ADVERTISEMENT

ಸಂಪಾದಕೀಯ:ಮಸೂದೆಗಳ ಅಂಕಿತಕ್ಕಿಲ್ಲ ಕಾಲಮಿತಿ; ರಾಜ್ಯಪಾಲರ ಅಧಿಕಾರಕ್ಕಿಲ್ಲ ಪರಿಮಿತಿ

ಸಂಪಾದಕೀಯ
Published 22 ನವೆಂಬರ್ 2025, 0:21 IST
Last Updated 22 ನವೆಂಬರ್ 2025, 0:21 IST
   

ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ ಎಂದು ಪ್ರಶ್ನಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುಪ್ರೀಂ ಕೋರ್ಟ್‌ ನೀಡಿರುವ ಸ್ಪಷ್ಟನೆ ಹಾಗೂ ತೀರ್ಪು ಯಥಾಸ್ಥಿತಿ ಮುಂದುವರಿಕೆಯ ಪ್ರಕ್ರಿಯೆಯಾಗಿದೆ. ಇದು ಆದರ್ಶ ರಾಜಕಾರಣದ ಸಂದರ್ಭದಲ್ಲಿ ಮಾದರಿ ಸಾಂವಿಧಾನಿಕ ಸ್ಥಿತಿಯ ಘೋಷಣೆಯಂತಿದೆ. ವಾಸ್ತವಿಕ ಜಗತ್ತಿನಲ್ಲಿ ರಾಜಕಾರಣಿಗಳಂತೆ ವರ್ತಿಸುವ ಕೆಲವು ರಾಜ್ಯಪಾಲರಿಂದ ಉದ್ಭವವಾಗುವ ಸಮಸ್ಯೆಗಳಿಗೆ ಕೋರ್ಟ್‌ನ ತೀರ್ಪು ಯಾವುದೇ ಪರಿಹಾರ ನೀಡಿಲ್ಲ. ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರು ನಿರಾಕರಿಸುತ್ತಿರುವುದು ಪರಿಹರಿಸಬೇಕಾದ ಸಮಸ್ಯೆಯಾಗಿತ್ತು. ಕೆಲವು ರಾಜ್ಯಪಾಲರ ನಿಷ್ಕ್ರಿಯ ನಡವಳಿಕೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದಾಗಿತ್ತು. ಮಸೂದೆಗಳಿಗೆ ಒಪ್ಪಿಗೆ ನೀಡುವುದು, ರಾಷ್ಟ್ರಪತಿಗೆ ಕಳುಹಿಸುವುದು ಇಲ್ಲವೇ ತಮ್ಮ ಅಭಿಪ್ರಾಯದೊಂದಿಗೆ ಆದಷ್ಟೂ ಬೇಗನೆ ಹಿಂದಿರುಗಿಸುವುದು ರಾಜ್ಯಪಾಲರುಗಳ ಸಾಂವಿಧಾನಿಕ ಕರ್ತವ್ಯವಾಗಿದೆ. ಇದಾವುದನ್ನೂ ಮಾಡದೆ, ಕೆಲವು ರಾಜ್ಯಪಾಲರು ಮಸೂದೆಯನ್ನು ಎರಡು ವರ್ಷಗಳಷ್ಟು ದೀರ್ಘ ಕಾಲ ತಮ್ಮ ಬಳಿ ಇರಿಸಿಕೊಂಡಿರುವ ಹಾಗೂ ನಿರ್ಧಾರವನ್ನು ವಿಳಂಬಗೊಳಿಸಲಿಕ್ಕಾಗಿ ರಾಷ್ಟ್ರಪತಿಗೆ ಕಳುಹಿಸಿದ ಸಂದರ್ಭ ದಲ್ಲಿ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಬಂದಿದ್ದವು. ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ನೇತೃತ್ವದ ಪೀಠ, ಮಸೂದೆಗಳಿಗೆ ಸಂಬಂಧಿಸಿದಂತೆ ನಿರ್ಣಯವನ್ನು ಕೈಗೊಳ್ಳಲು ಕಾಲಮಿತಿ ಯನ್ನು ಗೊತ್ತುಪಡಿಸುವ ನಿರ್ಣಯವನ್ನು ಕಳೆದ ಏಪ್ರಿಲ್‌ನಲ್ಲಿ ನೀಡಿತ್ತು. ಇದೀಗ, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು, ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ, ವಿಧಾನಸಭೆ ಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ಯಾವುದೇ ಕಾಲಮಿತಿ ಹಾಕಲು ಸಾಧ್ಯವಿಲ್ಲ ಎನ್ನುವ ಸರ್ವಾನುಮತದ ತೀರ್ಪು ನೀಡಿದೆ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಸಮನ್ವಯ ಅಪೇಕ್ಷಿಸುವ ಸಂವಿಧಾನ, ಸಾಂವಿಧಾನಿಕ ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೋರ್ಟ್‌ಗಳು ಕಾಲಮಿತಿಯನ್ನು ಗೊತ್ತುಪಡಿಸುವುದಕ್ಕೆ ಅನುಮತಿಸುವುದಿಲ್ಲ ಎಂದೂ ನ್ಯಾಯಪೀಠ ಹೇಳಿದೆ. ಮಸೂದೆಗಳಿಗೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳಲು ರಾಜ್ಯಪಾಲರಿಗೆ ಅನಿಯಂತ್ರಿತ ಅಧಿಕಾರ ಇಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿರುವ ಕೋರ್ಟ್‌, ತೀರ್ಮಾನ ವಿಳಂಬವೆನ್ನಿಸಿದಲ್ಲಿ ರಾಜ್ಯಗಳು ನ್ಯಾಯಾಲಯದ ಪರಿಶೀಲನೆ ಬಯಸಬಹುದು ಎಂದೂ ಹೇಳಿದೆ. ಆದರೆ, ರಾಜ್ಯಪಾಲರ ವಿಳಂಬನೀತಿಯ ಕಾಲಾವಧಿ ಎಷ್ಟು ಹಾಗೂ ನುಣುಚಿಕೊಳ್ಳುವ ನಿಷ್ಕ್ರಿಯತೆ ಯಾವ ಬಗೆಯದು ಎಂದು ವ್ಯಾಖ್ಯಾನಿಸಿಲ್ಲವಾದ ಕಾರಣ ದಿಂದಾಗಿ, ಈ ತೀರ್ಪು ಸಂದರ್ಭಾನುಸಾರ ವ್ಯಾಖ್ಯಾನಗೊಳ್ಳುವ ಸಾಧ್ಯತೆಯಿದೆ. ಮಸೂದೆ ಗಳಿಗೆ ಒಪ್ಪಿಗೆ ನೀಡಲು ಒಂದು ತಿಂಗಳು ವಿಳಂಬ ಆಗುವುದು ರಾಜ್ಯ ಸರ್ಕಾರಗಳಿಗೆ ‘ತಡೆ’ ಎನ್ನಿಸಬಹುದು; ಆ ಅವಧಿ ಆರು ತಿಂಗಳಾದರೂ ರಾಜ್ಯಪಾಲರಿಗೆ ‘ತಡೆ’ ಅನ್ನಿಸದಿರಬಹುದು. ರಾಜ್ಯಪಾಲರಿಂದ ವಿಳಂಬವಾದ ಸಂದರ್ಭದಲ್ಲಿ ಮಸೂದೆಗಳಿಗೆ ಅಂಕಿತ ದೊರೆತಿದೆ ಎಂದು ಪರಿಭಾವಿಸುವುದನ್ನೂ ಕೋರ್ಟ್‌ ನಿರ್ಬಂಧಿಸಿದ್ದು, ವಿಳಂಬಗೊಂಡ ಮಸೂದೆಗಳಿಗೆ ‘ಸ್ವಯಂ ಒಪ್ಪಿಗೆ’ ಎಂಬ ಪರಿಕಲ್ಪನೆ ಸಾಂವಿಧಾನಿಕವಾಗಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ರಾಜ್ಯಪಾಲರ ಅಸಹಕಾರದ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ದೀರ್ಘಕಾಲಿಕ ಹೋರಾಟ ನಡೆಸಬೇಕಾದುದನ್ನು ಪ್ರಸಕ್ತ ತೀರ್ಪು ಅನಿವಾರ್ಯಗೊಳಿಸಿದೆ. ಈ ತೀರ್ಪು ಮಸೂದೆಗಳ ಅಂಗೀಕಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ವಿರುದ್ಧ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ಅಧಿಕಾರವನ್ನು ಬಲಪಡಿಸಿದೆ; ಒಕ್ಕೂಟ ತತ್ತ್ವ ಹಾಗೂ ಜನಾಭಿಪ್ರಾಯದ ಪರಮಾಧಿಕಾರಕ್ಕೂ ಹಿನ್ನಡೆ ಉಂಟುಮಾಡುವಂತಿದೆ. ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ರಾಜ್ಯಪಾಲರು ಗೌರವಿಸಲೇಬೇಕು ಎನ್ನುವುದನ್ನು ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪು ಸ್ಪಷ್ಟವಾಗಿ ಹೇಳಿತ್ತು. ಆದರೆ, ಈಗಿನ ತೀರ್ಪು ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ಉತ್ತಮ ಸಂಪ್ರದಾಯಗಳಿಗೆ ಧಕ್ಕೆ ತರುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT