ADVERTISEMENT

ಸಂಪಾದಕೀಯ| ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಕುಚೇಷ್ಟೆ: 'ಶಕ್ತಿ' ದುರ್ಬಲಗೊಳಿಸಬೇಡಿ

ಸಂಪಾದಕೀಯ
Published 18 ಫೆಬ್ರುವರಿ 2026, 23:30 IST
Last Updated 18 ಫೆಬ್ರುವರಿ 2026, 23:30 IST
   

ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ ಒಂದು. ಸಾಮಾಜಿಕ ಪ್ರಯೋಜನದ ಈ ಆರ್ಥಿಕ ಯೋಜನೆಯಿಂದಾಗಿ ಮಹಿಳೆಯರ ಆದಾಯ ಮತ್ತು ಉಳಿತಾಯ ಹೆಚ್ಚಾಗಿರುವುದನ್ನು ಹಲವು ಅಧ್ಯಯನಗಳು ಸ್ಪಷ್ಟವಾಗಿ ಗುರುತಿಸಿವೆ. ‘ಶಕ್ತಿ’ ಯೋಜನೆಯ ಪ್ರಯೋಜನ ಪಡೆಯಲು ಆಧಾರ್‌ ಚೀಟಿ ತೋರಿಸಿ, ರಾಜ್ಯದ ಪ್ರಜೆ ಎಂಬುದನ್ನು ನಿರೂಪಿಸಿದರೆ ಸಾಕು ಎಂಬ ನಿಯಮ ಇದೆ. ಅದರಂತೆ ಮಹಿಳೆಯರೆಲ್ಲ ಆಧಾರ್‌ ಚೀಟಿ ತೋರಿಸಿ, ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ, ಸರ್ಕಾರ ಈಗ ‘ಶಕ್ತಿ’ ಯೋಜನೆಯ ಫಲಾನುಭವಿಗಳಿಗೆಲ್ಲ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ಮುಂದಾಗಿದೆ. ಈ ಸ್ಮಾರ್ಟ್‌ ಕಾರ್ಡ್‌ನ ಅಗತ್ಯ ಸರ್ಕಾರಕ್ಕೆ ಏಕೆ ಕಾಡಿದೆಯೋ ಗೊತ್ತಿಲ್ಲ, ಹಣದ ಪೋಲು ಮತ್ತು ಫಲಾನುಭವಿಗಳ ಶೋಷಣೆಗೆ ಕಾರಣವಾಗುವ ತೀರ್ಮಾನವಿದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ‘ಶಕ್ತಿ’ ಸ್ಮಾರ್ಟ್‌ ಕಾರ್ಡ್‌, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಕೂಡಾ ಆಗಿರುತ್ತದೆ. ಇದರಲ್ಲಿ ಪ್ರಯಾಣಿಕರ ಮಾಹಿತಿ ಇರುವ ಚಿಪ್‌ ಇರುತ್ತದೆ. ಮೆಟ್ರೊ ಸಹಿತ ಬೇರೆ ಸಾರಿಗೆಗಳಲ್ಲಿಯೂ ಬಳಕೆಯಾಗಲಿದೆ’ ಎಂದು ಯೋಜನೆಯ ಹೊಣೆಹೊತ್ತ ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ. ‘ಶಕ್ತಿ’ ಯೋಜನೆಯನ್ನು ನಗರ ಪ್ರದೇಶಗಳ ಮಹಿಳೆಯರು ಮಾತ್ರ ಬಳಸುತ್ತಿಲ್ಲ. ಬದಲಿಗೆ ರಾಜ್ಯದ ಪ್ರತಿಯೊಂದು ಹಳ್ಳಿಯ ಮಹಿಳೆಯರೂ ಬಳಸುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಹತ್ತಿರದ ಪಟ್ಟಣಕ್ಕೆ ಹೋಗಿ ವ್ಯಾಪಾರ ಮಾಡಲು ಇಲ್ಲವೇ ಕಾರ್ಮಿಕ ಬಲದಲ್ಲಿ ಭಾಗೀದಾರರಾಗಲು ಉಚಿತ ಪ್ರಯಾಣದ ಅವಕಾಶ. ಅದು ಈಗಾಗಲೇ ಸಿಗುತ್ತಿದೆ. ಸ್ಮಾರ್ಟ್‌ ಕಾರ್ಡ್‌ನಿಂದ ಅಂಥವರಿಗೇನೂ ಪ್ರಯೋಜನವಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಮೆಟ್ರೊದಲ್ಲಿ ಪ್ರಯಾಣಿಸುವ ಮಹಿಳೆಯರು ತಮಗೆ ಅಗತ್ಯವಾದರೆ ಮೊಬಿಲಿಟಿ ಕಾರ್ಡ್‌ಅನ್ನು ಖರೀದಿ ಮಾಡುತ್ತಾರೆ. ಬಸ್‌ನಲ್ಲಿ ಪ್ರಯಾಣ ಮಾಡುವವರಿಗೆ ಅಂತಹ ಕಾರ್ಡ್‌ನ ಅಗತ್ಯ ಏನಿದೆ?

‘ಶಕ್ತಿ’ ಯೋಜನೆಯಡಿ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ನಿತ್ಯ ಸರಾಸರಿ 75.68 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಬೇರೆ ರಾಜ್ಯಗಳ ಮಹಿಳೆಯರು ಸಂಚರಿಸಿದರೆ ಗೊತ್ತಾಗುವುದಿಲ್ಲ; ಸ್ಮಾರ್ಟ್‌ ಕಾರ್ಡ್‌ ಬಂದರೆ ಇದಕ್ಕೆ ಕೊನೆಬೀಳಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಆಧಾರ್‌ ಚೀಟಿಯಲ್ಲಿ ವಿಳಾಸ ಇದ್ದೇ ಇರುತ್ತದೆ. ಈಗ ಸರ್ಕಾರ ಕೊಡಲು ಉದ್ದೇಶಿಸಿರುವ ಸ್ಮಾರ್ಟ್‌ ಕಾರ್ಡ್‌ಅನ್ನು ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌ನಲ್ಲಿ ಸ್ವೈಪ್‌ ಮಾಡುವ ಅವಧಿಯಲ್ಲಿಯೇ ವಿಳಾಸವನ್ನು ಪರಿಶೀಲಿಸಲು ಸಾಧ್ಯ. ಸ್ಮಾರ್ಟ್‌ ಕಾರ್ಡ್‌ಗಳಲ್ಲಿ ಫಲಾನುಭವಿಗಳ ವಯಸ್ಸು, ವಿಳಾಸ ಸಹಿತ ಎಲ್ಲ ಮಾಹಿತಿ ಇರುವುದರಿಂದ ‘ಶಕ್ತಿ’ ಯೋಜನೆಯಡಿ ಪ್ರಯಾಣಿಸಿದವರಲ್ಲಿ ಮಕ್ಕಳೆಷ್ಟು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ವರ್ಗದ ಮಹಿಳೆಯರು ಎಷ್ಟು ಎಂಬ ಅಂಕಿ–ಅಂಶಗಳು ನಿಖರವಾಗಿ ಸಿಗಲಿವೆ ಎಂಬ ಸಮರ್ಥನೆಯನ್ನೂ ನೀಡಲಾಗುತ್ತಿದೆ. ರಾಜ್ಯದ ಮಹಿಳೆಯರಿಗೆ ಯಾವುದೇ ರೀತಿಯ ವರ್ಗ, ಶ್ರೇಣಿಯನ್ನು ನೋಡದೆ ಈ ಯೋಜನೆಯನ್ನು ಘೋಷಿಸಲಾಗಿದೆ. ಹೀಗಾಗಿ ಈ ಅಂಕಿ–ಅಂಶಗಳ ವಿಭಾಗೀಕರಣ ಅನಗತ್ಯವಾಗಿದೆ. ಸ್ಮಾರ್ಟ್‌ ಕಾರ್ಡ್‌ಗೆ ಸಂಬಂಧಿಸಿದ ಯಾವ ವಾದದಲ್ಲೂ ಹುರುಳಿಲ್ಲ. ಸರ್ಕಾರದ ಖಜಾನೆಗೆ ಇದೊಂದು ಅನಗತ್ಯ ಖರ್ಚಿನ ಬಾಬತ್ತಾದರೆ, ಭ್ರಷ್ಟರಿಗೆ ದುಡ್ಡು ಮಾಡಲು ಮತ್ತೊಂದು ಅವಕಾಶ. ಗ್ರಾಮಾಂತರ ಪ್ರದೇಶಗಳ ಮಹಿಳೆಯರ ಪಾಲಿಗೆ ಎಲ್ಲಿ ಉಚಿತ ಪ್ರಯಾಣದ ಅವಕಾಶ ಕೈತಪ್ಪುವುದೋ ಎಂಬ ಆತಂಕವನ್ನೂ ಈ ಘೋಷಣೆ ತಂದೊಡ್ಡಿದೆ. ಸ್ಮಾರ್ಟ್‌ ಕಾರ್ಡ್ಅನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸರ್ಕಾರ ಹೇಳಿದೆಯಾದರೂ ಇಂತಹ ಕಾರ್ಡ್‌ ಪಡೆಯಲು ದುರ್ಬಲರು ಎಷ್ಟೊಂದು ತೊಂದರೆ ಅನುಭವಿಸಬೇಕಾಗುತ್ತದೆ ಮತ್ತು ಅವರನ್ನು ಹೇಗೆಲ್ಲಾ ಶೋಷಿಸಲಾಗುತ್ತದೆ ಎಂಬುದು ಗೊತ್ತಿಲ್ಲದ ಸಂಗತಿ ಏನಲ್ಲ. ಈ ಕಾರ್ಡ್‌ ಹೆಸರಿನಲ್ಲಿ ಲಕ್ಷಾಂತರ ಮಂದಿಯನ್ನು ಯೋಜನೆಯ ವ್ಯಾಪ್ತಿಯಿಂದ ಹೊರದಬ್ಬುವ ಹುನ್ನಾರವೂ ಇದ್ದಂತಿದೆ. ‘ಶಕ್ತಿ’ ಯೋಜನೆಯಿಂದ ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದು, ಆಗಿರುವ ಸಕಾರಾತ್ಮಕ ಪರಿಣಾಮವನ್ನು ಹಲವು ಪ್ರದೇಶಗಳಲ್ಲಿ ಕಾಣಬಹುದಾಗಿದೆ. ತಮ್ಮ ಸುತ್ತಲಿನ ಗಡಿರೇಖೆಗಳನ್ನು ಮಹಿಳೆಯರು ದಾಟಿದ್ದಾರೆ. ಪ್ರಯಾಣವು ಅವರ ಮುಂದೆ ಹೊಸ ಜಗತ್ತುಗಳನ್ನು, ಹೊಸ ಅನುಭವಗಳನ್ನು ತೆರೆದಿಟ್ಟಿದೆ. ಈ ಯೋಜನೆಯು ಮಹಿಳೆಯರಲ್ಲಿ ಸ್ವಾತಂತ್ರ್ಯದ ಭಾವವನ್ನೂ ಮೂಡಿಸಿದೆ. ಈ ಸ್ವಾತಂತ್ರ್ಯವನ್ನು ಕಸಿಯುವ ಕೆಲಸ ಸ್ಮಾರ್ಟ್‌ ಕಾರ್ಡ್‌ನಿಂದ ಆಗಬಾರದು. ಅನಗತ್ಯವಾಗಿರುವ ಈ ಕಾರ್ಡ್‌ ವಿತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅವಕಾಶ ನೀಡಬಾರದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT