ಮೂರು ತಿಂಗಳಿಂದ ವೇತನ ಪಾವತಿ ಆಗದ ಕಾರಣಕ್ಕಾಗಿ ಹತಾಶರಾದ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಂಥಾಲಯದ ಮೇಲ್ವಿಚಾರಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ಸಂಸ್ಥೆಗಳಲ್ಲಿ ದುಡಿಯುವವರು ಸಕಾಲಕ್ಕೆ ಸಂಬಳ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲೆದೋರುವುದು ಸರ್ಕಾರ ತಲೆತಗ್ಗಿಸಬೇಕಾದ ಸಂಗತಿ. ಇಂಥ ಘಟನೆಗಳು ಸರ್ಕಾರಕ್ಕೆ ಕಲಂಕ ತರುವುದರ ಜೊತೆಗೆ, ನೌಕರರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತವೆ. ಸಂಬಳ ಸಕಾಲಕ್ಕೆ ದೊರೆಯದೆ ಆತ್ಮಹತ್ಯೆ ಮಾಡಿಕೊಂಡ ಮೇಲ್ವಿಚಾರಕಿಯ ಪ್ರಕರಣ ಗ್ರಂಥಾಲಯ ಇಲಾಖೆಯಲ್ಲಿನ ಅವ್ಯವಸ್ಥೆಯ ಜೊತೆಗೆ, ಅಧಿಕಾರಿಗಳ ಸಂವೇದನಾರಾಹಿತ್ಯ ಮನಃಸ್ಥಿತಿಗೆ ನಿದರ್ಶನದಂತಿದೆ. ಭಾಗ್ಯವತಿ ವಿಶ್ವೇಶ್ವರಯ್ಯ ಸಾವಿಗೆ ತುತ್ತಾಗಿರುವ ನತದೃಷ್ಟ ಮಹಿಳೆ. ಅಧಿಕಾರಿಗಳ ಸತಾಯಿಸುವಿಕೆಯಿಂದಾಗಿ ಮೂರು ತಿಂಗಳಿಂದ ಸಂಬಳ ದೊರೆಯದೆ ಹೋದುದರಿಂದ ಮಾನಸಿಕ ಒತ್ತಡಕ್ಕೊಳಗಾಗಿರುವ ಅವರು ಗ್ರಂಥಾಲಯದಲ್ಲಿನ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಜೀವನಪ್ರೀತಿ ನೀಡಬೇಕಾದ ಪರಿಸರವೇ ಜೀವನ ಕೊನೆಗೊಳಿಸಿಕೊಳ್ಳುವ ಸ್ಥಳವಾಗಿ ಪರಿಣಮಿಸಿದೆ. ಹಲವಾರು ವರ್ಷಗಳಿಂದ ಗ್ರಂಥಾಲಯದ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ಸಂಬಳ ಸರಿಯಾದ ಸಮಯಕ್ಕೆ ಬಾರದೆ ಹೋದುದರಿಂದ ತೊಂದರೆ ಅನುಭವಿಸುತ್ತಿದ್ದರು; ಮಗಳ ಶಾಲಾ ಶುಲ್ಕ ಕಟ್ಟುವುದಕ್ಕೂ ಸಮಸ್ಯೆಯಾಗಿದೆ ಎಂದು ಗ್ರಾಮ ಪಂಚಾಯಿತಿ
ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮಾಡಿಕೊಂಡ ಮನವಿ ಫಲಕಾರಿಯಾಗದ ಕಾರಣ ಮಾನಸಿಕವಾಗಿ ಕುಗ್ಗಿಹೋಗಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬ ಹೇಳಿದೆ.
ಭಾಗ್ಯವತಿ ಅವರ ಆತ್ಮಹತ್ಯೆಯನ್ನು ವೈಯಕ್ತಿಕ ದುರಂತವಾಗಿ ನೋಡದೆ, ಗ್ರಂಥಾಲಯ ಇಲಾಖೆಯ ಒಟ್ಟಾರೆ ಅವ್ಯವಸ್ಥೆಯ ರೂಪದಲ್ಲಿ ನೋಡಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳು ಓದುವ ಅಭಿರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಜ್ಞಾನಕೇಂದ್ರಗಳಾಗಿಯೂ ಹಾಗೂ ಮಾಹಿತಿ ಕೇಂದ್ರಗಳಾಗಿಯೂ ಬಳಕೆಯಾಗುತ್ತಿವೆ. ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳ ವಿದ್ಯಾರ್ಥಿಗಳಿಗೆ ಜ್ಞಾನದ ಅಕ್ಷಯಪಾತ್ರೆಯಂತೆ ಒದಗಿಬರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವ ಈ ಅರಿವಿನ ಕೇಂದ್ರಗಳು, ಸರ್ಕಾರದ ನಿರ್ಲಕ್ಷ್ಯದಿಂದಾಗಿ ವರ್ಷದಿಂದ ವರ್ಷಕ್ಕೆ ದುರ್ಬಲಗೊಳ್ಳುತ್ತಿವೆ. ಮೂಲ ಸೌಕರ್ಯಗಳನ್ನು ಒದಗಿಸುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಪುಸ್ತಕಗಳನ್ನು ಸರಬರಾಜು ಮಾಡುವ ಸಾರ್ವಜನಿಕ ಗ್ರಂಥಾಲಯ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮತ್ತು ಅದಕ್ಷತೆಯಿಂದ ಗ್ರಾಮೀಣ ಗ್ರಂಥಾಲಯಗಳು ಬಡವಾಗಿವೆ. ಇದರಿಂದ ಆಗುತ್ತಿರುವ ಸಾಂಸ್ಕೃತಿಕ ನಷ್ಟವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಗ್ರಂಥಾಲಯಗಳೇ ದುರ್ಬಲವಾಗಿರುವಾಗ, ಅವುಗಳ ಉಸ್ತುವಾರಿ ನೋಡಿಕೊಳ್ಳುವ ಮೇಲ್ವಿಚಾರಕರ ಸ್ಥಿತಿ ಮತ್ತಷ್ಟು ಶೋಚನೀಯ ಆಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಕನಿಷ್ಠ ಸಂಬಳದಲ್ಲಿ ಜವಾಬ್ದಾರಿಯುತ ಹೊಣೆಗಾರಿಕೆ ನಿಭಾಯಿಸಬೇಕಾದ ಸವಾಲು ಅವರದು. ಸರ್ಕಾರದಿಂದ ಹಣ ಸರಿಯಾದ ಸಮಯಕ್ಕೆ ಬಿಡುಗಡೆ ಆಗದೆ ಇರುವುದರಿಂದ ಗ್ರಂಥಾಲಯಗಳಿಗೆ ತರಿಸುವ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಸರಬರಾಜುದಾರರಿಗೆ ಮಾಡಬೇಕಾದ ಪಾವತಿಯೂ ವಿಳಂಬವಾಗುತ್ತದೆ ಹಾಗೂ ಅದರ ಒತ್ತಡವನ್ನು ಗ್ರಂಥಾಲಯದ ಮೇಲ್ವಿಚಾರಕರೇ ಅನುಭವಿಸಬೇಕಾಗುತ್ತದೆ.
ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಕೊಡಬೇಕಾದುದು ಸರ್ಕಾರದ ಕರ್ತವ್ಯ. ಅದರಲ್ಲೂ ಗೌರವ ಸಂಭಾವನೆ ಪಡೆದು ಕೆಲಸ ಮಾಡುವವರು, ಗುತ್ತಿಗೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಿಗೆ ವಿಳಂಬವಿಲ್ಲದೆ ವೇತನ ದೊರೆಯಬೇಕು. ಸರ್ಕಾರದ ಅನುದಾನದ ಕೊರತೆಯಿಂದಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹದಿನೈದು ತಿಂಗಳುಗಳಿಂದ ಸಂಬಳ ಆಗದಿರುವ ಸುದ್ದಿ ಇತ್ತೀಚೆಗಷ್ಟೇ ಪ್ರಕಟವಾಗಿತ್ತು. ಬಹುತೇಕ ವಿಶ್ವವಿದ್ಯಾಲಯಗಳಲ್ಲಿನ ತಾತ್ಕಾಲಿಕ ನೌಕರರು ವಿಳಂಬ ಸಂಬಳದಿಂದಾಗಿ ಒದ್ದಾಡುವಂತಾಗಿದೆ. ಬಹುತೇಕ ಇಲಾಖೆಗಳಲ್ಲಿನ ತಾತ್ಕಾಲಿಕ, ಗುತ್ತಿಗೆ ನೌಕರರ ಸ್ಥಿತಿ ಇದೇ ಆಗಿದೆ. ಕೆಲವು ಸಂದರ್ಭಗಳಲ್ಲಿ ಸರ್ಕಾರದಿಂದ ಅನುದಾನ ಲಭ್ಯವಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಕಾಲಕ್ಕೆ ವೇತನ ಪಡೆಯುವುದರಿಂದ ನೌಕರರು ವಂಚಿತರಾಗುತ್ತಿದ್ದಾರೆ. ನೌಕರರ ಸಂಬಳಕ್ಕೆ ಅನುದಾನ ಒದಗಿಸುವುದರ ಜೊತೆಗೆ, ಹಿರಿಯ ಅಧಿಕಾರಿಗಳಿಗೆ ಮಾನವೀಯತೆಯ ಪಾಠಗಳನ್ನೂ ಸರ್ಕಾರ ಹೇಳಿಕೊಡಬೇಕಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಮಳಖೇಡದ ಗ್ರಂಥಾಲಯ ಮೇಲ್ವಿಚಾರಕಿಯ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.