸ್ತುವನ್ನು ತೆಗೆಯಲು ಅಥವಾ ತಡೆಹಿಡಿಯಲು ಅಧಿಕಾರ ನೀಡುತ್ತದೆ. ಈ ಬಗೆಯ ಅವಕಾಶವು ಬಿಎನ್‌ಎಸ್‌ನಲ್ಲಿ ಇಲ್ಲ. ಆದರೆ, ಈ ವಿಶೇಷ ಅಧಿಕಾರವೇ ಮಸೂದೆಯು ದುರ್ಬಳಕೆ ಆಗಬಹುದು ಎಂಬ ಕಳವಳಕ್ಕೆ ಕಾರಣವಾಗಿದೆ.

ಮಸೂದೆಯು ನೀಡಿರುವ ವ್ಯಾಖ್ಯಾನವು ‘ವೈರತ್ವ’ ಅಥವಾ ‘ಗಾಸಿಗೊಳಿಸುವುದು’ ಎಂಬ ಪದಗಳನ್ನು ಆಧರಿಸಿದೆ. ಈ ಪದಗಳನ್ನು ವಿಶಾಲ ಅರ್ಥದಲ್ಲಿ ವ್ಯಾಖ್ಯಾನಿಸಬಹುದು. ಅತ್ಯುತ್ಸಾಹದಲ್ಲಿ ಇರುವ, ಪಕ್ಷಪಾತಿಯಾದ ಆಡಳಿತ ವ್ಯವಸ್ಥೆಯೊಂದರ ಕೈಗೆ ಇಂತಹ ಪದಗಳನ್ನು ವ್ಯಾಖ್ಯಾನಿಸುವ ಅಧಿಕಾರ ದೊರೆತಾಗ ಅದು ತನ್ನ ಟೀಕಾಕಾರರ, ಪತ್ರಕರ್ತರ ಅಥವಾ ರಾಜಕೀಯ ವಿರೋಧಿಗಳ ದನಿ ಅಡಗಿಸಲು ಬಳಸಬಹುದು. ಈ ಅಪರಾಧಗಳನ್ನು ಜಾಮೀನುರಹಿತ ಎಂದು ಗುರುತಿಸಿರುವ ಪರಿಣಾಮವಾಗಿ, ಆರೋಪಿಯ ಸ್ಥಾನದಲ್ಲಿರುವ ವ್ಯಕ್ತಿಗೆ ವಿಚಾರಣೆಗೆ ಮೊದಲೇ ಒಂದಿಷ್ಟು ‘ಶಿಕ್ಷೆ’ ಆಗುವಂತೆ ಮಾಡಿಬಿಡಬಹುದು. ಕಾನೂನಿನ ಪ್ರಕ್ರಿಯೆಯೇ ಒಂದು ಶಿಕ್ಷೆಯಂತೆ ಆಗಬಹುದು ಎಂಬುದನ್ನು ಇದುವರೆಗಿನ ಹಲವು ಅನುಭವಗಳು ಹೇಳುತ್ತಿವೆ. ಕೇದಾರನಾಥ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಒಂದು ತತ್ತ್ವವನ್ನು ಹೇಳಿದೆ: ಅಭಿವ್ಯಕ್ತಿಯು ಹಿಂಸೆಗೆ ಪ್ರಚೋದನೆ ನೀಡುವಂತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ತಕ್ಷಣದ ಅಪಾಯ ತಂದೊಡ್ಡುವಂತೆ ಇದ್ದರೆ ಮಾತ್ರ ಅಭಿವ್ಯಕ್ತಿಗೆ ನಿರ್ಬಂಧಗಳನ್ನು ಹೇರಬಹುದು; ಯಾರಿಗೋ ಕಸಿವಿಸಿ ಉಂಟುಮಾಡುತ್ತದೆ, ಯಾರದೋ ಅತೃಪ್ತಿಗೆ ಕಾರಣವಾಗುತ್ತದೆ ಎಂಬ ಕಾರಣ ನೀಡಿ ಅಭಿವ್ಯಕ್ತಿಗೆ ನಿರ್ಬಂಧ ವಿಧಿಸಲಾಗದು ಎಂದು ಕೋರ್ಟ್‌ ಹೇಳಿದೆ. ಸರ್ಕಾರಗಳು ದ್ವೇಷ ಭಾಷಣವನ್ನು ತಡೆಯುವ ಉದ್ದೇಶದಿಂದ ತರುವ ಯಾವುದೇ ಕಾನೂನು ಈ ನಿಯಮಕ್ಕೆ ಅನುಗುಣವಾಗಿ ಇರಬೇಕಾಗುತ್ತದೆ. ದ್ವೇಷ ಭಾಷಣದ ಅಪಾಯಗಳನ್ನು ತಡೆಯಲು ಕಾನೂನು ರೂಪಿಸಿದ ಸರ್ಕಾರದ ಕ್ರಮ ಸರಿಯಾಗಿಯೇ ಇದೆ. ಆದರೆ, ಔಷಧವೇ ಕಾಯಿಲೆಗಿಂತ ಹೆಚ್ಚು ಸಮಸ್ಯೆ ಉಂಟುಮಾಡದಂತೆ ಸರ್ಕಾರವು ನಿಗಾ ವಹಿಸಬೇಕು.

ADVERTISEMENT