ಅಗತ್ಯ ದಾಖಲೆಗಳು ಇಲ್ಲದೆ ಅಮೆರಿಕ ಪ್ರವೇಶಿಸಿದ್ದ ಭಾರತೀಯರನ್ನು ಅಲ್ಲಿಂದ ಗಡೀಪಾರು ಮಾಡಿದ ದೃಶ್ಯಗಳು, ಆ ಭಾರತೀಯರು ಸ್ವದೇಶದ ವಿಮಾನ ನಿಲ್ದಾಣಕ್ಕೆ ಬಂದಿಳಿದ ದೃಶ್ಯಗಳು ವಲಸೆಗೆ ಸಂಬಂಧಿಸಿದ ಕಾನೂನುಗಳನ್ನು ಅಮೆರಿಕದ ಈಗಿನ ಆಡಳಿತವು ಎಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ ಎಂಬುದನ್ನು ಸೂಚಿಸುತ್ತಿವೆ. ಬಹಳ ಅಪಾಯಕಾರಿಯಾದ ಹಾಗೂ ಅಕ್ರಮವಾದ ಮಾರ್ಗವನ್ನು ಬಳಸಿ ಇನ್ನೊಂದು ದೇಶಕ್ಕೆ ತೆರಳಿ ಅಲ್ಲಿ ಇಲ್ಲಿಗಿಂತ ಹೆಚ್ಚು ಉತ್ತಮವಾದ ಜೀವನವನ್ನು ಕಂಡುಕೊಳ್ಳಬಹುದು ಎಂದು ಕೆಲವರು ಇಂದಿಗೂ ಭಾವಿಸುತ್ತಿದ್ದಾರೆ ಎಂಬುದನ್ನು ಈ ಪ್ರಸಂಗವು ಹೇಳುತ್ತಿದೆ. ಅಮೆರಿಕದ ಸೇನಾ ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ ಬಹುತೇಕರು ಅಕ್ರಮ ಹಾಗೂ ಸಕ್ರಮ ವಲಸೆಯ ದೊಡ್ಡ ಇತಿಹಾಸವನ್ನು ಹೊಂದಿರುವ ರಾಜ್ಯಗಳಿಗೆ ಸೇರಿದವರು. ಅವರು ಭಾರತ ತೊರೆಯುವ ಸಂದರ್ಭದಲ್ಲಿ ಇಲ್ಲಿ ಹಸಿವಿನಿಂದ ನರಳುತ್ತಿದ್ದರು ಎಂದು ಹೇಳುವುದಕ್ಕೆ ಆಧಾರಗಳಿಲ್ಲ. ಅವರಲ್ಲಿ ಕೆಲವರು ಭಾರತದಿಂದ ಅಮೆರಿಕಕ್ಕೆ ತೆರಳುವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವ ಸಾಧ್ಯತೆಯೂ ಇದೆ. ಅಕ್ರಮ ವಲಸಿಗರನ್ನು ಹೊತ್ತ ಇನ್ನೂ ಕೆಲವು ವಿಮಾನಗಳು ಭಾರತಕ್ಕೆ ಬರುವ ನಿರೀಕ್ಷೆ ಇದೆ. ಭಾರತೀಯ ಪ್ರಜೆಗಳ ಕೈಗೆ ಕೋಳ ತೊಡಿಸಿ, ಅವರನ್ನು ಸೇನಾ ವಿಮಾನದಲ್ಲಿ ಸಾಮೂಹಿಕವಾಗಿ ಗಡೀಪಾರು ಮಾಡುತ್ತಿರುವುದರಲ್ಲಿ ರಾಷ್ಟ್ರಕ್ಕೆ ಅವಮಾನವಾಗುವ ಆಯಾಮವೂ ಇದೆ.
ಅಕ್ರಮ ವಲಸಿಗರ ವಿರುದ್ಧ ಅಮೆರಿಕವು ತನ್ನ ಕಾರ್ಯಾಚರಣೆಯನ್ನು ಕೆಲವು ವರ್ಷಗಳಿಂದ ಚುರುಕುಗೊಳಿಸುತ್ತಿದೆ ಎಂಬುದು ಸ್ಪಷ್ಟವಾಗಿತ್ತು. ಕಳೆದ ವರ್ಷ ಕೂಡ ಅಮೆರಿಕದ ಅಧಿಕಾರಿಗಳು ಕೆಲವು ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ಕಳುಹಿಸಿದ್ದರು. ಅವರಲ್ಲಿ ಒಂದಿಷ್ಟು ಮಂದಿ ಭಾರತೀಯರೂ ಇದ್ದರು. ಆದರೆ ಈಗ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ಕಾರ್ಯಾಚರಣೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಟ್ರಂಪ್ ಅವರು ಈ ಕಾರ್ಯಾಚರಣೆಯನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತಿದ್ದಾರೆ, ಅದು ಎಲ್ಲರಿಗೂ ಗೊತ್ತಾಗುವಂತೆ ಮಾಡುತ್ತಿದ್ದಾರೆ. ಏಕೆಂದರೆ ಅಕ್ರಮ ವಲಸಿಗರ ವಿರುದ್ಧದ ತಮ್ಮ ನಿಲುವನ್ನು ಸ್ಪಷ್ಟವಾಗಿ ತೋರಿಸುವ ಮೂಲಕ ಅವರು ರಾಜಕೀಯ ಸಂದೇಶವೊಂದನ್ನು ರವಾನಿಸಬೇಕಿದೆ. ವಲಸೆ ನೀತಿಗಳನ್ನು ಬಿಗಿಗೊಳಿಸುವುದು ಹಾಗೂ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ನೀತಿಯ ಭಾಗವಾಗಿ ಈಗಿನ ಗಡೀಪಾರು ಪ್ರಕ್ರಿಯೆಗಳು ನಡೆದಿವೆ ಎಂದು ನವದೆಹಲಿಯಲ್ಲಿ ಇರುವ ಅಮೆರಿಕದ ರಾಯಭಾರ ಕಚೇರಿಯು ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡುವ ಮೊದಲು ಈ ಗಡೀಪಾರು ಪ್ರಕ್ರಿಯೆ ನಡೆದಿದೆ. ಮೋದಿ ಅವರ ಭೇಟಿಯ ಸಂದರ್ಭದಲ್ಲಿ ವಲಸೆ ಕುರಿತೂ ಚರ್ಚೆ ಆಗುವ ನಿರೀಕ್ಷೆ ಇದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಈ ವಿಚಾರವು ಚರ್ಚೆಗೆ ಬಂದಿದೆ. ಅಕ್ರಮ ವಲಸಿಗರನ್ನು ಕಾನೂನಿಗೆ ಅನುಗುಣವಾಗಿ ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ಭಾರತವು ಮುಕ್ತವಾಗಿದೆ ಎಂದು ಜೈಶಂಕರ್ ಅವರು ಅಮೆರಿಕದ ಅಧಿಕಾರಿಗಳಿಗೆ ಹೇಳಿದ್ದರು. ದಕ್ಷಿಣ ಅಮೆರಿಕದ ಕೆಲವು ದೇಶಗಳು ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ಆರಂಭದಲ್ಲಿ ತೋರಿದ ಸಂಘರ್ಷದ ಧೋರಣೆಯನ್ನು ಭಾರತ ತಳೆಯದೇ ಇರುವುದು ಒಳ್ಳೆಯ ನಡೆ.
ಅಮೆರಿಕದಲ್ಲಿ ಇರುವ ಅಕ್ರಮ ವಲಸಿಗರಲ್ಲಿ ಭಾರತೀಯರ ಪಾಲು ಹೆಚ್ಚಿದೆ, ಭಾರತದಿಂದ ಅಕ್ರಮವಾಗಿ ಅಮೆರಿಕಕ್ಕೆ ಹೋಗಿರುವವರ ಸಂಖ್ಯೆಯು 7.50 ಲಕ್ಷಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಭಾರತದ ಇಷ್ಟೊಂದು ಜನ ಬೇರೊಂದು ದೇಶದಲ್ಲಿ ಅಲ್ಲಿನ ಕಾನೂನಿನ ಕೈಗಳಿಂದ ತಪ್ಪಿಸಿಕೊಂಡು ವಾಸ ಮಾಡುತ್ತಿರುವುದು ಭಾರತಕ್ಕೆ ಒಳ್ಳೆಯ ಹೆಸರು ತರುವುದಿಲ್ಲ. ಅವರ ಪೂರ್ವಾಪರ ಪರಿಶೀಲಿಸಿ ಅವರನ್ನು ಮರಳಿ ಕರೆಸಿಕೊಳ್ಳುವ ಹೊಣೆಯು ಭಾರತದ ಮೇಲೆ ಇದೆ. ಅಕ್ರಮ ವಲಸಿಗರನ್ನು ಈಗ ವಾಪಸ್ ಕಳುಹಿಸಿರುವುದು ಅದೇ ಬಗೆಯಲ್ಲಿ ಬೇರೆ ದೇಶಗಳಿಗೆ ಅಕ್ರಮವಾಗಿ ವಲಸೆ ಹೋಗುವ ಆಲೋಚನೆ ಹೊಂದಿರುವವರಿಗೆ ಒಂದು ಎಚ್ಚರಿಕೆಯ ಗಂಟೆಯಾಗಬಹುದು. ಅಕ್ರಮ ವಲಸೆಯನ್ನು ಕೊನೆಗೊಳಿಸಬೇಕಿದೆ. ದೇಶದ ಹಲವು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿ ಇರುವ ಅಕ್ರಮ ವಲಸೆ ಜಾಲವನ್ನು ಇನ್ನಿಲ್ಲದಂತೆ ಮಾಡುವ ಹೊಣೆ ಸರ್ಕಾರಗಳ ಮೇಲಿದೆ. ಬೇರೆ ದೇಶಗಳಿಗೆ ಅಕ್ರಮವಾಗಿ ಪ್ರವೇಶಿಸುವುದರಲ್ಲಿ ಇರುವ ಅಪಾಯಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.