ADVERTISEMENT

ಧ್ವನಿವರ್ಧಕದಲ್ಲಿ ಮಾಹಿತಿ: ಅಂಗವಿಕಲರ ಒಳಗೊಳ್ಳುವಿಕೆಯತ್ತ ಮಹತ್ವದ ಹೆಜ್ಜೆ

ಸಂಪಾದಕೀಯ
Published 3 ಜನವರಿ 2025, 23:30 IST
Last Updated 3 ಜನವರಿ 2025, 23:30 IST
   

ರಾಜ್ಯದಾದ್ಯಂತ ಇರುವ ಎಲ್ಲ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಬಸ್‌ ಸಂಚಾರ ವಿವರಗಳ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ನೀಡುವ ವ್ಯವಸ್ಥೆಯನ್ನು ಎರಡು ವರ್ಷಗಳೊಳಗೆ ಅಳವಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ದೃಷ್ಟಿದೋಷ ಹೊಂದಿರುವವರು ಸಾರ್ವಜನಿಕ ಸಾರಿಗೆಯನ್ನು ಬಳಸುವಾಗ ಎದುರಿಸಬೇಕಾಗುವ ಸವಾಲುಗಳನ್ನು ಉಲ್ಲೇಖಿಸಿ ಬೆಂಗಳೂರು ನಿವಾಸಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮವು (ಬಿಎಂಟಿಸಿ) ಕೆಲವು ಬಸ್‌ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿತ್ತು. ಆದರೆ, ಅದನ್ನು ಕೈಬಿಡಲು ನಿರ್ಧರಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಆಗಿತ್ತು. ಬಸ್‌ಗಳನ್ನು ಗುರುತಿಸುವುದು, ಅವು ಸಂಚರಿಸುವ ಮಾರ್ಗಗಳನ್ನು ತಿಳಿದುಕೊಳ್ಳುವುದು, ಎಲ್ಲೆಲ್ಲಿ ನಿಲುಗಡೆ ಇದೆ ಎಂಬುದನ್ನು ತಿಳಿದುಕೊಳ್ಳುವುದು ದೃಷ್ಟಿದೋಷ ಹೊಂದಿರುವವರಿಗೆ ಬಹುದೊಡ್ಡ ಸವಾಲಿನ ಕೆಲಸ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಹೆಚ್ಚು ಸಮಾನತೆಯ, ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಸಾರ್ವಜನಿಕ ಸಾರಿಗೆ ಸೌಲಭ್ಯದ ದೊರಕುವಿಕೆಯನ್ನು ಸುಲಭಗೊಳಿಸುವ ದಿಸೆಯಲ್ಲಿ ಹೈಕೋರ್ಟ್‌ ಈಗ ನೀಡಿರುವ ತೀರ್ಪು ಮಹತ್ವದ್ದಾಗಿದೆ. ಅಂಗವಿಕಲರು ಸ್ವತಂತ್ರವಾಗಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ಇದು ನೆರವಾಗಲಿದೆ. 

ಈ ತೀರ್ಪು ಹಲವರಿಗೆ ನಿರಾಳ ಉಂಟು ಮಾಡುತ್ತದೆ. ಜೊತೆಗೆ, ಮಹತ್ವದ ಹಲವು ವಿಚಾರಗಳು ನಿರ್ಲಕ್ಷಿತವಾಗಿಯೇ ಉಳಿದಿವೆ ಎಂಬುದರತ್ತಲೂ ಬೆಳಕು ಚೆಲ್ಲಿದೆ. ಬೆಂಗಳೂರು ಮತ್ತು ಇತರೆಡೆಗಳಲ್ಲಿ ಎಲ್ಲರಿಗೂ ಅನುಕೂಲ ಕಲ್ಪಿಸುವಂತಹ ಮೂಲಸೌಕರ್ಯಗಳ ಕೊರತೆ ಇದೆ ಎಂಬುದರತ್ತಲೂ ಬೊಟ್ಟು ಮಾಡಿದೆ. ಮಾಹಿತಿ ತಂತ್ರಜ್ಞಾನ ನಗರಿ ಎಂಬ ಹಿರಿಮೆ ಹೊಂದಿರುವ ಬೆಂಗಳೂರಿನ ಸಾರ್ವಜನಿಕ ಸ್ಥಳಗಳು ಮತ್ತು ಸೇವೆಗಳು ಅಂಗವಿಕಲರಿಗೆ ಎಟಕುವಂತೆ ಇಲ್ಲ ಎಂಬ ಅಂಶವೂ ಈಗ ಬಯಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸ್ಪರ್ಶದ ಮೂಲಕ ವ್ಯತ್ಯಾಸ ಗುರುತಿಸಬಹುದಾದ ನೆಲಹಾಸು, ಇಳಿಜಾರು ದಾರಿ, ಧ್ವನಿವರ್ಧಕದ ಮೂಲಕ ಸಂದೇಶದಂತಹ ಅಗತ್ಯ ಸೇವೆಗಳು ಲಭ್ಯ ಇಲ್ಲ. ಈ ಕೊರತೆಯು ದೃಷ್ಟಿದೋಷ ಹೊಂದಿರುವವರು ಮತ್ತು ಕಾಲಿಲ್ಲದವರಿಗೆ ಭಾರಿ ಸಂಕಷ್ಟ ತಂದೊಡ್ಡುತ್ತದೆ. 

ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಅಂಗವಿಕಲರಿಗೆ ಅನುಕೂಲಕರ ಮೂಲಸೌಕರ್ಯಗಳ ಕೊರತೆಯು ಬಹಳ ಹಿಂದಿನಿಂದಲೂ ಬಹುದೊಡ್ಡ ಕಳವಳದ ವಿಚಾರವಾಗಿಯೇ ಮುಂದುವರಿದಿದೆ. ಅಂಗವಿಕಲರಿಗೆ ಅನುಕೂಲಕರ ಮೂಲಸೌಕರ್ಯ ಗಳನ್ನು ಒದಗಿಸಿಕೊಡುವಲ್ಲಿ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡುವಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಮಹತ್ವದ ಮೈಲಿಗಲ್ಲಾಗಿದೆ. ಈಗಿನ ತೀರ್ಪನ್ನು ಮೂಲಸೌಕರ್ಯವು ಅಂಗವಿಕಲರಿಗೂ ಅನುಕೂಲಕರವಾಗಿ ಇರುವಂತೆ ನೋಡಿಕೊಳ್ಳುವ ವಿಸ್ತೃತ ಪ್ರಯತ್ನದ ಒಂದು ಭಾಗ ಎಂದು ಪರಿಗಣಿಸಬೇಕು. ಈಗ ಇರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮರುವಿನ್ಯಾಸ ಮಾಡಬೇಕಾದ ಅಗತ್ಯ ಇದೆ. ಹಾಗೆಯೇ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸುವಾಗ, ಮೂಲಸೌಕರ್ಯಗಳು ಎಲ್ಲರಿಗೂ ಅನುಕೂಲಕರ ಆಗಿರುವಂತೆ ನೋಡಿಕೊಳ್ಳಬೇಕು. ನ್ಯಾಯಾಲಯವು ನೀಡಿರುವ ಎರಡು ವರ್ಷಗಳ ಗಡುವಿನಲ್ಲಿ ಈ ಎಲ್ಲ ಅಗತ್ಯಗಳನ್ನು ‍ಪೂರೈಸಬಹುದಾಗಿದೆ. ಆದರೆ, ಅದಕ್ಕಾಗಿ ಗುರಿಕೇಂದ್ರಿತ ಅನುಷ್ಠಾನ, ಸಂಪನ್ಮೂಲ ಹಂಚಿಕೆ ಮತ್ತು ಅಂಗವಿಕಲರ ಸಂಘಟನೆಗಳ ಜೊತೆಗೆ ಸಮನ್ವಯ ಸಾಧಿಸಬೇಕಾಗಿದೆ.

ADVERTISEMENT


ಅನುಷ್ಠಾನಗೊಳಿಸುತ್ತಿರುವ ವ್ಯವಸ್ಥೆಯು ಅಂಗವಿಕಲರ ಅಗತ್ಯಗಳಿಗೆ ಪೂರಕವಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಅವರ ಜೊತೆಗೆ ಚರ್ಚೆ ನಡೆಸಬೇಕು. ಮೂಲಸೌಕರ್ಯ ಅಭಿವೃದ್ಧಿ ಎಂದರೆ ಧ್ವನಿವರ್ಧಕ ವ್ಯವಸ್ಥೆ ಅಳವಡಿಕೆಯಂತಹ ಕಾರ್ಯಗಳಿಗೆ ಸೀಮಿತ ಅಲ್ಲ. ನಗರ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಎಲ್ಲ ಆಯಾಮಗಳೂ ಅಂಗವಿಕಲರಿಗೆ ಅನುಕೂಲಕರ ಆಗಿರುವಂತೆ ವ್ಯವಸ್ಥೆಯನ್ನೇ ಬದಲಿಸುವುದು ಇಲ್ಲಿ ಮುಖ್ಯವಾಗಿದೆ. ಸಮಾಜವನ್ನು ಎಲ್ಲರಿಗೂ ಅನುಕೂಲಕರ ಆಗಿಸುವುದಕ್ಕೆ ಸರ್ಕಾರವು ಸಾಂಕೇತಿಕ ಕ್ರಮಗಳನ್ನು ಮೀರಿ ಸಾಗಬೇಕಿದೆ. ಸುಸ್ಥಿರವಾದ ಮತ್ತು ದೀರ್ಘಾವಧಿ ಪರಿಹಾರಗಳನ್ನು ಒದಗಿಸಲು ಹೂಡಿಕೆ ಮಾಡಬೇಕಿದೆ. ಅಡೆತಡೆಗಳನ್ನು ನಿವಾರಿಸಿ, ಎಲ್ಲರ ಒಳಗೊಳ್ಳುವಿಕೆ ಮತ್ತು ಸಮಾನತೆಗೆ ಉತ್ತೇಜನ ನೀಡಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.