ADVERTISEMENT

ಸಂಪಾದಕೀಯ: ಸಿರಿಯಾದಲ್ಲಿ ನಿರಂಕುಶಾಡಳಿತ ಅಂತ್ಯ! ಜನಪರ ಸರ್ಕಾರ ಈಗಿನ ತುರ್ತು

ಸಂಪಾದಕೀಯ

ಸಂಪಾದಕೀಯ
Published 9 ಡಿಸೆಂಬರ್ 2024, 20:35 IST
Last Updated 9 ಡಿಸೆಂಬರ್ 2024, 20:35 IST
<div class="paragraphs"><p>ಸಂಪಾದಕೀಯ: ಸಿರಿಯಾದಲ್ಲಿ ನಿರಂಕುಶಾಡಳಿತ ಅಂತ್ಯ! ಜನಪರ ಸರ್ಕಾರ ಈಗಿನ ತುರ್ತು</p></div>

ಸಂಪಾದಕೀಯ: ಸಿರಿಯಾದಲ್ಲಿ ನಿರಂಕುಶಾಡಳಿತ ಅಂತ್ಯ! ಜನಪರ ಸರ್ಕಾರ ಈಗಿನ ತುರ್ತು

   

ಸಿರಿಯಾದಲ್ಲಿ ಬಶರ್‌ ಅಲ್‌ ಅಸಾದ್‌ ನೇತೃತ್ವದ ಸರ್ಕಾರ ಪತನಗೊಂಡಿದೆ. ಬಶರ್‌ ಅವರು ರಷ್ಯಾದ ಗೋಪ್ಯ ಸ್ಥಳವೊಂದಕ್ಕೆ ಪರಾರಿಯಾಗಿದ್ದಾರೆ. ಅವರು ತಮ್ಮ ದೇಶದಲ್ಲಿ ಇರುವುದನ್ನು ರಷ್ಯಾ ದೃಢಪಡಿಸಿದೆ. ಹತ್ತು ದಿನಗಳಿಂದ ಹೋರಾಟ ತೀವ್ರಗೊಂಡಿತ್ತು. ಸಿರಿಯಾದ ಅತಿದೊಡ್ಡ ನಗರ ಅಲೆಪ್ಪೊವನ್ನು ಹೋರಾಟಗಾರರು ಮೊದಲಿಗೆ ವಶಕ್ಕೆ ಪಡೆದರು.

ನಂತರ ಹನಾ ಮತ್ತು ಹೊಮ್ಸ್‌ ನಗರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಹೋರಾಟಗಾರರು ಭಾನುವಾರ ಮುಂಜಾನೆ ಮಿಂಚಿನ ವೇಗದಲ್ಲಿ ರಾಜಧಾನಿ ಡಮಾಸ್ಕಸ್‌ ನಗರವನ್ನು ಹೊಕ್ಕು ಕೆಲ ಹೊತ್ತಿನಲ್ಲಿಯೇ ನಗರದ ಮೇಲೆ ಆಧಿಪತ್ಯ ಸ್ಥಾಪಿಸಿದರು. ಸರ್ಕಾರದ ಪರ ಸೈನಿಕರು ಪ್ರತಿರೋಧವನ್ನೇ ಒಡ್ಡದೆ ಹಿಂದಕ್ಕೆ ಸರಿದ ಕಾರಣ ರಕ್ತ ಹರಿಯದೆಯೇ ಕ್ರಾಂತಿ ನಡೆಯಿತು.

ADVERTISEMENT

2011ರಲ್ಲಿ ವಿದ್ಯಾರ್ಥಿಗಳು ಆರಂಭಿಸಿದ್ದ ‘ಅರಬ್‌ ವಸಂತ’ ಎಂಬ ಹೋರಾಟವು ಈಗ ತಾರ್ಕಿಕ ಅಂತ್ಯ ಕಂಡಿದೆ. 2011ರಲ್ಲಿ ಹೋರಾಟವನ್ನು ಬಶರ್‌ ನಿರ್ದಯವಾಗಿ ಹತ್ತಿಕ್ಕಿದ್ದರು. ಆ ಬಳಿಕ ದಮನಕಾರಿ ಆಳ್ವಿಕೆಯು ಮತ್ತಷ್ಟು ಬಿರುಸು ‍ಪಡೆದುಕೊಂಡಿತ್ತು. 2000ನೇ ಇಸವಿಯಲ್ಲಿ ಅಧಿಕಾರಕ್ಕೆ ಏರಿದ ಬಶರ್‌, ಆರಂಭದಲ್ಲಿ ಸುಧಾರಣಾವಾದಿ ಎಂಬಂತೆ ತಮ್ಮನ್ನು ಬಿಂಬಿಸಿಕೊಂಡಿದ್ದರು.

ಆದರೆ, 2011ರಲ್ಲಿ ಅವರ ವಿರುದ್ಧ ಹೋರಾಟ ತೀವ್ರಗೊಂಡ ಬಳಿಕ, ಶಾಂತಿಯುತ ಹೋರಾಟಗಾರರ ವಿರುದ್ಧ ಸೇನೆಯನ್ನು ಬಳಸಿಕೊಂಡರು. ನಂತರ ಆಂತರಿಕ ಸಂಘರ್ಷ ನಿಲ್ಲಲೇ ಇಲ್ಲ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಕಚೇರಿಯ ಮಾಹಿತಿ ಪ್ರಕಾರ, ಈ 13 ವರ್ಷಗಳ ಆಂತರಿಕ ಯುದ್ಧದಲ್ಲಿ ಸುಮಾರು ಆರು ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ; ಅವರಲ್ಲಿ ಹೆಚ್ಚಿನವರು ನಾಗರಿಕರು. ಗ್ಲೋಬಲ್‌ ಸೆಂಟರ್‌ ಫಾರ್‌ ದಿ ರೆಸ್ಪಾನ್ಸಿಬಿಲಿಟಿ ಟು ಪ್ರೊಟೆಕ್ಟ್‌ ಸಂಸ್ಥೆಯ ಪ್ರಕಾರ, 1.3 ಕೋಟಿ ಜನ ನೆಲೆ ಕಳೆದುಕೊಂಡಿದ್ದಾರೆ. ಬಶರ್‌ ಆಳ್ವಿಕೆ ಮತ್ತು ಆಂತರಿಕ ಯುದ್ಧವು ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲದಂತೆ ಮಾಡಿದ್ದವು ಮತ್ತು ಜೀವನವನ್ನು ನರಕವಾಗಿಸಿದ್ದವು. 1971ರಲ್ಲಿ ಆರಂಭಗೊಂಡ ಅಸಾದ್‌ ಕುಟುಂಬದ ನಿರಂಕುಶಾಡಳಿತವು ಈಗ ಕೊನೆಗೊಂಡಿದೆ. ಜನ ನಿಟ್ಟುಸಿರುಬಿಟ್ಟಿದ್ದಾರೆ ಮತ್ತು ಸಂಭ್ರಮ ಆಚರಿಸಿದ್ದಾರೆ. 

ಸಿರಿಯಾದಲ್ಲಿ ನಡೆದ ಸಂಘರ್ಷವು ಅತ್ಯಂತ ಸಂಕೀರ್ಣವಾದುದಾಗಿತ್ತು. ನಾಗರಿಕ ಸಂಘಟನೆಗಳು, ಮೂಲಭೂತವಾದಿ ಗುಂಪುಗಳು, ಭಯೋತ್ಪಾದಕ ಸಂಘಟನೆಗಳು, ಅಲ್‌ ಕೈದಾ ಮತ್ತು ಇಸ್ಲಾಮಿಕ್‌ ಸ್ಟೇಟ್‌ನಂತಹ ಸಂಘಟನೆಗಳು, ಅಮೆರಿಕ, ರಷ್ಯಾ, ಇರಾನ್‌ ದೇಶಗಳು ಈ ಸಂಘರ್ಷದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದವು.

ಹೋರಾಟದ ಮುಂಚೂಣಿಯಲ್ಲಿದ್ದ ಹಯಾತ್‌ ತಹ್ರೀರ್‌ ಅಲ್‌ ಶಾಮ್‌ ಸಂಘಟನೆಗೆ ಮೊದಲಿಗೆ ಇಸ್ಲಾಮಿಕ್‌ ಸ್ಟೇಟ್‌ ಜೊತೆಗೆ, ಬಳಿಕ ಅಲ್ ಕೈದಾ ಜೊತೆಗೆ ನಂಟು ಇತ್ತು. ಹೋರಾಟದ ನಾಯಕತ್ವ ವಹಿಸಿದ್ದ ಅಬು ಮೊಹಮ್ಮದ್‌ ಅಲ್‌ ಗೊಲಾನಿಗೆ ಉಗ್ರಗಾಮಿ ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕ ಇತ್ತು. ಭಯೋತ್ಪಾದನೆ ಕೃತ್ಯದ ಆರೋಪದಲ್ಲಿ ಇವರು ಅಮೆರಿಕದ ಸೆರೆಮನೆಯಲ್ಲಿಯೂ ಇದ್ದರು. ಸಿರಿಯಾ ಸುತ್ತಲಿನ ಹಲವು ದೇಶಗಳಲ್ಲಿ ಭಯೋತ್ಪಾದಕ ಗುಂಪುಗಳು ಗಟ್ಟಿಯಾಗಿ ನೆಲೆಯೂರಿವೆ.

ಈಗ, ಸಿರಿಯಾದ ಸ್ಥಿತಿ ಅಸ್ತವ್ಯಸ್ತವಾಗಿದೆ. ಬಶರ್‌ಗೆ ಗಟ್ಟಿ ಬೆಂಬಲ ನೀಡಿದ್ದ ರಷ್ಯಾ ಮತ್ತು ಇರಾನ್‌ ಸದ್ಯಕ್ಕೆ ಸುಮ್ಮನಿವೆ. ಈ ದೇಶಗಳ ಮುಂದಿನ ನಡೆ ಏನು ಎಂಬುದು ಗೊತ್ತಿಲ್ಲ. ಬಶರ್‌ ನೇತೃತ್ವದ ಸರ್ಕಾರದ ಪತನವು ರಷ್ಯಾಕ್ಕೆ ಬಿದ್ದ ಹೊಡೆತ ಎಂದೂ ಬಣ್ಣಿಸಲಾಗುತ್ತಿದೆ. ಶಾಮ್‌ ಸಂಘಟನೆಯು ಮೂಲಭೂತವಾದಿ ಸಿದ್ಧಾಂತ ಹೊಂದಿದೆ ಎಂದು ಹೇಳಲಾಗುತ್ತಿದೆ. ಸಿರಿಯಾದಲ್ಲಿ ಯಾವ ರೀತಿಯ ಸರ್ಕಾರ ರಚನೆಯಾಗಲಿದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಭಯೋತ್ಪಾದಕರನ್ನು, ಮೂಲಭೂತವಾದವನ್ನು ದೂರ ಇರಿಸಿ, ಜನಪರವಾದ ಪ್ರಜಾಸತ್ತಾತ್ಮಕ ಸರ್ಕಾರ ರಚನೆಯಾದರೆ ಅಲ್ಲಿ ಸ್ಥಿರತೆ ಸಾಧ್ಯವಾಗಬಹುದು. ಅರ್ಧ ಶತಮಾನ ನಿರಂಕುಶಾಡಳಿತದಿಂದ ಬಳಲಿರುವ ಆ ದೇಶದ ಜನರಿಗೆ ಇನ್ನು ಮುಂದೆಯಾದರೂ ನೆಮ್ಮದಿಯ ಬದುಕು ದೊರೆಯಬಹುದು. ಶಾಮ್‌ ಸಂಘಟನೆಯು ಅಲ್‌ ಕೈದಾದ ನಂಟು ಕಡಿದುಕೊಂಡ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವೀಕಾರಾರ್ಹತೆ ಪಡೆದುಕೊಳ್ಳುವ ಪ್ರಯತ್ನ ಮಾಡಿದೆ. ಗೊಲಾನಿ ಕೂಡ ಭಯೋತ್ಪಾದಕ ಗುಂಪುಗಳಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ಸಿರಿಯಾದ ಸಂಕೀರ್ಣ ಸ್ಥಿತಿಯಲ್ಲಿ ಇದು ಈಗ ಕಾಣಿಸುವ ಬೆಳ್ಳಿರೇಖೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.