ADVERTISEMENT

ಸಂಪಾದಕೀಯ: ಮತ್ತೆ ಬಳ್ಳಾರಿ ರಿಪಬ್ಲಿಕ್ ನೆನಪು– ಬಂದೂಕು ಸಂಸ್ಕೃತಿ ತಲೆ ಎತ್ತದಿರಲಿ

ಸಂಪಾದಕೀಯ
Published 7 ಜನವರಿ 2026, 23:50 IST
Last Updated 7 ಜನವರಿ 2026, 23:50 IST
   

ಬಳ್ಳಾರಿಯಲ್ಲಿ ಇದ್ದಕ್ಕಿದ್ದಂತೆ ಭುಗಿಲೆದ್ದ (ಜನವರಿ 1ರಂದು) ಹಿಂಸಾಚಾರವು, ಕಾಂಗ್ರೆಸ್‌ ಪಕ್ಷದ ಯುವ ಕಾರ್ಯಕರ್ತನೊಬ್ಬನನ್ನು ಬಲಿ ತೆಗೆದುಕೊಂಡಿದೆ. ಈ ಘಟನೆ, ಬಳ್ಳಾರಿ ಜಿಲ್ಲೆಯ ಕರಾಳ ಇತಿಹಾಸದ ಮರುಕಳಿಕೆಯಂತಿದೆ. ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬ್ಯಾನರ್‌ಗಳನ್ನು ಕಟ್ಟುವ ವಿಷಯಕ್ಕೆ ಆರಂಭವಾದ ವಿವಾದ, ಕೆಲ ಸಮಯದಲ್ಲಿಯೇ ಗಲಭೆಯಾಗಿ ಪರಿವರ್ತನೆಗೊಂಡಿದೆ. ಕಲ್ಲು ತೂರಾಟ ಹಾಗೂ ಗುಂಡಿನ ದಾಳಿ ನಡೆದಿರುವುದು ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬೀಳಲು ಕಾರಣವಾಗಿದೆ. ರಾಜಕೀಯ ಅಧಿಕಾರದ ಅಟ್ಟಹಾಸ, ತೋಳ್ಬಲದ ಪ್ರದರ್ಶನ ಹಾಗೂ ಅಕ್ರಮ ಸಂಪತ್ತು ಸೇರಿಕೊಂಡು ‘ಬಳ್ಳಾರಿ ರಿಪಬ್ಲಿಕ್‌’ ಎನ್ನುವ ಸಮಾನಾಂತರ ಸರ್ಕಾರ ಜಾರಿಯಲ್ಲಿದೆ ಎನ್ನುವ ಭಾವನೆ ಮೂಡಿಸಿದ್ದ ಕುಖ್ಯಾತಿಯ ದಿನಗಳನ್ನು ಪ್ರಸಕ್ತ ಘಟನೆ ನೆನಪಿಸುವಂತಿದೆ. ಗಣಿ ಉದ್ಯಮಿ ಮತ್ತು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಬ್ಯಾನರ್‌ಗಳನ್ನು ಕಟ್ಟುವ ಕಾಂಗ್ರೆಸ್‌ ಕಾರ್ಯಕರ್ತರ ಪ್ರಯತ್ನಕ್ಕೆ ಶಾಸಕರ ಬೆಂಬಲಿಗರಿಂದ ಎದುರಾದ ತೀವ್ರ ವಿರೋಧದಿಂದ ಸಂಘರ್ಷ ಆರಂಭವಾಗಿದ್ದರೂ, ಆ ಪ್ರಚೋದನೆಯನ್ನು ಸಾಂಕೇತಿಕವಾಗಿಯಷ್ಟೇ ನೋಡಬೇಕಾಗಿದೆ. ವಾಲ್ಮೀಕಿ ಪ್ರತಿಮೆ ಅನಾವರಣದ ಹಿಂದೆ ಯಾವುದೇ ಸಾಂಸ್ಕೃತಿಕ ಮಹತ್ವದ ಚಿಂತನೆಯಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಪ್ರಬಲ ಮತಬ್ಯಾಂಕ್‌ ಆಗಿರುವ ವಾಲ್ಮೀಕಿ ಸಮುದಾಯವನ್ನು ಗಮನದಲ್ಲಿ ಇರಿಸಿಕೊಂಡು ನಡೆದಿರುವ ಪ್ರತಿಮಾ ರಾಜಕಾರಣ ಇದಾಗಿದೆ. ಪ್ರತಿಮೆ ಅನಾವರಣದ ನೆಪದಲ್ಲಿ ಆರಂಭಗೊಂಡ ಸಂಘರ್ಷದಲ್ಲಿ ಬ್ಯಾನರ್‌ಗಳಿಗಿಂತಲೂ ರಾಜಕಾರಣದ ಪಾತ್ರವೇ ಹೆಚ್ಚಾಗಿದೆ.

ಜನಾರ್ದನ ರೆಡ್ಡಿ ಮತ್ತು ಬಳ್ಳಾರಿಯ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ನಡುವಿನ ಜಿದ್ದಾಜಿದ್ದಿ ನಿಯಂತ್ರಣ ತಪ್ಪುವ ಮಟ್ಟಕ್ಕೆ ತಲಪಿದ್ದು, ಗುಪ್ತಚರ ಮತ್ತು ಪೊಲೀಸ್‌ ಇಲಾಖೆಯ ವೈಫಲ್ಯದ ಬಗ್ಗೆ ಪ್ರಶ್ನೆಗಳನ್ನು
ಹುಟ್ಟುಹಾಕುವಂತಿದೆ. ಹಾಗೆಯೇ, ಘಟನೆ ನಡೆದ ಕೆಲವು ಗಂಟೆಗಳ ಹಿಂದಷ್ಟೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪವನ್‌ ನೆಜ್ಜೂರ್‌ ಅವರನ್ನು ಅಮಾನತುಗೊಳಿಸಿರುವುದು ಆಡಳಿತದ ವ್ಯವಸ್ಥಿತ ಕುಸಿತವನ್ನು ಸ್ಪಷ್ಟವಾಗಿ ಸೂಚಿಸುವಂತಿದೆ. ಪೊಲೀಸ್‌ ವರಿಷ್ಠಾಧಿ
ಕಾರಿಯ ಅಮಾನತಿಗೆ ನೀಡಿರುವ ಕಾರಣಗಳು ಗಂಭೀರವಾದವು: ಘಟನೆಯ ಸ್ಥಳಕ್ಕೆ ಕೂಡಲೇ ತಲಪುವಲ್ಲಿನ ವೈಫಲ್ಯ, ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ಅಧಿಕಾರಿಗಳ ಸಂಪರ್ಕಕ್ಕೆ ದೊರೆಯದಿರುವುದು, ಸುಸಂಬದ್ಧ ಮಾಹಿತಿ ನೀಡುವಲ್ಲಿ ಅಸಮರ್ಥರಾಗಿರುವುದು ಹಾಗೂ ದ್ವಿತೀಯ ಮಾಹಿತಿಯನ್ನು ಅವಲಂಬಿಸಿರುವುದು. ಪವನ್‌ ಅವರು ಸಂಘರ್ಷವನ್ನು ನಿಭಾಯಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೋ ಅಥವಾ ಪರಿಸ್ಥಿತಿಯ ಬಲಿಪಶು ಆಗಿದ್ದಾರೋ ಎನ್ನುವುದಕ್ಕಿಂತಲೂ, ಅಗತ್ಯವಾಗಿದ್ದ ಸಂದರ್ಭದಲ್ಲಿ ಪೊಲೀಸರು ತಮ್ಮ ಉಪಸ್ಥಿತಿಯನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣ ವಿಫಲರಾದರು ಎನ್ನುವುದು ಕಳವಳಕ್ಕೆ ಕಾರಣವಾಗುವ ಸಂಗತಿಯಾಗಿದೆ.

ರಾಜಕೀಯ ಸಂಘರ್ಷದ ಸಮಯದಲ್ಲಿ ಬಂದೂಕುಗಳು ಸುಲಭವಾಗಿ ಪ್ರವೇಶ ಪಡೆದುದು ಹೆಚ್ಚು ಆತಂಕ ಹುಟ್ಟಿಸುವ ವಿದ್ಯಮಾನ. ಖಾಸಗಿ ಭದ್ರತಾ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ಕಾನೂನು ಅನುಮತಿಸಿದೆ. ಆದರೆ, ಬಂದೂಕುಧಾರಿಯೊಬ್ಬ ಸಾರ್ವಜನಿಕವಾಗಿ ಗುಂಡು ಹಾರಿಸುವ ದೃಶ್ಯಗಳು ವೈರಲ್‌ ಆಗಿದ್ದು, ರಾಜಕಾರಣದಲ್ಲಿ ಬಂದೂಕು ಸಂಸ್ಕೃತಿಯನ್ನು ಸಹಜಗೊಳಿಸುವ ಪ್ರಯತ್ನದಂತಿದೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವವರ ಪರಿಶೀಲನೆ, ತರಬೇತಿ ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ನಿರ್ವಾತ ಸ್ಥಿತಿ ಇರುವುದನ್ನು ಪ್ರಸಕ್ತ ಪ್ರಕರಣ ಸೂಚಿಸುವಂತಿದೆ. ಖಾಸಗಿ ಭದ್ರತಾ ಸಿಬ್ಬಂದಿ ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವುದನ್ನು ದೃಢೀಕರಿಸುತ್ತಿರುವ ಬ್ಯಾಲಿಸ್ಟಿಕ್‌ ವರದಿ, ಸಮಸ್ಯೆ ಗುರುತರವಾಗಿರುವುದನ್ನು ಸೂಚಿಸುವಂತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ, ಅಮಾನತು ಕ್ರಮಗಳು ಮತ್ತು ಮಾತಿನ ಸಮರದಾಚೆಗೆ ಕಾರ್ಯಪ್ರವೃತ್ತವಾಗಬೇಕು. ಸಮಗ್ರ ತನಿಖೆ, ಖಾಸಗಿ ವ್ಯಕ್ತಿಗಳು ಹೊಂದಿರುವ ಬಂದೂಕುಗಳ ಪರವಾನಗಿಗಳ ರಾಜ್ಯವ್ಯಾಪಿ ಪರಿಶೋಧನೆ, ಖಾಸಗಿ ಸಶಸ್ತ್ರ ಭದ್ರತೆಗೆ ಕಠಿಣ ಮಾನದಂಡ ನಿಗದಿ ಮತ್ತು ಗುಪ್ತಚರ ವೈಫಲ್ಯಕ್ಕೆ ಸ್ಪಷ್ಟ ಹೊಣೆಗಾರಿಕೆ ಅಗತ್ಯ. ಕಾನೂನು ಸುವ್ಯವಸ್ಥೆಗಿಂತಲೂ ಯಾವುದೇ ನಾಯಕ, ಪರಂಪರೆ ಅಥವಾ ಮತಬ್ಯಾಂಕ್‌ ಮಿಗಿಲಲ್ಲ ಎನ್ನುವುದನ್ನು ಖಚಿತಪಡಿಸುವಂತೆ ಸರ್ಕಾರ ನಡೆದುಕೊಳ್ಳಬೇಕು ಹಾಗೂ ‘ಬಳ್ಳಾರಿ ರಿಪಬ್ಲಿಕ್‌’ ಮತ್ತೆ ಚಿಗುರದಂತೆ ಎಚ್ಚರ ವಹಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.