
‘ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ, ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ– 2026’ ಅನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ರೂಪಿಸಿದೆ. ಪ್ರಸ್ತಾವಿತ ಮಸೂದೆಯು ಮರ್ಯಾದೆಗೇಡು ಹತ್ಯೆಗಳು ಮತ್ತು ಸಂಬಂಧಿತ ಹಿಂಸಾಚಾರಗಳು ಕೇವಲ ಭೂತಕಾಲದ ಅವಶೇಷಗಳಲ್ಲ, ಪ್ರಚಲಿತ ಸಮಾಜದಲ್ಲೂ ಮುಂದುವರಿದ ಹೀನಕೃತ್ಯಗಳು ಎಂಬುದನ್ನು ಒತ್ತಿ ಹೇಳುತ್ತದೆ. ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಾನ್ಯಾ ಪಾಟೀಲ ಎಂಬ ಯುವತಿಯ ಮರ್ಯಾದೆಗೇಡು ಹತ್ಯೆ ಮತ್ತು ಇಂತಹದ್ದೇ ಹಲವು ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳಿಂದಾಗಿ ಪ್ರತ್ಯೇಕ ಕಾಯ್ದೆಯ ಅಗತ್ಯವನ್ನು ಸರ್ಕಾರ ಮನಗಂಡಿದೆ. ಮಸೂದೆಯ ಮೂಲತತ್ತ್ವವು ಸಂವಿಧಾನದ ಪ್ರತಿಪಾದನೆಯನ್ನು ಖಚಿತಪಡಿಸುತ್ತದೆ. ಇದು, ವೈಯಕ್ತಿಕ ಜೀವನ ಮತ್ತು ವಿವಾಹದ ವಿಷಯದಲ್ಲಿ ವ್ಯಕ್ತಿಯ ಸ್ವಾಯತ್ತತೆಯನ್ನು ಬಲು ಸ್ಪಷ್ಟವಾಗಿ ಗುರ್ತಿಸುತ್ತದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಸಾಮಾಜಿಕ ನಿಯಂತ್ರಣಕ್ಕಿಂತಲೂ ಮೇಲಿರಿಸುತ್ತದೆ ಮತ್ತು ಸಂಗಾತಿ ಆಯ್ಕೆಯ ವಿಚಾರದಲ್ಲಿ ಕುಟುಂಬ, ಜಾತಿ ಅಥವಾ ಕುಲದ ಒಪ್ಪಿಗೆ ಅನಗತ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತದೆ. ಹಾಗೆ ಮಾಡುವ ಮೂಲಕ, ಬೊಮ್ಮಾಯಿ ನೇತೃತ್ವದ ಸರ್ಕಾರ 2022ರಲ್ಲಿ ರೂಪಿಸಿದ್ದ, ಮದುವೆ ಮತ್ತು ಮತಾಂತರಗಳು ಸರ್ಕಾರದ ಪರಿಶೀಲನೆಗೆ ಒಳಪಡಲಿವೆ ಎಂದೂ ಸಾರಿದ್ದ ‘ಮತಾಂತರ ನಿಷೇಧ ಕಾಯ್ದೆ’ಯನ್ನು ಈ ಮಸೂದೆಯು ಪ್ರಜ್ಞಾಪೂರ್ವಕವಾಗಿ ಮೀರಿ ನಿಲ್ಲಲು ಯತ್ನಿಸುತ್ತದೆ. ಅಂತಹ ಪರಿಶೀಲನೆ ಯನ್ನು ರಕ್ಷಣೆಯ ಬದಲು ಅಪಾಯದ ಮೂಲವಾಗಿ ಪರಿಗಣಿಸುವ ಈ ಮಸೂದೆ ದಂಪತಿಯನ್ನು ಕೌಟುಂಬಿಕ ಹಾಗೂ ಆಡಳಿತಶಾಹಿ ಹಸ್ತಕ್ಷೇಪದಿಂದ ಮುಕ್ತವಾಗಿಸುವ ಆಶಯ ಹೊಂದಿದೆ.
ಕಾನೂನಿನ ಚೌಕಟ್ಟಿನಲ್ಲಿ ನೋಡುವುದಾದರೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕೊರತೆಗಳನ್ನು ತುಂಬುವ ಕೆಲಸವನ್ನೂ ಈ ಮಸೂದೆ ಮಾಡಿದೆ. ಬಿಎನ್‌ಎಸ್, ಕೊಲೆ, ಹಿಂಸೆ ಮತ್ತು ಬೆದರಿಕೆಯಂತಹ ಕೃತ್ಯಗಳನ್ನು, ಅವುಗಳ ಉದ್ದೇಶ ಪರಿಗಣಿಸದೆ ಶಿಕ್ಷಿಸಿದರೆ, ಹೊಸ ಮಸೂದೆಯು ಮದುವೆ ಅಥವಾ ಸಂಬಂಧವನ್ನು ಜಾತಿ, ಬುಡಕಟ್ಟು, ಸಮುದಾಯ, ಧರ್ಮ, ಸಂಪ್ರದಾಯಕ್ಕೆ ಅಗೌರವ ತಂದಿದೆ ಅಥವಾ ಕುಟುಂಬದ ಇಚ್ಛೆಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ವಿರೋಧಿಸುವುದು ಕಾನೂನುಬಾಹಿರ ಎಂದು ವ್ಯಾಖ್ಯಾನಿಸುತ್ತದೆ. ಇಂತಹ ಕೃತ್ಯಕ್ಕೆ ಕಠಿಣ ಶಿಕ್ಷೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾವ ಹೊಂದಿರುವ ಈ ಮಸೂದೆಯು ಅಪರಾಧಿಗಳಿಗೆ ಸಮಾಜದ ‘ರಕ್ಷಣೆ’ ಸಿಗದಂತೆ ನೋಡಿಕೊಳ್ಳುವ ಗುರಿಯನ್ನೂ ಹೊಂದಿದೆ. ಮರ್ಯಾದೆಗೇಡು ಹತ್ಯೆಯಂತಹ ಅಪರಾಧಗಳನ್ನು ತಡೆಗಟ್ಟಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಘಟಕ ರಚಿಸಬೇಕು, ಈ ಘಟಕಗಳು ದೂರು ಸ್ವೀಕರಿಸಲು, ಸಹಾಯ ಮತ್ತು ರಕ್ಷಣೆ ನೀಡಲು 24 ಗಂಟೆಗಳ ಸಹಾಯವಾಣಿ ಸ್ಥಾಪಿಸಬೇಕು ಮತ್ತು ಕಾಯ್ದೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ನೇತೃತ್ವದ ಮೇಲ್ವಿಚಾರಣಾ ಸಮಿತಿ ಇರಬೇಕು ಎಂಬ ಪ್ರಸ್ತಾವಗಳನ್ನೂ ಹೊಂದಿರುವ ಮಸೂದೆಯು, ಕೇವಲ ಶಿಕ್ಷೆ ನೀಡಲು ಸೀಮಿತವಾದ ಬಿಎನ್‌ಎಸ್‌ಗಿಂತಲೂ ಭಿನ್ನವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಗೆ ಹೋಲಿಸಿದರೂ ಪ್ರಸ್ತಾವಿತ ಮಸೂದೆ ಭಿನ್ನವಾಗಿರುವುದು ಗಮನಾರ್ಹ. ಸಂತ್ರಸ್ತರು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ದರೆ ಮಾತ್ರ ಆ ಕಾಯ್ದೆಯು ಅನ್ವಯವಾಗುತ್ತದೆ. ಆದರೆ, ಈ ಮಸೂದೆಯಲ್ಲಿ ಜಾತಿ ತಟಸ್ಥವಾಗಿದ್ದು, ವ್ಯಕ್ತಿಗಳ ಗುರುತು, ಹಿನ್ನೆಲೆಗಿಂತಲೂ ಅವರು ಕಿರುಕುಳ, ಭೀತಿಗೆ ಒಳಗಾಗಬಾರದು ಎಂಬ ಕಳಕಳಿಯೇ ಮುಖ್ಯವಾಗಿದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ, ಎಸ್‌ಸಿ, ಎಸ್‌ಟಿ ಕಾಯ್ದೆಯ ಅನುಭವವು ರಾಜ್ಯಕ್ಕೆ ಕೆಲವು ಪಾಠಗಳನ್ನು ಕಲಿಸಿದೆ. ಕಠಿಣ ನಿಬಂಧನೆಗಳ ಹೊರತಾಗಿಯೂ, ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇದೆ. ದುರ್ಬಲ ತನಿಖೆ, ಕಳಪೆ ಅಭಿಯೋಜನೆ ಮತ್ತು ಸಾಕ್ಷಿಗಳ ಮೇಲಿನ ಸಾಮಾಜಿಕ ಒತ್ತಡ ಇದಕ್ಕೆ ಕಾರಣ. ಹೊಸ ಕಾನೂನುಗಳು, ಎಷ್ಟೇ ಸದುದ್ದೇಶದಿಂದ ಕೂಡಿದ್ದರೂ, ಪರಿಣಾಮಕಾರಿಯಾಗಿ ಜಾರಿ ಆಗದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಈ ಮಸೂದೆಯು ನೈತಿಕ ಹೇಳಿಕೆಗಳ ಗುಚ್ಛವಾಗದೆ ಹೆಚ್ಚಿನದಾಗಬೇಕಾದರೆ, ಸರ್ಕಾರವು ತನಿಖೆ ವೃತ್ತಿಪರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಸಾಕ್ಷಿಗಳಿಗೆ ರಕ್ಷಣೆ ಒದಗಿಸಬೇಕು ಮತ್ತು ತ್ವರಿತಗತಿಯಲ್ಲಿ ವಿಚಾರಣೆ ನಡೆಯುವಂತೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಸಂಗಾತಿ ಆಯ್ಕೆಯ ಸ್ವಾತಂತ್ರ್ಯದ ಭರವಸೆ ಕಾಗದದ ಮೇಲೆ ಪ್ರಬಲವಾಗಿ ಉಳಿಯುತ್ತದೆ. ಆದರೆ, ಆಚರಣೆಯಲ್ಲಿ ದುರ್ಬಲವಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.