
ಸರ್ಕಾರಿ ಪದವಿಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. ಶಿಕ್ಷಣ ಕ್ಷೇತ್ರದ ಬಗೆಗಿನ ಸರ್ಕಾರದ ಉದಾಸೀನದ ಕಾರಣದಿಂದ ಈ ಪರಿಸ್ಥಿತಿ ಎದುರಾಗಿದೆ.
ವಿದ್ಯಾರ್ಥಿಗಳ ಕೊರತೆಯ ಕಾರಣದಿಂದಾಗಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಸಾಲಿಗೆ ಪದವಿಪೂರ್ವ ಕಾಲೇಜುಗಳೂ ಸೇರಿಕೊಳ್ಳುತ್ತಿರುವುದು, ಶಿಕ್ಷಣ ಕ್ಷೇತ್ರದ ಖಾಸಗೀಕರಣ ತೀವ್ರಗೊಳ್ಳುತ್ತಿರುವುದರ ಸಂಕೇತದಂತಿದೆ. ಸರ್ಕಾರಿ ಕಾಲೇಜುಗಳು ದುರ್ಬಲಗೊಂಡು ಅಸ್ತಿತ್ವದ ಆತಂಕ ಎದುರಿಸುತ್ತಿರುವುದಕ್ಕೆ, ಖಾಸಗಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಅನುಮತಿ ನೀಡುತ್ತಿರುವುದೇ ಕಾರಣವಾಗಿದೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಪ್ರಥಮ ಪಿಯುಸಿಯ ಸೀಟುಗಳ ಸಂಖ್ಯೆಯಲ್ಲಿ ಪ್ರತಿ ವರ್ಷ ಏರಿಕೆ ಆಗುತ್ತಿದೆ. 2025-26ನೇ ಸಾಲಿನಲ್ಲಿ ಪ್ರಥಮ ಪಿಯುಗೆ 7,72,402 ಸೀಟುಗಳು ಲಭ್ಯವಿದ್ದವು. ಆದರೆ, 2025ರಲ್ಲಿ ಎಸ್‌ಎಸ್‌ಎಲ್‌ಸಿಗೆ ನಡೆದ ಮೂರು ಪರೀಕ್ಷೆಗಳಲ್ಲಿ 6,54,399 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ, 1,18,003 ಸೀಟುಗಳು ಖಾಲಿ ಉಳಿದಿವೆ. ಕಳೆದ ಐದು ವರ್ಷಗಳಲ್ಲಿ ಖಾಸಗಿ ಪಿಯು ಕಾಲೇಜುಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ, ಸರ್ಕಾರಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದೆ. ಪ್ರಸ್ತುತ 3,623 ಪದವಿಪೂರ್ವ ಕಾಲೇಜುಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ, 1,319 ಸರ್ಕಾರಿ ಪಿಯು ಕಾಲೇಜುಗಳು ಹಾಗೂ 815 ಅನುದಾನಿತ ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ.
ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ಸರ್ಕಾರ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಾಲಕಿಯರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಕೆಲವು ಕಾಲೇಜುಗಳಲ್ಲಿ ಕಲ್ಪಿಸಲಾಗಿದೆ. ಇಷ್ಟಾದರೂ, ಖಾಸಗಿ ಕಾಲೇಜುಗಳ ವ್ಯಾಪಾರಿ ತಂತ್ರಗಳೆದುರು ಸರ್ಕಾರಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಸೋತಿವೆ. ಅಂಗಡಿ ಮುಂಗಟ್ಟುಗಳ ಮುಂದಿನ ಜಾಹೀರಾತುಗಳಂತೆ, ಖಾಸಗಿ ಕಾಲೇಜುಗಳ ಮುಂದಿನ ಸಿಇಟಿ, ನೀಟ್, ಜೆಇಇ ಪರೀಕ್ಷೆಯ ತರಬೇತಿ ವಿವರಗಳು ಹಾಗೂ ಯಶಸ್ವೀ ಅಭ್ಯರ್ಥಿಗಳ ಚಿತ್ರಪಟಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಕರ್ಷಿಸುತ್ತಿವೆ. ಟ್ಯೂಷನ್ ಸೆಂಟರ್‌ಗಳ ಸ್ವರೂಪ ಪಡೆದಿರುವ ಖಾಸಗಿ ಕಾಲೇಜುಗಳ ಲಕ್ಷಾಂತರ ರೂಪಾಯಿ ಶುಲ್ಕ ಭರಿಸಲು ಪೋಷಕರು ಹಿಂಜರಿಯುತ್ತಿಲ್ಲ. ಸಾಲ ಮಾಡಿಯಾದರೂ ಮಕ್ಕಳನ್ನು ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಓದಿಸುವ ಪೋಷಕರಿದ್ದಾರೆ. ಸರ್ಕಾರಿ ಪದವಿಪೂರ್ವ ಕಾಲೇಜುಗಳು ಮುಚ್ಚುವುದರ ನೇರ ಪರಿಣಾಮ ಉಂಟಾಗುವುದು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಮೇಲೆ, ವಿಶೇಷವಾಗಿ ಹೆಣ್ಣುಮಕ್ಕಳ ಮೇಲೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಖಾಸಗಿ ಶಾಲೆಗಳ ಶುಲ್ಕವನ್ನು ಭರಿಸುವುದು ಕಷ್ಟ. ಸರ್ಕಾರಿ ಕಾಲೇಜುಗಳು ಇಲ್ಲದೆ ಹೋದರೆ ಬಹಳಷ್ಟು ಗ್ರಾಮೀಣ ಬಡ ಮಕ್ಕಳು ವಿದ್ಯಾಭ್ಯಾಸದಿಂದಲೇ ವಂಚಿತರಾಗಬೇಕಾಗುತ್ತದೆ. ಹಾಗೆಯೇ, ಸಮೀಪದಲ್ಲಿರುವ ಕಾರಣದಿಂದಾಗಿ ಕಾಲೇಜಿನ ಮೆಟ್ಟಿಲು ಹತ್ತುವ ಅವಕಾಶ ಪಡೆದಿರುವ ಹೆಣ್ಣುಮಕ್ಕಳು, ಹೆಚ್ಚು ಖರ್ಚು ಹಾಗೂ ದೂರದ ಕಾಲೇಜಿಗೆ ಹೋಗುವ ಸಂದರ್ಭ ಎದುರಾದಲ್ಲಿ ಕಲಿಕೆಯ ಅವಕಾಶದಿಂದ ವಂಚಿತರಾಗುವ ಅವಕಾಶವೇ ಹೆಚ್ಚು.
ಸರ್ಕಾರಿ ಕಾಲೇಜುಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಎಚ್ಚರಗೊಳ್ಳುವುದು ಅಗತ್ಯ. ಮುಂದಿನ ಕೆಲವು ವರ್ಷಗಳವರೆಗೆ ಹೊಸ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಬಾರದು ಹಾಗೂ ‘ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ ವರ್ಗೀಕರಣ ಮತ್ತು ನೋಂದಣಿ ನಿಯಮಗಳು–1997’ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಮಕ್ಕಳ ಕೊರತೆ ಹಾಗೂ ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳು ಮುಚ್ಚುವುದು ವಾರ್ಷಿಕ ಪ್ರಕ್ರಿಯೆ ಎನ್ನುವಂತಾಗಿದೆ. ಸಂಶೋಧನೆ ಹಾಗೂ ಚಿಂತನೆ ಸ್ಥಗಿತಗೊಂಡಿರುವ, ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ವಿಶ್ವವಿದ್ಯಾಲಯಗಳು ರೋಗಗ್ರಸ್ತಗೊಂಡಿವೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದ ನಡುವಿನ ಕೊಂಡಿಯಂತಿರುವ ಪದವಿಪೂರ್ವ ಕಾಲೇಜುಗಳೂ ಇದೀಗ ದುರ್ಬಲಗೊಂಡಿವೆ. ಇದೆಲ್ಲದರ ಪರಿಣಾಮವಾಗಿ, ಶಿಕ್ಷಣ ಕ್ಷೇತ್ರದ ನಿರ್ವಹಣೆ ಸರ್ಕಾರಕ್ಕೆ ಸಾಧ್ಯವಿಲ್ಲ ಹಾಗೂ ಗುಣಮಟ್ಟದ ಶಿಕ್ಷಣ ಖಾಸಗಿಯವರಿಂದಲೇ ಸಾಧ್ಯ ಎನ್ನುವ ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳುತ್ತದೆ. ಈ ಅಭಿಪ್ರಾಯ ಬಲಗೊಳ್ಳಲು ಸರ್ಕಾರಗಳೂ ಪರೋಕ್ಷ ಬೆಂಬಲ ನೀಡುತ್ತಿವೆ. ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ನೀಡುವ ಕರ್ತವ್ಯದಿಂದ ಸರ್ಕಾರ ನುಣುಚಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹ. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವುದರಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಖಾಸಗೀಕರಣಗೊಳ್ಳುವ ಶಿಕ್ಷಣ ವ್ಯವಸ್ಥೆಯೇ ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತದೆ ಎನ್ನುವುದನ್ನು ಸರ್ಕಾರ ನೆನಪಿನಲ್ಲಿರಿಸಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.